ಬಿಸಿ ಬಿಸಿ ಸುದ್ದಿ

“ಕಾಯಭಾವ” ಕಳೆದು “ಜೀವಭಾವ” ತೊಟ್ಟ ಮಹಾದೇವಿ

ಕನಿಷ್ಟದಲ್ಲಿ ಹುಟ್ಟಿದೆ ಉತ್ತಮದಲ್ಲಿ ಬೆಳೆದೆ ಸತ್ಯ ಶರಣರ
ಪಾದವಿಡಿದೆ. ಆ ಶರಣರ ಪಾದವಿಡಿದು ಗುರವ ಕಂಡೆ
ಲಿಂಗವ ಕಂಡೆ. ಜಂಗಮವ ಕಂಡೆ. ಪ್ರಸಾದವ ಕಂಡೆ
ಪಾದೋದಕವ ಕಂಡೆ ಇಂತಿವರ ಕಂಡೆನ್ನ
ಕಂಗಳ ಮುಂದಣ ಕತ್ತಲೆ ಹರಿಯಿತ್ತು.
ಕಂಗಳ ಮುಂದಣ ಕತ್ತಲೆ ಹರಿಯಲೊಡನೆ
ಮಂಗಳದ ಮಹಾ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯ ಅಪ್ಪಣ್ಣಪ್ರಿಯ ಚನ್ನಬಸವಣ್ಣ
-ಹಡಪದ ಲಿಂಗಮ್ಮ

ಕೀಳು ಕುಲದಲ್ಲಿ ಹುಟ್ಟಿದ ಹಡಪದ ಲಿಂಗಮ್ಮ ತನ್ನ ಕುಲದ ಕೀಳರಿಮೆಯನ್ನು ಶರಣರ ಸಂಗದಿಂದ ಕಳೆದುಕೊಳ್ಳುತ್ತಾಳೆ. ಅದನ್ನು ಅವಳು ಯಾವ ಮುಚ್ಚು ಮರೆಯಿಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಾಳೆ. ಅದರಂತೆ ಉತ್ತಮರ ಸಹವಾಸ, ಸಂಗದಲ್ಲಿ ಬೆಳೆದ ಮಹಾದೇವಿ ಸತ್ಯ ಶರಣರ ಪಾದವಿಡಿದು ಗುರು, ಲಿಂಗ ಜಂಗಮ, ಪ್ರಸಾದ, ಪಾದೋಕವ ಕಂಡು ತನ್ನ ಕಂಗಳ ಮುಂದಿನ ಕತ್ತಲೆಯನ್ನು ಹರಿದಳು. ಗುರುವೆಂಬ ಮಹಾ ಮಂಗಳದ ಬೆಳಕಿನಲ್ಲಿ ಓಲಾಡಿದಳು. ತೇಲಾಡಿದಳು.

ತಾಯಿ ಗರ್ಭದಿಂದ ಹುಟ್ಟಿದ್ದೇನೆ. ಬೆಳೆವ ಜೀವನ ಉತ್ತಮವಾಗಿರಬೇಕು ಎಂದುಕೊಂಡ ಅವಳು ಬಾಲ್ಯದಲ್ಲಿಯೇ ಚನ್ನಮಲ್ಲಿಕಾರ್ಜುನನ ಸಂಗ ಮಾಡಿದಳು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಈ ಹುಟ್ಟು ಸಾವುಗಳ ಮಧ್ಯೆ ಇರುವ ಜೀವನ ಸಾರ್ಥಕವಾಗಬೇಕು. ಅದಕ್ಕೆ ಗುರುವಿನ ಜ್ಞಾನ ಕರುಣೆಯ ಸ್ಪರ್ಶ ಅಗತ್ಯ. ವ್ಯಕ್ತಿಗೆ ಸಂಗ ಮುಖ್ಯ. ಅದಕ್ಕಾಗಿಯೇ “ಸಾರ ಸಜ್ಜನರ ಸಂಗ ಲೇಸು ಕಂಡಯ್ಯ, ದೂರ ದುರ್ಜನರ ಸಂಗವದು ಭಂಗವಯ್ಯ,ಸಂಗವೆರಡುಂಟು; ಒಂದ ಹಿಡಿ ಒಂದ ಬಿಡು, ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ” ಎಂದು ಬಸವಣ್ಣವರು ಹೇಳಿದ್ದಾರೆ. ಇದನ್ನರಿತು ಆ ದಿಸೆಯಲ್ಲಿ ತನ್ನ ಬಾಲ್ಯದ ದಿನಗಳನ್ನು ಕಳೆಯುತ್ತಿದ್ದ ಮಹಾದೇವಿಯ ಜೀವನ ನಿಜಕ್ಕೂ ಬೆರಗು ಹುಟ್ಟಿಸುವಂತಿತ್ತು.

ಗುರು ತೋರಿದ ಜ್ಞಾನ, ಅರಿವು ತನ್ನದಾಗಿಸಿಕೊಂಡ ಮಹಾದೇವಿಯ ಬಾಲ್ಯದ ನಡಿಗೆ ದೇವನೆಡೆಗೆ ಎನ್ನುವಂತಿತ್ತು. ಅವಳು ಆಗಲೇ ನಿಜ ಜೀವನದ ಕಡೆಗೆ ಧ್ಯಾನಿಸುತ್ತಿದ್ದಳು. ಹುಟ್ಟು ಕನಿಷ್ಟವೆನಿಸಿದರೂ ಬೆಳೆದು ಶ್ರೇಷ್ಠವಾಗಬೇಕು. ಶ್ರೇಷ್ಠತೆ ಎನ್ನುವುದು ಸುಮ್ಮನೆ ಬರುವಂಥದಲ್ಲ. ಅದಕ್ಕೆ ಬಹು ದೊಡ್ಡ ತ್ಯಾಗ ಬೇಕು. ಹುಟ್ಟಿದ ಮಗು ಸುಂದರವಾಗಿಯೇ ಕಾಣುತ್ತದೆ. ಆದರೆ ಕಣ್ಣಿಗೆ ಕಾಡಿಗೆಯ ಕಪ್ಪು ಹಚ್ಚಿದರೆ ಆ ಮಗು ಇನ್ನಷ್ಟು ಸುಂದರವಾಗಿ ಕಾಣಬಲ್ಲುದು. ಆಗ ಆ ಮಗುವನ್ನು ಎಲ್ಲರೂ ತಮ್ಮ ಮಡಿಲಲ್ಲಿ ಎತ್ತಿಕೊಂಡು ಮುದ್ದಾಡುತ್ತಾರೆ. ಅದರಂತೆ ಮನುಷ್ಯ ಜನ್ಮ ಕೂಡ ಸುಂದರವಾಗಿದೆ. ಆದರೆ ಕಣ್ಣುಗಳಿಗೆ ದೇವಭಕ್ತಿಯ ಕಾಡಿಗೆಯ ಕಪ್ಪು ಹಚ್ಚಿದರೆ ನಾವು ಕೂಡ ಇನ್ನಷ್ಟು ಸುಂದರವಾಗಿ ಕಾಣಬಹುದು. ಮಗುವಿಗೆ ಕಾಡಿಗೆಯ ಕಪ್ಪು ಹಚ್ಚುವ ತಾಯಿ ಹೇಗೆ ಮುಖ್ಯವೋ, ಮನಷ್ಯರಾದ ನಾವು ನಿಜ ಮಾನವರಾಗುವುದಕ್ಕೆ ಗುರುವೆಂಬ ಕಾಡಿಗೆಯ ಕಪ್ಪು ಅಷ್ಟೇ ಅಗತ್ಯವಾಗಿದೆ.

ಬದುಕಿನ ಆನಂದ ಸುಖ-ಸಂತೋಷ ಯಾವುದರಲ್ಲಿದೆ? ನಿಜವಾದ ಸುಖ-ಸಂತೋಷ ಯಾವುದು? ಅದನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಬಾಲ್ಯದಲ್ಲಿಯೇ ಆಸಕ್ತಿ ಬೆಳೆಸಿಕೊಂಡ ಮಹಾದೇವಿ ಸಜವಾಗಿಯೇ ಇತರರಿಗಿಂತ ಭಿನ್ನವಾಗಿದ್ದಳು. ಅವಳ ಈ ನಡೆ ನುಡಿಗಳು ಅವರಿಗೆ ಚಿತ್ರ-ವಿಚಿತ್ರವಾಗಿ ಕಂಡವು. ಅಂತೆಯೇ ಅವರು ಮಹಾದೇವಿ ಬಗ್ಗೆ ಏನೇನೋ ಸುದ್ದಿ ಹಬ್ಬಿಸಿದರು. ಅಂದಾಡಿಕೊಂಡರು. ಯಾರು ಏನಂದುಕೊಂಡರೂ ಇವಳಿಗೆ ಮಾತ್ರ ತನ್ನ ಚನ್ನಮಲ್ಲಿಕಾರ್ಜುನನ ಚಿಂತೆ ಮಾತ್ರ ಕಾಡುತ್ತಿತ್ತು. ಶಿವಧ್ಯಾನ, ಶಿವಚಿಂತೆಯಲ್ಲಿಯೇ ಮುಳುಗೇಳುತ್ತಿದ್ದಳು.

ಬಲ್ಲವರೇ ಬಲ್ಲರು ಬೆಲ್ಲದ ಸವಿಯ ಎನ್ನುವಂತೆ “ಹರ”ನನ್ನೇ “ವರ”ನನ್ನಾಗಿಸಿಕೊಂಡ ಮಹಾದೇವಿ ಉಡುತಡಿಯ ಕೂಸಾಗಿ ಕಲ್ಯಾಣದ ಮಗಳಾಗಿ ಕದಳಿಬನದ ಸೊಸೆಯಾಗಿ ಚನ್ನಮಲ್ಲಿಕಾರ್ಜುನ ಸ್ನೇಹಕ್ಕೆ ಕಾತುರಳಾಗಿ ಕುಳಿತಿದ್ದಳು. ಗುರುಗಳ ಅಣತಿಯಂತೆ ವಚನ ರಚನೆಯಲ್ಲಿ ತೊಡಗಿಕೊಂಡಿದ್ದ ಆಕೆಗೆ ಕಲ್ಯಾಣದ ಬಸವಾದಿ ಶರಣರ ಬದುಕಿನ ರೀತಿ-ನೀತಿ ಇಷ್ಟವಾದವು. ಅಂಬಲಿ, ಕಂಬಳಿ ಆಸ್ತಿ, ಮಿಕ್ಕಿದ್ದೆಲ್ಲ ಆಸ್ತಿ. ಹೊಟ್ಟೆ ಹೊರೆಯುವುದಕ್ಕಾಗಿ ಬದುಕುವುದು ಮುಖ್ಯವಲ್ಲ. ದೇವನ ನೆನಹು ಮುಖ್ಯ. ಸತ್ಯದ ಸಾಕ್ಷಾತ್ಕಾರ ಮುಖ್ಯ. ಲೌಕಿಕ ಬದುಕಿನಲ್ಲಿದ್ದುಕೊಂಡು ಪಾರಮಾರ್ಥಿಕ ಬದುಕು ಸಾಗಿಸುವ ಬಗೆ ಹೇಗೆ ಎಂಬುದನ್ನು ಶರಣರ ಬದುಕು ಹಾಗೂ ಬೋಧನೆಯೇ ಸಾಕ್ಷಿಯಾಗಿದೆ.

ಶರಣರಂತೆ ತಾನಾಗಬೇಕಾದರೆ ಗುರುವಿನ ಅಣತಿಯಂತೆ ಚೆನ್ನಮಲ್ಲಿಕಾರ್ಜುನನ್ನು ಒಲಿದ ಈ ಕಾಯಭಾವ ತೊಡೆದು ಜೀವಭಾವ ಅಳವಡಿಸಿಕೊಳ್ಳಬೇಕು ಎಂಬ ಉತ್ಕಟವಾದ ಬಯಕೆ ಮಹಾದೇವಿಯಲ್ಲಿ ಮೂಡಿತು. “ಮುಕ್ತಿಯ ಫಥವನರಿಯುವುದಕ್ಕೆ ತತ್ವದ ಬಿತ್ತಿಯ ಕಾಣಬೇಕು. ಚಿತ್ತದಲ್ಲಿ ಲಿಂಗ ಅಚ್ಚೊತ್ತಿದಂತಿರಬೇಕು. ಮರ್ತ್ಯದ ಮಾನವರ ಸಂಗ ಹಿಂಗಬೇಕು..” ಎಂಬ ಹಡಪದ ಅಪ್ಪಣ್ಣನವರ ವಚನದಂತೆ ಮಹಾದೇವಿಯ ಬಾಲ್ಯದ ಬದುಕು ಸಾಗಿತ್ತು.

(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

4 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

11 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

11 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

22 hours ago