ಕಲಬುರಗಿ/ವಾಡಿ: ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಗ್ಗೆ ವಿಪಸನ ಧ್ಯಾನ ಕೈಗೊಳ್ಳುವುದರಿಂದ ಅರಿವು ಮತ್ತು ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು ಎಂದು ಬೆಂಗಳೂರು ಮಹಾಬೋಧಿ ಸೊಸೈಟಿಯ ಬೌದ್ಧ ಭಿಕ್ಷು ರಂಜೀತ ಸುಮನಪಾಲ ಹೇಳಿದರು.
ಬೆಂಗೂಳೂರಿನ ಮಹಾಬೋಧಿ ಸೊಸೈಟಿ ಹಾಗೂ ವಾಡಿ ಪಟ್ಟಣ ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ಸಹಯೋಗದಲ್ಲಿ ಸಮೀಪದ ಕೊಂಚೂರು ಏಕಲವ್ಯ ಮಾದರಿಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ನಾಲ್ಕು ದಿನದ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳ ಮಂಕಿ ಮನಸ್ಸನ್ನು ಮ್ಯಾನ್ ಮನಸ್ಸನ್ನಾಗಿ ಪರಿವರ್ತಿಸಲು ವಿಪಸನ ಧ್ಯಾನವು ಅತ್ಯಂತ ಪೂರಕವಾಗಿದೆ. ಶಿಕ್ಷಣ ಸಂಪಾದಿಸಲು ಹಂಬಲಿಸುವ ವಿದ್ಯಾರ್ಥಿಗಳ ಮನಸ್ಸು ಶಾಂತವಾಗಿರಬೇಕು. ಬುದ್ಧ ಬೋಧಿಸಿದ ಉತ್ಕೃಷ್ಟ ಧ್ಯಾನವೇ ವಿಪಸನ ಧ್ಯಾನ. ಪ್ರಶಾಂತ ಪರಿಸರದಲ್ಲಿ ಅಂತರದರ್ಶನ ಮಾಡಿಕೊಳ್ಳಲು ಮತ್ತು ದುಃಖದ ನಿಬ್ಬಾಣ ಸಾಧಿಸಲು ವಿದ್ಯಾರ್ಥಿಗಳು ಧ್ಯಾನದ ಮೊರೆಹೋಗಬೇಕು. ಮಕ್ಕಳು ಕೈಗೊಳ್ಳುವ ಮೈತ್ರಿ ಧ್ಯಾನದಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ದ್ವೇಶ ಮತ್ತು ದುರಹಂಕಾರ ತೊಡೆದುಹಾಕಲು ಮನೋಕ್ಷೆಭೆ ಧ್ಯಾನ ಮಾಡಬೇಕು ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಎಸ್‌ಐ ವಿಜಯಕುಮಾರ ಭಾವಗಿ, ಮನುಷ್ಯನ ಬದುಕಿನಲ್ಲಿ ಶಿಕ್ಷಣ ಬಹುದೊಡ್ಡ ಪಾತ್ರ ನಿಭಾಯಿಸುತ್ತದೆ. ಜೀವನದಲ್ಲಿ ಶಿಸ್ತು, ಸಭ್ಯತೆ, ಆತ್ಮಗೌರವ, ನಯ, ವಿನಯ ಕಲಿಸುತ್ತದೆ. ನ್ಯಾಯ-ಅನ್ಯಾಯ ಅರಿತುಕೊಳ್ಳಲು ಶಿಕ್ಷಣ ಮಾರ್ಗದರ್ಶನ ಮಾಡುತ್ತದೆ. ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವುದೇ ಉತ್ತಮ ಶಿಕ್ಷಣವಾಗಬಲ್ಲದು. ಸಮಾಜದಲ್ಲಿ ಸಾಧಕನಾಗಿ ಬೆಳೆಯುವ ಗುರಿ ಹೊಂದಬೇಕು. ಗುರುಗಳ ಮಾರ್ಗದರ್ಶನ ಪಡೆದು ಗುರಿ ತಲುಪುವ ಛಲವಿದ್ದರೆ ಮಾತ್ರ ಹೊಸ ಇತಿಹಾಸ ಬರೆಯಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆಯ ಹೊಣೆ ಮುಂದಿನ ಪ್ರಜೆಗಳಾಗಲಿರುವ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ ಸಂವಿಧಾನ ಬದ್ಧವಾಗಿ ಆಚರಣೆಯಲ್ಲಿ ತರಬೇಕಾದ ಭಾವಿ ಪ್ರಜೆಗಳಿಗೆ ನೈತಿಕ ಶಿಕ್ಷಣ ಕೊಡುವುದು ಅಗತ್ಯವಿದೆ. ಕಲ್ಯಾಣ ನಾಡಿನ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹಿಂದೆ ಬೀಳಬಾರದು. ಶಿಕ್ಷಣ ಕಲಿಕೆಗೆ ಉಂಟಾಗುತ್ತಿರುವ ಏಕಾಗ್ರತೆ ಎಂಬ ಕೊರತೆ ನೀಗಿಸಲು ಈ ಶಿಬಿರ ಆಯೋಜಿಸಲಾಗಿದೆ ಎಂದರು.
ಭಂತೆ ಬುದ್ಧರತ್ನ ಧಮ್ಮೋಪದೇಶ ನೀಡಿದರು. ಪ್ರಾಂಶುಪಾಲ ಬಸವರಾಜ ಅವಂಟಿ ಅಧ್ಯಕ್ಷತೆ ವಹಿಸಿದ್ದರು. ಅಪರಾಧ ವಿಭಾಗದ ಪಿಎಸ್‌ಐ ಗಂಗಮ್ಮಾ, ಕಿರಣಕುಮಾರ ದೋತ್ರೆ, ಶಿಕ್ಷಕರಾದ ಮೃತ್ಯುಂಜಯ ಭಾವೆ, ಬಸನಗೌಡ ಬಿರಾದಾರ, ಗುಂಡಪ್ಪ ಭಂಕೂರ, ಶಾಂತಾ ಅಲ್ಲೂರ, ವಿಶಾಲಾ ಜಾಧವ, ಮುಖಂಡರಾದ ಮಲ್ಲಿಕಾರ್ಜುನ ಕಟ್ಟಿ, ಸುರೇಶ ಬನಸೋಡೆ, ಬಸವರಾಜ ಜೋಗೂರ, ಸಾಯಿನಾಥ ತೋಲೆ ಪಾಲ್ಗೊಂಡಿದ್ದರು. ಶಿಕ್ಷಕ ಶ್ರೀನಾಥ ಇರಗೊಂಡ ಸ್ವಾಗತಿಸಿದರು. ಸಂತೋಷ ಜೋಗೂರ ನಿರೂಪಿಸಿದರು. ಸಾವಿರಾರು ಜನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.