ಸುರಪುರ: ಲೇವಿದೇವಿಗಾರರು, ಬ್ಯಾಂಕ್‌ಗಳು ಸಕಾಲಕ್ಕೆ ಸಾಲಸೌಲಭ್ಯ ನೀಡದ ಕಾರಣ ರೈತರು, ಸಣ್ಣ ಪುಟ್ಟ ಬೀದಿ ಬದಿಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇವರೆಲ್ಲರಿಗು ಸಕಾಲಕ್ಕೆ ಯೋಗ್ಯ ಬಡ್ಡಿ ಧರದಲ್ಲಿ ಸಾಲಭ್ಯ ಕಲ್ಪಿಸಲು ಶ್ರೀ ಕೃಷ್ಣ ಪಟ್ಟಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬ್ಯಾಂಕ್ ಮುಂದಾಗಬೇಕು ಎಂದು ಮಾಜಿ ಸಚಿವ ರಾಜಾಮದನ ಗೋಪಾಲ ನಾಯಕ ಹೇಳಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಪಟ್ಟಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ಯಾಂಕ್‌ಗಳಿಂದ ಸಾಲ ಕೇಳಿದಾಗ ಆಗ ಕೊಡುತ್ತೇನೆ ಈಗ ಕೊಡುತ್ತೇನೆ ಎಂದು ಅಲೆದಾಡಿಸಿ ಬೇಡವಾದ ಸಮಯದಲ್ಲಿ ಸಾಲ ನೀಡುತ್ತಾರೆ. ಇದರು ಆಗಬಾರದು. ಅಗತ್ಯವಾಗಿದ್ದಾಗ ಸಾಲ ಕೇಳಿದಾಗ ಕೃಷ್ಣ ಸಹಕಾರ ಸಂಘ ಮಾಡಬೇಕು. ಷೇರುದಾರರು ಹಾಣ ತೊಡಗಿಸಿದ್ದು, ಉತ್ತಮ ಕಾರ್ಯ ನಿರ್ವಹಿಸಲು ನೆರವಾಗಬೇಕು ಎಂದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಸಿದ್ರಾಮರೆಡ್ಡಿವಿ. ಪಾಟೀಲ ಮಾತನಾಡಿ, ಅರ್ಬನ್ ಬ್ಯಾಂಕ್ ಸೇರಿದಂತೆ ಸ್ಥಳೀಯ ಸಹಕಾರ ಸಂಘಗಳು ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಸಾಲ ನೀಡುವಂತೆ ಕೃಷ್ಣ ಪತ್ತಿನ ಸಹಕಾರ ಸಂಘ ಸಹಕಾರ ನೀಡಬೇಕು. ಜನರಿಗೆ, ಗ್ರಾಹಕರು ಸಂಕಷ್ಟದಲ್ಲಿದ್ದಾಗ ಸಹಕಾರ ನೀಡುವಂತೆ ಸಹಕಾರ ಪತ್ತಿನ ಸಂಘವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು. ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ಸುರೇಶ ಸಜ್ಜನ್ ಮಾತನಾಡಿ, ೫೦ ಲಕ್ಷ ರೂ. ಷೇರುಬಂಡವಾಳದೊಂದಿಗೆ ಆರಂಭಿಸಿರುವುದು ಶ್ಲಾಘನೀಯ. ಜನರ ಸಮಸ್ಯೆಗೆ ಸ್ಪಂದಿಸುತ್ತಾ ಸಹಕಾರ ಕ್ಷೇತ್ರದಲ್ಲಿ ಸಂಘ ಸಾಧನೆ ಮಾಡಲು ಸಾಧ್ಯ. ಗಿರಿನಾಡಲ್ಲಿ ಸಹಕಾರ ಸಂಘಗಳು ಸುಧಾರಣೆಯಾಗಬೇಕಿದೆ. ಡಿಸಿಸಿ ಬ್ಯಾಂಕ್‌ನ್ನು ಕಲಬುರಗಿ ಜಿಲ್ಲೆಯಿಂದ ಬೇರ್ಪಡಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಹಲವಾರು ಸಹಕಾರ ಸಂಘಗಳು ಸ್ಥಾಪನೆಗೊಳ್ಳಬೇಕಾದ ಅಗತ್ಯವಿದೆ. ಹೆಚ್ಚು ಹೆಚ್ಚು ಸಹಕಾರಿ ಸಂಘಗಳು ಆರಂಭವಾದರೆ ಡಿಸಿಸಿ ಬ್ಯಾಂಕ್‌ನ್ನು ಯಾದಗಿರಿ ಜಿಲ್ಲೆಯಲ್ಲಿ ಪ್ರಾರಂಭಿಸಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರು ಆದಾಗ ಮಾತ್ರ ಸಹಕಾರ ಸಂಘಕ್ಕೆ ಉತ್ತಮ ಭವಿಷ್ಯವಿರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅರ್ಬನ್ ಕ್ರೆಡಿಟ್ ಕೋ-ಆಪ್‌ಸೊಸೈಟಿ ಅಧ್ಯಕ್ಷ ರಾಜಾಮುಕುಂದನಾಯಕ ಮಾತನಾಡಿ, ಸಹಕಾರ ಸಂಘಗಳು ಜನರಪರವಾಗಿ ಇದ್ದು, ಉತ್ತಮವಾದ ಸೇವೆ ನೀಡಿದರೆ ನಗರದಲ್ಲಿ ಬೆಳವಣಿಗೆ ಹೊಂದಲು ಸಾಧ್ಯ. ಸಹಕಾರ ಸಂಘದ ಅಧಿಕಾರಿ ವರ್ಗ ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗಲಿ ಎಂದು ಆಶಿಸಿದರು.
ವರ್ತಕರ ಸಂಘದ ಅಧ್ಯಕ್ಷ ಕಿಶೋರಚಂದ್ ಜೈನ್ ಮಾತನಾಡಿ, ಈ ಭಾಗವೂ ನೀರಾವರಿಗೆ ಒಳಪಟ್ಟಿದ್ದು, ಸಹಕಾರ ಸಂಘದಿಂದ ರೈತರು-ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಕೆನರಾ ಬ್ಯಾಂಕ್ ಅಧಿಕಾರಿ ತಿರುಪತಿ ಪೂಜಾರಿ ಮಾತನಾಡಿ, ಯಾವುದೇ ಸೊಸೈಟಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೊಂದಬೇಕು. ಇಂದಿನ ಸೊಸೈಟಿಯೇ ನಾಳಿನ ಬ್ಯಾಂಕ್. ಹೀಗಾಗಿ ಸಹಕಾರ ಸಂಘಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಇಂದು ಬೆಳಗ್ಗೆ ಶ್ರೀ ಕೃಷ್ಣ ಪಟ್ಟಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಘವನ್ನು ತಿಂಥಣಿ ಸುಕ್ಷೇತ್ರ ವೀರಘಟ್ಟ ಶ್ರೀ ಅಡವಿಲಿಂಗ ಮಹಾರಾಜರು ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಬಸವರಾಜ ಬೂದಿಹಾಳ, ಬಸವರಾಜ ಹೂಗಾರ, ದತ್ತಾತ್ರೇಯ ಗುತ್ತೇದಾರ, ಭೀಮರಾವ ರಪುಗಾರ, ಚನ್ನಬಸವ ಬಾರಿ, ದೇವದಾನ ಡೀನ್, ಪಾರಪ್ಪ ಗುತ್ತೇದಾರ, ಸಂಗಮನಾಥ ಗುಳಗಿ ಇತರರು ಇದ್ದರು.