ಸುರಪುರ: ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ,ಇಂತಹ ಕಾಮಗಾರಿ ನಿರ್ಮಿಸುತ್ತಿರುವ ಗುತ್ತಿಗೆದಾರರ ಮೇಲೆ ಮತ್ತು ಇದಕ್ಕೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಕಳಪೆ ಕಾಮಗಾರಿಗಳ ನಿಯಂತ್ರಣಕ್ಕೆ ಕನ್ನಡ ಸೇನೆ ಒತ್ತಾಯಿಸುತ್ತದೆ ಎಂದು ಸೇನೆಯ ಈಶಾನ್ಯ ವಿಭಾಗೀಯ ಕಾರ್ಯದರ್ಶಿ ದೇವು ಬಿ,ಗುಡಿ ತಿಳಿಸಿದರು.
ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಸಿರಸ್ತೇದಾರರ ಮೂಲಕ ಸಲ್ಲಿಸಿ ಮಾತನಾಡಿ,ಇಂದು ನಡೆಯುತ್ತಿರುವ ಟೆಂಡರ್‌ಗಳಲ್ಲಿ ಭಾಗವಹಿಸುವ ಗುತ್ತಿಗೆದಾರರು ಒಂದೊಂದು ಕಾಮಗಾರಿಗೆ ಸರಕಾರ ನಿಗದಿಪಡಿಸಿದ ದರಕ್ಕಿಂತ ಪ್ರತಿಶತ ೩೫ ರಿಂದ ೪೫ ರಷ್ಟು ಕಡಿಮೆ ಹಣದಲ್ಲಿ ನಿರ್ಮಿಸುವುದಾಗಿ ಗುತ್ತಿಗೆ ಪಡೆಯುತ್ತಿದ್ದಾರೆ.ಇಷ್ಟೊಂದು ಕಡಿಮೆ ದರದಲ್ಲಿ ಕಾಮಗಾರಿ ನಿರ್ಮಿಸಲು ಹೇಗೆ ಸಾಧ್ಯ? ಇಂತಹ ಕಾಮಗಾರಿಗಳ ಗುಣಮಟ್ಟ ಹೇಗಿರಲಿವೆ ಎಂಬುದು ಮೇಲ್ನೋಟಕ್ಕೆ ತಿಳಿಯಲಿದೆ.
ಅಲ್ಲದೆ ಕಾಮಗಾರಿ ಪರಿಶೀಲಿಸಬೇಕಾದ (ಥರ್ಡ ಪಾರ್ಟಿ) ಅಧಿಕಾರಿಗಳೂ ಗುತ್ತಿಗೆದಾರರೊಂದಿಗೆ ಶಾಮಿಲಾಗಿ ಇಡೀ ಕಾಮಗಾರಿ ಕಳಪೆಗೆ ಸಹಕಾರ ನೀಡುವ ಜೊತೆಗೆ ಸರಕಾರದ ಹಣವನ್ನು ವ್ಯರ್ಥ ಪೋಲು ಮಾಡುತ್ತಾರೆ.ಆದ್ದರಿಂದ ಕೂಡಲೆ ಜಿಲ್ಲೆಯಾದ್ಯಂತ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ವಿಶೇಷ ತಂಡ ರಚನೆ ಮಾಡಿ ಪರಿಶೀಲನೆಗೊಳಿಸಬೇಕು ಮತ್ತು ಕಳಪೆ ಕಾಮಗಾರಿ ನಿರ್ಮಿಸುತ್ತಿರುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿಜಯ ಚಿಗರಿ,ಬಾಗಣ್ಣ ನಾಯ್ಕೋಡಿ ಇತರರಿದ್ದರು.