ಕುಡಿಯುವ ನೀರಿಗಾಗಿ ಬಿಸಿಲ ನಾಡು ಕಲಬುರಗಿ ಜಿಲ್ಲೆಯ ನಮ್ಮ ಊರಿನಲ್ಲಿ ಬಹು ದೊಡ್ಡ ಹಾಹಾಕಾರ ಉಂಟಾಗಿದೆ. ಎಲ್ಲಿಯೂ ನೀರು ಸಿಗುತ್ತಿಲ್ಲ. ಇದು ಕೇವಲ ನಮ್ಮೂರಿನ ಕಥೆ ಮಾತ್ರವಲ್ಲ ನಮ್ಮ ಜಿಲ್ಲೆಯ ಅದೆಷ್ಟೋ ಹಳ್ಳಿಗಳು ಇದೇ ಸಮಸ್ಯೆಯನ್ನೆ ಅನುಭವಿಸುತ್ತಿವೆ. ಕುಡಿಯುವ ನೀರಿನ ಪರಿಸ್ಥಿತಿ ನಾನು ಧಾರವಾಡದಿಂದ ನನ್ನೂರಿಗೆ ಬಂದಾಗಿನಿಂದ ಅನುಭವಿಸುತ್ತಿದ್ದೇನೆ…
ಇನ್ನೂ ಇಲ್ಲೆ ವಾಸಿಸುವ ನನ್ನ ಕಲಬುರಗಿಯ ಜನ, ಸುತ್ತ ಮುತ್ತಲಿನ ಜಿಲ್ಲೆಯ ಜನರು ಎಷ್ಟೊಂದು ತೊಂದರೆ ಅನುಭವಿಸುತ್ತಿಲ್ಲ! ಇದಕ್ಕೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ವೇ ಕಾರಣ ಎನ್ನದೆ ವಿಧಿ ಇಲ್ಲ.
ನಮ್ಮ ಸುತ್ತ ಮುತ್ತಲಿನ ರಾಯಚೂರು, ಯಾದಗಿರಿ ಬೀದರ್ ಸೇರಿದಂತೆ ಅನೇಕ ಜಿಲ್ಲೆಗಳ ಜನರ ಅಳಲು ಕೂಡ ಇದೆ ಆಗಿದೆ. ದಿನನಿತ್ಯ ಕಷ್ಟಪಡುತ್ತಿದ್ದಾರೆ.
ಕಲಬುರಗಿ ನಗರದ ಬಹುತೇಕ ಕಡೆ ಬೋರ್ ವೆಲ್ ನೀರು ಬತ್ತಿ ಹೋಗಿವೆ. ಹೀಗಾಗಿ ಅವರು ದುಡ್ಡು ಕೊಟ್ಟು ನೀರು ಹಾಕಿಸಿಕೊಳ್ಳುವಂತಾಗಿದೆ. ನೀರು ಕಣ್ಣೀರು ತರಿಸುವಂತಾಗಿದೆ. ಜನರ ಈ ನೀರಿನ ಬವಣೆಯನ್ನು , ಕಷ್ಟವನ್ನು ಯಾರೊಬ್ಬರೂ ಕೇಳುವರು ಇಲ್ಲ ಹೇಳುವವರು ಇಲ್ಲ ಎನ್ನುವಂತಾಗಿದೆ. ಜನರ ಪರದಾಟ ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ. ಎಲ್ಲೊ ದೂರಕ್ಕೆ ಹೋಗಿ ತೋಟ, ಗದ್ದೆ ಹೊಲಗಳಿಗೆ ಹೋಗಿ ನೀರು ತೆಗೆದುಕೊಂಡು ಬರುವ ಪರಿಸ್ಥಿತಿ ಬಂದಿದೆ.
ಇಂತದ್ರಲ್ಲೆ ನಾನು ಮನೆಯ ಪರಿಸ್ಥಿತಿ ನೋಡಿಕೊಂಡು ಅಸಹಾಯಕ ಸ್ಥಿತಿಯಲ್ಲಿ ಏನು ಮಾಡದಾಗದೇ ಮೌನದ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದೇನೆ. ಅಂತಹದ್ರಲ್ಲಿ ಇಂದು ಬೆಳಿಗ್ಗೆ ನನ್ನ ಅಳಿಯನಿಗೆ ತಾಯಿ ಹೇಳುವ ಮಾತುಗಳು ಹೀಗಿವೆ. “ಇದೊಂದು ಕಳಸಿ(ಬಿಂದಿಗೆ) ನೀರು ತೆಗೆದುಕೊಂಡು ಅಣ್ಣನ ಜೊತೆ ಹೋಗಿ ಬಾ” ನಿಮ್ಮ ಅಜ್ಜ ಮತ್ತು ಮಾಮಾಗೆ ಕುಡಿಯೋಕೆ ನೀರು ಆದ್ರೆ ಸಾಕು. ನಾನು ಕಹಿ(ಸೌಳು) ನೀರು ಕುಡಿತೀನಿ ಅನ್ನುವ ಮಾತುಗಳು ನಿಜಕ್ಕೂ ನನಗೆ ಮೂಕವಿಸ್ಮೀತನಾಗಿಸಿದೆ.
ಇಂತಹ ತಾಯಿಯ ತ್ಯಾಗದ ಗುಣ ಮಾತೆಯನ್ನ ಪಡೆದ ನಾನೇ ಧನ್ಯ ಅನಿಸುತ್ತದೆ. ಏನ ಮಾಡೋದು ಎಲ್ಲಾ ‘ಕಾಲ’ ನಮ್ಮನ್ನು ಆಡಿಸುತ್ತಿದೆ. ನಾನು ತಾಯಿಯ ಆರೋಗ್ಯದ ಬಗ್ಗೆ ಯೋಚನೆ ಮಾಡಿದರೆ ಅವಳು ತನ್ನದೆಲ್ಲ ಕಷ್ಟವನ್ನ ಸಹಿಸಿಕೊಂಡು, ಅವಳ ಸಂತೋಷವನ್ನ ಬದಿಗೊತ್ತಿ ನನ್ನ ಮತ್ತು ಅಪ್ಪನ ಸಂತೋಷ ಆರೋಗ್ಯದ ಬಗ್ಗೆ ಚಿಂತಿಸುತ್ತಾ ಕಾಲ ಕಳೆಯುತ್ತಿದ್ದಾಳೆ. ಹೇಳಿದರೆ ಇನ್ನೂ ಬಹಳ ಇದೆ ನನ್ನ ತಾಯಿಯ ಬಗ್ಗೆ ಏನೆಂದು ಹೇಳಲಿ. ಹೇಳಲು ಆಗದ ಪರಿಸ್ಥಿತಿಯಲ್ಲಿ ನಾನಿರುವೆ, ಹೇಳುವ ಸಮಯ ಬಂದಾಗ ನನ್ನ ತಾಯಿಯ ಬಗ್ಗೆ ಹೇಳುವೆ, ಇಂತಹ ಕಷ್ಟ ಅನುಭವಿಸುತ್ತಿರುವ ತಾಯಿಯಂದಿರೂ ಈ ಭೂಮಿ ಮೇಲೆ ಅದೆಷ್ಟೋ ಜನ ಇದ್ದಾರೆ ಅವರಿಗೆ ನಾನು ಯಾವಾಗಲೂ ಚಿರ ಋಣಿಯಾಗಿರುವೇ…
ಇದಕ್ಕೆ ಸಂಬಂಧಪಟ್ಟಂತಹ ಇಲ್ಲಿನ ಅಧಿಕಾರಿಗಳು ಜನಗಳ ಸಮಸ್ಯೆಗಳಿಗೆ ಸ್ಪಂದಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸಲಿ ಎನ್ನುವ ಸದಾಶಯದೊಂದಿಗೆ ಸಮಯ ತೆಗೆದುಕೊಂಡು ನನ್ನ ಕಣ್ಣೆದುರು ನಡೆದಂತಹ ಕಿರುಚಿತ್ರಣವನ್ನ ನನ್ನ ಮನಸ್ಸಿನ ಭಾವನೆಗಳನ್ನ ಬರಹದ ಮೂಲಕ ಈ ರೀತಿಯಾಗಿ ವ್ಯಕ್ತಪಡಿಸಿದ್ದೇನೆ. ಜನಗಳಿಗೆ ಕನಿಷ್ಠ ಬದುಕಿನ ಮೂಲಭೂತ ಸೌಕರ್ಯಗಳೇ ಸಿಗುತ್ತಿಲ್ಲವಾದರೇ ಜನ ಹೇಗೆ ಬದುಕೋದು? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಕುಡಿಯುವ ನೀರಿನ ಸಮಸ್ಯೆಯನ್ನು ಹೇಗಾದರೂ ಮಾಡಿ ಬಗೆಹರಿಸಲಿ ಎಂದು ಆಶಿಸುತ್ತೇನೆ.
ಕುಡಿಯುವ ನೀರಿನ ಸಮಸ್ಯೆನ್ನು ಖಂಡಿತವಾಗಿ ಸಂಬಂಧ ಪಟ್ಟ ಅಧಿಕಾರಿಗಳು ಮಾಡಲೇ ಬೇಕಾಗಿದೆ. ಏಕೆಂದರೆ ನೀರು ಜೀವ ಜಲ.
ಇದನ್ನು ಮಾನವೀಯತೆಯ ಆಧಾರದ ಮೇಲೆಯೂ ಸಹ ಸಹಾಯ ಮಾಡಬೇಕು ಇನ್ನು ಮಾತು ಬಾರದ ಪಕ್ಷಿ ಪ್ರಾಣಿ ಗಳ ಬಗ್ಗೆ ಸಹಾಯ ಮಾಡ ಬೇಕಾದುದು ನಮ್ಮ ಕರ್ತವ್ಯ ವಾಗುತ್ತದೆ.
ಮುಂದಿನ ದಿನಗಳಲ್ಲಿ ಈ ರೀತಿ ಇನ್ನೂ ಹೆಚ್ಚಿನ ನೀರಿನ ಸಮಸ್ಯೆ ಯನ್ನು ನಾವು ಅನುಭವಿಸಬಾರದೆಂದು ಕೊಂಡರೆ ಸಸಿಗಳನ್ನು ಹೆಚ್ಚು ಹೆಚ್ಚು ನೆಟ್ಟು ಬೆಳಸಬೇಕಿದೆ. ದಯವಿಟ್ಟು ನಿಮ್ಮಿಂದ ಸಾಧ್ಯವಾದರೆ ಈ ಸಮಸ್ಯೆಯನ್ನು ಬಗೆಹರಿಸಲು ಕೈ ಜೋಡಿಸಿ ಪ್ರಯತ್ನಿಸಿ. ಇಲ್ಲದಿದ್ದರೆ ಇದನ್ನು ಮುಂದಕ್ಕೆ ಕಳಿಸಿ. ನಿಮ್ಮಲ್ಲಿ ನಾನು ಕೇಳುವುದಿಷ್ಟೇ ನೀರನ್ನು ಮಿತವಾಗಿ ಬಳಸಿ.