ಕಲಬುರಗಿ/ಆಳಂದ: ಪಟ್ಟಣದ ಉರಮಗಾ ರಸ್ತೆಯಲ್ಲಿನ ಜಗದ್ಗುರು ತೋಂಟದಾರ್ಯ ಅನುಭವ ಮಂಟಪದಿಂದ ತಾಲೂಕಿನ ತೆಲಾಕುಣಿ ಗ್ರಾಮದ ವರೆಗೆ ಇಂದು ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರರ ಶರಣ ಸಂದೇಶ ಜ್ಯೋತಿಯನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತಿಸಿಕೊಂಡರು.
ಗ್ರಾಮದ ಬಸ್ ನಿಲ್ದಾಣ ಬಳಿಯಿಂದ ಪ್ರಮುಖ ರಸ್ತೆಗಳ ಮೂಲಕ ಅಕ್ಕನ ಬಳಗಳದ ತಾಯಂದಿರು ಹಾಗೂ ಗ್ರಾಮಸ್ಥರು ಜೈಘೋಷಗಳೊಂದಿಗೆ ಸ್ವಾಗತಿಸಿಕೊಂಡು ಬಸವೇಶ್ವರ ಮಠದಲ್ಲಿ ಜ್ಯೋತಿಯನ್ನು ಸ್ಥಾಪಿಸಿ ಮಹಾಮಂಗಲ ನೆರವೇರಿಸಿದರು. ನಂತರ ಹನುಮಾನ ದೇವಸ್ಥಾನದಲ್ಲಿ ಧಾರ್ಮಿಕ ಸಮಾರಂಭದ ನೆರವೇರಿದ ಬಳಿಕ ಸಾರ್ವಜನಿಕರೊಂದಿಗೆ ಶ್ರೀಗಳು ಸಾಮೂಹಿಕ ಭೋಜನದಲ್ಲಿ ಕುಳಿತು ಪ್ರಸಾದ ಸೇವಿಸಿ ಸರಳತೆ ಮೆರೆದರು.
ಈ ಮೊದಲು ಸಮಾರಂಭದಲ್ಲಿ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು, ೧೨ನೇ ಶತಮಾನದ ಬಸವಾದಿ ಶರಣರ ವಚನ ಚಳವಳಿಯನ್ನು ೧೫ರಿಂದ ೧೬ನೇ ಶತಮಾನ ಮಧ್ಯವಧಿಯಲ್ಲಿ ಯಡಿಯೂರು ಶ್ರೀ ಸಿದ್ಧಲಿಂಗ ಯತಿಗಳು ಲಿಂಗಾಯತ ತತ್ವದ ಉಳಿವಿಗೆ ಪುನರುಜೀವಗೊಳಿಸಿದರು. ತೋಂಟದ ಲಿಂ. ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ತೋರಿದ ಮಾರ್ಗದಲ್ಲಿ ಹಾಗೂ ಹಾಲಿ ಜಗದ್ಗುರು ಡಾ| ಸಿದ್ಧರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜನಪರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಇದರ ಲಾಭವನ್ನು ಪಡೆಯಬೇಕು ಎಂದು ಅವರು ಹೇಳಿದರು. ಬರುವ ದಿನಗಳಲ್ಲಿ ಶೈಕ್ಷಣಿಕ, ಸಂಗೀತ ಸಾಂಸ್ಕೃತಿಕ, ಸಂಶೋಧನ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆ ಕಾರ್ಯದಲ್ಲಿ ಪಾಲ್ಗೊಂಡು ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು ಎಂದರು.
ಗ್ರಾಮದ ಸುಭಾಷ ಪಾಟೀಲ ಅವರು ಮಾತನಾಡಿ, ಶರಣ ಸಂದೇಶ ಜ್ಯೋತಿ ಯಾತ್ರೆಯ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸುತ್ತಿರುವ ವಿಶ್ವನಾಥ ಶ್ರೀಗಳ ಕಾರ್ಯವನ್ನು ಕೊಂಡಾಡಿದ ಅವರು, ಹಿಂದುಳಿದ ಭಾಗದ ಜನರ ಸರ್ವೋತೋಮುಖ ಅಭಿವೃದ್ಧಿಗಾಗಿ ಗದಗ, ಡಂಬಳ, ಯಡಿಯರು ಜಗದ್ಗುರು ತೋಂಟದಾರ್ಯ ಸಂಸ್ಥಾನದ ಮಠದ ಶಾಖೆ ಉಮರಗಾ ರಸ್ತೆಯ ಅನುಭವ ಮಂಟಪದ ಮೂಲಕ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಅನುಷ್ಠಾನಕ್ಕೆ ಮುಂದಾಗಿದ್ದು ಶ್ಲಾಘನೀಯವಾಗಿದ್ದು, ಜನರು ಇಂಥ ಕಾರ್ಯಗಳಲ್ಲಿ ಸಹಭಾಗಿತ್ವದ ಮೂಲಕ ಲಾಭವನ್ನು ಪಡೆಯಬೇಕು ಎಂದರು.
ವೇದಿಕೆಯ ಮೇಲೆ ನಿವೃತ್ತ ಮುಖ್ಯ ಶಿಕ್ಷಕ ಹಣಮಂತರಾವ್ ಪಾಟೀಲ, ಶರಣ ನರಸಯ್ಯ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಾಬುರಾವ್ ರಾಯೆ, ರೇವಣಪ್ಪ ಮೋದೆ, ಭೀಮಶಾ ಮುರಮೆ, ಚನ್ನಪ್ಪ ಮೋದೆ, ಬಸವರಾಜ ಖಜೂರಿ, ಗುರುಲಿಂಯ್ಯ ಸ್ವಾಮಿ, ಚಂದ್ರಶೇಖರ ಸ್ವಾಮಿ, ತಾನಾಜಿ ಎಟೆ ಸೇರಿ ಶರಣ, ಶರಣಿಯರು ಪಾಲ್ಗೊಂಡಿದ್ದರು.