ಮತ್ತೊಂದು ತಿರುವು ಪಡೆದ ಅಕ್ಕನ ಬದುಕು

0
53
ಹಂದಿಯೂ ಮದಕರಿಯೂ
ಒಂದೇ ದಾರಿಯಲ್ಲಿ ಸಂಧಿಸಿದೆಡೆ
ಹಂದಿಗಂಜಿ ಮದಕರಿ ಕೆಲಕ್ಕೆ
ಸಾರಿದಡೆ ಈ ಹಂದಿಯದು
ಕೇಸರಿಯಪ್ಪುದೆ ಚನ್ನಮಲ್ಲಿಕಾರ್ಜುನ
-ಅಕ್ಕಮಹಾದೇವಿ

ದೇವ ಸೌಂದರ್ಯವೇ ಧರೆಗಿಳಿದಂತೆ, ಆಂತರಿಕ ಮತ್ತು ಬಾಹ್ಯ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ಅಕ್ಕನ ನಿಲುವು ಅರಿಯದ ಕೌಶಿಕ ತನ್ನ ಕಾಕದೃಷ್ಟಿ ಹಾಕಿ ಬಯಲ ಚೇತನವನ್ನು ಕಟ್ಟಿ ಹಾಕುವೆ ಎಂಬ ಭ್ರಮೆಯಲ್ಲಿರುತ್ತಾನೆ. ಉಪಾಯಭರಿತಳಾದ ಅಕ್ಕ ಐದು ವಾರದ ವ್ರತದಲ್ಲಿ ಗುರು ಲಿಂಗ ಜಂಗಮ ಸೇವೆಯಲ್ಲಿ ನಿರತಳಾಗಿರುತ್ತಾಳೆ. ಅತ್ಯಾನಂದ ತುಂದಿಲಳಾದ ಅಕ್ಕನ ಮೊದಲ ಎಚ್ಚರಿಕೆ ಮುರಿದಿದ್ದರೂ ಆನಂದದಿಂದ ಇರಬೇಕೆಂದು ಕೌಶಿಕನನ್ನು ಕ್ಷಮಿಸಿದಳು.

ಮದವೇರಿದ ಆನೆಯಂತೆ, ಅಹಂಕಾರದ ಪಿತ್ತ ನೆತ್ತಿಗೇರಿಸಿಕೊಂಡು ಕ್ರೂರಿಯಾದ ಮನುಷ್ಯನಿಗೆ ಭೂಮಿ, ಆಕಾಶ ಯಾವುದೂ ಕಾಣುವುದಿಲ್ಲ ಎನ್ನುವಂತೆ ಅರಮನೆಯಲ್ಲಿದ್ದ ಮಹಾದೇವಿಯನ್ನು ಉದ್ದೇಶಿಸಿ ಕೌಶಿಕ, ಮಹಾದೇವಿ ನಿಲ್ಲಿಸು ನಿನ್ನ ಡೊಂಬರಾಟ ಎನ್ನುತ್ತಾನ್ನಲ್ಲದೆ ಗುರುವನ್ನು ಉದ್ದೇಶಿಸಿ ಎಲೈ ಭೈರಾಗಿಯೇ, ಉಪದೇಶ ಮಾಡಲು ಇದೇನು ಧರ್ಮಛತ್ರವೇ? ಯಾರಿಗೆ ಬೇಕಾಗಿದೆ ನಿನ್ನ ಉಪದೇಶ? ಎಂದು ಕೆಂಡಾಮಂಡಲವಾಗಿ ನುಡಿಯುತ್ತಾನೆ. ತಾಡೋಲೆಯಲ್ಲಿ ವಚನವೊಂದನ್ನು ಬರೆದುಕೊಂಡು ಗುರುಗಳಿಗೆ ತೋರಿಸುತ್ತಿದ್ದ ಅಕ್ಕನಿಗೆ ಕೌಶಿಕನ ಈ ಎರಡನೆ ಮುಖ ಕಂಡು ಗಾಬರಿಯಾಯಿತು.

Contact Your\'s Advertisement; 9902492681

ಗುರುಗಳು ಶಾಂತಚಿತ್ತರಾಗಿ, ಮಹಾರಾಜ ಕೋಪ ಬೇಡ. ಸಮಾಧಾನಿಯಾಗಿರು ಎಂದಾಗಲೂ “ನಿಮ್ಮಂಥ ಭೈರಾಗಿ ಇರುವಾಗ ನಮಗೆಲ್ಲಿಯ ಸಮಾಧಾನ?” ಎನ್ನುತ್ತಾನೆ. ಆಗ ಗುರುಗಳು, ಮಹಾರಾಜ ಶಾಂತನಾಗು. ಮನುಷ್ಯನಿಗೆ ಕಾಮ-ಕ್ರೋಧ ಅಪಾಯಕಾರಿಯಾದವುಗಳು. ಕುದಿವ ನೀರಿನಲ್ಲಿ ನಮ್ಮ ಮುಖ ಕಾಣುವುದಿಲ್ಲ. ನೀನು ಶಾಂತನಾದಾಗ ಮಾತ್ರ ಸತ್ಯ ಗೋಚರವಾಗುತ್ತದೆ. ನೀನು ಕೇದಂತೆ ಇದು ಧರ್ಮಛತ್ರವೆ! ಯಾಕೆಂದರೆ ನಿನ್ನಜ್ಜ, ನಿನ್ನಪ್ಪ, ನೀನು, ನಿನ್ನ ಮೊಮ್ಮಗ ಇದೇ ಅರಮನೆಯಲ್ಲಿದ್ದರಲ್ಲವೇ? ಹಾಗೆ ನೋಡಿದರೆ ಈ ಲೋಕವೇ ಧರ್ಮಛತ್ರವಿದ್ದ ಹಾಗೆ ಎಂದರು.

ಗುರುಗಳ ಈ ಮಾತುಗಳನ್ನು ಕೇಳಿ ಕೋಪಾಗ್ನಿಯ ಜ್ವಾಲೆಯಲ್ಲಿ ಉರಿದುರಿದು “ಏ, ಭೈರಾಗಿಯೇ ನೀನಾಗಿಯೇ ಹೋಗುವಿಯಾ? ಇಲ್ಲ ನಿನ್ನ ಕತ್ತು ಹಿಡಿದು ಆಚೆ ನೂಕಬೇಕಾ?” ಎಂದು ಗುರುಗಳಿಗೆ ಎಚ್ಚರಿಕೆಯನ್ನು ನೀಡುತ್ತಾನೆ. ಆಗ ಗುರುಗಳು, ನೀವು ಮೃದುವಾಗಿ ಮಾತನಾಡಿ. “ವಿನಾಶ ಕಾಲೇ ವಿಪರೀತ ಬುದ್ಧಿ” ಅನ್ನುವಂತೆ ಮಹಾದೇವಿಯನ್ನು ಮೋಹಿಸಿ, ಬಂಧಿಸಿ ಘೋರ ಅಪರಾಧ ಎಸಗಿರುವಿ. ಇನ್ಮುಂದೆ ಎಚ್ಚರಿಕೆಯ ಹೆಜ್ಜೆಯಿಡು ಎಂದು ಎಚ್ಚರಿಸಿ ಅರಮನೆಯಿಂದ ತೆರಳನುವಾಗುತ್ತಾರೆ. ಮಹಾದೇವಿಗೆ ಅಘಾತವಾದಂತಾಗುತ್ತದೆ.

ಕಣ್ಣೀರು ಸುರಿಸುತ್ತ ಅಸಾಯಕಳಾಗಿ ನಿಂತ ಅಕ್ಕನ ತಲೆ ನೇವರಿಸಿದ ಗುರುಗಳು “ಬಸವಣ್ಣನವರು ಹೇಳುವಂತೆ ಅಂತಾಯಿತು ಇಂತಾಯಿತು ಎಂತಾಯಿತೆನಬೇಡ” ನೀನು ಅಚಿಂತೆಯಾಗಿರು. ಅವನು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದು ಹೇಳುತ್ತಾರೆ. ಈ ಮಾತುಗನ್ನು ಕೇಳಿದ ಕೌಶಿಕ, ಹಾಗಾದರೆ ನೀವು ನನಗೆ ಹೆದರಿಸುತ್ತಿರುವಿರಾ? ಶಾಪಕೊಡುವಿರಾ? ಎಂದು ಪ್ರಶ್ನಿಸುತ್ತಾನೆ. ಶಾಪಕೊಡಲು ನಾನು ಕಾಡಿನಲ್ಲಿ ಕುಳಿತು ಗಡ್ಡೆ-ಗೆಣಸು ತಿಂದ ತಪಸ್ವಿಯಲ್ಲ. ನಾನು ಶರಣರ ವಂಶದವನು. ನಮ್ಮ ಶರಣರು ನೊಂದು ಸೈರಿಸು ಎಂದು ಹೇಳಿದ್ದಾರೆ ಎಂದು ಗುರುಗಳು ನುಡಿಯುತ್ತಾರೆ. ಸಾಕು ನಿಮ್ಮ ಉಪದೇಶ. ನಡೆಯಿರಿ ಆಚೆ ಎಂದು ಕೌಶಿಕ ಹೇಳಿದಾಗ, “ಜೀವಕಾರಣ್ಯವಿರುವ ಶರಣರು ಶಿಕ್ಷಿಸಲಾರರು. ಆದರೆ ಅವರನ್ನೇ ಪ್ರಾಣವಾಗಿಸಿಕೊಂಡ ಪರಮಾತ್ಮ ಮಾತ್ರ ನಿನ್ನ ಬಿಡಲಾರ ಎಂದು ಹಿಂತಿರುಗಿಯೂ ನೋಡದೆ ಗುರುಗಳು ಅಲ್ಲಿಂದ ತೆರಳುತ್ತಾರೆ.

ದುಃಖಿತಳಾದ ಅಕ್ಕ ನಾನೂ ಇಲ್ಲಿರಲಾರೆ ಎಂದು ಗುರುಗಳನ್ನು ಹಿಂಬಾಲಿಸಿದಳು. ಆಗ ರಾಜ ಹಿಡಿದು ಕರೆ ತನ್ನಿ ಎಂದು ಮಂತ್ರಿಗಳಿಗೆ ಆಜ್ಞೆ ಮಾಡುತ್ತಾನೆ. “ಕಾಲ ಬರುವುದು ಮಗಳೆ ಸಹನೆಯಂದಿರು” ಎಂದು ಹೇಳಿ ಗುರುಗಳು ಹೊರಡುತ್ತಾರೆ. ಕೌಶಿಕನ ಈ ದುರ್ವರ್ತನೆಯಿಂದ ಕುಪಿತಳಾದ ಅಕ್ಕ, “ನೀನು ಮನುಷ್ಯನಲ್ಲ. ನೀನು ನರಾಧಮ. ನಮ್ಮಿಬ್ಬರ ನಡುವೆ ಆದ ಒಪ್ಪಂದ ಮರೆತಿರುವೆಯಾ? ಇದೀಗ ನೀನು ಎರಡನೇ ಕರಾರು ಸಹ ಮುರಿದಿರುವೆ. ಎಚ್ಚರ! ಎಂದು ಹೇಳಿ ಕೋಣೆಯ ಬಾಗಿಲು ಹಾಕಿಕೊಂಡು ಲಿಂಗಧ್ಯಾನದಲ್ಲಿ ಮುಳುಗುತ್ತಾಳೆ. ಒಂದಕ್ಕೊಂಬತ್ತನಾಡುವರು. ಸಹನೆ ಶೂರರ ಲಕ್ಷಣ. ಹಂದಿಯೂ ಮದಕರಿಯು ಒಂದೇ ದಾರಿಯಲಿ ಸಂಧಿಸಬಹುದೆ? ಎಂದು ಶರಣರ ನುಡಿಗಳನ್ನು ನೆನೆದು ಶಾಂತಳಾದಳು.

ಯಾರಿಗೂ ಕೆಡುಕು ಬಯಸಬಾರದು. ನಾ ಹುಟ್ಟಿದಲ್ಲಿ ಅಜ್ಞಾನ ಹುಟ್ಟಿತ್ತು. ಅಜ್ಞಾನ ಹುಟ್ಟಿದಲ್ಲಿ ಆಸೆ ಹುಟ್ಟಿತ್ತು ಎನ್ನುವಂತೆ ಕೌಶಿಕ ಕೂಡ ಅಜ್ಞಾನಿ ಎಂದು ತನ್ನ ಮನಸ್ಸನ್ನು ತಹಬಂದಿಗೆ ತಂದುಕೊಂಡ ಮಹಾದೇವಿ ಉದ್ಯಾನದಲ್ಲಿರುವ ಹುಲ್ಲು, ಕಸ-ಕಳೆ ತೆಗೆಯಲು ಆರಂಭಿಸಿದಳು. ಇದನ್ನು ಕಂಡ ಕೌಶಿಕ ನೀವ್ಯಾಕೆ ಈ ಕೆಲಸ? ಪಟ್ಟದ ರಾಣಿಯಾಗುವ ನೀವು ಕಳೆಗುಂದಬಾರದು ಎಂದು ಕೇಳುತ್ತಾನೆ. ಉಣ್ಣುವವರು ಕೆಲಸ ಮಾಡಬೇಕು ಎಂದು ಹೇಳುತ್ತಾಳೆ. ಪಂಜರದ ಪಕ್ಷಿಯಾಗಿದ್ದ ಮಹಾದೇವಿ ಬದುಕಿನಲ್ಲಿ ಮತ್ತೊಂದು ತಿರುವು ಕಾಣಿಸಿಕೊಳ್ಳುತ್ತದೆ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here