ಕಲಬುರಗಿ: ಜಗದ ಕವಿ-ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ-ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಚಿಂತನೆಗಳನ್ನು ಇಂದಿನ ಯುವ ಜನತೆಗೆ ಮುಟ್ಟಿಸುವ ಮೂಲಕ ಇಡೀ ವಿಶ್ವವೇ ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಗುರಿಯೊಂದಿಗೆ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕಳಶಪ್ರಾಯದ ಕುವೆಂಪು’ ಎಂಬ ಮಹಾಘೋಷವಾಕ್ಯದೊಂದಿಗೆ ‘ಜಗದ ಕವಿಗೆ ಜನ್ಮಜೋಗುಳ’ ಎನ್ನುವ ಸರಣಿ ಸಾಹಿತ್ಯದ ಪಾಠವನ್ನು ಡಿ.೧೭ ರಿಂದ ಜಿಲ್ಲೆಯಾದ್ಯಂತ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರು ತಮ್ಮ ಬರಹದ ಮೂಲಕ ವಿಶ್ವವನ್ನು ಪ್ರೀತಿಸುವುದನ್ನು ಕಲಿಸಿಕೊಟ್ಟವರು ಮತ್ತು ಎಲ್ಲರನ್ನೂ ಒಂದೆಡೆಗೆ ತರಲು ಶ್ರಮಿಸಿದ ಅವರು, ಜನರಲ್ಲಿನ ಅಂಧ ವಿಶ್ವಾಸವನ್ನು ಬಿಡಿಸಿ ವೈಚಾರಿಕತೆಯನ್ನು ಬೆಳೆಸಿದರು. ಜಗದ ಕವಿಯಾಗಿರುವ ಕುವೆಂಪು ಅವರ ವಿಚಾರಧಾರೆಯಲ್ಲಿ ಸಾಮ್ಯತೆ ಇದೆ. ಜಾತಿ, ಧರ್ಮ, ಭಾಷೆ, ವರ್ಣ ಮೀರಿದ ವಿಶ್ವಮಾನವನ ಪರಿಕಲ್ಪನೆ ಕಟ್ಟಿಕೊಟ್ಟಿದ್ದಾರೆ. ಇಂಥ ವಿಶ್ವಮಾನವನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅದಕ್ಕೆ ಪೂರಕವಾಗಿ ಅನುಭವಿ ಸಾಹಿತಿಗಳಿಂದ ಸಾಹಿತ್ಯದ ಪಾಠ ಜರುಗಲಿದೆ.
ಡಿ.೧೭ ರಂದು ಬೆಳಗ್ಗೆ ೧೧.೪೫ ಕ್ಕೆ ನಗರದ ಜೇವರ್ಗಿ ಕಾಲೋನಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ ಸಮಾರಂಭವನ್ನು ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಡಾ.ಸುಜಾತಾ ಎಂ.ಬಂಡೇಶ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ-ಪತ್ರಕರ್ತ ಸೇಡಂನ ಜಗನ್ನಾಥ ಎಲ್.ತರನಳ್ಳಿ ವಿಶೇಷ ಉಪನ್ಯಾಸ ನೀಡಲಿದ್ದು, ಹಿರಿಯ ಸಾಹಿತಿ ಭೀಮಣ್ಣಾ ಬೋನಾಳ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಸಂದೀಪ ಬಿ. ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದು ಅಕಾಡೆಮಿ ಎಸ್.ಎಂ.ಪಟ್ಟಣಕರ್, ಶಿವರಾಜ ಅಂಡಗಿ, ಡಾ.ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ ತಿಳಿಸಿದ್ದಾರೆ.