ಕಲಬುರಗಿ: ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ, ಬದ್ಧತೆಯನ್ನು ಕಾಪಾಡಿಕೊಂಡು ಬರಬೇಕು ಎಂದು ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಇಂದು ಆಯೋಜಿಸಿದ್ದ ಕಲಬುರಗಿ ಕಲ್ಪವೃಕ್ಷ ಮಾಸಿಕ ಪತ್ರಿಕೆ ಜನಾರ್ಪಣೆ ಮಾಡಿ ಮಾತನಾಡಿದರು.
ಪತ್ರಿಕೆಗಳು ಹಾಗೂ ಪತ್ರಕರ್ತರು ಸಾಕಷ್ಟು ತಾಪತ್ರಯ ಅನುಭವಿಸುತ್ತಿವೆ. ಸತ್ಯ, ಶುದ್ಧ, ಪ್ರಾಮಾಣಿಕತೆಯಿಂದ ಪತ್ರಿಕೆ ಮುನ್ನಡೆಸಿಕೊಂಡು ಹೋಗಬೇಕು ಎಂದು ಸಾನ್ನಿಧ್ಯ ವಹಿಸಿದ್ದ ಸುಲಫಲಮಠದ ಡಾ. ಸಾರಂಗಧರೇಶ್ವರ ಸ್ವಾಮೀಜಿ ನುಡಿದರು.
ಕೆಲವು ಪತ್ರಿಕೆಗಳು ಕೈತೊಳೆದು ಮುಟ್ಟುವಂಥವು. ಇನ್ನೂ ಕೆಲವು ಮುಟ್ಟಿದ ಮೇಲೆ ಮೈತೊಳೆದುಕೊಳ್ಳುವಂತವುಗಳಾಗಿವೆ ಎಂದು ಅವರು ವ್ಯಂಗ್ಯವಾಡಿದರು.
ಇದೇ ಸಂದರ್ಭದಲ್ಲಿ ಬಸವೇಶ್ವರ ವಿವಿ ರಿಜಿಸ್ಟ್ರಾರ್ (ಪರೀಕ್ಷಾ ವಿಭಾಗ) ಕಾರ್ಯಕ್ರಮ ಉದ್ಘಾಟಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ, ಎಚ್ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಶ್ರೀಗುರು ವಿದ್ಯಾಪೀಠದ ಸಂಸ್ಥಾಪಕ ಬಸವರಾಜ ಡಿಗ್ಗಾವಿ ಇತರರು ವೇದಿಕೆಯಲ್ಲಿದ್ದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ದಿಕ್ಸೂಚಿ ನೋಟದ ಭಾಷಣ ಮಾಡಿದರು. ಕಿರಣ ಪಾಟೀಲ ಪ್ರಾ ರ್ಥನೆಗೀತೆ ಹಾಡಿದರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅದ್ಯಕ್ಷ ಬಿ.ಎಚ್. ನಿರಗುಡಿ ಸ್ವಾಗತಿಸಿದರು. ಸಂಪಾದಕ ಸುರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.
ಇದೇವೇಳೆಯಲ್ಲಿ ಹಿರಿಯ ಪತ್ರಕರ್ತರಾದ ಎಸ್.ಬಿ. ಜೋಶಿ, ಪಿ.ಎಂ.ಮಣ್ಣೂರ, ಶಿವರಾಯ ದೊಡ್ಡಮನಿ, ಡಿ. ಶಿವಲಿಂಗಪ್ಪ, ಅಪ್ಪಾರಾವ ಬಿರಾದಾರ, ಬಿ.ವಿ. ಚಕ್ರವರ್ತಿ ಶಾಮಕುಮಾರ ಶಿಂಧೆ, ಇತರರನ್ನು ಹಾಗೂ ಕಲಬುರಗಿ ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಅಸುಂಡಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಜೋಶಿ ಹಾಗೂ ಜಿಲ್ಲಾ ಕಸಾಪಕ್ಕೆ ನೂತನವಾಗಿ ನೇಮಕಗೊಂಡ ಕೆ.ಎಸ್. ಬಂಧು, ಸವಿತಾ ನಾಶಿ ಮತ್ತಿತರರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.