ಚನ್ನಮಲ್ಲಿಕಾರ್ಜುನನಿಗೆ ಅವಸರದ ಓಲೆ ಒಯ್ಯುತ್ತಿರುವ ಅಕ್ಕ

0
124
ಹಸಿವೆ ನೀನು ನಿಲ್ಲು ನಿಲ್ಲು
ತೃಷೆಯೆ ನೀನು ನಿಲ್ಲು ನಿಲ್ಲು
ಕಾಮವೆ ನೀನು ನಿಲ್ಲು ನಿಲ್ಲು
ಕ್ರೋಧವೆ ನೀನು ನಿಲ್ಲು ನಿಲ್ಲು
ಮೋಹವೆ ನೀನು ನಿಲ್ಲು ನಿಲ್ಲು
ಮದವೆ ನೀನು ನಿಲ್ಲು ನಿಲ್ಲು
ಮಚ್ಚರವೆ ನೀನು ನಿಲ್ಲು ನಿಲ್ಲು
ಸಚರಾಚರವೆ ನೀನು ನಿಲ್ಲು ನಿಲ್ಲು
ನಾನು ಚೆನ್ನಮಲ್ಲಿಕಾರ್ಜುನ ದೇವರ
ಅವಸರದ ಓಲೆಯನೊಯ್ಯುತ್ತಲಿದ್ದೇನೆ
-ಅಕ್ಕ ಮಹಾದೇವಿ

ಬೀಜದ ಯಾತ್ರೆ ಮತ್ತು ಬೆಳವಣಿಗೆ ಬೀಜವಾಗುವವರೆಗೆ. ಅಲ್ಲಿಗೆ ಅದರ ಪಯಣ ಮುಗಿಯುತ್ತದೆ. ಅದೇರೀತಿ ಭಕ್ತ ಮತ್ತು ಪರಮಾತ್ಮನ ಪಯಣ ಸಾಕ್ಷಾತ್ ಭಗವಂತನಾಗುವರೆಗೆ ಮಾತ್ರ. ಎರಡಾಗಿರುವುದು ಒಂದಾಗುವಿಕೆಯ ಈ ಪಯಣ ಲಿಂಗಪೂಜೆ, ಭಕ್ತಿ, ಧ್ಯಾನ, ಭಜನೆಯಲ್ಲಿ ಮುಕ್ತಾಯವಾಗುತ್ತದೆ. ನಮ್ಮ ಜನಪದರು ಮತ್ತು ವಚನಕಾರರು ಯಾವುದೇ ವಿಶ್ವವಿದ್ಯಾಲಯದಲ್ಲಿ ಓದಿಲ್ಲ. ಆದರೆ ವಿಶ್ವವಿದ್ಯಾಲಯದಲ್ಲಿ ಅವರು ಮತ್ತು ಅವರ ಸಾಹಿತ್ಯದ ಬಗ್ಗೆ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆ ನಡೆಯುತ್ತಿರುವುದು ಚೋದ್ಯದ ಸಂಗತಿ!

Contact Your\'s Advertisement; 9902492681

ಕಷ್ಟದಿಂದ ಮೇಲೇಳಬೇಕು ಎನ್ನುವವರು ಜೀವನದಲ್ಲಿ ಏಳಬೇಕು. ಹಾಗೆ ಎಚ್ಚರವಿದ್ದವರಲ್ಲಿ ಅಕ್ಕ ಮಹಾದೇವಿ ಕೂಡ ಒಬ್ಬರು. ಸಾಯಲ್ಕೆ ಮುನ್ನ ಜೀವಿಸು, ಸಾಧಿಸು. ಇದನ್ನೇ ಬಸವಣ್ಣನವರು “ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡು ಹೋಗದ ಮುನ್ನ… ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲ ಸಂಗನ ಎಂದು ಹೇಳಿದ್ದಾರೆ. ಚೀನಾದ ಲಾಹುತ್ಸೆ ತುಂಗಾ ಎಲೆ ಉದುರಿದರೆ ಎಚ್ಚರವಾದವರು. ಭಗವಾನ್ ಬುದ್ಧ ಜಾಗೃತ ಜನರೆದುರು ಮಾತನಾಡಿದರು. ಅದೇರೀತಿಯಾಗಿ ವಚನ-ಪ್ರವಚನಗಳು ಎಬ್ಬಿಸುವ ಕೆಲಸ ಮಾಡುತ್ತವೆ. ಅಕ್ಕಮಹಾದೇವಿ ಒಳಗಿನಿಂದಲೇ ಎಚ್ಚರವಾದವಳು. ಆಕೆ ಸ್ವಯಂಪ್ರಭೆ. ಎಣ್ಣೆ, ಬತ್ತಿ, ಅಗ್ನಿಯ ಸ್ಪರ್ಶವಿಲ್ಲದ ಪ್ರಕಾಶಮಾನ ಜ್ಯೋತಿ.

ತನ್ನ ಮನದನ್ನ ಚೆನ್ನಮಲ್ಲಿಕಾರ್ಜುನನ್ನು ಕಾಣುವ ಹಂಬಲದಿಂದ ಗುರುಮನೆಯಿಂದ ನಡೆದು ಬರುತ್ತಿದ್ದಾಗ ಕತ್ತಲೆ ಆವರಿಸಿತು. ಕ್ಷಣಹೊತ್ತು ಮನಸ್ಸು ಚುಚ್ಚಿದಂತಾಯಿತು. ದೂರದಲ್ಲಿ ಹಾಳು ಗುಡಿ ಕಂಡಿತು. ದೀಪ ಸಣ್ಣದಾಗಿ ಉರಿಯುತ್ತಿತ್ತು. ಯಾರೂ ಇಲ್ಲದ ಜೀವನ ಆಕೆಗೆ ಆನಂದ ತಂದಿತ್ತು. ಅಲ್ಲಿಯೇ ಇದ್ದ ನೀರಿನ ತೊಟ್ಟಿಯಲ್ಲಿ ಕೈ ಕಾಲು ಮುಖ ತೊಳೆದುಕೊಂಡು ಭಸ್ಮ ಹಚ್ಚಿಕೊಂಡು ಧ್ಯಾನಕ್ಕೆ ಕುಳಿತಳು. ಗಾಢ ಕತ್ತಲೆ, ನಾಯಿ, ನರಿ ಬಳ್ಳಗಳ ಕೂಗು ಕೇಳಿಸಿತು. ತಾನು ಕುಳಿತಲ್ಲಿಗೆ ಅದೇನೋ ಸುಳಿಸುಳಿದು ಬರುತ್ತಿರುವುದು ಕಂಡಿತು. ಬಹುಶಃ ಅದು ಹಾವು ಇರಬಹುದು ಎಂದು ಅಳುಕುತ್ತಿರುವಾಗಲೇ ಹೆಣದ ಮೇಲಿನ ಮಾರುದ್ದ ಸೀರೆ ಆಕೆಯ ತೊಡೆಯ ಮೇಲೆ ಬಂದು ಬೀಳುತ್ತದೆ. ರಾತ್ರಿ ಅದನ್ನೇ ಹೊದ್ದು ಮಲಗುತ್ತಾಳೆ.

ಬೆಳಗ್ಗೆ ಹೊಟ್ಟೆ ಚುರುಗುಟ್ಟುತ್ತದೆ. ಊರೊಳಗೆ ಪ್ರವೇಶ ಮಾಡುತ್ತಲೇ ಸಣ್ಣ ಮಕ್ಕಳು ಹುಚ್ಚಿ ಎಂದು, ಪೋಲಿ ಹುಡುಗರು ಕಾಮುಕ ದೃಷ್ಟಿಯಿಂದ ಅವಳ ಬೆನ್ನು ಹತ್ತುತ್ತಾರೆ. ಮನೆ ಮನೆ ತಿರುಗಾಡಿದರೂ ಅಕ್ಕನಿಗೆ ಯಾರೂ ತಂದು ನೀಡುವುದಿಲ್ಲ. ಕೊನೆಗೊಂದು ಮನೆ ಮುಂದೆ ನಿಂತು “ಅಮ್ಮಾ” ಎಂದಾಗ ಅಜ್ಜಿಯೊಬ್ಬಳು ಅನ್ನ-ಮೊಸರು ನೀಡಲು ಬರುತ್ತಾಳೆ. ಆದರೆ ಈಕೆಯಲ್ಲಿ ಯಾವುದೇ ಪಾತ್ರೆಯಿರುವುದಿಲ್ಲ ಬೈಯ್ದು ಮನೆಯಲ್ಲಿದ್ದ ಎಲೆಯೊಂದನ್ನು ತಂದು ಅನ್ನ ಹಾಕುತ್ತಿರುವಾಗ ಅದು ಕೆಳಗೆ ಬೀಳುತ್ತದೆ. ಇನ್ನೇನು ಎತ್ತಿಕೊಂಡು ತಿನ್ನಬೇಕೆನ್ನುವಷ್ಟರಲ್ಲಿ ನಾಯಿಯೊಂದು ಬಂದು ಬಿದ್ದ ಅನ್ನ ತಿನ್ನುತ್ತಿರುತ್ತದೆ. ಹೀಗೆ ಮುನ್ನಡೆದಾಗ ಆಲದ ಮರಕ್ಕೆ ಪೂಜೆ ಮಾಡುತ್ತಿದ್ದವರು ತಿನ್ನಲು ಇವಳಿಗೆ ಪ್ರಸಾದ ಕೊಡುತ್ತಾರೆ. ಆಗ ಆಕೆಗೆ ಚೆನ್ನಮಲ್ಲಿಕಾರ್ಜುನ ತನ್ನ ಜೊತೆಗಿರುವುದು ಖಾತ್ರಿಯಾಗುತ್ತದೆ.

ಮತ್ತೊಂದು ದಿನ ಕೆರೆಯ ಮುಂದಿನ ಗುಡಿಯಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ಕೌಪೀನ ಧರಿಸಿ ಮೈತುಂಬ ಭಸ್ಮ ಬಳಿದುಕೊಂಡು, ಕೈಯಲ್ಲಿ ಕಮಂಡಲ ಮತ್ತು ಬೆತ್ತ ಹಿಡಿದ ಕಪಾಲಿಕ ಸಾಧಕನೊಬ್ಬ ಬರುತ್ತಾನೆ. ಈಕೆಯ ಪರಿಚಯ ಮಾಡಿಕೊಳ್ಳಲು ನಾನಾ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ನೀನು ಚೆಲುವೆ, ಕೋಗಿಲೆ ಮುಂತಾಗಿ ಹೊಗಳಿ ಸಮೀಪಕ್ಕೆ ಬರುತ್ತಿರುತ್ತಾನೆ. ಅವನ ಕಾಮುಕತನ ಕಂಡ ಅಕ್ಕ ಅಲ್ಲಿಯೇ ಇದ್ದ ಬೆತ್ತದಿಂದ ಅವನ ತಲೆಗೆ ಬಲವಾಗಿ ಹೊಡೆಯುತ್ತಾಳೆ. ಆತ ಮೂರ್ಚೆ ಹೋಗುತ್ತಾನೆ. ಇಂದಿಂಗೆ ನಾಳಿಂಗೆ ಎಂಬ ಸಂಗ್ರಹ ಬುದ್ದಿ ಬೇಡ ಕಾಯುವ ದೇವ ಸದಾ ನಮ್ಮೊಂದಿಗಿದ್ದಾನೆ ಎಂದುಕೊಂಡು ಮುಂದೆ ನಡೆಯುತ್ತಿದ್ದಾಗ ಅಕ್ಕನಿಗೆ ಹಸಿವನ್ನೇ ಗೆಲ್ಲಬೇಕು ಎಂಬ ಮನಸ್ಸಾಗುತ್ತದೆ.

ತಾಯಿಮನೆ, ಅರಮನೆ ಮತ್ತು ಗುರುಮನೆ ಬಿಟ್ಟು ಬಂದ ನಾನು, ಆಯುಷ್ಯ ತೀರದ ಮುನ್ನ ನಿನ್ನನ್ನು ಹಿಡಿದೆ ಹಿಡಿಯುತ್ತೇನೆ ಎಂದು ಆ ದೇವರಿಗೆ ಸವಾಲು ಹಾಕಿ ಮಾರ್ಗ ಬದಲಾಯಿಸಿ ದಟ್ಟವಾದ ಕಾಡಿನಲ್ಲಿ ಹೀಗೆ ಸಂಚರಿಸುವಾಗ ಧೋ ಎಂದು ಮಳೆ ಸರಿಯುತ್ತದೆ. ಆ ಮಳೆಯನ್ನು ಲೆಕ್ಕಿಸದೆ ದಿಬ್ಬದ ಮೇಲೆ ಪದ್ಮಾಸನ ಹಾಕಿ ಕುಳಿತುಕೊಳ್ಳುತ್ತಾಳೆ. ಎಚ್ಚರವಾಗುವುದಿಲ್ಲ. ಅಲ್ಲಿ ಚೆನ್ನಮಲ್ಲಿಕಾರ್ಜುನನ ಪ್ರಭೆ ಕಾಣುತ್ತದೆ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here