ಚಿಲಿಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರೆ
ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ
ಎರಗಿ ಬಂದಾಡುವ ದುಂಬಿಗಳಿರಾ ನೀವು ಕಾಣಿರೆ
ಕೊಳನ ತಡಿಯೊಳಗಾಡುವ ಹಂಸೆಗಳಿರಾ ನೀವು ಕಾಣಿರೆ
ಗಿರಿ ಗವ್ಹರದೊಳಗಾಡುವ ನವಿಲುಗಳಿರಾ ನೀವು ಕಾಣಿರೆ
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ನೀವು ಹೇಳಿರೆ
-ಅಕ್ಕ ಮಹಾದೇವಿ
ಕಾಡುಮೃಗಗಳಿಗೆ, ಕಾಮುಕರಿಗೆ ಈ ಯಾವುದಕ್ಕೂ ಹೆದರದ ಅಕ್ಕ ನೀರಿನಲ್ಲಿ ಬಿದ್ದ ಕಟ್ಟಿಗೆ ತುಂಬುವ ಹಾಗೆ ಸಂಪೂರ್ಣವಾಗಿ ಚೆನ್ನಮಲ್ಲಿಕಾರ್ಜುನನಿಗೆ ಸಮರ್ಪಿತಳಾಗಿದ್ದಳು. ಭಕ್ತ ಸಾಕ್ಷಾತ್ ಪರಶಿವ ಆದಾಗ ನಾವು ಇಷ್ಟಪಡುವುದು ದೊರೆಯುವ ಚಮತ್ಕಾರಿಕ ಶಕ್ತಿ ಲಭ್ಯವಾಗುತ್ತದೆ. ಸಮರ್ಪಿತ ವ್ಯಕ್ತಿಗೆ ಇದೆಲ್ಲವೂ ಸಾದ್ಯವಾಗುತ್ತದೆ ಎನ್ನುವುದಕ್ಕೆ ಅಕ್ಕಮಹಾದೇವಿ ಉದಾಹರಣೆಯಾಗಿದ್ದಳು.
ಶೂನ್ಯ ಸ್ಪಷ್ಟವಾಗಬಲ್ಲ ಶಕ್ತಿ ಹೊಂದಿದವರನ್ನು ಶರಣ ಭಾಷೆಯಲ್ಲಿ ಅವಿಮುಕ್ತರು ಎನ್ನ ಲಾಗುವುದು. ಕಲ್ಯಾಣ ಅಂತಹ ಅವಿಮುಕ್ತ ಕ್ಷೇತ್ರವಾಗಿತ್ತು. ಶರಣರು ಅವಿಮುಕ್ತರಾಗಿದ್ದರು. ಭಕ್ತ ಪರಾಕಾಷ್ಠೆ ಮಟ್ಟಕ್ಕೆ ಏರಿದಾಗ ಸೃಷ್ಟಿಕರ್ತ ಆಗಿರುತ್ತಾನೆ. ಮನುಷ್ಯ ಅನ್ನಮಯಿ, ಪ್ರಾಣಮಯಿ, ಮನೋಮಯಿ, ವಿಜ್ಞಾನಮಯಿ, ಆನಂದಮಯಿ ಕೋಶ ಆಗಿರುತ್ತಾನೆ. ಆನಂದಮಯಿ ಕೋಶ ತಲುಪಿದಾಗ ಉಳಿದ ಕೋಶಗಳು ಹೇಳಿದಂತೆ ಕೇಳುತ್ತವೆ. ಇವರನ್ನು ಅಮೃತ ಕುಡಿದವರು ಎನ್ನುತ್ತಾರೆ.
ಸಾಧಕರು ಇದೆಲ್ಲವನ್ನು ಸಾಧಿಸಿದವರು. ನಾವೆಲ್ಲ ಶರೀರಮಯಿಗಳಾಗಿದ್ದೇವೆ. ಹೀಗಾಗಿ ಅಧ್ಯಾತ್ಮ ನಮಗೆ ನಿಲುಕದ ವಿಷಯವಾಗಿದೆ. ಸಾಧನೆಯಿಂದ ಸೃಷ್ಟಿ ಮಾಡುವುದಲ್ಲ. ಕನ್ನಡಿಯ ಮೇಲಿನ, ಅರಿವಿನ ಮೇಲಿನ ದೂಳನ್ನು ಒರೆಸಿಕೊಳ್ಳುವುದೆಂದರ್ಥ. ಹಸಿವು ದೂರ ತಳ್ಳಿ ಮೆಚ್ಚಿ ಬಂದೆನಯ್ಯ ನಾನು ನೀನಿರುವೆ ಎಂಬ ಭಾವದಿಂದ ಎಂದು ನಾಡಿನಿಂದ ಕಾಡಿನ ದಾರಿ ಹಿಡಿಯುತ್ತಾಳೆ ಅಕ್ಕ. ಕಣಕಣದಲ್ಲೂ ಚೆನ್ನಮಲ್ಲಿಕಾರ್ಜುನನ ಇರುವು ಕಾಣುತ್ತ ’ಎತ್ತೆತ್ತ ನೋಡಿದಡತ್ತ ನೀನೆ ದೇವ’ ಎನ್ನುತ್ತ, ಇಳ, ನಿಂಬೆ, ಮಾವು ಮಾದಲಕ್ಕೆ ಉಳಿ ನೀರೆರೆದವರು ಯಾರು? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾಳೆ.
ಅಕ್ಕನಿಗೆ ವೈಜ್ಞಾನಿಕ, ಪ್ರಾಕೃತಿಕ, ಸಮಾಜಿಕ ಜ್ಞಾನವಿತ್ತು ಮಲ್ಲಿಗೆ ಹೂವಿಗೆ ಮಲ್ಲಿಗೆ ಗಂಧ, ಸಂಪಿಗೆ ಹೂವಿಗೆ ಸಂಪಿಗೆ ಗಂಧ, ಜಲವು ಹಲವು ದ್ರವ್ಯವಾಗಿ ತಾನು ಬೇರಾಗಿಹ ಪರಿ ಆಕೆಗೆ ಗೊತ್ತಿತ್ತು. ವಿಜ್ಞಾನ, ಅಧ್ಯಾತ್ಮ ಎರಡರ ಎರಕಹೊಯ್ದ ಕಾರ್ಯ ಕಂಡು ಸೃಷ್ಟಿಯ ಸೊಬಗು ಸವಿಯುತ್ತ , ಆನಂದಿಸುತ್ತ ದಟ್ಟ ಕಾನನದಲ್ಲಿ
ನನದಲ್ಲಿ ಹೊರಟಿರುವ ಆಕೆಗೆ ಆ ಚೆನ್ನಮಲ್ಲಿಕಾರ್ಜುನ ಒಮ್ಮೆ ಎದುರು ಬಂದು ನಾನಿದ್ದೇನೆ ಎಂದು ತೋರಬಾರದೆ? ಎಂದೆನಿಸುತ್ತಿತ್ತು. ಪ್ರಾಣಿ, ಪಕ್ಷಿ ನಲಿದಾಡುವುದನ್ನು ಕಂಡ ಆಕೆ ಗಿಳಿ, ಹಂಸ, ನವಿಲುಗಳಿಗೆ ನೀವು ಚೆನ್ನಮಲ್ಲಿಕಾರ್ಜುನನ ಕಂಡಿರಾ? ಕಂಡಿದ್ದರೆ ಕರೆದು ತನ್ನಿ ಎಂದು ಮೊರೆಯಿಡುತ್ತಾಳೆ.
ಸೃಷ್ಟಿಯನ್ನು ಕಣ್ತೆರೆದು ನೋಡುತ್ತ ಹಸಿವು, ನಿದ್ರೆ, ನೀರಡಿಕೆ ನಿಲ್ಲಿಸಿದ ಅಕ್ಕನಿಗೆ ಗುಡುಗು, ಸಿಡಿಲಿನ ಆರ್ಭಟವೂ ಏನೂ ಅನ್ನಿಸುವುದಿಲ್ಲ. ಎಲ್ಲ ಒಳ್ಳೆಯದಾಗುತ್ತದೆ ಎನ್ನುವುದಕ್ಕಿಂತ ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಮುನ್ನಡೆಯುತ್ತಾಳೆ.
ಪ್ರೇಮವನ್ನೇ ಬಂಡವಾಳ ಮಾಡಿಕೊಂಡ ಅಕ್ಕ ಆ ಅದ್ಭುತ ಶಕ್ತಿಯಿಂದ ಪರಮಾತ್ಮನ ಪ್ರೀತಿಯ ಬೆಳೆ ಬೆಳೆದವಳು. ಲಿಂಗದ ಭೂಮಿಯಲ್ಲಿ ಅಂಗದ ಬೆಳೆ ಬೆಳೆಯಲು ಹೊರಟವಳು.