ಯಡ್ರಾಮಿ: ಹೈ.ಕ. ಕಲ್ಯಾಣ ಕರ್ನಾಟಕ ಎಂದು ಹೊಸ ಹೆಸರು ನಾಮಕರಣ ಮಾಡಿದ್ದು ಸಂತಸದ ವಿಷಯವಾಗಿದ್ದರೂ ಜನರ ಕಲ್ಯಾಣವಾದಗಲೇ ಮಾತ್ರ ಕಲ್ಯಾಣ ಕರ್ನಾಟಕವಾಗಲು ಸಾಧ್ಯ ಎಂದು ಯಡ್ರಾಮಿ ತಾಲ್ಲೂಕ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಮಲ್ಲಿಕಾರ್ಜುನ ಕಡಕೋಳ ತಿಳಿಸಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ಯಡ್ರಾಮಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ ಕರ್ನಾಟಕದ ಜನರಿಗೆ ಮೈಸೂರು ಪ್ರಾಂತ್ಯದ ಯಾವ ಸೌಲಭ್ಯಗಳು ದೊರೆಯಲಿಲ್ಲ. ನಮ್ಮವರೇ ಮುಖ್ಯಮಂತ್ರಿಯಾಗಳಾದಗಲೂ ನಮ್ಮ ಸಂಕಟಗಳು ಪರಿಹಾರವಾಗಬಲ್ಲೆವು ಎಂದು ಕೊಂಡಿದ್ದೇವು. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಈಡೇರಲಿಲ್ಲ. 371 (ಜೆ) ಜಾರಿಯಾದಾಗಲೂ ಇದೇ ಆಶಾ ಭಾವನೆ ಇತ್ತು. ಆದರೆ ಅದೂ ಸಹ ಪೂರ್ಣ ಪ್ರಮಾಣದಲ್ಲಿ ಈಡೇರುತ್ತಿಲ್ಲ. ಈಗಲಾದರೂ ಈ ಭಾಗದ ಏಳಿಗೆಗೆ ಸರ್ಕಾರ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.
ಎಂಬತ್ತರ ದಶಕ ಜನ ಚಳವಳಿಗಳ ದಶಕವಾಗಿತ್ತು . ಇವತ್ತು ಎಲ್ಲ ಹೋರಾಟಗಳು ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಸೈದ್ದಾಂತಿಕ ನೆಲೆಗಟ್ಟು , ಶ್ರೇಣಿಕೃತ ಸಮಷ್ಟಿಪ್ರಜ್ಞೆ, ಸ್ತ್ರೀಪರ , ದಮನಿತಪರ ಚಿಂತನಧಾರೆಗಳಿಗೆ, ವರ್ತಮಾನದ ತಲ್ಲಣಗಳಿಗೆ ಸಮಕಾಲೀನ ಹೋರಾಟಗಳು ತೆರೆದುಕೊಂಡಿಲ್ಲ. ಹೀಗಾಗಿ ಹೋರಾಟಗಳು ಜನಮುಖಿ ಚಿಂತನೆಗಳಿಂದ ದೂರ ಸರಿದಿವೆ. ಹೀಗೆ ಕನ್ನಡ ಭಾಷೆ, ಶೈಕ್ಷಣಿಕ ಸ್ಥಿತಿ, ಹೋರಾಟಗಳು ಜನರ ನಂಬುಗೆಗಳಿಂದ ದೂರ ಸರಿದು ಸವಾಲುಗಳಿಗೆ ಸ್ಪಂದಿಸದೇ ಒಂದು ಬಗೆಯ ನಿರ್ಜೀವದ ಸ್ಥಗಿತತೆಯನ್ನು ಅಪ್ಪಿಕೊಂಡಿವೆ ಎಂದು ವಿಷಾದಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲಿನ ಅಸಮಾನತೆ ತೊಲಗಿಸಬೇಕಾಗಿದೆ ಎಂದು ಅವರು, ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಣದವರೆಗಾದರೂ ರಾಷ್ಟ್ರೀಕರಣಗೊಳಿಸುವುದರ ಮೂಲಕ ಏಕರೂಪದ ಸಮಾಜ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ರಾಜ್ಯ ಭಾಷೆಯಾದ ಕನ್ನಡ ಮಾಧ್ಯಮದಲ್ಲಿಯೇ ಕಲಿಸುವಂತಾಗಬೇಕು ಎಂದು ಆಗ್ರಹಿಸಿದರು.
ಬರಗೂರ ವರದಿ ಜಾರಿಗೆ ಬರಲಿ ಸರ್ಕಾರ ಕೂಡಲೇ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸಾಂಸ್ಕೃತಿಕ ನೀತಿ ವರದಿಯನ್ನು ಜಾರಿಗೆ ತರಲಿ ಎಂದರು.
ಇದಕ್ಕೂ ಮುನ್ನ ಪಟ್ಟಣದ ಬಸ್ ನಿಲ್ದಾಣದಿಂದ ಸಮ್ಮೇಳನದ ವೇದಿಕೆಯವರೆಗೆ ಸಾರೋಟಿನಲ್ಲಿ ನಾಡಿದೇವಿಯ ಮೂರ್ತಿಯೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
ಸಾಹಿತಿ ಕುಂ ವಿರಭದ್ರಪ್ಪ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಸಂಸದ ಡಾ. ಉಮೇಶ್ ಜಾಧವ್ ಮುಖ್ಯ ಅತಥಿಗಳಾಗಿ ಆಗಮಿಸಿದ್ದು, ಶಾಸಕ ಡಾ.ಅಜಯಸಿಂಗ್, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಯಡ್ರಾಮಿ ತಾಲ್ಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಎಸ್.ಆಲಮೇಲ್ ಸೇರಿದಂತೆ ಮತ್ತಿತರರು ಸಾರೋಟಿನಲ್ಲಿದ್ದರು.
ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು , ಸಾಹಿತಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡು ಮೆರವಣಿಗೆಗೆ ಶೋಭೆ ತಂದರು.