12ನೇ ಶತಮಾನದ ವಚನ ಕ್ರಾಂತಿಗೆ ಬಸವಣ್ಣ, ಚೆನ್ನಬಸವಣ್ಣನನ್ನು ಸಜ್ಜುಗೊಳಿಸಿ ಇಡೀ ವಚನ ಕ್ರಾಂತಿಗೆ ಬೆನ್ನೆಲುಬಾಗಿದ್ದವರು ಬಸವಣ್ಣನ ಅಕ್ಕ ಅಕ್ಕನಾಗಮ್ಮ. ಬ್ರಾಹಣ್ಯದ ಕರ್ಮಠವನ್ನು ತಾನು ಪ್ರಶ್ನಿಸುವುದಲ್ಲದೆ ತನ್ನ ತಮ್ಮ (ಸಹೋದರ) ಬಸವಣ್ಣನವರಲ್ಲಿಯೂ ಪ್ರಶ್ನಿಸುವ ಗುಣ ಕಲಿಸಿದ ಇವರು ಕಲ್ಯಾಣ ಕ್ರಾಂತಿಗೆ ಮುಖ್ಯ ಭೂಮಿಕೆಯಾದವರು. ಅನುಭವ ಮಂಟಪಕ್ಕೆ ಅನುವಾಗಿ, ಶರಣ ಸೂತ್ರದ ಮುಖ್ಯ ಎಳೆಯಾಗಿ ಬಸವ ಬೆಳಕು ಪಸರಿಸಿದ ಇವರ ಪಾತ್ರ ಅನನ್ಯವಾದುದು.
ವಚನ ಸಂರಕ್ಷಣೆಗಾಗಿ ಖಡ್ಗವಿಡುದು ಹೋರಾಡಿದ ಕ್ರಾಂತಿಮಾತೆ ಅಕ್ಕನಾಗಮ್ಮನ ಕುರಿತಾಗಿ ಬಂದ ಕೃತಿಗಳು ತುಂಬಾ ವಿರಳ. ಅದರಲ್ಲೂ ಕಾವ್ಯದ ರೂಪದಲ್ಲಿ ಆಕೆಯ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿರುವುದು ವಿರಳಾತಿ ವಿರಳ. ಆದರೆ ಮಹಾಂತಪ್ಪ ನಂದೂರ ಅವರು ಅರಿವೇ ಪ್ರಮಾಣು ಎನ್ನುವ ಈ ಕೃತಿಯಲ್ಲಿ ಅಕ್ಕನಾಗಮ್ಮನವರ ಜೀವನೇತಿಹಾಸವನ್ನು ಸಾನೆಟ್ (ಸನೀತ) ರೂಪದ ಕಾವ್ಯದಲ್ಲಿ ಕಟ್ಟಿ ಕೊಟ್ಟಿರುವುದು ಒಂದು ವಿಶೇಷ ಪ್ರಯತ್ನ ಎಂದು ಹೇಳಬಹುದು.
ಕನ್ನಡ ಸಾಹಿತ್ಯದಲ್ಲಿ ಹರಿಹರ ಪ್ರಯೋಗಿಸಿದ ರಗಳೆ ಸ್ವರೂಪವನ್ನು ಹೋಲುವ ಈ ಸುನೀತಗಳು ಇಂಗ್ಲಿಷ್ ಸಾಹಿತ್ಯದ ಸಾನೆಟ್ ಹೋಲುವ ಒಂದು ಕಾವ್ಯ ರೂಪ. ಮುಕ್ತ ಛಂದಸ್ಸು ಜಾತಿಗೆ ಸೇರಿದ ೧೪ ಸಾಲುಗಳುಳ್ಳ ಈ ಕಾವ್ಯ ರೂಪವನ್ನು ಈ ಹಿಂದೆ ಬಿಎಂಶ್ರೀ, ಕಣವಿ, ಎಚ್.ಎಸ್. ವೆಂಕಟೇಶ ಮೂರ್ತಿ, ರವಿ ಉಪಾದ್ಯ ಮುಂತಾದವರು ಬಳಸಿ ಬರೆದಿದ್ದಾರೆ. ಅಂಥವರ ಸಾಲಿನಲ್ಲಿ ಸೇರಿದ ನಮ್ಮ ಭಾಗದ ಮಹಾಂತಪ್ಪ ನಂದೂರ ಅವರು ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮಳ ಜೀವನ ಚರಿತ್ರೆಯನ್ನು ಸನೀತ ಛಂದಸ್ಸಿನಲ್ಲಿ ಬರೆದು ಪ್ರಕಟಿಸಿದ್ದಾರೆ.
ಬಸವನ ಬಾಗೇವಾಡಿ ಪರಿಸರದಿಂದ ಪ್ರಾರಂಭವಾಗುವ ಅರಿವೇ ಪ್ರಮಾಣು ಕೃತಿಯು ಕಪ್ಪಡಿ ಸಂಗಮ, ಕಲ್ಯಾಣ, ಉಳವಿಯೆಡೆಗೆ ಪ್ರಯಾಣಿಸಿ ಅಕ್ಕನಾಗಮ್ಮಳ ಜೀವನ ಕಥಾನಕವನ್ನು ತಿಳಿಸುತ್ತದೆ ಮಾತ್ರವಲ್ಲ ಆ ಮೂಲಕ ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಶರಣ-ಶರಣೆಯರು ಕೈಗೊಂಡಿದ್ದ ಅಧ್ಯಾತ್ಮಿಕ, ಸಮಾಜೋದ್ಧಾರ್ಮಿಕ ಕಾರ್ಯದ ಜೊತೆಗೆ ಇಡೀ ಶರಣ ಸಂಕುಲದ ಚರಿತ್ರೆಯನ್ನು ಬಿಚ್ಚಿಡುವ ಒಂದು ಅದ್ಭುತ ಕಾವ್ಯ ಕಥಾನಕವಾಗಿದೆ.
ಬಸವಣ್ಣ ಚೆನ್ನಬಸವಣ್ಣ ಎರಡು ಅಭೂತಪೂರ್ವ ವ್ಯಕ್ತಿತ್ವವನ್ನು ರೂಪಿಸುವುದಲ್ಲದೆ ಕಲ್ಯಾಣದ ಅರಿವಿನ ಮನೆಗೆ ಬಂದು ಶರಣರಿಗೆ ಅನ್ನ, ಪ್ರಸಾದ ನೀಡುವ ದಾಸೋಹ ಕಾಯಕ ಮಾಡುತ್ತಿದ್ದ ಅಕ್ಕನಾಗಮ್ಮಳು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನ ಸಾಹಿತ್ಯದ ಉಳಿವಿಗಾಗಿ ಉಳಿದ ಶರಣರೊಂದಿಗೆ ಉಳವಿಯವರೆಗೆ ನಡೆದು ಹೋದ ವೀರ ವೀರಾಗಿಣಿ. ಅಲ್ಲಿಯೇ ಕೆಲ ಕಾಲ ನೆಲೆ ನಿಂತು ಶರಣರ ಮಹಾಮಣಿಹವನ್ನು ಮುಂದುವರಿಸಿ ಕೊನೆಗೆ ಈಗಿನ ಚಿಕ್ಕಮಂಗಳೂರು ಜಿಲ್ಲೆಯ ತರಿಕೆರೆಯಲ್ಲಿ ಲಿಂಗೈಕ್ಯಳಾಗುತ್ತಾಳೆ. ಆಕೆಯ ಹುಟ್ಟಿನಿಂದ ಲಿಂಗೈಕ್ಯಳಾಗುವವರೆಗಿನ ಇಲ್ಲಿನ ೩೭೫ ಸುನೀತ ಕಾವ್ಯ ಬರಹದ ದಾಟಿ ತುಂಬಾ ಕಾವ್ಯಾತ್ಮಕವಾಗಿ ಮೂಡಿ ಬಂದಿದೆ.
ಅಕ್ಕನಾಗಮ್ಮಳ ಜೀವನೇತಿಹಾಸದೊಂದಿಗೆ ಬಸವಾದಿ ಶರಣರ ವಿರೋಚಿತ ಹೋರಾಟವನ್ನು ಅತ್ಯಂತ ಹೃದಯಂಗಮವಾಗಿ ಚಿತ್ರಿಸಲಾಗಿದ್ದು, ಸರಳ, ಸುಲಭದ ಭಾಷೆಯ ಬಳಕೆಯಲ್ಲದೆ ಇಡೀ ವಚನ ಸಾಹಿತ್ಯವನ್ನು ತಮ್ಮೊಳಗೆ ಆವಾಹಿಸಿಕೊಂಡು ಬರೆದ ಒಂದು ಅನುಭವಜನ್ಯ ಕೃತಿ. ಅಕ್ಕನಾಗಮ್ಮಳನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಕಾವ್ಯ ಇದಾಗಿದ್ದರೂ ಬಸವಾದಿ ಶರಣರ ಬದುಕು, ಚಿಂತನೆಗಳನ್ನು, ಅವರ ಕಾಲಮಾನವನ್ನು ಕುರಿತು ಕೂಡ ಹೇಳುವ ವಾಸ್ತವಕ್ಕೆ ಸಮೀಪವಾಗಿರುವ ಕೃತಿ ಇದಾಗಿದೆ.
ನಾಡಿನ ಹಿರಿಯ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಕದ ತೆರೆಯುವ ಮುನ್ನುಡಿ ರೂಪದ ಮಾತುಗಳು, ಅಂತಃಕರಣ ಅಲುಗಡಿಸಿ ಅರಿವೇ ಪ್ರಮಾಣುವಾಗಿ ಮೂಡಿ ಬಂದ ಜೀವನ ಕಾವ್ಯ ಎಂದು ದಯದ ದಾರಿಯಲ್ಲಿನ ಲೇಖಕರ ನುಡಿಗಳು, ಡಾ. ಬಸೂ ಬೇವಿನ ಗಿಡದ, ಚಂಪಾ ಅವರ ರಕ್ಷಾ ಪುಟದ ಹೊದಿಕೆಯಲ್ಲಿರುವ ಚಿಕ್ಕ ಚಿಕ್ಕ ಸಾಲುಗಳ ಜಾಕೆಟ್ ಬರಹಗಳು ಕೃತಿಯ ಮೌಲ್ಯದ ಜೊತೆಗೆ ಲೇಖಕರ ಬರಹದ ತಾಕತ್ತು, ತಾತ್ವಿಕತೆಯನ್ನು ಹೇಳುತ್ತವೆ. ಇದೇ ನಿಟ್ಟಿನಲ್ಲಿ ಈಗಾಗಲೇ “ಕಲ್ಯಾಣವೆಂಬ ಪ್ರಣತಿ” ಕಾವ್ಯ ಕೃತಿ ರಚಿಸಿರುವ ಮಹಾಂತಪ್ಪ ನಂದೂರ ಅವರ ಅರಿವೇ ಪ್ರಮಾಣು ಕೃತಿ ಅವರಲ್ಲಿರುವ ಜನಪರ, ಜೀವಪರ ನಿಲುವುಗಳನ್ನು ಪ್ರದರ್ಶಿಸುವಂತಿದೆ.
ಮೊ: 9448204548
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…