ಡಿ. 25 ರಿಂದ ಮೂರು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವ

0
145

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುನ್ನೂರ-ಮಧುರಖಂಡಿಯ ಬಸವಜ್ಞಾನ ಗುರುಕುಲ ಆಶ್ರಮದಲ್ಲಿ ಡಿ. ೨೫ರಿಂದ ೨೭ರವರೆಗೆ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಬಸವಜ್ಞಾನ ಗುರುಕುಲದ ಅಧ್ಯಕ್ಷರಾದ ಶೃಣ ಡಾ. ಈಶ್ವರ ಮಂಟೂರ ತಿಳಿಸಿದ್ದಾರೆ.

೨೫ರಂದು ಬೆಳಗ್ಗೆ ೯.೩೦ಕ್ಕೆ ಇಳಕಲ್ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತಪ್ಪಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದು, ದಾವಣಗೆರೆಯ ಬಸವ ಚೇತನ ಪ್ರಶಸ್ತಿ ಪುರಸ್ಕೃತ ವಿ. ಸಿದ್ಧರಾಮಣ್ಣ ಅವರು ಸಮ್ಮುಖ ವಹಿಸಲಿದ್ದಾರೆ. ಮಹಾಂತ ಜೋಳಿಗೆಯ ಶಿವಶಿಲ್ಪಿ ಪೂಜ್ಯ ಲಿಂ. ಮಹಾಂತಪ್ಪಗಳ ಸ್ಮರಣೆಯಲ್ಲಿ ನೇತ್ರಯಾತ್ರೆ (ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ) ಮೂರು ದಿನಗಳ ಕಾಲ ನಡೆಯಲಿದೆ.

Contact Your\'s Advertisement; 9902492681

ನಂತರ ಬೆಳಗ್ಗೆ ೧೦.೩೦ಕ್ಕೆ ಶೃಣ ಸಂಸ್ಕೃತಿ ಉತ್ಸವ ಹಾಗೂ ಜಾಪದ ಕಲಾ ಮಹೋತ್ಸವ ಉದ್ಘಾಟನೆ ಸಮಾರಂಭ ಮತ್ತು ಮಹಿಳಾ ಸಮಾವೇಶ ನಡೆಯಲಿದ್ದು, ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಶಿರೂರ ಡಾ. ಬಸವಲಿಂಗ ಮಹಾಸ್ವಾಮಿಗಳು ಸಮ್ಮುಖ ವಹಿಸಲಿದ್ದಾರೆ. ಗುಳೇದಗುಡ್ಡದ ಗುರುಬಸವ ದೇವರು ನೇತೃತ್ವ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ. ಸಮಾವೇಶಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಲಿದ್ದಾರೆ. ಇದೇ ವೇಳೆಯಲ್ಲಿ ಸಾಹಿತಿ-ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಸಂಪಾದಿಸಿರುವ ಡಾ. ಈಶ್ವರ ಮಂಟೂರ ಅವರ ಪ್ರವಚನ ಸಾರ “ವಚನ ಆಷಾಢ” ಕೃತಿ ಬಿಡುಗಡೆಯನ್ನು ಶಾಸಕ ಆನಂದ ಎಸ್. ನ್ಯಾಮಗೌಡ ಬಿಡುಗಡೆ ಮಾಡಲಿದ್ದಾರೆ.

ಸಂಜೆ ೫ ಗಂಟೆಗೆ ಬಸವತತ್ವ ಚಿಂತನಗೋಷ್ಠಿ ಮತ್ತು ಹಿರಿಯ ನಾಗರಿಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಅಮೀನಗಡದ ಪ್ರಭುಶಂಕರ ರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಲಿಂಗಾಯತ ಮಹಾಸಭಾದ ಬೀದರ್ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಅನುಭಾವ ನೀಡಲಿದ್ದಾರೆ.

೨೬ರಂದು ಬೆಳಗ್ಗೆ ೧೦ ಗಂಟೆಗೆ ಗುರು-ಶಿಷ್ಯರ ಸಮಾಗಮ ಮತ್ತು ಸಂವಾದ ಪಠದ ಗುರುಗಳಿಗೆ ಪಾದಪೂಜೆ ಕಾರ್ಯಕ್ರಮ ನಡೆಯಲಿದ್ದು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ಕೆ. ರಾಜೇಂದ್ರ ಉದ್ಘಾಟಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೆಪ್ಟಿನೆಂಟ್ ಜನರಲ್ ರಮೇಶ ಹಲಗಲಿ ಅಕ್ಕಮಹಾದೇವಿ ಗ್ರಂಥಾಲಯ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅನುಭಾವ ನೀಡಲಿದ್ದಾರೆ.

ಸಂಜೆ ೫ ಗಂಟೆಗೆ ಜಾನಪದ ಕಲಾ ಮಹೋತ್ಸವ, ವಚನ ವೈಭವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವೆ ಉಮಾಶ್ರೀ ಅಧ್ಯಕ್ಷತೆ ವಹಿಸಲಿದ್ದಾರೆ.

೨೭ರಂದು ವಚನ ಪಲ್ಲಕ್ಕಿ, ವಚನ ಪಟ್ಟಾಭಿಷೇಕ, ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ, ಶರಣ ದಂಪತಿಗೆ ಗೌರವಾರ್ಪಣೆ, ಬಸವಜ್ಞಾನ ಗುರುಕುಲ ಬಳಗ ಉದ್ಘಾಟನೆ, ಶಿವಾನುಭವ ಸಂಪದ-೭೨ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಶಿವಪುತ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಂದವಾಡಗಿ-ಆಳಂದ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.

ವಚನ ಪಲ್ಲಕ್ಕಿ ಕಾರ್ಯಕ್ರಮಕ್ಕೆ ಬೆಂಗಳೂರಿನ ಅನಿತಾ ಮಹೇಶ ಬೆಲ್ಲದ ದಂಪತಿ ಚಾಲನೆ ನೀಡಲಿದ್ದು, ಸಂಡೂರಿನ ವೀಣಾ ರುದ್ರಗೌಡ ದಂಪತಿ ವಚನ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಬಸವಜ್ಞಾನ ಗುರುಕುಲ ಬಳಗ ಉದ್ಘಾಟನೆಯನ್ನು ಬೀಳಗಿ ಶಾಸಕ ಮುರುಗೇಶ ನಿರಾಣಿ ಮಾಡಲಿದ್ದಾರೆ. ಇದೇ ವೇಳೆಯಲ್ಲಿ ೨೦೧೯ನೇ ಸಾಲಿನ ರಾಜ್ಯಮಟ್ಟದ ಪುರಸ್ಕಾರ ಸಮಾರಂಭ ಜರುಗಲಿದೆ.

ಯುಎಸ್‌ಎ ಬಸವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಶ್ರೀಶೈಲ ಹಾದಿಮನಿ ಅವರಿಗೆ ಬಸವ ಚೇತನ, ಕುಷ್ಟಗಿಯ ಕೃಷಿ ಪಂಡಿತ ದೇವೇಂದ್ರಪ್ಪ ಬಳೂಟಗಿ ಅವರಿಗೆ ಕೃಷಿ ಚೇತನ ಪ್ರಶಸ್ತಿ, ಧಾರವಾಡ ರುತಿಕಾ ನೃತ್ಯ ನಿಕೇತನ ನಾಗರತ್ನ ಹಡಗಲಿ ಅವರಿಗೆ ಕಲಾ ನಿಕೇತನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೂರು ದಿನಗಳವರೆಗೆ ನಡೆಯುವ ಈ ವಿಧಾಯಕ ಕಾರ್ಯಕ್ರಮಗಳಿಗೆ ನಾಡಿನ ವಿವಿಧ ಮೂಲೆ ಮೂಲೆಗಳಿಂದ ಆಗಮಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here