ಮೋದಿ, ಪಾಕಿಸ್ತಾನ ಮತ್ತು ಧರ್ಮ ಬಿಟ್ರೆ ಬೇರೇನೂ ಮಾತಾಡಲ್ಲ. ಪಾಕಿಸ್ತಾನವೇ ಅವರ ಬಂಡವಾಳ. ಅಲ್ಲಿ ಇಮ್ರಾನ್ ಖಾನ್ ಕೂಡ ಇದನ್ನೇ ಮಾಡ್ತಿದ್ದಾರೆ. ಕೋಮುವಾದ ಹಾಗೂ ದ್ವೇಷ ರಾಜಕಾರಣವೇ ಉಭಯ ರಾಷ್ಟ್ರ ಆಳುತ್ತಿರುವವರ ಬಂಡವಾಳ. ಪೌರತ್ವ ತಿದ್ದು ಪಡಿ ಕಾಯ್ದೆಯನ್ನ ವಿರೋಧ ಮಾಡಿದವರನ್ನೆಲ್ಲಾ ಪಾಕ್ ಸಂತತಿಗಳು ಹಾಗೂ ದೇಶದ್ರೋಹಿಗಳು ಎಂಬಂತೆ ನೋಡಲಾಗ್ತಿದೆ. ಕಾಯ್ದೆಯನ್ನ ವಿರೋಧಿಸಿ ದೇಶದ ಉದ್ದಗಲಕ್ಕೂ ಪ್ರತಿಭಟನೆ ನಡೀತಿದೆ. ದಿನದಿಂದ ದಿನಕ್ಕೆ ಹೋರಾಟದ ಕಿಚ್ಚು ಹೆಚ್ವುತ್ತಲೇ ಇದೆ.
ಮೊನ್ನೆ ತುಮಕೂರಿಗೆ ಬಂದು ಭಾಷಣ ಬಿಗಿದು ಹೋದ ಮೋದಿ ಪಾಕಿಸ್ತಾನ ಮುರ್ದಾಬಾದ್ ಎಂಬಂತೆ ಮಾತನಾಡಿದರು. ವಾಸ್ತವದಲ್ಲಿ ಓರ್ವ ಪ್ರಧಾನಿ ಮಾತಾಡ ಬೇಕಿರೋದು ಏನು ಅನ್ನೋದರ ಪರಿಜ್ಞಾನವೇ ಮೋದಿಗೆ ಇಲ್ಲ. ಅಸೂಕ್ಷ್ಮ ಮಾತಿನ ಮೂಲಕ ಜನರ ಮುಂದೆ ಬಂದು ನಿಲ್ಲುತ್ತಾರೆ. ನಿರೋದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಶಿಕ್ಷಣದ ಬಗ್ಗೆ ಮಾತನಾಡುವುದಿಲ್ಲ. ಮಹೀಳಾ ಸಬಲೀಕರಣದ ಬಗ್ಗೆ ಮಾತನಾಡುವುದಿಲ್ಲ. ದೇಶದ ಆರ್ಥಿಕತೆ ಬಗ್ಗೆ ಮಾತನಾಡುವುದಿಲ್ಲ. ಆದರೆ ಮಾತುಮಾತಿಗೂ ಪಾಕಿಸ್ತಾನ ಧರ್ಮದ ಸುತ್ತಲೇ ಅವರ ಮಾತುಗಳು ಗಿರಕಿ ಹೊಡೆಯುತ್ತದೆ. ಅಷ್ಟಕ್ಕೂ ಪಾಕಿಸ್ತಾನ ಯಾಕೆ ಈಗಲೂ ಭಾರತೀಯರನ್ನ ಕಾಡುತ್ತಿದೆ..? ಪಾಕಿಸ್ತಾನ ಬಿಟ್ಟರೆ ಭಾರತಕ್ಕೆ ಅಸ್ಮಿತೆಯೇ ಇಲ್ಲವೇ..? ಎಂಬ ಪ್ರಶ್ನೆಗಳು ಈಗ ನನ್ನಂತವರನ್ನ ಕಾಡುತ್ತಿದೆ.
ನಾನೊಂದು ಉದಾಹರಣೆ ಕೊಡುತ್ತೇನೆ. ದುಬೈ ಜಗತ್ತಿನಲ್ಲೇ ದೊಡ್ಡ ಮಟ್ಟದ ವ್ಯಾಪಾರ ವಹಿವಾಟು ಕೇಂದ್ರ. ಈಗ 2020 ದುಬೈ ಎಕ್ಸ್ ಪೋ ಬರುತ್ತಿರೋದರಿಂದ ಎಲ್ಲರ ಗಮನ ಅತ್ತ ಇದೆ. ಇದು ದುಬೈ ಅನ್ನೋ ಮಹಾ ರಾಜ್ಯದ ಅಳಿವುಳಿವಿನ ಹೋರಾಟ. ಇಲ್ಲಿನ ವಿಚಾರ ಅದಲ್ಲ ಬಿಡಿ. ಎಂದಾದರೂ ಒಮ್ಮೆ ದುಬೈಗೆ ಹೋಗುವ ಅವಕಾಶ ಸಿಕ್ಕರೆ ಕೈಚೆಲ್ಲಿಕೊಳ್ಳಬೇಡಿ. ಯಾಕಂದರೆ ಇಲ್ಲಿಯೂ ಪಾಕಿಸ್ತಾನ ಬೇಕೇ ಬೇಕು.!! ಹೌದು, ನಂಬಲಸಾಧ್ಯ. ಆದರೂ ಇದು ವಾಸ್ತವ. ನಾನಿಲ್ಲಿ ಮಾತನಾಡುತ್ತಿರೋದು ಭಾರತೀಯ ಹಿಂದೂಗಳ ಬಗ್ಗೆ. ಭಾರತದಿಂದ ಉದ್ಯೋಗ ಹಾಗೂ ವ್ಯಾಪಾರ ಹರಸಿ ಬಂದ ಹಿಂದೂಗಳು ಇಲ್ಲಿ ಮಾಡುತ್ತಿರೋದು ಚಿನ್ನದ ವ್ಯಾಪಾರ ಹಾಗೂ ಬಟ್ಟೆಯ ವ್ಯಾಪಾರ. ಅದರಲ್ಲೂ ಬಟ್ಟೆ ವ್ಯಾಪಾರ ಗುಜರಾತಿಗಳ ಮೇಲ್ನೋಟದಲ್ಲೇ ನಡೀತಿದೆ.
ನನಗೆ ಆಗಾಗ್ಗೆ ತಿರುಗಾಟಕ್ಕೆ ಇಳಿಯುವ ಅಭ್ಯಾಸ ಇದೆ. ಹೀಗೆ ಅತೀ ಹೆಚ್ಚು ಜನರು ಓಡಾಡುವ ಜಾಗಕ್ಕೆ ಸುಮ್ಮನೆ ಹೋಗಿ ಬರುತ್ತೇನೆ. ಈ ವೇಳೆ ನನ್ನ ಗಮನಕ್ಕೆ ಬಂದ ವಿಚಾರಗಳಿವು. ಬಹುತೇಕ ಬಟ್ಟೆ ವ್ಯಾಪಾರ ಮಾಡುವವರು ಗುಜರಾತಿಗಳು. ಪಂಜಾಬಿಗಳು. ಈ ಪೈಕಿ ನೂರಕ್ಕೆ 99 ರಷ್ಟು ಜನರು ಕೂಡ ಹಿಂದೂಗಳೇ. ಹೀಗೆ ಬಟ್ಟೆ ಕೊಳ್ಳುವ ನೆಪವೊಡ್ಡಿ ಮೂರ್ನಾಲ್ಕು ಜನರನ್ನ ಮಾತಾಡಿಸುವ ಮನಸ್ಸು ಮಾಡಿದೆ. ನಾ ಮಾತಾಡಿಸಿದ ಎಲ್ಲರೂ ಕೂಡ ಕಟ್ಟರ್ ಹಿಂದುತ್ವವಾದಿಗಳು. ಮೋದ ಭಕ್ತರು. ಆದರೆ ಅವರು ವ್ಯಾಪಾರದ ಬಂಡವಾಳ ಪಾಕಿಸ್ತಾನ.!! ಅಚ್ಚರಿ ಆಗಬುಹುದು. ಆದರೆ ವಾಸ್ತವ ಇದು. ಭಾರತದಲ್ಲಿ ಮೋದಿ ಪಾಕಿಸ್ತಾನ ಮುರ್ದಾಬಾದ್ ಎಂದಾಗ ಜೈ ಎನ್ನುತ್ತಾರೆ. ದುಡಿಯಲು ಬಂದರೆ ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ. ಹೇಗೆ ಅಂತೀರಾ..? ಅದುವೇ ಸೋಜಿಗ.
ಪಾಕಿಸ್ತಾನದಿಂದ ಡೀಲರ್ ಶಿಪ್ ನಲ್ಲಿ ಅಲ್ಲಿಯ ಬಟ್ಟೆ ಬರೆಗಳನ್ನ ಆಮದು ಮಾಡಿಕೊಳ್ಳುತ್ತಾರೆ. ಪಾಕಿಸ್ತಾನ ವಸ್ತ್ರಧಾರಣೆ ಮೊದಲ ನೋಟಕ್ಕೆ ಎಲ್ಲರ ಕಣ್ಮನ ಸೆಳೆಯುವಂತದ್ದು. ಮಹಿಳೆಯರ ಬಟ್ಟೆಬರೆಗಳಂತೂ ನೋಡಲು ಬಲು ಸುಂದರವಾಗಿರುವಂತವುಗಳು. ಶಾಪಿಂಗ್ ಮಾಡಲು ಬರುವ ಯೋರೋಪಿಯನ್ನರು ಇಂಥಾ ಬಟ್ಟೆ ಕೊಳ್ಳಲು ಮುಗಿ ಬೀಳುತ್ತಾರೆ. ಅದು ಬಿಟ್ಟರೆ ಸಾರಿ ಹೆಚ್ಚು ಮಾರಾಟವಾಗುವ ವಸ್ತು. ರಸ್ತೆ ಬದಿಗೆ ನಿಂತು ಕೊಂಡು ಹಣೆಗೆ ಕುಂಕುಮ ಬಳಿದು ಕೊಂಡು ತಲೆಗೆ ಪೇಟ ಕಟ್ಟಿಕೊಂಡು ‘ಪ್ಲೀಸ್ ಕಮ್ ಮೇಡಂ. ವಿ ಹ್ಯಾವ್ ಹ್ಯೂಜ್ ಕಲೆಕ್ಷನ್ ಆಫ್ ಪಾಕಿಸ್ತಾನಿ ಡ್ರೆಸ್ಸಸ್’ ಅಂತಾರೆ. ಹೀಗೆ ಹೊಟ್ಟೆ ಪಾಡಿಗೆ ಪಾಕಿಸ್ತಾನವನ್ನು ನೆಚ್ಚಿಕೊಂಡಿದ್ದಾರೆ, ಗುಜರಾತಿಗಳು ಹಾಗೂ ಪಂಜಾಬಿಗಳು. ಆದರೆ ತಾಯ್ನಾಡಿಗೆ ಬಂದ ಕೂಡಲೇ ಅವರ ವರಸೆ ಬದಲಾಗುತ್ತದೆ. ಇಷ್ಟಲ್ಲದೆ ತಮ್ಮ ತಮ್ಮ ಅಂಗಡಿಗಳಲ್ಲಿ ಕೆಲಸಕ್ಕೆ ಪಾಕಿಸ್ತಾನಿ ಹುಡುಗರನ್ನ ಕೆಲಸಕ್ಕೂ ನೇಮಕಮಾಡಿಕೊಂಡಿರುತ್ತಾರೆ ಅನ್ನೋದು ಮತ್ತೊಂದು ವಿಚಾರ.
ಆದರೆ ಇದನ್ನ ಅರ್ಥ ಮಾಡಿಕೊಳ್ಳಬೇಕಿರೋದು ಹಿಂದೂ ನಾವೆಲ್ಲ ಒಂದು ಅಂತ ಓಡಾಡ್ಕೊಂಡಿರೋ ನಮ್ಮ ಸೋಕಾಲ್ಡ್ ಕೆಳವರ್ಗದವರು. ಒಂದೊತ್ತಿನ ಹಿಟ್ಟಿಗೆ ಹರಸಾಹಸ ಪಡುವ ಕೆಳವರ್ಗದ ಜನರು ಮೋದಿ ಹಾಗೂ ಆರ್ ಎಸ್ ಎಸ್ ನ ಒಳ ಹುನ್ನಾರವನ್ನ ಅರ್ಥ ಮಾಡಿಕೊಳ್ಳಬೇಕು. ಪಾಕಿಸ್ತಾನ ಕಟ್ಟಿಕೊಂಡು ನಮಗೆ ಏನೂ ಆಗಬೇಕಿಲ್ಲ. ಆದರೆ ಪಾಕಿಸ್ತಾನದ ಹೆಸರೇಳಿಕೊಂಡು ಹೊಟ್ಟೆಯನ್ನೂ ತುಂಬಿಸಿಕೊಂಡು ದ್ವೇಷದ ರಾಜಕೀಯ ಮಾಡಿಕೊಳ್ಳುವವರ ಹುನ್ನಾರಕ್ಕೆ ಬಲಿಯಾಗಬೇಡಿ. ಸಿಂಧಿಗಳು ಪಾಕಿಸ್ತಾನದ ಬಟ್ಟೆ ಮಾರಿ ಹಣ ಸಂಪಾದನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಅವರ ಜೀವನಮಾರ್ಗ. ಆದರೆ ಭಾರತದ ರಾಜಕೀಯ ವಿಚಾರದಲ್ಲಿ ಅವರ ನಿಲುವುಗಳು ಖಂಡನೀಯವಾದದ್ದು. ಅಂದರೆ ದ್ವಿತಂಡವಾದ.