ಮಕಾಡೆ ಮಲಗಿದ CAA & NRC : ಮೋದಿ-ಶಾಗೆ ತಟ್ಟಿದ ಪ್ರತಿಭಟನೆಯ ಬಿಸಿ.!

0
204

ದೇಶಾದ್ಯಂತ ಎನ್ಆರ್‌ಸಿ ಮತ್ತು ‌ಸಿಎಎ ವಿರೋಧಿ ಅಲೆ ಪ್ರಬಲವಾಗಿ ಎದ್ದಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಈ ಸಂವಿಧಾನ ವಿರೋಧಿ ಮಸೂದೆಗಳ ಪರ ಜನಾಭಿಪ್ರಾಯವನ್ನು ಸೃಷ್ಟಿಸಲು ಹಲವು ಕಸರತ್ತುಗಳನ್ನು ನಡೆಸುತ್ತಿರುವುದು ನಮಗೆಲ್ಲರಿಗೂ ತಿಳಿದ ಸಂಗತಿಯಾಗಿದೆ. ವಿವಿಧ ಮಾರ್ಗಗಳ ಮೂಲಕ ಈ ಮಸೂದೆಗಳಿಗೆ ಜನಬೆಂಬಲವಿದೆ ಎಂದು ನಿರೂಪಿಸಲು ಸರ್ಕಾರ ಆಡಳಿತ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿರುವುದು ಕೂಡಾ ಜಗಜ್ಜಾಹೀರಾಗಿದೆ.

ಕಳೆದ ಕೆಲವು ದಿನಗಳಿಂದ ಶಾಲೆಗಳಲ್ಲಿ ಮಕ್ಕಳಿಗೆ ಯಾವುದೋ ಫಾರಂಗಳನ್ನು ನೀಡಿ ಭರ್ತಿ ಮಾಡಲು ಸೂಚಿಸಿದ ಪ್ರಕರಣಗಳು ವರದಿಯಾಗಿತ್ತು. ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿದಾಗ ಅದು ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ನಡೆಸಲಾಗುವ ಗಣತಿ ಎಂದು ತಿಳಿದು ಬಂದಿತ್ತು. ಅದೇ ರೀತಿ ಆಶಾ ಕಾರ್ಯಕರ್ತೆಯರು ಯಾವುದೋ ಫಾರಂಗಳನ್ನು ಮಹಿಳೆಯರಿಂದ ಭರ್ತಿ ಮಾಡಿಸಿಕೊಳ್ಳುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ನಂತರ ಅದು ಕೂಡಾ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಯಾವುದೋ ಗಣತಿ ಎಂಬ ವಿಚಾರ ತಿಳಿದು ಬಂದಿತ್ತು. ಹಾಗೆಯೇ ಈಗಲೂ ವಿವಿಧ ಭಾಗಗಳಲ್ಲಿ ಎನ್‌ಆರ್‌ಸಿ ಪರ ಜನಾಭಿಪ್ರಾಯ ಸಂಗ್ರಹಿಸಲು ಕುಟಿಲೋಪಾಯಗಳನ್ನು ಬಳಸುವ ಸುದ್ದಿಗಳು ವರದಿಯಾಗುತ್ತಿದೆ. ಇಲಾಖೆಗಳು ಯಾವುದೇ ಅಂಕಿಅಂಶಗಳನ್ನು ಸಂಗ್ರಹಿಸಲು ಮುಂದಾದರೂ ಜನರ ವಿರೋಧ ಕಟ್ಟಿಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿದೆ.

Contact Your\'s Advertisement; 9902492681

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಎನ್‌ಆರ್‌ಸಿ ಮತ್ತು ಸಿಎಎ ಮಸೂದೆಗಳಿಗೆ ಜನರ ವಿರೋಧ ಉಂಟಾದ ಬಳಿಕ ಸರ್ಕಾರಕ್ಕೆ ತನ್ನ ಯಾವುದೇ ಯೊಜನೆಗಳಿಗೆ ಬೇಕಾದ ಅಂಕಿಅಂಶಗಳನ್ನು ಸಂಗ್ರಹಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರಿಂದ ಯಾವುದೇ ಮಾಹಿತಿಯನ್ನು ಸಂಗ್ರಹಿಸಲು ಮುಂದಾದರೆ ಹಲವಾರು ಸಂದೇಹಗಳಿಗೆ ಉತ್ತರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಸರ್ಕಾರದ ಎಲ್ಲಾ ಇಲಾಖೆಗಳ ಸಿಬ್ಬಂದಿಯನ್ನು ಕೂಡಾ ಜನರು ಸಂಶಯದ ದೃಷ್ಟಿಯಿಂದ ನೋಡುವ ಪರಿಪಾಠ ಬೆಳೆದಿದೆ. ದೇಶದ ಸದ್ಯದ ವಿದ್ಯಾಮಾನಗಳು ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ಹಂತಕ್ಕೆ ತಲುಪಿದೆ.

ಆದ್ದರಿಂದ ಇನ್ನು ಮುಂದೆಯೂ ಸರ್ಕಾರ ತನ್ನ ಇಲಾಖೆಗಳ ಮೂಲಕ ಅಂಕಿಅಂಶಗಳನ್ನು ಸಂಗ್ರಹಿಸಲು, ಗಣತಿಗಳನ್ನು ನಡೆಸಲು ಮುಂದಾದರೆ ಎಲ್ಲರೂ ಒಕ್ಕೊರಲಿನಿಂದ ಬಹಿಷ್ಕರಿಸಬೇಕು. ಯಾವುದೇ ಇಲಾಖೆಗಳಿಗೆ ಸಮರ್ಪಕ ಮಾಹಿತಿಗಳನ್ನು ನೀಡಲು ಹಿಂದೇಟು ಹಾಕಬೇಕು. ಈ ಕರಾಳ ಮಸೂದೆಗಳನ್ನು ಹಿಂಪಡೆಯುವ ತನಕ ಸರ್ಕಾರಕ್ಕೆ ತನ್ನ ಯಾವುದೇ ಯೋಜನೆಗಳನ್ನು ಕೂಡಾ ಸರಿಯಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಚಟುವಟಿಕೆಗಳನ್ನು ಸಂಶಯದ ದೃಷ್ಟಿಯಿಂದಲೇ ಪ್ರಶ್ನಿಸಬೇಕು ಹಾಗೂ ಎಲ್ಲಾ ಆಡಳಿತ ಸಂಬಂಧಿ ವಿಚಾರಗಳಲ್ಲಿ ಗೊಂದಲಗಳನ್ನು ಸೃಷ್ಟಿಸಬೇಕು.

ಹೌದು, ಒಂದು ರೀತಿಯಲ್ಲಿ ಇದು ಕೂಡಾ ಒಳ್ಳೆಯ ಬೆಳವಣಿಗೆಯೇ ಆಗಿದೆ. ಇಲಾಖೆಗಳಿಗೆ ಮಾಹಿತಿ ನೀಡಲು ಜನರು ಹಿಂಜರಿಯುವುದು ಹಾಗೂ ಆಡಳಿತ ವ್ಯವಸ್ಥೆಯೊಂದಿಗೆ ಅಸಹಕಾರ ತೋರುವುದು ಕೂಡಾ ಒಂದು ರೀತಿಯಲ್ಲಿ ಪ್ರತಿಭಟನೆ ಎನ್ನಬಹುದು. ಇದರಿಂದ ಸರ್ಕಾರ ಕೈಗೊಂಡ ಬಹುನಿರೀಕ್ಷಿತ ಯೋಜನೆಗಳಿಗೆ ಹಿನ್ನಡೆಯುಂಟಾಗಬಹುದು. ಜನಸಾಮಾನ್ಯರ ಆಕ್ರೋಶದ ಬಿಸಿ ನೇರವಾಗಿ ತಟ್ಟಬಹುದು. ಜನರಿಂದ ಇಂತಹ ಅಸಹಕಾರ ಚಳವಳಿ ಆರಂಭವಾದರೆ ಈ ಕರಾಳ ಮಸೂದೆಗಳನ್ನು ಸರ್ಕಾರ ಹಿಂಪಡೆಯಲೂಬಹುದು. ಮುಂದೆ ಇಂತಹ ಜನವಿರೋಧಿ ಜಾರಿಗೊಳಿಸಲು ಭಯಪಟ್ಟುಕೊಳ್ಳಬಹುದು, ಏನಂತೀರಾ…!? ಏಕೆಂದರೆ ಈಗಾಗಲೇ ದೇಶದ ಉದ್ದಗಲಕ್ಕೂ ಸಿಎಎ ಹಾಗೂ ಎನ್ನಾರ್ಸಿ ಮಕಾಡೆ ಮಲಗಿದೆ ಅನ್ನೋ ಸತ್ಯ ಮೋದಿ ಹಾಗೂ ಅಮಿತ್ ಶಾಗೆ ಅರಿವಾಗಿದೆ. ಇದೇ ಕಾರಣಕ್ಕೆ ಅಡ್ಡದಾರಿಯಿಂದ ಪೂರಕ ಬೆಂಬಲವನ್ನು ಪಡೆದುಕೊಳ್ಳುವ ಊಸಾಬಾರಿಗೆ ಇವರು ಕೈ ಹಾಕಿದ್ದಾರೆ. ಆದರೆ ಹೋರಾಟ ಹೀಗೆ ಮುಂದುವರೆಯ ಬೇಕು.‌ ಕೇವಲ ಸಿಎಎ ಹಾಗೂ ಎನ್ನಾರ್ಸಿ ಮಾತ್ರವಲ್ಲದೆ ಆರ್ ಎಸ್ ಎಸ್ ನ ಅಸಲಿ ಮುಖವನ್ನ ಜನರ ಮುಂದೆ ತೆರೆದಿಡಲು ಇದು ಸಕಾಲ ಕೂಡ.

 

~ ಸಫ್ವಾನ್ ಸವಣೂರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here