ಬಿಸಿ ಬಿಸಿ ಸುದ್ದಿ

“ಇಷ್ಟಲಿಂಗ”ದ ಮೂಲಕ ದೇವರ ಸ್ವರೂಪ ಕಟ್ಟಿಕೊಟ್ಟ “ಬಸವಣ್ಣ”

ಆದಿ ಬಸವಣ್ಣ, ಅನಾದಿ ಲಿಂಗವೆಂಬರು
ಹುಸಿ ಹುಸಿ ಈ ನುಡಿಯ ಕೇಳಲಾಗದು
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು
ಇಂತೀ ತ್ರಿವಿಧಕ್ಕೆ ಬಸವಣ್ಣನೆ
ಕಾರಣನೆಂದರಿದೆನಯ್ಯ
ಕೂಡಲ ಚೆನ್ನಸಂಗಮದೇವ
-ಚೆನ್ನಬಸವಣ್ಣನವರು

ದ್ರಾವಿಡ ಸಂಸ್ಕೃತಿಯ ಭಾರತದಲ್ಲಿ ಲಿಂಗತತ್ವ, ಸಿದ್ಧಾಂತವು ಭಾಷೆ ಆರಂಭವಾದಾಗಿನಿಂದ ಹುಟ್ಟಿದೆ. ಪೌರಾಣಿಕ ಕಲ್ಪನೆಯ ಶಿವ, ಐತಿಹಾಸಿಕ ಕಲ್ಪನೆಯ ಶಿವ ಮತ್ತು ತಾತ್ವಿಕ ಶಿವ ಸಂಸ್ಕೃತಿಯನ್ನು ಇಲ್ಲಿ ಕಾಣಬಹುದಾಗಿದೆ. ವ್ಯಾಸ ಮಹರ್ಷಿ ೧೮ ಪುರಾಣ ಬರೆಯುತ್ತಾನೆ. ಸೃಷ್ಟಿಕರ್ತ ಬ್ರಹ್ಮ ದೊಡ್ಡವನೋ? ಮತ್ತು ಪಾಲಕ ವಿಷ್ಣು ದೊಡ್ಡವನೋ? ಎಂಬಲ್ಲಿಂದ ೧೨ ಜ್ಯೋತಿರ್ಲಿಂಗಗಳು ಹುಟ್ಟಿಕೊಂಡವು ಎಂದು ಹೇಳಲಾಗುತ್ತಿದೆ. ಜನರಿಗೆ ಶಿವನನ್ನು ತೋರಿಸಬೇಕಾಗಿರುವ ಅನಿವಾರ್ಯತೆ ಇರುವುದರಿಂದ ಪೃಥ್ವಿ, ಅಪ್ಪು, ಅಗ್ನಿ, ವಾಯು, ತೇಜ ಈ ಪಂಚತತ್ವಗಳಿಂದ ಕೂಡಿದ ದೇವರನ್ನು ತೋರಿಸಿದರು. ಕೈಲಾಸದಲ್ಲಿರುವ ಶಿವನ ತೊಡೆಯಲ್ಲಿ ಪಾರ್ವತಿ, ತಲೆಯಲ್ಲಿ ಗಂಗೆ, ಹಣೆಯಲ್ಲಿ ಮೂರನೇ ಕಣ್ಣು, ಕೊರಳಲ್ಲಿ ಹಾವು, ಆತ ನೀಲದೇಹಿ ಎಂದು ಹೇಳಿದರು.

ಆದಿಯೋಗಿ ಶಿವ ಈ ದೇಶದ ಮೂಲ ಬೇರು. ಹಿಮಾಲಯದ ತಪ್ಪಲಲ್ಲಿ ಇದ್ದವನು. ಯೋಗ ಬಲ್ಲಿದವನವನು, ನಾಟ್ಯ, ಸಂಗೀತ ನಿಪುಣನಾತ. ಈ ಯೋಗಿ ಶಿವನೆ ನಮ್ಮೆಲ್ಲರ ಮುತ್ತಜ್ಜ. ಯೋಗಿ ಶಿವನನ್ನು ಗೌರವಿಸುವ ಶರಣರು ಆ ಶಿವನನ್ನು ಪೂಜಿಸಲಿಲ್ಲ. ಪೌರಾಣಿಕ ಶಿವನನ್ನು ಅಭ್ಯಾಸ ಮಾಡಿದ ಶರಣರು ಆ ಶಿವನನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಧ್ಯಾನಕ್ಕೆ ಕುಳಿತ ಶಿವನ ಚಿತ್ರ ಕಂಡಿದ್ದ ಶರಣರು, ಶಿವ ದೇವರಾಗಿದ್ದರೆ ಆತ ಕಣ್ಣು ಮುಚ್ಚಿ ಯಾರನ್ನು? ಏನನ್ನು? ಧ್ಯಾನಿಸುತ್ತಿದ್ದಾನೆ ಎಂದು ತಮಗೆ ತಾವೇ ಪ್ರಶ್ನೆ ಹಾಕಿ ಕೊಂಡರು. ನಮ್ಮ ಕಲ್ಪನೆಯ ದೇವರು ಕೊನೆಗೊಂದು ಕಡೆ ನಿಲ್ಲತ್ತದೆ. ಈ ಕಲ್ಪನೆಯ ದೇವರಿಗಿಂತ ಸೃಷ್ಟಿಯನ್ನು ಸೃಷ್ಟಿ ಮಾಡಿದ ದೇವ ನಮಗೆ ಬೇಕು ಎಂದು ಅವರು ಹೇಳಿದರು.

ವಿದ್ಯೆಯ ಅಧಿದೇವತೆ ಸರಸ್ವತಿ ಎಂದು ತೋರಿಸಲು ಆಕೆಯನ್ನು ಬಂಡೆಯ ಮೇಲೆ ನಿಲ್ಲಿಸಿದರು. ಹಣ ಒಂದೆಡೆ ನಿಲ್ಲುವುದಿಲ್ಲ ಆಕೆ ಚಂಚಲೆ ಎಂದು ತೋರಿಸಲು ಲಕ್ಷ್ಮೀಯನ್ನು ತಾವರೆ ಹೂವಿನ ಮೇಲೆ ನಿಲ್ಲಿಸಿದರು. ಇದನ್ನೇ ಶರಣರು “ಘನತರವಾದ ಚಿತ್ರವ ಬರೆಯಬಹುದಲ್ಲದೆ ಪ್ರಾಣವ ಬರೆಯಬಹುದೇ? ಅಪ್ಪಿದರೆ ಸುಖವಿಲ್ಲ, ಮೆಲಿದರೆ ರುಚಿಯಿಲ್ಲ” ಎಂದು ಕೇಳಿದರು. ಶಿವನನ್ನು ಆರಾಧಿಸಬೇಡಿ ಎಂದು ಎಲ್ಲಿಯೂ ಹೇಳಿಲ್ಲ ಅವರು. ಆದರೆ “ವೇದಪ್ರಿಯ ಶಿವನೆಂಬರು, ನಾದಪ್ರಿಯ ಶಿವನೆಂಬರು. ವೇದಪ್ರಿಯನೂ ಅಲ್ಲ, ನಾದಪ್ರಿಯನೂ ಅಲ್ಲ. ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವ” ಎಂದು ಹೇಳುವ ಮೂಲಕ ಲಿಂಗತತ್ವದ ಬಗ್ಗೆ ಜಾಗೃತಿ ಮೂಡಿಸಿದರು. ದೇವರ ಬಗ್ಗೆ ಬಹಳ ಸ್ಪಷ್ಟವಾದ ಕಲ್ಪನೆಯನ್ನು ನಮಗೆ ನೀಡಿದರು.

ಕಾಣುವ ವಸ್ತು ದೇವರಲ್ಲ. ಅರಿವಿನ ಕುರುಹು ಆಚಾರದ ಪ್ರತೀಕವೇ ಲಿಂಗ. ಅದುವೇ “ಕರದಿಷ್ಟಲಿಂಗ”. ಇದನ್ನು ಯಾರು ಬೇಕಾದರೂ ಧರಿಸಬಹುದು. ಲಿಂಗಾಯತ ಅಂದರೆ ಅದು ಜಾತಿ ರಹಿತ ಧರ್ಮ. ನಡೆ-ನುಡಿ ಪ್ರಧಾನ ಧರ್ಮ. ಸ್ಥಾವರಲಿಂಗ, ಚರ ಲಿಂಗ ಬೇರೆ ಬೇರೆ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಆತ್ಮದ ಅಸ್ಮಿತೆಯ ಚೈತನ್ಯದ ಕುರುಹು ಜಂಗಮ ಎಂದು ಹೇಳಿದರು. ಲಿಂಗ ಪೂಜೆಯಿಂದ ತನುಶುದ್ಧ, ಮನಶುದ್ಧ, ಭಾವಶುದ್ಧ ಎಂದು ಹೇಳಿದರು. ಗಡಿಯಾರ ನೋಡಿ ಸಮಯ ಎಷ್ಟಾಗಿದೆ ಎಂದು ಹೇಳಬಹುದು ವಿನಃ ಅದನ್ನು ತೆಗೆದು ತೋರಲು ಬರುವುದಿಲ್ಲ.

ಹಾಗೆಯೇ ದೇವರನ್ನು ಕೂಡ ತೋರಿಸಲು ಬರುವುದಿಲ್ಲ. ಗಡಿಯಾರವೇ ಸಮಯವೋ? ಅಥವಾ ಸಮಯವೇ ಗಡಿಯಾರವೋ? ಎಂಬುದನ್ನು ಶರಣರು ಸ್ಪಷ್ಟವಾಗಿ ಬಿಡಿಸಿ ತೋರಿಸಿದರು. “ಅರಗು ತಿಂದು ಕರಗುವ ದೈವವ, ಉರಿಯ ಕಂಡಡೆ ಮುರುಟುವ ದೈವವ, ಅವಸರ ಬಂದರೆ ಮಾರುವ ದೈವವನೆಂತು ಸರಿಯೆಂಬೆನಯ್ಯ, ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯ, ಸಹಜಭಾವ ನಿಜೈಕ್ಯ ಕೂಡಲ ಸಂಗಮದೇವನೊಬ್ಬನೆ ದೇವ ಎಂದು ತಿಳಿ ಹೇಳಿದರು. ದೇವರ ಚಿತ್ರ ಬರೆಯಬಹುದು. ಆದರೆ ದೇವರನ್ನು ಬದಲಾಯಿಸಲಾಗುವುದಿಲ್ಲ. ಸೃಷ್ಟಿಕರ್ತ ಒಬ್ಬನೇ ಇರುವಂತೆ ದೇವರು ಇರುವುದು ಕೂಡ ಒಬ್ಬನೇ, ದೇವರು ಹೆಣ್ಣಲ್ಲ, ಗಂಡಲ್ಲ. ಆತನಿಗೆ ರೂಪವಿಲ್ಲ. ನಾಮವಿಲ್ಲ.

ದೇವರು ಭವ್ಯವಾದ ವ್ಯಕ್ತಿ. ಅಂತಹ ದಿವ್ಯ ಸ್ವರೂಪಿಯನ್ನು ಕಲ್ಲು, ಮಣ್ಣು, ಕಟ್ಟಿಗೆಯೊಳಗೆ ಹುಡುಕುವುದು ಸರಿಯಲ್ಲ. ದೇವರನ್ನು ನಾವು ಬೇರೆಲ್ಲೂ ಹುಡಕಬೇಕಿಲ್ಲ. ಆತ ನಮ್ಮೊಳಗೆ ಅಡಗಿದ್ದಾನೆ. ಆತ ಸಾವನರಿಯ. ಏಕೆಂದರೆ ಆತ ಹುಟ್ಟಿಲ್ಲ. ನಮ್ಮೊಳಗಿರುವ ದೇವರನ್ನು ಅರಿವು, ಆಚಾರ, ಅನುಭಾವದ ಪ್ರತೀಕವಾದ ಇಷ್ಟಲಿಂಗದ ಮೂಲಕ ಸಾಧನೆ ಮಾಡಬೇಕು. ಜಗತ್ತಿನ ಎಲ್ಲ ದೇಶಗಳಲ್ಲಿ ಈ ಮೊದಲಿನಿಂದಲೂ ಶಿವನ ಅಥವಾ ಲಿಂಗದ ಪೂಜೆ ಇರುವುದನ್ನು ಕಾಣಬಹುದು. ಆದರೆ ಇಷ್ಟಲಿಂಗದ ಕಲ್ಪನೆಯನ್ನು ಕಾಣವುದು ಕೇವಲ ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಮಾತ್ರ! ಅಂಗದ ಮೇಲೆ ಲಿಂಗ ಕೊಟ್ಟ ಬಸವಣ್ಣನವರು ಸಮಾನತೆಯ ತತ್ವ ತಂದರು. “ಕೋಲ ತುದಿಯ ಕೋಡಗನಂತಿರುವ” ದೇವರನ್ನು ಸಾಧನೆ ಮೂಲಕ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂದರು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago