ಬಿಸಿ ಬಿಸಿ ಸುದ್ದಿ

ಇಷ್ಟಲಿಂಗ ದೇವರ ಕುರುಹು ಅಲ್ಲ; ಆತ್ಮದ ಕುರುಹು

ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ
ನಿಲವನರಿಯಬಾರದು
-ಅಕ್ಕ ಮಹಾದೇವಿ

ದೇವರ ವಿಷಯದಲ್ಲಿ ನಮ್ಮೆಲ್ಲರನ್ನು ಎಚ್ಚರಿದ ಶರಣರು ಕುರುಣಿಸಿದ ಇಷ್ಟಲಿಂಗ ದೇವರು ಹೇಗೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಕೈಯಲ್ಲಿ ಹಿಡಿದಿರುವ, ಕೊರಳಲ್ಲಿ ಧರಿಸುವ ಈ ಲಿಂಗದ ಅರ್ಥ, ವ್ಯಾಪ್ತಿ, ವಿಶಾಲತೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಇಷ್ಟಲಿಂಗವು ದೇವರೋ ಅಥವಾ ಸಾಧನೆಯ ಕುರುಹೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಬಸವಧರ್ಮ ಅಥವಾ ಲಿಂಗಾಯತ ಧರ್ಮದ ತತ್ವ, ಚಿಂತನೆಗಳು ಅತ್ಯದ್ಭುತವಾಗಿವೆ.

ಕಣ್ಣಿಗೆ ಕಾಣುವುದು ದೇವರಲ್ಲ. ಹಿಡಿದಿರುವ ದೇವರು ದೇವರಲ್ಲ. ಬಸವಾದಿ ಶರಣರ ಈ ಇಷ್ಟಲಿಂಗದ ಕಲ್ಪನೆಯ ಅರಿವು ನಮಗೆ ಬಂದಿದ್ದರೆ ಇಷ್ಟೊತ್ತಿಗಾಗಲೇ ಲಿಂಗಾಯತ ಧರ್ಮ ಶ್ರೇಷ್ಠ ಧರ್ಮವಾಗಿ ಬೆಳೆಯುತ್ತಿತ್ತು. ಶೈವ ಪರಂಪರೆಯ ಲಿಂಗ ಸ್ಥಾವರಾತ್ಮಕ ಕುರುಹು ಆಯಿತು. ದೇವರ ಅಸ್ತಿತ್ವದ ಕುರುಹು ಲಿಂಗದಿಂದ ನಾಶವಾಯಿತು. ಹೀಗಾಗಿ ಶೈವರ ಕಲ್ಪನೆಯ ಲಿಂಗವೇ ಬೇರೆ! ಶರಣರ ಕಲ್ಪನೆಯ ಲಿಂಗವೇ ಬೇರೆ!! ಶರಣರು ಸ್ಥಾವರ ಲಿಂಗ ಪೂಜಿಸುವುದಿಲ್ಲ. ಅದನ್ನು ಗೌರವಿಸುವುದು ಇಲ್ಲ. ಸ್ಥಾವರಲಿಂಗವು ಶಿವಶಕ್ತಿ ಸಂಪುಟದ ಸಂಕೇತ. ಇಷ್ಟಲಿಂಗ ನಮ್ಮೊಳಗಿನ ಅಂತಶಕ್ತಿಯ ಸಂಕೇತವಾಗಿದೆ.

ತನ್ನ ಸ್ವರೂಪ ತಾನು ನೋಡುವುದು. ಕನ್ನಡಿಯ ಮುಂದೆ ಸಾಧನೆ ಮಾಡಿದಾಗ ಕನ್ನಡಿಯಲ್ಲಿ ನಮ್ಮ ಸಾಧನೆ ಹೇಗೆ ಕಂಡು ಬರುವಂತೆ ಅದರ ಸ್ವರೂಪ ನಾನು ಎಂದು ತಿಳಿಯುವುದೇ ಇಷ್ಟಲಿಂಗದ ಸ್ವರೂಪ. ಜಗತ್ತಿನಲ್ಲಿ ಹಲವು ಬಗೆಯ ಯೋಗ, ಧ್ಯಾನದ ವಿಧಾನಗಳಿವೆ. ಆದರೆ ಶರಣರು ಕೊಟ್ಟ ಶಿವಯೋಗ ಮಾತ್ರ ಇವೆಲ್ಲವುಗಳಿಗಿಂತ ತುಂಬಾ ವಿಭಿನ್ನವಾಗಿದೆ. ವಿಶೇಷವಾಗಿದೆ. ಇಷ್ಟಲಿಂಗ ದೇವರ ಕುರುಹು ಅಲ್ಲ. ವೈಜ್ಞಾನಿಕವಾಗಿ ತೋರುವ ಯೋಗದ ಪ್ರತೀಕ. ಅಂತೆಯೇ ಬಸವಣ್ಣನವರು “ಕನ್ನಡಿಯ ನೋಡುವ ಅಣ್ಣಗಳಿರಾ? ಜಂಗಮವ ನೋಡಿರೆ” ಎಂದು ಹೇಳಿದ್ದಾರೆ.

“ಕಲ್ಲ ಮನೆಯ ಮಾಡಿ, ಕಲ್ಲದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕಡೆದಡೆ, ದೇವರೆತ್ತ ಹೋದರೋ, ಲಿಂಗ ಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ” ಎಂದು ಪ್ರಶ್ನಿಸಿದ ಅಲ್ಲಮಪ್ರಭುಗಳು ಇಷ್ಟಲಿಂಗವನ್ನು ಅರಿವಿನ ರೂಪದಲ್ಲಿ ನೋಡಿದ್ದಾರೆ. ಇಷ್ಟಲಿಂಗ ಕಲ್ಲಿನ ಮೂರ್ತಿಯಲ್ಲ. ಅದರಲ್ಲಿ ವಿಜ್ಞಾನ ಸಮ್ಮತ ವಸ್ತುಗಳಿವೆ. ಜಗತ್ತಿನ ಎಲ್ಲ ಯೋಗಗಳು ಉಸಿರಾಟದ ಮೇಲೆಯೇ ನಿಂತಿವೆ. ಎಲ್ಲರೂ ಅಂತರಂಗದಲ್ಲಿರುವುದನ್ನು ಹೊರಗೆ ತೆಗೆಯುವುದು ಎಂದು ಹೇಳಿದರು. ಆದರೆ ಶರಣರು ಮಾತ್ರ ಅಂತರಂಗದಲ್ಲಿ ತೆಗೆದುಕೊಳ್ಳುವ ಶಿವಯೋಗವನ್ನು ಬೋಧಿಸಿದರು.

ಯೋಗ, ಧ್ಯಾನ ಎಂಬವವು ದೇವರನ್ನು ನೋಡುವ ವ್ಯವಸ್ಥೆಗಳು ಅಲ್ಲ. ಒಳಗಿನ ಶಾಂತಿ, ನೆಮ್ಮದಿ ಕಾಣುವುದು. ಅಂತೆಯೇ ಇಷ್ಟಲಿಂಗ ದೇವರ ಕುರುಹು ಅಲ್ಲ. ಆತ್ಮದ ಕುರುಹು. ದೇವರಿಗೆ ಅಸ್ತಿತ್ವದ ಕುರುಹು ಇಲ್ಲ. ಆದರೆ ಎಲ್ಲಡೆ ಆತ ವಿಸ್ತಾರವಾಗಿದ್ದಾನೆ. ನಾನು ಯಾರು? ಜಗತ್ತಿನಲ್ಲಿ ನನ್ನ ಅಸ್ತಿತ್ವವೇನು? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುತ್ತ “ಶಿವನ ಪೂಜಿಸು ಶಿವನಾಗು ಮನವೆ” ಎನ್ನುವಂತಾಗುವುದು. ಇದನ್ನೇ ಅಕ್ಕಮಹಾದೇವಿ ನೆಲದ ಮರೆಯ ನಿಧಾನ ಎಂದು ಕರೆದಿದ್ದಾರೆ. ಪಿಂಡಾಂಡ, ಬ್ರಹ್ಮಾಂಡಕ್ಕೂ ಅತೀತವಾದ ಚೈತನ್ಯ. ಚಿದ್‌ಲಿಂಗ, ಮಹಾಲಿಂಗ, ಘನಲಿಂಗ ಅದು.

ದೇವರ ಸ್ವರೂಪ ತಿಳಿಯದಿದ್ದರೆ ಲಿಂಗದ ಸ್ವರೂಪ ತಿಳಿಯದು. ಇಷ್ಟಲಿಂಗವೆಂದರೆ ತನ್ನ ತಾನು ತಿಳಿಯುವುದು. ಅದಕ್ಕಾಗಿಯೇ ಬಸವಣ್ಣನವರು “ತನ್ನ ತಾನು ತಿಳಿದಡೆ ತಾನೆ ದೇವ ನೋಡಾ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂದು ತಿಳಿಸಿದ್ದಾರೆ. ನಾವು ಕೇವಲ ಶಬ್ದ ನೋಡಬಾರದು. ಶಬ್ದದ ಹಿಂದಿನ ಅರ್ಥ, ಮಹತ್ವ ಅರಿತುಕೊಳ್ಳಬೇಕು. ಜನನ, ಮರಣ, ಗಮನವಿಲ್ಲದ್ದು ದೇವರು. ದೇಹ ಅನ್ನುವ ಟಿವಿಯೊಳಗೆ ದೇವರ ಅಸ್ತಿತ್ವದ ಶಕ್ತಿಯಿದೆ. ಟಿವಿಯ ಚಾನೆಲ್ ಬದಲಾಯಿಸಿ ನಮಗೆ ಬೇಕಾಗಿರುವುದನ್ನು ನೋಡುವಂತೆ ದೇಹದೊಳಗಿನ ದೇವರ ಅಸ್ತಿತ್ವವನ್ನು ಹುಡುಕಾಡಬೇಕು. ಮನಸಾಕ್ಷಿಯಾಗಿ ನಡೆದುಕೊಳ್ಳಬೇಕು. ದೇವರು ಎಂದರೆ ಗಂಟೆಯಲ್ಲ, ಪೂಜೆ, ಪುನಸ್ಕಾರವೂ ಅಲ್ಲ. ಆತ್ಮಶಕ್ತಿಯನ್ನು ಜಾಗೃತಗೊಳಿಸುವುದೇ ದೇವರು.

ದೇವರು, ಧರ್ಮ ಒಂದೇ ಆಗಿರಬೇಕೆಂಬ ಹೊಸ ಧರ್ಮವನ್ನು ಹುಟ್ಟು ಹಾಕಿದ ಬಸವಾದಿ ಶರಣರು, ಇಷ್ಟಲಿಂಗ ಪೂಜೆಯಿಂದ ಬದುಕು ಬದಲಾವಣೆ ಆಗುತ್ತದೆ ಎಂದು ಹೇಳಿದರು. ಆದರೆ ದೇವರ ಗುತ್ತಿಗೆ ಹಿಡಿದವರು ನಮ್ಮ ದಾರಿ ತಪ್ಪಿಸುತ್ತಿದ್ದಾರೆ. ಗುರುಗಳಾದವರು ಭಕ್ತರನ್ನು ಅಂಧಶ್ರದ್ಧೆಯಲ್ಲಿಡಬಾರದು. ಭಕ್ತರಾದವರು ಗುರುಗಳನ್ನು ಪ್ರಶ್ನಿಸುವುದನ್ನು ಕಲಿಯಬೇಕು. ಅಂದಾಗ ಮಾತ್ರ ಬದಲಾವಣೆ ಸಾಧ್ಯ. ದೇವರ ಮುಂದೆ ದೀಪ ಹಚ್ಚುವುದಕ್ಕಿಂತ ನಮ್ಮೊಳಗೆ ದೀಪ ಹೊತ್ತಿಸಿಕೊಳ್ಳಬೇಕು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago