‘ಕಾಯಕವೇ ಕೈಲಾಸ’ ವೆಂದು ಸಾರಿದ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣ

0
410

ಭಾರತದ 12 ನೇ ಶತಮಾನದ ತತ್ವಜ್ಞಾನಿ, ಸಮಾನತೆ ಎತ್ತಿಹಿಡಿದ ಅಧ್ಯಾತ್ಮದ ಶ್ರೇಷ್ಠಚಿಂತಕ, ಸಮಾಜ ಸುಧಾರಕ , ವೈಚಾರಿಕತೆಗಳ ಅರಿವು ಮೂಡಿಸಿರುವ ಮಹಾನ್ ವ್ಯಕ್ತಿ ಮತ್ತು ನಮ್ಮ  ಕಾಯಕದಲ್ಲಿಯೇ ದೈವನಿರುವನೆಂದು ಸಾರಿದ ಮಹಾ ಪುರುಷರೇ ಈ ಜಗಜ್ಯೋತಿ ಬಸವಣ್ಣನವರು.

ಬಸವಣ್ಣನವರು 1134 ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ) ಹುಟ್ಟಿದರು. ಇವರು  ವೈಶಾಖಮಾಸದ ಅಕ್ಷಯ ತೃತೀಯದಂದು  ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು.  ಇವರು ಮೂಲತಃ ಬ್ರಾಹ್ಮಣ ಜಾತಿಗೆ ಸೇರಿದವರು.

Contact Your\'s Advertisement; 9902492681

ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ 8ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾರೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಅಂತ ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.

ಮುಂದೆ ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿಯೇ ಅಧ್ಯಯನ ಮಾಡುತ್ತಾರೆ. ಅವರ ದೃಷ್ಟಿಯಲ್ಲಿ ದೇವರು ಒಬ್ಬ ಮತ್ತು ಅವನು ಮಾನವನಲ್ಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ ಎಂದು ಹೇಳುತ್ತಿದ್ದರು. ಇಂತಹವುಗಳನ್ನು ತಮ್ಮ ವಚನಗಳಲ್ಲಿಯೇ ಸಾರುತ್ತಿದ್ದರು.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ

ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ

ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ

ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ

ಇದೇ ನಮ್ಮ ಕೂಡಲಸಂಗಮದೇವ

ದೇವನೊಲಿಸುವ ಪರಿ

ಎಂಬ ವಚನದಲ್ಲಿ ಲೋಕಕ್ಕೆ ಆದರ್ಶವಾದ ವಿಚಾರಗಳನ್ನು ತಿಳಿಸಿದ್ದಾರೆ.

ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿದರು.

ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತ ಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು.

ಬಸವಣ್ಣ ಹನ್ನೆರಡು ವರ್ಷಗಳ ಕಾಲ ಕೂಡಲಸಂಗಮದಲ್ಲಿ ಹಿಂದೂ ದೇವಸ್ಥಾನದಲ್ಲಿ ಅಧ್ಯಯನ ಮಾಡುತ್ತಿದ್ದರು. ನಂತರ ಲಕುಲಿಶಾ-ಪಶುಪಾಟ ಸಂಪ್ರದಾಯದ ಒಂದು ಶೈವ ಕಲಿಕೆಯ ಕಲಿಕೆಯಲ್ಲಿ ಸಂಗಮೇಶ್ವರದಲ್ಲಿ ಮುಗಿಸಿದರು. ಬಸವ ತನ್ನ ತಾಯಿಯ ಕಡೆಯಿಂದ ಸೋದರ ಸಂಬಂಧಿಯನ್ನು ಮದುವೆಯಾದ. ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ ಬಿಜ್ಜಳ ಪ್ರಧಾನ ಮಂತ್ರಿಯ ಮಗಳು.

ಅಲ್ಲಿಂದ ಮುಂದೆ ಬಿಜ್ಜಳನ ಸಂಸ್ಥಾನದಲ್ಲಿ ಭಂಡಾರಿಯಾಗಿ, ಪ್ರಧಾನಿ (ದಂಡನಾಯಕ) ಯಾಗಿ ಕಾಯಕ ನಿರ್ವಹಿಸಿದರು. ಅನುಭವ ಮಂಟಪ ಸ್ಥಾಪಿಸಿ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು.

ಹುಟ್ಟಿನಿಂದ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಬಸವಣ್ಣನವರ ವಿರುದ್ದ ಪ್ರೇರೇಪಿಸಿ ಧರ್ಮಗುರು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು.

ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸ ವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು.  ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ “ಶಿವಶರಣ ” ರೆಂದು ಕರೆದರು. ಮೇಲು,ಕೀಳು ಎಂಬ ತಾರತಮ್ಯದ ಭಾವನೆಯನ್ನು ಖಂಡಿಸಿ ಮಾನವನು ತನ್ನ ಕಾರ್ಯ ಸಾಧನೆಯಿಂದ ಉತ್ತಮ ನಾಗಬಲ್ಲವನೇ ಹೊರತು, ಜಾತಿಯಿಂದಲ್ಲ ಎಂಬುವುದನ್ನು ಸ್ಪಷ್ಟಪಡಿಸಿದರು.

ಬಸವಣ್ಣನವರು 1196 ರಲ್ಲಿ ಕೂಡಲಸಂಗಮಕ್ಕೆ ಮರಳಿ ಅಲ್ಲೇ ಲಿಂಗೈಕ್ಯರಾದರು. ಅವರ ಸಮಾಧಿಯು ಅಲ್ಲಿಯೇ ಇದೆ. ಅವರ ಸಮಾಧಿಯನ್ನು ಕರ್ನಾಟಕ ಸರಕಾರದಿಂದ ಬಸವ ಸಾಗರ ಹಿನ್ನಿರಿನಲ್ಲಿ ಮುಳಗದಂತೆ ರಕ್ಷಿಸಿಲ್ಪಟ್ಟಿದೆ.

ಸದ್ಯ ಬಸವಣ್ಣನವರು ಇಹಲೋಕ ತ್ಯಜಿಸಿ 11 ಶತಮಾನಗಳೇ ಕಳೆದರು ಅವರ ತತ್ವಗಳನ್ನು ಸಾರುವಲ್ಲಿ ಎಡುವಿದ್ದೇವೆ. ಹೀಗಾಗಿ ವಿಶ್ವಜ್ಯೋತಿಯಾಗಿರುವ ಬಸವಣ್ಣನವರ  ವಚನಗಳು, ವಿಚಾರಗಳು ವಿಶ್ವವ್ಯಾಪ್ತಿಯೆಡೆಗೆ ವಿಸ್ತರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಅಷ್ಟೇ ಅಲ್ಲದೇ ಭಾರತೀಯರಾದ ನಾವುಗಳು ಅವರ ವಿಚಾರ, ತತ್ವಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಂಡು ಉತ್ತಮ ಸಮಾಜಕ್ಕೆ ಕೈ ಜೋಡಿಸಿದಾಗ  ಮಾತ್ರ ಈ 886ನೇ, ಬಸವ ಜಯಂತಿಯ ಆಚರಣೆಯು ಇತಿಹಾಸದ ಪುಟಕ್ಕೆ ಸೇರುವಲ್ಲಿ ಯಶಸ್ವಿಯಾಗುತ್ತದೆ ಎಂಬುದು ನನ್ನ ಭಾವನೆ.

ದಸ್ತಗೀರ್ ನದಾಫ್ ಯಳಸಂಗಿ

ಪತ್ರಿಕೋದ್ಯಮ ವಿದ್ಯಾರ್ಥಿ, ಶರಣಬಸವ ವಿ ವಿ ಕಲಬುರಗಿ.

ಮೊ: 8050778353

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here