ನಾನು ದೆಹಲಿ… ಇದೊಂದು ಕವಿತೆ

0
103

ನಾನು ದೆಹಲಿ…

ನನ್ನ ಪ್ರೀತಿಯ ಭಾರತೀಯರೇ..
ನಾನು ನಿಮ್ಮ ರಾಜಧಾನಿ ದೆಹಲಿ..

Contact Your\'s Advertisement; 9902492681

ಹಿಂಸೆಗೆ ಬಂಧಿಯಾಗಿ ಉಸಿರಾಡುತ್ತಿರುವೆ
ನನ್ನ ಮನದಾಳದ ನೋವಿನ ಮಾತು
ಒಮ್ಮೆ ಹೇಳಿ ಬಿಡುತ್ತೇನೆ ದಯವಿಟ್ಟು ಕೇಳಿ..

ನಿಮ್ಮೆಲ್ಲರ ಹೆಮ್ಮೆಯಾದ ನಾನು
ಕುಲುಮೆಯಲ್ಲಿ ‌ಹೊತ್ತಿ ಉರಿಯುತ್ತಿರುವೆ,
ಸೌಹಾರ್ದತೆಗೆ ಹೆಸರಾದ ನಾನು ದ್ವೇಷದ ಉನ್ಮಾದಕ್ಕೆ ಬಲಿಯಾಗಿ ನಿಶ್ಯಬ್ದವಾಗಿದ್ದೇನೆ..

ಅದೆಷ್ಟು ಜೀವಗಳ‌ ನರಳಾಟ, ಚೀರಾಟ
ನಾ ಹೇಗೆ ತಾಳಲಿ ನನ್ನೆದೆಯ ಸಂಕಟ?
ಗುಂಡಿನ ದಾಳಿಗೆ ಬಲಿಯಾಗಿ ರಕ್ತದ ಮಡುವಿನಲ್ಲಿ ನರಳಾಡುವ ನನ್ನ ಮಕ್ಕಳಿಗೆ
ನನ್ನ ಮಡಿಲು ಆಸರೆಯಾಯಿತು.

ಧರ್ಮದ‌‌ ನಶೆ ದ್ವೇಷದ ಜ್ವಾಲೆಗೆ ಕಾರಣವಾಯಿತೇ? ಭಾರತ‌ ಎಂದರೆ ಸೌಹಾರ್ದತೆಯ ನೆಲೆ, ಬಹುಸಂಸ್ಕ್ರತಿಯ ಪರಂಪರೆ ಅಲ್ಲವೇ? ಆದರೆ ಇಂದು ಏನಾಗಿದೆ ನನ್ನ ಬಹುತ್ವ ಭಾರತಕ್ಕೆ? ನಾನು ಮಾಡಿದ ತಪ್ಪಾದರೂ ಏನು?

ಪ್ರತಿಕ್ಷಣವೂ ನಾನು ಭಯಭೀತನಾಗಿ ಬದುಕುತ್ತಿರುವೆ, ಗುಂಡಿನ ಸದ್ದು ನಡುಗಿಸುತ್ತಿದೆ, ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಎನ್ನದೇ ಎಲ್ಲರಿಗೂ ನಾನು ತಾಯಿಯಾದೆ, ನನ್ನೊಡಲು ಸಾಕಿದ ಕೂಸುಗಳು ಕಣ್ಣೆದುರು ತತ್ತರಿಸುವಾಗ ನಾ ಹೇಗೆ ತಾಳಲಿ, ಅಂದು ಪ್ರೀತಿ ಹಂಚಿದ ಕೈಗಳು ಇಂದು ರಕ್ತ ಚೆಲ್ಲುತ್ತಿವೆ, ಎಲ್ಲವೂ ಸೋತು ಬರಿದಾಗಿದ್ದೇನೆ.

ರಕ್ತದ ಕಲೆ ಚಿಮ್ಮಿಸುವರ ಎದೆಯೊಳಗೆ
ಮನುಷ್ಯತ್ವದ ಧರ್ಮ ಹುಟ್ಟುವುದೇ?
ಕೊಲೆಯೇ‌ ಧರ್ಮದ ಕೊನೆಯ‌ ಸಿದ್ಧಾಂತ ಎಂದವರಿಗೆ ಹಿಂಸೆ ಅಸ್ತ್ರವಾಯಿತೆ? ದೇಶಪ್ರೇಮವಾಯಿತೆ?

ಹರಿಯುವ ನೆತ್ತರಲ್ಲಿ, ರಾಶಿಯಾಗಿ ಬಿದ್ದಿರುವ ಹೆಣಗಳ ಸಮಾಧಿ‌‌ಗೆ ನಾನು ಸೂತಕವಾದೆ, ಧರ್ಮಗಳ ‌ಉಳಿವಿಗೆ‌ ಜೀವಗಳ ಬಲಿಬೇಕೆ? ಇಂತಹ‌ ಧರ್ಮಗಳು ಬಲಿಬೇಕೆ?
ಮಸೀದಿ ಮಂದಿರ ಚರ್ಚುಗಳೆಲ್ಲವೂ ನಮ್ಮವಲ್ಲವೇ? ನನ್ನ ದೇಹಕ್ಕೆ ಬೆಂಕಿಯಿಟ್ಟು ಧರ್ಮಾಧಾರಿತವಾಗಿ ದೇಶ ಕಟ್ಟುವರು ಮನುಷ್ಯರೇ?

ಬರೀ ಜೈಕಾರಗಳು ಮೊಳಗಿದರೆ ಧರ್ಮ ಬೆಳೆದಿತೆ? ದ್ವೇಷದಿಂದ‌ ದೇಶಪ್ರೇಮ ಹಂಚಲು ಸಾಧ್ಯವೇ? ಎದೆಯೊಳಗೆ ಮಮಕಾರ ಇಲ್ಲದ‌ ನಿಮ್ಮ ಕತ್ತಿಯಂಚಿಗೆ ಅಂಟಿದ ನೆತ್ತರ ಗುರುತು ‌ರಕ್ತಕಣ್ಣೀರಿಗೆ ಸಾಕ್ಷಿಯಾಯಿತು,

ಇನ್ನೇನು ಉಳಿದಿದೆ‌ ಹೇಳಲು, ನೀನು ಸಾಯಿಸಿದ ಗೋರಿ ಮೇಲೆ ನಾನು ಮೆರೆಯಬೇಕು ಅಷ್ಟೇ ತಾನೇ? ಇದುವೇ ನಿನ್ನ ಮನುಷ್ಯತ್ವ ಎಂದರೆ ನಾನು ಎದೆಯೊಡ್ಡಿ ನಿಲ್ಲುವೆ,ಇನ್ನೆಷ್ಟು ಬಲಿಬೇಕು ಸ್ವೀಕರಿಸು..

ರಸ್ತೆಗಳೆಲ್ಲ ರಕ್ತದ ಕಾಲುವೆಗಳಾಗಿ, ಮಸೀದಿಗಳೆಲ್ಲ ಬೂದಿಯಾಗಿ, ಎಲ್ಲೆಲ್ಲೂ ಗಲಬೆ, ದ್ವೇಷದ ಕಿಚ್ಚು, ಕೋಪದ ಜ್ವಾಲೆ, ಬಣ್ಣ‌ ಬಟ್ಟೆ ನೋಡಿ ಗುರುತಿಸುವ ‌ನಿಮ್ಮ ಬಣ್ಣ ಭಾರತವಲ್ಲವೇ?  ಮುಗಿಲೆತ್ತರಕ್ಕೆ ಹೊತ್ತಿರುವ ದ್ವೇಷದ ಜ್ವಾಲೆಯಿಂದ ನನಗೆ ಬಿಡಿಸಬಹುದೆ? ಎಲ್ಲವನ್ನೂ ಕಂಡು ಮೌನವಾಗಿದ್ದೇನೆ, ಕುಸಿದಿದ್ದೇನೆ ಮತ್ತೆ ಕಾಯುತ್ತಿರುವೇನು ನನ್ನ ಅಂಗಳದಲ್ಲಿ ಶಾಂತಿ ನೆಲೆಸಲೆಂದು…

– ಕುಂಬಾ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here