ಬಿಸಿ ಬಿಸಿ ಸುದ್ದಿ

ತರಕಾರಿ ಬೆಳೆಯಿಂದ ರೈತನ ಮೊಗದಲ್ಲಿ ಖುಷಿಯ ಕಳೆ

ಮೈಬೆವರು ಉಕ್ಕಿದರ ಮನೆ ಮನ ನಕ್ಕೀತ, ತೆನೆ ತೆನೆ ಕೂಡಿ ಹಾಡ್ಯಾವ…… ಎಂಬಂತೆ ಕಷ್ಟಪಟ್ಟು ವ್ಯವಸಾಯ ಮಾಡಿದರೆ ಲಾಭ ಗ್ಯಾರಂಟಿ. ಇದನ್ನರಿತ ಬೀದರ ಜಿಲ್ಲೆಯ ಚಿಟಗುಪ್ಪ ಸಮೀಪ ಉಡಬಾಳ ಗ್ರಾಮದ ೬೩ ವರ್ಷ ವಯಸ್ಸಿನ ರೈತ ನಾರಾಯಣರಾವ ಭಂಗಿ ತರಹೇವಾರಿ ತರಕಾರಿಗಳನ್ನು ಬೆಳೆದು ಪ್ರತಿ ವರ್ಷ ನಿರಂತರವಾಗಿ ಸುಮಾರು ೫.೫೦ ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಅವಿದ್ಯಾವಂತರಾಗಿರುವ ನಾರಾಯಣರಾವ ೨೫ ವರ್ಷದಿಂದ ಸಮಾಜ ಸೇವೆ ಮಾಡುತ್ತಿದ್ದರು. ಕಳೆದ ೫ ವರ್ಷದ ಹಿಂದೆ ಒಂದು ಎಕರೆಯಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದರು. ಮೊದಲನೇ ವರ್ಷ ಎರಡು ಬೆಳೆಯಿಂದ ೮-೧೦ ಟನ್ ಟೊಮ್ಯಾಟೋ ಉತ್ಪಾದಿಸಿ ೧.೨೦ ಲಕ್ಷ ರೂ. ಆದಾಯ ಪಡೆದಿದ್ದಾರೆ. ಇದರ ಲಾಭದಿಂದಲೇ ಇನ್ನೂ ಆರು ಎಕರೆ ಹೊಲ ಖರೀದಿಸಿ ತರಕಾರಿ ಬೆಳೆಯನ್ನು ಈಗ ೫ ಎಕರೆವರೆಗೆ ವಿಸ್ತರಿಸಿದ್ದಾರೆ.

ತರಕಾರಿ ಬೆಳೆಯಲು ಯೋಗ್ಯವಾದಂಥ ಕಪ್ಪು ಭೂಮಿಯಿದೆ. ತೆರೆದ ಬಾವಿಯಿಂದ ನಾಲ್ಕು ದಿನಕ್ಕೊಮ್ಮೆ ಬೆಳೆಗಳಿಗೆ ಹನಿ ನೀರಾವರಿಯಿಂದ ನೀರುಣಿಸುತ್ತಿದ್ದಾರೆ. ಬೆಳೆಗಳಿಗೆ ತಿಪ್ಪೆಗೊಬ್ಬರ ಮತ್ತು ರಸಾಯನಿಕ ಗೊಬ್ಬರ ಬಳಸುತ್ತಿದ್ದು, ತರಕಾರಿಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗರುಜಿನುಗಳ ಹತೋಟಿಗಾಗಿ ಸಕಾಲಕ್ಕೆ ಔಷಧಿ ಸಿಂಪಡಿಸುವರು.
ಇದಕ್ಕೂ ಮೊದಲು ಕಬ್ಬು, ಜೋಳ, ಕಡಲೆ ಮುಂತಾದವನ್ನು ಮಾತ್ರ ಬೆಳೆಯುತ್ತಿದ್ದರು. ಖರ್ಚು ಲಾಭ ಅಷ್ಟಕ್ಕಷ್ಟೇ ಆಗುತ್ತಿತ್ತು. ಇದರಿಂದ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಕಷ್ಟಸಾಧ್ಯ. ಹೆಚ್ಚಿನ ಹಣ ಗಳಿಸುವ ದೃಢಸಂಕಲ್ಪ ಮಾಡಿ ತರಕಾರಿ ಬೆಳೆದ ರೈತರ ಹೊಲಗಳಿಗೆ ಭೇಟಿಕೊಟ್ಟು ಮಾಹಿತಿ ಪಡೆದರು. ತೋಟಗಾರಿಕೆ ಅಧಿಕಾರಿಗಳ ಮತ್ತು ಪ್ರಗತಿಪರ ರೈತರ ಪ್ರೇರಣೆಯನ್ನೂ ಪಡೆದು ತರಕಾರಿಯನ್ನೇ ಬೆಳೆಸಲು ನಿರ್ಧರಿಸಿದರು.

ಈಗ ಒಂದು ಎಕರೆಯಲ್ಲಿ ಹೂಕೋಸು ಮತ್ತು ಎಲೆಕೋಸು, ಹೀರೆಕಾಯಿ ಮತ್ತು ತುಪ್ಪದ ಹೀರೆಕಾಯಿ, ಹಾಗಲಕಾಯಿ, ಒಂದುವರೆ ಎಕರೆಯಲ್ಲಿ ಟೊಮ್ಯಾಟೋ ಮತ್ತು ಅರ್ಧ ಎಕರೆಯಲ್ಲಿ ಬದನೆಕಾಯಿ ಬೆಳೆಯುತ್ತಿದ್ದಾರೆ. ಉಳಿದೆರಡು ಎಕರೆಯಲ್ಲಿ ಕಲ್ಲಂಗಡಿ, ಕಬ್ಬು, ಸೋಯಾ ಮತ್ತು ತೊಗರಿ ಬೆಳೆದಿದ್ದಾರೆ. ಕಳೆದ ೫ ವರ್ಷದಿಂದ ವಿವಿಧ ತರಕಾರಿ ಬೆಳೆಗಳಿಂದ ದಿನಕ್ಕೆ ೧೫೦೦ ರಿಂದ ೨೦೦೦ ರೂಪಾಯಿಯಂತೆ ವರ್ಷಕ್ಕೆ ಸುಮಾರು ೫.೫೦ ಲಕ್ಷ ರೂ.ಗಳವರೆಗೆ ಆದಾಯ ಪಡೆಯುತ್ತಿದ್ದಾರೆ. ಖರ್ಚು ವರ್ಷಕ್ಕೆ ೨-೩ ಲಕ್ಷ ರೂಪಾಯಿ ಬರುತ್ತದೆ. ಕಳೆದ ವರ್ಷ ಒಂದು ಎಕರೆಯಲ್ಲಿ ಕಲ್ಲಂಗಡಿಯೊಂದರಿಂದಲೇ ೧.೬೫ ಲಕ್ಷ ರೂ. ಗಳಿಸಿದ್ದಾರೆ. ತಾವು ಬೆಳೆದ ತರಕಾರಿಯನ್ನು ಚಿಟಗುಪ್ಪಾ, ಮನ್ನಾಯೆಖ್ಖೆಳ್ಳಿ, ಕಲಬುರಗಿ ಮತ್ತು ಹೈದ್ರಾಬಾದ ತರಕಾರಿ ಮಾರುಕಟ್ಟೆಗಳಲ್ಲಿ ಹರಾಜು ಮೂಲಕ ಮಾರಾಟ ಮಾಡುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ೨೦೧೫-೧೬ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ೭ ಎಕರೆ ಭೂಮಿಯಲ್ಲಿ ಹನಿ ನೀರಾವರಿ ಮತ್ತು ಮಲ್ಚಿಂಗ್ ಪದ್ಧತಿ ಅಳವಡಿಸಿಕೊಳ್ಳಲು ೯೦೦೦೦ ರೂ. ಸಹಾಯಧನ, ೨೦೧೬-೧೭ರಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಒಂದು ಹೆಕ್ಟೇರ್ ಪಪ್ಪಾಯ ಬೆಳೆಗೆ ೮೬೦೦೦ ರೂ. ಮತ್ತು ಯಾಂತ್ರೀಕರಣ ಯೋಜನೆಯಡಿ ಸ್ಪ್ರೇಯರ್ ಯಂತ್ರಕ್ಕಾಗಿ ೩೬೦೦೦ ರೂ. ಸಹಾಯಧನ ಪಡೆದಿದ್ದಾರೆ.
ಮಲ್ಚಿಂಗ್ ಮತ್ತು ಹನಿ ನೀರಾವರಿಯಿಂದ ತರಕಾರಿ ಬೆಳೆಗಳ ಖರ್ಚು ಕಡಿಮೆ. ಬಹುಬೆಳೆ ಪದ್ಧತಿಯಿಂದ ಉತ್ಪಾದನೆ ಹೆಚ್ಚು. ಆಕಳು, ಎಮ್ಮೆಗಳಿಂದ ಹೊಲಕ್ಕೆ ಗೊಬ್ಬರ, ಮನೆಗೆ ಹಾಲು ಸಿಗುತ್ತಿದೆ. ಇಬ್ಬರು ಹೆಣ್ಣುಮಕ್ಕಳು ಒರ್ವ ಗಂಡು ಮಗ ಇದ್ದು, ಮಗನಿಗೆ ನೌಕರಿಯೂ ಸಿಕ್ಕಿದೆ. ಬೆಳೆಗಳ ಖರ್ಚಿಗೂ, ಕೆಲಸಕ್ಕೂ ಮಗ ಸಹಾಯ ಮಾಡುತ್ತಿರುವುದರಿಂದ ಈಗ ಎಲ್ಲೆಡೆ ಖುಷಿಯ ಕಳೆ ಮೈದುಂಬಿದೆ ಎಂದು ನಾರಾಯಣರಾವ ಭಂಗಿ ಹೇಳುತ್ತಾರೆ.

ವರದಿ: ಜಿ.ಚಂದ್ರಕಾಂತ, ನಿವೃತ್ತ ಉಪನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

8 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

17 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

17 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago