ಕಲಬುರಗಿ: ರಾಜ್ಯದಾದ್ಯಂತ ಲಾಕ್ ಡೌನ್ ಸ್ಥಿತಿ ಇರುವುದರಿಂದ ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬಗಳಿಗೆ ಉಚಿತ ಹಾಗೂ ಎ.ಪಿ.ಎಲ್. ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ವಿತರಣೆ ಮಾಡಲು ನಿರ್ಧಾರ ತೆಗೆದುಕೊಂಡಿದೆ. ಅದರಂತೆ ಜಿಲ್ಲೆಯಲ್ಲಿ ಆಹಾರ ಧಾನ್ಯ ವಿತರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.
ರವಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ಪೂರ್ವಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಇದೂವರೆಗೆ ಕೈಗೊಂಡ ಮುಂಜಾಗ್ರತೆ ಕ್ರಮಗಳು ಮತ್ತು ಸ್ಥಿತಿಗತಿ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಏಪ್ರಿಲ್ ಮತ್ತು ಮೇ ಎರಡು ತಿಂಗಳ ಆಹಾರ ಧಾನ್ಯವನ್ನು ಏಪ್ರಿಲ್ ಮಾಹೆಯಲ್ಲಿ ವಿತರಿಸಬೇಕು ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಿ.ಎಂ.ಪಾಣಿ ಅವರಿಗೆ ಉಪಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಕೊರೋನಾ ಭೀತಿ ಹಿನ್ನೆಲೆಯಲ್ಲಿ ೧೪೪ ನಿ?ಧಾಜ್ಞೆಯಿರುವುದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ರೈತರಿಗೆ ಆಯಾ ಗ್ರಾಮಗಳ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಾಮಾಜಿಕ ಅಂತರ ಹಾಗೂ ಜನಸಂದಣಿಯಾಗದಂತೆ ಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕಗಳು ವಿತರಣೆಗೆ ಕ್ರಮ ವಹಿಸಬೇಕು. ಸಹಕಾರ ಸಂಘಗಳು ಇಲ್ಲದ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಯಿಂದ ವಿತರಣೆಗೆ ಕ್ರಮ ವಹಿಸಬೇಕು ಎಂದು ಉಪಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆಯಲ್ಲಿ ಕಲಬುರಗಿ ಜಿಲ್ಲೆಗೆ ಕುಡಿಯುವ ನೀರಿನ ಕೊರತೆಯಾಗದಂತೆ ಭೀಮಾ ನದಿಗೆ ನೀರು ಹರಿಸಲು ಈಗಾಗಲೇ ನಾರಾಯಣಪುರ ಆಣೆಕಟ್ಟಿನ ಮುಖ್ಯ ಇಂಜಿನಿಯರ್ ಮತ್ತು ಕೆ.ಬಿ.ಜೆ.ಎನ್.ಎಲ್. ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಕಾಲುವೆಯ ಕೊನೆಯ ವರೆಗೂ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದು ಅವರು ಕುಡಿಯಲು ಮಾತ್ರ ನೀರು ಬಳಸಿಕೊಳ್ಳಬೇಕು ಎಂದು ಕೆ.ಎನ್.ಎನ್.ಎಲ್. ಮುಖ್ಯ ಅಭಿಯಂತ ಪ್ರಕಾಶ ಶ್ರೀಹರಿ ಅವರಿಗೆ ಉಪಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಬೇಸಿಗೆಗೆ ಪೂರಕವಾಗಿ ಈಗಿರುವ ಬೋರವೆಲ್ ದುರಸ್ತಿ ಮಾಡುವಂತೆ ಪಿ.ಡಿ.ಓಗಳಿಗೆ ಸೂಚನೆ ನೀಡಲಾಗಿದೆ. ಖಾಸಗಿ ಬೋರವೆಲ್ ಬಾಡಿಗೆ ಪಡೆಯಲು ಹಾಗೂ ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ೧೩೦ ಗ್ರಾಮಗಳ ಪಟ್ಟಿ ಮತ್ತು ಕ್ರಿಯಾ ಯೋಜನೆ ಸಿದ್ದಗೊಳಿಸಲಾಗಿದೆ. ಟಾಸ್ಕ್ ಫೋರ್ಸ್ ಅನುದಾನ ಬಂದ ಕೂಡಲೆ ಎಲ್ಲಾ ಕೆಲಸಗಳು ಆರಂಭವಾಗಲಿವೆ ಎಂದರು.
ಸಭೆಯಲ್ಲಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಅರೋಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್, ಕಲಬುರಗಿ ಜಿಮ್ಸ್ ಡೀನ್ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಮಹಮ್ಮದ್ ಶಫಿಯುದ್ದಿನ್, ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಡೀನ್ ಡಾ.ಎ.ಎಲ್.ನಾಗರಾಜ್, ಜಿಲ್ಲಾ ಆಸ್ಪತ್ರೆಯ ಶಸ್ತ್ರಜ್ಞ ಡಾ.ಅಂಬರಾಯ ರುದ್ರವಾಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.