ತಾಯಿಗೆ ಪೂಜ್ಯನೀಯ ಸ್ಥಾನ ಅಗತ್ಯ : ಡಾ.ಖೂಬಾ

0
73

ಕಲಬುರಗಿ: ಒಂಬತ್ತು ತಿಂಗಳು ಹೊತ್ತು, ಹೆತ್ತ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಜಗತ್ತಿನಲ್ಲಿ ಯಾರು ಇಲ್ಲ. ವರ್ಣಿಸಲು ಅಸಾಧ್ಯವಾದ, ಅನುಪಮ ವ್ಯಕ್ತಿ ತಾಯಿಯಾಗಿದ್ದಾಳೆ. ಮಕ್ಕಳು ತಾಯಿಗೆ ಪೂಜ್ಯನೀಯ ಸ್ಥಾನವನ್ನು ನೀಡಿ,ಉತ್ತಮವಾಗಿ ಉಪಚರಿಸುವ ಮೂಲಕ ಬದುಕು ಸುಂದರವನ್ನಾಗಿಸಕೊಳ್ಳಬೇಕೆಂದು ಜಿಲ್ಲಾ ಬಸವ ಸಮಿತಿ ಅಧ್ಯಕ್ಷೆ, ಶರಣ ಚಿಂತಕಿ ಡಾ.ವಿಲಾಸವತಿ ಎಸ್.ಖೂಬಾ ಹೇಳಿದರು.

ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ, ನಗರದ ಖೂಬಾ ಪ್ಲಾಟ್‌ನಲ್ಲಿರುವ ಅವರ ಸ್ವಗೃಹದಲ್ಲಿ ’ವಿಶ್ವ ಅಮ್ಮಂದಿರ ದಿನ’ದ ನಿಮಿತ್ಯ ಶರಣ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಭಾನುವಾರ ಏರ್ಪಡಿಸಿದ್ದ ಸಮ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ, ನಂತರ ಮಾತನಾಡುತ್ತಿದ್ದರು.
ಇಡಿ ವಿಶ್ವದಲ್ಲಿಯೇ ಮಹಿಳೆಗ ಶ್ರೇಷ್ಠ ಸ್ಥಾನಮಾನ ದೊರಕಿಸಿಕೊಟ್ಟದ್ದು ಬಸವಾದಿ ಶರಣರಾಗಿದ್ದಾರೆ. ಅವರು ಅಂದು ಹೋರಾಡಿದ ಫಲವಾಗಿ, ಪ್ರಸ್ತುತ ದಿವಸಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ಮಹಿಳೆಯರು ತಮ್ಮಲ್ಲಿರುವ ಕೀಳರಿಮೆಯನ್ನು ತೊಡೆದುಹಾಕಿ ಮುನ್ನುಗ್ಗಿದ್ದರೆ, ಖಂಡಿತವಾಗಿಯೂ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಅವರ ಬಾಲ್ಯದಿಂದಲೇ ವಚನ ಸಂಸ್ಕೃತಿಯನ್ನು ಬೆಳೆಸಬೇಕು. ಪ್ರತಿಯೊಬ್ಬರೂ ಸತ್ಯ ಶುದ್ಧವಾದ ಕಾಯಕ ಮಾಡಬೇಕೆಂದರು ನುಡಿದರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಸಂಸ್ಥಾಪಕ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಅವರು, ತಾಯಿ ಎನ್ನುವುದು ಬರೀ ಹೆಣ್ಣನ್ನು ಕುರಿತು ಹೇಳುವುದಲ್ಲ. ಭೂಮಿ, ದೇಶ, ನದಿ, ಪರಿಸರಕ್ಕೆ ತಾಯಿಯ ಸ್ವರೂಪದ ಹೆಸರನ್ನಿಟ್ಟು ಕರೆಯುವುದು ಆಕೆಯ ಮಹತ್ವವನ್ನು ಸಾರುತ್ತದೆ. ಯಾವ ಕುಟುಂಬದಲ್ಲಿ ತಾಯಿಯೂ ಸಂತೋಷವಾಗಿರುವಳೊ, ಆ ಕುಟುಂಬ ಶಾಂತಿಯಿಂದ ಇರುತ್ತದೆ. ಅನೇಕ ಕಷ್ಟಗಳನ್ನು ಅನುಭವಿಸಿ, ತಾಳ್ಮೆಯಿಂದ ತನ್ನ ಮಕ್ಕಳ, ಕುಟುಂಬದ ನಿರ್ವಹಣೆಯಲ್ಲಿ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ತಾಯಿಯ ಪಾತ್ರ ಅತ್ಯಂತ ಪ್ರಮುಖವಾಗಿದೆಯೆಂದರು.

ತಾಯಿಯನ್ನು ಪ್ರಸ್ತುತ ದಿನಗಳಲ್ಲಿ ಆಕೆಯ ಮಕ್ಕಳು, ಸಮಾಜ ನಡೆಸುಕೊಳ್ಳುತ್ತಿರುವ ರೀತಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಇಡಿ ತನ್ನ ಜೀವನ ಸವೆಸಿ, ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಯನ್ನು, ಆಕೆಯ ಇಳಿವಯಸ್ಸಿನಲ್ಲಿ ಸರಿಯಾಗಿ ನೋಡಿಕೊಳ್ಳದೆ, ವೃದ್ಧಾಶ್ರಮಕ್ಕೆ ಸೇರಿಸುವುದು ಅತ್ಯಂತ ನೀಚದ ಕೆಲಸವಾಗಿದೆ. ಜವಾಬ್ದಾರಿಯುತ ಸಮಾಜ ತಲೆ ತಗ್ಗಿಸಬೇಕಾದ ವಿಷಯ ಇದಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಾಯಿಗೆ ಪೂಜ್ಯನೀಯ ಸ್ಥಾನವನ್ನು ನೀಡಿ, ಗೌರವಿಸಬೇಕಾದದ್ದು ತುಂಬಾ ಅವಶ್ಯಕವಾಗಿದೆ ಎಂದು ನುಡಿದರು.
ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ತಾಯಿಯು ಪ್ರೀತಿ, ಕರುಣೆ, ಮಾನವೀಯತೆಯನ್ನು ಉಳಿಸಿ, ಬೆಳೆಸುವ ಮಹಾನ ವ್ಯಕ್ತಿಯಾಗಿದ್ದಾಳೆ. ಎಲ್ಲರನ್ನು ಒಂದೂಗೂಡಿಸುವ ಶಕ್ತಿ ಆಕೆಯಲ್ಲಿದೆ. ’ತಾಯಿಯೇ ಮೊದಲು ಗುರು’ ಎಂಬ ಮಾತು ಮಕ್ಕಳನ್ನು, ಮಹಾನ ವ್ಯಕ್ತಿಯನ್ನಾಗಿಸುವಲ್ಲಿ ಆಕೆಯ ಔಚಿತ್ಯವನ್ನು ತೋರಿಸುತ್ತದೆಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜಶೇಖರ ಮರಡಿ, ಸದಸ್ಯರುಗಳಾದ ಬಸವರಾಜ ಪುರಾಣೆ, ಬಸವರಾಜ ದೇಸಾಯಿ, ವಿಶ್ವನಾಥ ಶೇಗಜಿ, ವಿಶ್ವನಾಥ ಗೋನಾಕ್, ಅಣ್ಣಾರಾವ ಮಂಗಾಣೆ, ಜಗದೀಶ ಪಾಟೀಲ, ಚಂದ್ರಕಾಂತ ರಾವೂರ, ಉಮಾದೇವಿ ಸಿ.ರಾವೂರ, ಪ್ರಭಾಕರ ಎನ್.ವಾಕಡೆ, ಶಾಂತಕುಮಾರ ಪೋಲಿಸ್ ಪಾಟೀಲ ಸೇರಿದಂತೆ ಬಳಗದ ಸದಸ್ಯರು, ಖೂಬಾ ಕುಟುಂಬಸ್ಥರು, ಬಂಧುಗಳು, ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here