ಕಲಬುರಗಿ: ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ ಅವರು ಸೋಮವಾರ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿರುವ ಜಿಲ್ಲೆಯ ಆಳಂದ ಮತ್ತು ಅಫಜಲಪೂರ ತಾಲೂಕಿನ ವಿವಿಧ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿದರು.
ಆಳಂದ ತಾಲೂಕಿನ ಖಜೂರಿ, ನಿಂಬಾಳ, ಮಾದನಹಿಪ್ಪರಗಾ ಮತ್ತು ಅಫಜಲಪೂರ ತಾಲೂಕಿನ ಬಳ್ಳೂರಗಿ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿದ ಅಧ್ಯಕ್ಷರು ಅಲ್ಲಿ ಕರ್ತವ್ಯನಿರತ ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸಿದಲ್ಲದೆ ಗಡಿಯಲ್ಲಿ ನಡೆಯುತ್ತಿರುವ ಸ್ಕ್ರೀನಿಂಗ್ ಕಾರ್ಯ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುವರ್ಣಾ ಹಣಮಂತರಾಯ ಮಾಲಾಜಿ ಅವರು ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ, ಪೊಲೀಸ್ ಸೇರಿದಂತೆ ಇನ್ನೀತರ ಇಲಾಖೆಯ ಸಿಬ್ಬಂದಿಗಳು ತಮ್ಮ ಆರೋಗ್ಯ ಕಡೆಗೆ ಗಮನಹರಿಸಬೇಕು. ಗಡಿಯಲ್ಲಿ ಬರುವ ಪ್ರತಿ ವ್ಯಕ್ತಿಗೆ ಸ್ರೀನಿಂಗ್ ಮಾಡಬೇಕು. ಯಾವುದೇ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ಕೂಡಲೆ ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಗುರುಶಾಂತಗೌಡ ಪಾಟೀಲ, ಆಳಂದ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವರೆಡ್ಡಿ, ಪಿ.ಎಸ್.ಐ. ಬಿ.ಎಸ್.ಪಾಟೀಲ, ಮುಖಂಡ ಹಣಮಂತರಾಯ ಮಾಲಾಜಿ ಇನ್ನೀತರರು ಇದ್ದರು.