ಕಲಬುರಗಿ: ಮಹಾಮಾರಿ ಕಿಲ್ಲರ್ ಕೊರೋನಾ ಜಿಲ್ಲೆಯಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ಒಂದು ವರ್ಷದ ಗಂಡು ಮಗುವಿಗೆ ಕೋವಿಡ್-19 ಸೋಂಕು ತಗಲಿದ್ದು ದೃಢಪಟ್ಟಿದೆ.
ಇಂದು ಬಂದಿರುವ ವೈದ್ಯಕೀಯ ಪರೀಕ್ಷೆ ವರದಿಯಿಂದ ದೃಢಪಟ್ಟಿದ್ದು, ತೀವ್ರ ಉಸಿರಾಟಕ್ಕೆ ಒಳಗಾಗಿದ್ದ ಈ ಮಗುವಿಗೆ ವೈರಸ್ ಇರುವುದಾಗಿ ತಿಳಿದುಬಂದಿದೆ. ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.
ದೇಶದಲ್ಲಿ ಎರಡನೇ ಬಾರಿ ಲಾಕ್ ಡೌನ್ ಘೋಷಣೆಯಾಗಿದೆ. ಜಿಲ್ಲೆಯಲ್ಲಿ ಮಹಾಮಾರಿಯ ಭೀತಿಯಿಂದ ನಗರದ ಬಹುತೇಕ ಬಡಾವಣೆಗಳು ಸ್ವಯಂ ದಿಗ್ಭಂಧನಕ್ಕೆ ಒಳಗಾಗುತ್ತಿದ್ದು, ಸಣ್ಣ ಮತ್ತು ಪ್ರಮುಖ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಕೋವಿಡ್-19 ವಿರುದ್ಧ ಸಮರ ಸಾರುತ್ತಿದ್ದಾರೆ.
ಅದೇ ರೀತಿ ಜಿಲ್ಲಾಡಳಿತ ಸೋಂಕು ಪೀಡಿತರು ಮತ್ತು ಪೀಡಿತರ ಸಂಪರ್ಕ ಹೊಂದಿದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದು, ಅನುಮಾನಸ್ಥ ವ್ಯಕ್ತಿಗಳಿಗೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಸದ್ಯ ಕೊರೋನಾ ಪೀಡಿತರಿಗೆ ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.