ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಿಂದ ವಂಚಿತರಾಗಿದ್ದ ಸಾಮಾನ್ಯ ಜನರಿಗೆ ಸಮಾನತೆಯ ಪಾಠ ಕಲಿಸಿಕೊಟ್ಟ ವಚನಕ್ರಾಂತಿ ಕರ್ನಾಟಕದ ಪಾಲಿಗೊಂದು ನವ ಮನ್ವಂತರ. ಈ ಕ್ರಾಂತಿಯ ದಂಡನಾಯಕರಾಗಿ ನಿಂತವರು ಬಸವಣ್ಣನವರು. ಬಸವಣ್ಣನವರು ಹುಟ್ಟಿದ್ದು ಈಗಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ಅಗ್ರಹಾರದ ಮುಖ್ಯಸ್ಥರಾಗಿದ್ದ ಬ್ರಾಹ್ಮಣ ಕುಟುಂಬದಲ್ಲಿ. ತಂದೆ ಮಾದರಸ. ತಾಯಿ ಮಾದಲಾಂಬಿಕೆ.
ತನ್ನ ಅಕ್ಕ ಅಕ್ಕನಾಗಮ್ಮನಿಗೆ ಹಾಕದ, ಇಲ್ಲದ ಜನಿವಾರ ತನಗೇಕೆ? ಎಂದು ಪ್ರಶ್ನಿಸಿ ಒತ್ತಾಯಪೂರ್ವಕವಾಗಿ ತನ್ನ ಕೊರಳಿಗೆ ಹಾಕಿದ್ದ ಜನಿವಾರವನ್ನು ಕಿತ್ತೆಸೆದ ಬಸವಣ್ಣನವರು, ಬಾಲ್ಯದಲ್ಲಿ ನಡೆದ ಈ ಘಟನೆಯಿಂದಾಗಿಯೇ ಬಹುಶಃ ಅವರ ಬದುಕಿಗೆ ತಿರುವು ಕೊಟ್ಟಿತು ಎಂದು ಹೇಳಬಹುದು. ಬಸವಣ್ಣನವರು ಸಮಾಜವನ್ನು ಪರೀಕ್ಷಿಸಿ ಅದಕ್ಕಂಟಿದ ರೋಗಾಣುಗಳನ್ನು ಗುರುತಿಸಿ ಅವುಗಳ ಮೂಲೋತ್ಪಾಟನೆಗೆ ದಿವ್ಯ ಔಷಧಿ ಕಂಡು ಹಿಡಿದವರು. ಅವರ ಸಾಧನೆ, ಸಿದ್ಧಿ ಹಾಗೂ ಸಂದೇಶ ಇಂದಿಗೂ ಅನನ್ಯ.
ಬಸವಣ್ಣ ಲೋಕಸೂರ್ಯ. ಸೂರ್ಯ ಇರುವಲ್ಲಿ ಕತ್ತಲೆ ಹೇಗೆ ತನ್ನಿಂದ ತಾನೆ ಕಾಲ್ತೆಗೆಯುವುದೋ ಹಾಗೆ ಬಸವಣ್ಣ ಇರುವಲ್ಲಿ ಜಾತಿ-ಸೂತಕವಿಲ್ಲ. ಮತ-ಮೌಢ್ಯಗಳಿಲ್ಲ. ಮೇಲು-ಕೀಳುಗಳಿಲ್ಲ. ಬಡವ-ಬಲ್ಲಿದನಿಲ್ಲ. ಜಾಣ-ದಡ್ಡನಿಲ್ಲ. ಸ್ತ್ರೀ-ಪುರುಷ ಎಂಬ ಲಿಂಗಭೇದವಿಲ್ಲ. ಲಂಚ-ವಂಚನೆಗಳಿಲ್ಲ. ದರ್ಪ-ದಬ್ಬಾಳಿಕೆಗಳಿಲ್ಲ. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು. ನಾಡಿನ ವಿವಿಧ ಪ್ರಾಂತ-ಪ್ರದೇಶಗಳಿಗೆ ಸೇರಿದ ಜನರೆಲ್ಲ ಅನುಭವ ಮಂಟಪದಲ್ಲಿ ಒಟ್ಟಾಗಿ ಕುಳಿತು ಬದುಕಿನ ಮೂಲ ಸಂಗತಿಗಳ ಕುರಿತು ಚರ್ಚಿಸುತ್ತಿದ್ದರು. ಅವರು ಹೇಳಿಕೊಟ್ಟ ಜೀವನ ವಿಧಾನ ಮತ್ತು ಸಮಾನತೆಯ ಪಾಠ ಇಂದಿಗೂ ಪ್ರಸ್ತುತ.
ಬದಲಾವಣೆ ಎಂಬುದು ಹೊರಗಿನಿಂದ ಬರುವಂಥದ್ದಲ್ಲ. ಅದು ನಮ್ಮೊಳಗೆ ನಡೆಯುವ ಉತ್ಕ್ರಾಂತಿ. ಯಾವ ವ್ಯಕ್ತಿಗೆ ತನ್ನ ಅರಿವು ತನ್ನ ಗುರು ಎಂಬುದು ಖಾತ್ರಿಯಾಗುತ್ತದೋ ಅಲ್ಲಿ ಹೊಸ ಬೆಳಕು ಮೂಡುತ್ತದೆ. ಕತ್ತಲೆ ಸರಿದು ಹೋಗುತ್ತದೆ. ಅಜ್ಞಾನ ಜ್ಞಾನದ ಬಲವನ್ನು ಎದುರಿಸಲಾಗದೆ ಸೋತು ಮೂಲೆ ಸೇರುತ್ತದೆ. ಗಾಢವಾದ ಕತ್ತಲೆಯಲ್ಲೂ ಬೆಳಕು, ಜ್ಯೋತಿ ತನ್ನ ಅಸ್ತಿತ್ವವನ್ನು ಇಟ್ಟುಕೊಳ್ಳುತ್ತದೆ. ಸತ್ಯದ ಉಸಿರಾಟ ಆರಂಭವಾದ ಕೂಡಲೇ ಅಸತ್ಯ ಉರುಲು ಹಾಕಿಕೊಳ್ಳುತ್ತದೆ. ಸತ್ಯ ಶರಣರ ಒಡನಾಟದಿಂದ ಮನಸ್ಸಿನಲ್ಲಿರುವ ಕೇಡು ಹೊರಟು ಹೋಗುತ್ತದೆ ಎಂದು ತಿಳಿಸಿದ್ದಾರೆ.
ನಾವು ಗಳಿಸಿದ ಆಸ್ತಿ, ಐಶ್ವರ್ಯ ಒಂದಿಲ್ಲ ಒಂದು ದಿನ ಯಾರಾದರೂ ಕದಿಯಬಹುದು. ಇಲ್ಲವೇ ನಾಶವಾಗಲೂಬಹುದು. ಆದರೆ ಗಳಿಸಿದ ಜ್ಞಾನ ಒಮ್ಮೆ ಕೈವಶವಾದರೆ ಸಾಕು, ನಮ್ಮ ಜೊತೆಯಲ್ಲಿಯೇ ಇರುತ್ತದೆ. ವಿದ್ಯೆ ಕದಿಯಲಾಗದ ಸಂಪತ್ತು. ಅಂತೆಯೇ ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ ಎಂದು ಹೇಳಿದ್ದಾರೆ. ನಮ್ಮಲ್ಲಿನ ಜ್ಞಾನ, ತಿಳಿವಳಿಕೆ ಸತ್ಯದೆಡೆಗೆ ಸಾಗುತ್ತದೆ. ಅಜ್ಞಾನವಿದ್ದಲ್ಲಿ ಅಸತ್ಯದ ಕಡೆ ಸಾಗಬಲ್ಲದು. ಹೀಗಾಗಿ ಸತ್ಯಕ್ಕೆ ಸಾವಿಲ್ಲ. ಸುಳ್ಳಿಗೆ ಸುಖವಿಲ್ಲ ಎಂದು ಹೇಳಿದ್ದಾರೆ.
ಪರುಷದ ಬಲದಿಂದಲೇ ಅವಲೋಹ ತನಗೆ ಬೆಲೆ ತಂದುಕೊಳ್ಳುವಂತೆ ಜ್ಞಾನವು ಮನುಷ್ಯನಿಗೆ ಬೆಲೆ ತಂದುಕೊಡುತ್ತದೆ. ಅದೇರೀತಿಯಾಗಿ ಶರಣರ ಅನುಭವದ ಅನುಭಾವ ಮನಸ್ಸಿನಲ್ಲಿ ಮನೆ ಮಾಡಿದರೆ ಕೆಟ್ಟ ಭಾವನೆಗಳು ತನ್ನಿಂದ ತಾನೆ ನಾಶವಾಗುತ್ತವೆ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಈ ವಚನ ಜ್ಞಾನದ ಮಹತ್ವನ್ನು ಸಾರುವಂತಿದ್ದರೂ ಕೂಡಲಸಂಗನ ಅನುಭಾವದ ಸಂಗವು ನಾವೆಲ್ಲರೂ ಅನುಸರಿಸುವ, ಅನುಸಂದಾನದ ಮಾರ್ಗವಾಗಿದೆ. ಶರಣ ಮಾರ್ಗ ಅದು ಅಧರಕ್ಕೆ ಕಹಿ ಎನಿಸಿದರೂ ಉದರಕ್ಕೆ ಸಿಹಿಯಾಗಿರುತ್ತದೆ. ಸತ್ಯ ಕಹಿಯಾಗಿರುತ್ತದೆ ನಿಜ. ಆದರೆ ಶಾಶ್ವತವಾಗಿ ನಿಲ್ಲುವ ಶಕ್ತಿ ಸತ್ಯಕ್ಕೆ ಮಾತ್ರ ಇದೆ. ಇಂತಹ ಪ್ರಜ್ಞಾವಂತ ಸಮಾಜ ಕಟ್ಟುವುದೇ ಬಸವಣ್ಣನವರ ಪರಮ ಗುರಿಯಾಗಿತ್ತು.
ಬಸವಣ್ಣನವರು ಹೇಳಿದ ವಿಚಾರಗಳು ಮನುಷ್ಯನ ಏಳಿಗೆಯ ಜೊತೆಗೆ ಮನುಷ್ಯರ ಅಭಿವೃದ್ಧಿಗೆ ಕಾರಣವಾಗುತ್ತವೆ. ಜ್ಞಾನಕ್ಕೆ ವಿರುದ್ಧವಾಗಿ ಅಜ್ಞಾನ ಪದವನ್ನು ಬಳಸುವ ನಾವುಗಳು ನಮ್ಮೊಳಗೆ ಅಡಗಿರುವ ಕತ್ತಲೆ ನಿವಾರಣೆಗೆ ಜ್ಞಾನವೆಂಬ ಬೆಳಕು ಸಾಧನವಾಗಿ ಉಪಯೋಗಿಸಬೇಕು ಎಂಬುದನ್ನು ಮನೋಜ್ಞವಾಗಿ ವಿವರಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…