ಅಂಕಣ ಬರಹ

ಕಾಯಕ,ದಾಸೋಹ ಹಾಗೂ ಸಮಾನತೆಯ ಹರಿಕಾರ: ವಿಶ್ವ ಗುರು ಬಸವಣ್ಣ”

ಎಲ್ಲಕ್ಕಿಂತ ಮಿಗಿಲಾಗಿ ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ, ಸಮಾಜ ಸುಧಾರಕರು ‘ಜಗಜ್ಯೋತಿ’ ಎನಿಸಿದ ಬಸವಣ್ಣನವರು. ಅವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವದ ಸನ್ಮಾರ್ಗದಲ್ಲಿ ನಡೆಯುವ ಬೆಳಕನ್ನು ನೀಡುವಂತಹವು..

ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ- ಧಾರ್ಮಿಕ ಕ್ರಾಂತಿ ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಜಡ್ಡುಗಟ್ಟಿದ ಸಮಾಜದಲ್ಲಿನ ಅರ್ಥರಹಿತ ಆಚಾರ, ವಿಚಾರಗಳಿಂದ ಮೇಲು-ಕೀಳು ಎಂಬ ಭಾವನೆಗಳಿಂದ ಸ್ತ್ರೀ-ಪುರುಷ ಎಂಬ ಲಿಂಗಭೇದದ ತಾರತಮ್ಯದಿಂದ ಶ್ರೀಮಂತ- ಬಡವ ಎಂಬ ಅಂತರದ ಸಂಘರ್ಷದಿಂದ ಸಾಮಾಜಿಕ ವ್ಯವಸ್ಥೆ ರೋಸಿ ಹೋಗಿತ್ತು. ಇದರ ವಿರುದ್ಧ ತಮ್ಮ ವಿಶಿಷ್ಟವಾದ ಮಾನವೀಯ ಮೌಲ್ಯಗಳ ಆಧಾರದ ಮೇರೆಗೆ, ನೈತಿಕ ಸೂತ್ರಗಳ ಹಿನ್ನೆಲೆಯಲ್ಲಿ ಹೋರಾಟ ನಡೆಸಿದ ಸಾಮಾಜಿಕ ಹೋರಾಟದ ಹರಿಕಾರರು ವಿಶ್ವಗುರು ಬಸವಣ್ಣನವರು.

ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿ ವ್ಯಕ್ತಿಯ ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿದಂಥ ಒಂದು ಸಮಗ್ರ ಕ್ರಾಂತಿ. ಈ ಕ್ರಾಂತಿಗೆ ಮೂಲ ಪ್ರೇರಣೆ ನೀಡಿದ್ದು ವಚನ ಸಾಹಿತ್ಯದಲ್ಲಿ ಅಡಗಿದ್ದ ಕ್ರಾಂತಿಕಾರಕ ಸಮಾಜಮುಖಿ ಚಿಂತನೆಗಳು.

ಜೀವನ ಸಂಹಿತೆ: ಬಸವಾದಿ ಶರಣರ ಕ್ರಾಂತಿಗೆ ಮೂಲ ಆಧಾರವಾದ ಈ ವಚನವು ಇಡೀ ವಿಶ್ವ ಸಮುದಾಯಕ್ಕೆ ನೀಡಿದ ಸಾಮಾಜಿಕ ನೀತಿ ಸಂಹಿತೆ. ಜಗತ್ತಿನ ಮನುಕುಲಕ್ಕೆ ನೀಡಿದಂತಹ ಜೀವನ ಸಂವಿಧಾನ, ಮಾನವ ಸಂವಿಧಾನ.

*”ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,*
*ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ,*
*ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,*
*ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ..”*
ಬಸವಣ್ಣನವರ ಕ್ರಾಂತಿಕಾರಕ ಸಾಮಾಜಿಕ ಸುಧಾರಣೆಗೆ ಒಂದು ನಿರ್ದಿಷ್ಟ ಸ್ವರೂಪ ಬಂದದ್ದು ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಸಾಮಾಜಿಕ ಚಿಂತನೆಗಳಿಂದಾಗಿ. ಅನುಭಾವದ ನೆಲೆಯಲ್ಲಿ ಶರಣ ಸಮೂಹದಲ್ಲಿ ಅಲ್ಲಿ ನಡೆಯುತ್ತಿದ್ದ ವಾದ-ಸಂವಾದಗಳಿಂದಾಗಿ. ಅನುಭವ ಮಂಟಪದಲ್ಲಿ ಸಮಾವೇಶಗೊಳ್ಳುತ್ತಿದ್ದ ಶರಣರು ವಿವಿಧ ಕಾಯಕ ಮೂಲಗಳಿಂದ ಬಂದಂತಹವರು. ವರ್ಣಭೇದ, ವರ್ಗಭೇದ, ಲಿಂಗಭೇದಗಳಿಲ್ಲದೆ ಮುಕ್ತ ಚರ್ಚೆಯ ವೇದಿಕೆಯಾಗಿದ್ದ ಅನುಭವಮಂಟವನ್ನು ವಿಶ್ವದ ಪ್ರಥಮ ‘ಸಂಸತ್ತು” ಎಂದು ಕರೆಯುವುದುಂಟು.

ಸಮಾನತೆಯ ಪರಿ ಕಲ್ಪನೆ: ಶರಣರ ದೃಷ್ಟಿಯಲ್ಲಿ ಜಾತಿಗೆ ಸ್ಥಾನವೇ ಇಲ್ಲ. ಬಸವಣ್ಣನವರು ಕಂಡದ್ದು ಜಾತ್ಯತೀತವಾದ ಸುಂದರ ಸಮಾನತೆಯ ವಿಶ್ವಭ್ರಾತೃತ್ವದ ಸಮ ಸಮಾಜ. ಜಾತಿ-ಜಾತಿಗಳ ಧರ್ಮ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷದ ವಿರುದ್ಧ ಸಿಡಿದೆದ್ದ ಅವರು, ಎಲ್ಲರೂ ನಮ್ಮವರೆ ಎಂಬ ಸಂದೇಶ ಸಾರುವ ಈ ವಚನ ಇಡೀ ವಿಶ್ವಕ್ಕೆ ನೀಡಿದ ಒಂದು ದಿವ್ಯ ಸಂದೇಶವಾಗಿದೆ.

*“ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ.,*
*ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ..* *ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ..”*
*ಕಾಯಕ ಸಿದ್ಧಾಂತ:*

ಬಸವಣ್ಣನವರು ಒಬ್ಬ ಅರ್ಥಶಾಸ್ತ್ರಜ್ಞರೂ ಆಗಿದ್ದವರು. ಸಮಾಜದ ಸರ್ವಾಂಗೀಣ ಪ್ರಗತಿಗೆ, ವಿಕಾಸಕ್ಕೆ *”ದುಡಿಮೆಯ ಸಂಸ್ಕೃತಿ, ಬೆವರಿನ ಸಂಸ್ಕೃತಿ”* ಅತ್ಯಗತ್ಯ ಎಂದು ಹೇಳುವ ಮೂಲಕ ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದರು. ದುಡಿಯುವವರು ಬೇರೆ, ಅದರ ಫಲವನ್ನು ಉಣ್ಣುವವರು ಬೇರೆ ಆಗಿದ್ದ ಕಾಲಘಟ್ಟದಲ್ಲಿ ‘ಗುರುಲಿಂಗ ಜಂಗಮವಾದರೂ ಕಾಯಕದಿಂದಲೇ ಮುಕ್ತಿ’ ಎಂದು ಪ್ರತಿಪಾದಿಸುವ ಮೂಲಕ ವಿನೂತನವಾದ ಕಾಯಕ ಸಿದ್ಧಾಂತಕ್ಕೆ ಹೊಸ ವ್ಯಾಖ್ಯಾನ ಬರೆದರು. ಕರ್ಮ ಸಿದ್ಧಾಂತವನ್ನು ಕಾಯಕ ಸಿದ್ಧಾಂತವನ್ನಾಗಿ ಪರಿವರ್ತಿಸಿದ ದಾರ್ಶನಿಕರು ಬಸವಾದಿ ಶರಣರು. ಕಾಯಕವೇ ಕೈಲಾಸ’ ಎಂಬುದು ಅವರು ಜಗತ್ತಿಗೆ ನೀಡಿದ ಅಮೂಲ್ಯ ಸಂದೇಶ.

ದಾಸೋಹ ತತ್ವ: ವ್ಯಕ್ತಿ ಸಮಾಜದಲ್ಲಿ ತಾನು ಗಳಿಸಿದ್ದನ್ನೆಲ್ಲಾ ತಾನೊಬ್ಬನೇ ಅಥವಾ ತನ್ನ ಕುಟುಂಬ ಮಾತ್ರ ಬಳಸಿಕೊಳ್ಳಬೇಕೆಂಬ ಸ್ವಾರ್ಥಕ್ಕೆ ತಿಲಾಂಜಲಿ ನೀಡಿದವರು ಬಸವಣ್ಣನವರು. ವ್ಯಕ್ತಿ ತನ್ನ ಗಳಿಕೆಯಿಂದ ಬಂದಿದ್ದನ್ನು ತನ್ನ ಸೀಮಿತವಾದ ಅಗತ್ಯಕ್ಕೆ ಬೇಕಾದಷ್ಟುನ್ನು ಮಾತ್ರ ಬಳಸಿಕೊಂಡು ಮಿಕ್ಕೆಲ್ಲವನ್ನು ಪ್ರೀತಿಯಿಂದ ಸಮಾಜಕ್ಕೆ ಸದ್ವಿನಿಯೋಗ ಮಾಡುವ ಒಂದು ಮಾನವೀಯ ಸೇವೆಯೇ ದಾಸೋಹ. ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವ ಸಂಪತ್ತು ಶರಣರ ದೃಷ್ಟಿಯಲ್ಲಿ ಒಂದು ಮಹಾದ್ರೋಹ. ಅಗತ್ಯಕ್ಕಿಂತ ಹೆಚ್ಚು ಗಳಿಸುವುದು ಸಾಮಾಜಿಕ ಅಪರಾಧ. ವ್ಯಕ್ತಿಗೆ ಅಗತ್ಯವಾದುದನ್ನು ಅಂದಂದಿನ ಕಾಯಕದಿಂದಲೇ ಗಳಿಸಬೇಕೆಂಬುದು ಬಸವಾದಿ ಶರಣರ ಕಾಯಕ – ದಾಸೋಹ ಬಹುಮೂಲ್ಯವಾದುದ್ದಾಗಿದೆ.

ಮೃದುವಚನಗಳೇ ಸಕಲ ಜಪಂಗಳಯ್ಯ ಮೃದು ವಚನಗಳೇ ಸಕಲ ತಪಂಗಳಯ್ಯಾ, ಸದುವಿನಯವೇ ಸದಾಶಿವನ ಒಲುಮೆಯಯ್ಯಾ”

ಎಂದು ಪ್ರತಿಪಾದಿಸುತ್ತಾ ಸದುವಿನಯದ ನುಡಿಗಳೇ ಶಿವನ ಒಲುಮೆಗೆ ಸಾಧನ ಎಂಬ ಮಾತಿನ ಮಹತ್ವವನ್ನು ಬಸವಣ್ಣನವರು ಸ್ವತಃ ತಮ್ಮ ಬದುಕಿನಲ್ಲಿ ಅನುಷ್ಠಾನಗೊಳಿಸಿಕೊಂಡು ಜಗತ್ತಿಗೂ ಈ ಸಂದೇಶವನ್ನು ಸಾರಿದ್ದಾರೆ. ವಿಶ್ವದ ಎಲ್ಲಾ ದಾರ್ಶನಿಕರು ನೀಡಿರುವ ಶ್ರೇಷ್ಠವಾದ ಚಿಂತನೆಗಳನ್ನೆಲ್ಲಾ ಮೀರಿಸುವ ಚಿಂತನೆ *”ವಚನ ಸಾಹಿತ್ಯ”* ಎಂಬ ಶ್ರೇಷ್ಠವಾದ ಅನುಭಾವ ಸಾಹಿತ್ಯದ ಮೂಲಕ ಜಗತ್ತಿಗೆ ನೀಡಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ. ಜಾತ್ಯತೀತ ಸಮಾಜದ ಕಲ್ಪನೆ, ಸ್ತ್ರೀ ಸಮಾನತೆಯ ಪ್ರತಿಪಾದನೆ, ಕಾಯಕ ಮತ್ತು ದಾಸೋಹ ಸಿದ್ಧಾಂತಗಳ ಅನುಷ್ಠಾನ, ನಿಸರ್ಗದ ಬಗೆಗಿನ ಪ್ರೀತಿ, ವೈಚಾರಿಕ ಚಿಂತನೆಗಳಿಗೆ ಪ್ರೋತ್ಸಾಹ, ಜನರ ಢಾಂಭಿಕ ಬದುಕಿನ ಬಗ್ಗೆ ಎಚ್ಚರಿಕೆ ಭಕ್ತಿಯೇ ಪ್ರಧಾನ ಎಂಬ ತತ್ವದ ಪ್ರತಿಪಾದನೆ ಎಲ್ಲರೂ ನನ್ನವರೆನ್ನುವ ವಿಶ್ವ ಭ್ರಾತೃತ್ವಭಾವ, ‘ಎನಗಿಂತ ಕಿರಿಯರಿಲ್ಲ’ ಎಂಬ ವಿನಮ್ರ ಭಾವದಿಂದ ಜಗತ್ತನ್ನು ಬೆಳಗಿದ ಜಗದ ಜ್ಯೋತಿ, ಭಕ್ತಿ ಭಂಡಾರಿ ಶ್ರೇಷ್ಠ ಮಹಾನ್ ಮಾನವತಾವಾದಿ, ದಾರ್ಶನಿಕ, ದ್ರಷ್ಟಾರರು, ಮಹಾತ್ಮರು, ವಿಶ್ವಗುರು ಬಸವಣ್ಣನವರು.

ಎಲ್ಲಕ್ಕಿಂತ ಮಿಗಿಲಾಗಿ ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ ಸುಧಾರಕ ಬಸವಣ್ಣನವರು. ಅವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವದ ಸನ್ಮಾರ್ಗದಲ್ಲಿ ನಡೆಯುವ ಬೆಳಕನ್ನು ನೀಡುವಂತಾಗಲಿ.


ಲೇಖಕರು: ಪ್ರೊ. ಯಶವಂತರಾಯ ಅಷ್ಠಗಿ, ವಿಚಾರವಾದಿಗಳು, ಕಲಬುರಗಿ
emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago