ನೀವು ಶರಶ್ಚಂದ್ರರ ಬಂಗಾಳಿ ಕಾದಂಬರಿಗಳನ್ನು ಓದಿದವರಾಗಿದ್ದರೇ ಆಜಾನುಬಾಹು ಕಥಾನಾಯಕನ ಒಂದು ಸುಂದರ ಹಾಗೂ ಪರಿಣಾಮಕಾರಿ ಚಿತ್ರ ಚಿತ್ರಿಸಿಕೊಳ್ತೀರಿ. ಅಚ್ಚ ಬಿಳಿಯ ಪೈಜಾಮ, ಅದೇ ಉದ್ದನೆಯ ನೆಹರೂ ಶರ್ಟಿನ ತೋಳು ಮಡಿಚಿದ ಜುಬ್ಬಾ. ಪುಷ್ಕಳ ಕೂದಲಿನ ಹೇರ್ ಸ್ಟೈಲ್.
ಸಂದೇಹವೇ ಬೇಡ. ಹಳೆಯ ಹಿಂದಿ, ಇಲ್ಲವೇ ಬಂಗಾಳಿ ಬಾಬು ಸಿನೆಮಾಗಳ ಸ್ಪುರದ್ರೂಪಿ ಹೀರೋನ ತದ್ರೂಪಿಯೇ ಈಗ ನಾನು ಬಣ್ಣಿಸಲು ಹೊರಟಿರುವ ಯಡ್ರಾಮಿ ಹೀರೋನ ಹೆಸರು : ಭೀಮರಾವ ಮಲ್ಹಾರಿರಾವ ಕುಲಕರ್ಣಿ. ನಮ್ಮ ಭಾಗದಲ್ಲಿ ಓದುವ ಅಭಿರುಚಿಯನ್ನು ಕಲಿಸಿಕೊಟ್ಟ ಮೊದಲಿಗರಿವರು. ಪುಸ್ತಕದ ಹುಳ. ಕುಡುಮಿ ಅಂತಾರಲ್ಲ ಹಾಗೆ.
ಮೇಲೆ ವರ್ಣಿಸಲ್ಪಟ್ಟ ಕೃಷ್ಣವರ್ಣದ ಕುಲಕರ್ಣಿ ಭೀಮರಾಯರ ಹೆಗಲ ಮೇಲೊಂದು ಪುಟ್ಟ ಟವೆಲ್, ಬಲಗೈಯಲ್ಲಿ ಚಾರ್ಮಿನಾರ್ ಸಿಗರೇಟ್, ( ಕೆಲ ವರ್ಷಗಳ ನಂತರ ಗಣೇಶ ಬೀಡಿಗೆ ಜಂಪಾದರು ) ಎಡಗೈಯಲ್ಲೊಂದು ಹ್ಯಾಂಡ್ ಬ್ಯಾಗ್., ಅದರಲ್ಲೆರಡು ಕಾದಂಬರಿಗಳು. ಎರಡರಲ್ಲೊಂದು ಕಡ್ಡಾಯವಾಗಿ ಹಿಂದಿ. ಸಹಜವಾಗಿ ಇನ್ನೊಂದು ಕನ್ನಡ. ಹಿಂದಿಯಾಗಿದ್ರೆ ಗುಲ್ಶನ್ ನಂದಾ ಇಲ್ಲವೇ ಚಟೋಪಾಧ್ಯಾಯರದು. ಕನ್ನಡವಾಗಿದ್ರೇ ಗಳಗನಾಥ, ಕಟ್ಟೀಮನಿ, ಇಲ್ಲವೇ ಬೈರಪ್ಪರದು. ಹಾಗೆಂದು ಇತರರ ಕಾದಂಬರಿ ಓದುವುದಿಲ್ಲೆಂದರ್ಥವಲ್ಲ.
ಇತ್ತೀಚಿನ ರವಿ ಬೆಳಗೆರೆಯ “ಮಾಂಡೋವಿ”ವರೆಗೂ ಭೀಮರಾಯರ ಓದಿನ ವಿಸ್ತಾರ ಮತ್ತು ಓಲವು. ಕ್ಷಮಿಸಿ, ಆತ ಓದಿರುವ ಪತ್ತೇದಾರಿ ಕಾದಂಬರಿಗಳದೇ ದೊಡ್ಡ ಪಟ್ಟಿ ಮಾಡಬಹುದು. ನರಸಿಂಹಯ್ಯ, ಸುದರ್ಶನ ದೇಸಾಯರ ಕಾದಂಬರಿಗಳ ಪುಟ ಪುಟದ ದಟ್ಚ ಮಾಹಿತಿ ಕುಲಕರ್ಣಿ ತುದಿ ನಾಲಗೆಯಲ್ಲೇ. ನಾಟಕ, ಚೆಸ್ ಆಟಗಳೆಂದ್ರೆ ಭೀಮರಾಯರಿಗೆ ಪಂಚಪ್ರಾಣ. ಜಡರಹಿತ ಅಧ್ಯಾತ್ಮದ ಸಾವಯವ ಪ್ರೀತಿ. ಬೆಳಗೆರೆ ಕೃಷ್ಣಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತಿ ಎಂಬಲ್ಲಿ ಅಪಾರ ನಂಬುಗೆ. ಅದೇನೋ ಗೊತ್ತಿಲ್ಲ… ಜಿಡ್ಡಗಿ ಮಠವೆಂದರೆ ವೈದಿಕ ಕುಲಕರ್ಣಿಗೆ ಎಲ್ಲಿಲ್ಲದ ಪ್ರೇಮ.
ಯಡ್ರಾಮಿಯ ಅವರ ಮನೆಯ ಮುಂದಿನ ಮಳಿಗೆ ತುಂಬೆಲ್ಲ ಕಾದಂಬರಿ, ಕಥಾ ಸಂಕಲನಗಳದೇ ಕಾರುಬಾರು. ಹಳೇಕಾಲದ ಪ್ರಜಾಮತ, ಐವತ್ತು ಪೈಸೆ ಬೆಲೆಯಿದ್ದ ಹಳೇ ಕಾಲದ ಸುಧಾ, ಕಸ್ತೂರಿ, ಮಲ್ಲಿಗೆ, ನನ್ನ ನಾಲಗೆ ತುದಿಯಿಂದ ಜಾರಿ ಬಾರದಿರುವ ಹಿಂದೀ ನಿಯತಕಾಲಿಕಗಳ ರಾಶಿ. ಯಡ್ರಾಮಿಯೆಂಬ ವ್ಯಾಪಾರಿ, ವಣಿಕರ ಸಂತೆಯೂರಲ್ಲಿ ಇವರು ತನ್ನ ಮಳಿಗೆ ತುಂಬೆಲ್ಲ ಪುಸ್ತಕ, ಪೇಪರುಗಳನ್ನು ಒಟ್ಟಿ ಕೊಂಡವರು. ಎಂದೂ ಪೇಪರ್, ಪುಸ್ತಕಗಳನ್ನು ರದ್ದಿಗಳೆಂದು ತೂಕಕ್ಕೆ ಮಾರಿದವರಲ್ಲ.
ನಮಗೆಲ್ಲ ಬೀಚಿಯ ಹುಚ್ಚು ಹಿಡಿಸಿದ ಕುಲಕರ್ಣಿ, ಸಂವಾದಕ್ಕೆ ತೊಡಗಿದರೇ ಆತನ ಓದಿನ ಆಳ ಹರವಿನ ಪರಿಚಯವಾಗುತ್ತಿತ್ತು. ಮಾತಿನ ತುಂಬೆಲ್ಲ ಪುಳಕ ಹುಟ್ಟಿಸುವ ನವಿರು ಹಾಸ್ಯ. ಟೀವಿಗಳಲ್ಲಿ ಇವತ್ತು ಹಾಸ್ಯದ ಹೆಸರಲ್ಲಿ ಹಾಡಿದ್ದೇ ಹಾಡುವ ಕಿಸಬಾಯಿ ದಾಸರಂತೆ ರಂಜಿಸುತ್ತಿರುವವರನ್ನು ಇವರ ಮಾರಿ ಮೇಲೆ ನಿವಾಳಿಸಿ ಒಗೀ ಬೇಕನಿಸ್ತದೆ. ಆತ ನೋಡಿದ ಹಳೆಯ ಹಿಂದೀ ಸಿನೆಮಾಗಳ ಲೆಕ್ಕವಿಲ್ಲ. ಸಿನೆಮಾ ನೋಡಲಿಕ್ಕೆಂದೇ ಕಲಬುರ್ಗಿ, ಬಿಜಾಪುರಕ್ಕೆ ಹೋಗುತ್ತಿದ್ದ ಶೋಕಿಲಾಲ ನಮ್ಮ ಕುಲಕರ್ಣಿ.
ತನ್ನ ಜೀವದ ಗೆಣೆಕಾರ ಮಹಾಂತಗೌಡರು ನಿರ್ಗಮಿಸಿದ ಮೇಲೆ ತುಸು ಮೆತ್ತಗಾದರು. ಎಪ್ಪತ್ತು ಚೆಂದದ ಓದಿನ ವಸಂತಗಳ, ಬಲ ಭೀಮಕಾಯದ ಕುಲಕರ್ಣಿ ಕಳೆದೆರಡು ವರುಷಗಳಿಂದ ಪಾರ್ಶ್ವವಾಯು ಪೀಡಿತರು.
ನಿತ್ಯ ತಾನು ಗೆಲ್ಲುವ ಚೆಸ್ ಆಟಕ್ಕು ಬದುಕಿನ ಚದುರಂಗದಾಟಕ್ಕು ಎಷ್ಟೊಂದು ಫರಕು ಅಲ್ಲವೇ.? ಆದರೆ ಅವರ ಓದಿನ ಆಟಕ್ಕೆ ಅದರಿಂದೇನು ಧೋಖಾ ಆಗಿಲ್ಲೆಂಬ ಸಣ್ಣ ಸಮಾಧಾನ ಅವರ ಕಿರಿಯ ಸ್ನೇಹಿತನಾದ ನನ್ನದು.
-ಮಲ್ಲಿಕಾರ್ಜುನ ಕಡಕೋಳ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…