ಧಾರವಾಡ: ಜೀವಜಗತ್ತಿನಲ್ಲಿ ನೆನಪು ಮತ್ತು ಸ್ಮರಣೆ ಎಂಬೆರಡು ಸಂಗತಿಗಳು ಬಹಳ ಮಹತ್ವದ ವಿಷಯಗಳಾಗಿವೆ. ನೆನಪು ಇತಿಹಾಸದ ಪುಟಗಳಲ್ಲಿನ ಘಟನೆಗಳನ್ನು ತೆರೆದಿಡುತ್ತದೆ. ಅವುಗಳಲ್ಲಿ ಶುದ್ಧ ಮತ್ತು ಅಶುದ್ಧ ಭಾವನೆಗಳಿಂದ ಆಳಿದ ರಾಜ-ಮಹಾರಾಜರುಗಳ ವೈಚಾರಿಕತೆಗಳು ಬುದ್ಧರ ಮಾರ್ಗದಲ್ಲಿ ಸತ್ಯ ಹಾಗೂ ಅಸತ್ಯಗಳ ಗೊಂದಲ ಸೃಷ್ಟಿಗೊಂಡು ಸಮಾಜದಲ್ಲಿ ಶುದ್ಧ ಮತ್ತು ಅಶುದ್ಧ ಬೇಧಗಳು ಮೊಳೆತು ಪಂಕ್ತಿಬೇಧ, ಭೋಜನಬೇಧ, ಜಾತಿಬೇಧ, ಉಚ್ಛನೀಚಗಳ ಬೇಧ, ಶ್ರೇಷ್ಟಕನಿಷ್ಟಗಳ ಬೇಧ, ಅವಿಜ್ಜಾವಿಜಾಗಳ ಬೇಧಗಳನ್ನುಂಟು ಮಾಡುತ್ತವೆ. ಈ ಬೇಧಗಳಿಂದ ನೊಂದವರನ್ನು ಬಿಡುಗಡೆ ಮಾಡುವ ವಿಚಾರವಾಗಿ ಸುಖಶಾಂತಿ ಮಾರ್ಗವನ್ನು ಸ್ಥಾಪಿಸಲು ಹೊರಟ ರಾಜರು ತಮ್ಮನ್ನೇ ತಾವು ಪರಿವರ್ತನೆ ಮಾಡಿಕೊಂಡು ಅಂತಿಮವಾಗಿ ಸರ್ವತ್ಯಾಗಿ ಲೋಕಸಂಚಾರಿ ಬಿಕ್ಖುಗಳಾದರು ಎಂದು ಜೀವನ ಮಾರ್ಗದ ವಿಚಾರಗಳನ್ನು ಧಾರವಾಡದ ಪಾಲಿ ಶಿಕ್ಷಣ ಮತ್ತು ಸಂಶೋಧನಾ ಟ್ರಸ್ಟ್ ಅಧ್ಯಕ್ಷರು ಮತ್ತು ಪಾಲಿ ವಿದ್ವಾಂಸ ಪಬ್ಬ ಜ್ಜೋರವಿತಿ ಪಾಲಿ ವಿಜ್ಜಾಮುನಿಯೋ ಹೇಳಿದರು.
ಅವರು ಧಾರವಾಡದಲ್ಲಿ ಗಣಕರಂಗ ಮತ್ತು ಬುದ್ಧಿಷ್ಟ ಪಾಲಿ ಶಿಕ್ಷಣ-ಸಂಶೋಧನಾ ಟ್ರಸ್ಟ ಸಂಯುಕ್ತಾಶ್ರಯದಲ್ಲಿ ಆಯೋಜೀಸಲಾಗಿದ್ದ ಭಗವಾನ ಗೌತಮ ಬುದ್ಧರ ೨೫೬೩ನೇ ಜಯಂತಿ ಆಚರಣೆ ಮತ್ತು ೩ಬಿ ನೆನಪಿನ ಕವಿಗೋಷ್ಟಿಯ ಸಾನಿಧ್ಯ ವಹಿಸಿಕೊಂಡು ಮಾತನಾಡುತ್ತಿದ್ದರು. ಅಂಧಕಾರದ ಮಾರ್ಗದಲ್ಲಿ ನಡೆದು, ಅಂಧಕಾರ ತೊಡೆದು ಹಾಕುವ ಸತ್ಯವನ್ನು ಅರಿಯಬೇಕು. ಜೀವನದಲ್ಲಿ ಸತ್ಯವೇ ಬಾಳಿನ ಬೆಳಕಾಗಿದೆ. ಆ ಸತ್ಯವೆಂಬ ಬೆಳಕು ಜೀವನದ ಸುಖದ ಹಾಗೂ ನಿರ್ಭಯದ ಆಲೋಚನೆಯ ಜೀವವಾಗಿದೆ. ಅಸತ್ಯವು ಜೀವನದ ದುಃಖ ಹಾಗೂ ಭಯದ ಆಲೋಚನೆಯ ಜೀವನವಾಗಿದೆ. ನಾವು ಬುದ್ಧರು. ಜಗತ್ತಿನಲ್ಲಿ ಸತ್ಯದ ಮಾರ್ಗದಲ್ಲಿ ನಡೆದು ಜೀವನದಲ್ಲಿ ಸತ್ಯದ ಸುಖವನ್ನು ಅನುಭವಿಸಬೇಕು. ನಂತರ ವಿಮುಕ್ತಿಯ ಮಾರ್ಗವನ್ನು ಪಡೆದು ಪುನೀತರಾಗೋಣ. ಎಲ್ಲರಿಗೂ ಜಯಮಂಗಳವಾಗಲಿ, ಸುಖಿಗಳಾಗಲಿ, ಹರುಷದಿಂದ ಬಾಳಿರಿ ಎಂದು ಹಿತವಚನ ನೀಡದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ.ಟಿ.ಎಂ.ಭಾಸ್ಕರ ಅವರು, ಸಮಕಾಲೀನ ಸಂದರ್ಭದ ವಿದ್ಯಮಾನಗಳನ್ನು ಗಮನಿಸಿದರೆ ನಾವು ಸುಡುತ್ತಿರುವ ಮನೆಯಲ್ಲಿದ್ದೇವೆ. ಸುಡುವ ಮನೆಯ ಕೊಳಕಿನಲ್ಲಿದ್ದುಕೊಂಡು ಬಿಡುಗಡೆಗಾಗಿ ಮನೆಯವರಲ್ಲಿಯೇ ಬೇಡಿಕೊಳ್ಳುತ್ತಿದ್ದೇವೆ. ಅದನ್ನು ಬಿಟ್ಟು ಜಾಗೃತಗೊಂಡು, ಸಂಘಟಿತರಾಗಿ ಸುಡುವ ಮನೆಯಿಂದ ಹೊರಗೆ ಬಂದು ಹಿರಿಯರು ಕಟ್ಟಿದ ಪಿತ್ರಾರ್ಜಿತ ಮನೆಗೆ ಮರಳಬೇಕಾಗಿದೆ. ಮನೆಗೆ ಮರಳಲು ವ್ಯಕ್ತಿತ್ವಗಳ ಪ್ರಭಾವ, ದಾರ್ಶನಿಕರ ಮಾರ್ಗ ಹಿಡಿಯಲು ಅವರನ್ನು ಕುರಿತು ತಿಳಿದುಕೊಳ್ಳುತ್ತಲೇ ಜಾಗೃತಿಗಾಗಿ ಸೃಜನಶೀಲರಾಗಿ ಕಾವ್ಯ, ಕಥೆ, ಆಲೋಚನೆ, ಯೋಜನೆಗಳ ಮೂಲಕ ಚಿಂತನ-ಮಂಥನ ಮಾಡಿಕೊಳ್ಳುವುದು ಅವಶ್ಯ. ಇಂಥಹ ಅವಶ್ಯಕತೆ ಮನಗಂಡಿರುವ ಗಣಕರಂಗ ಮತ್ತು ಪಾಲಿ ಶಿಕ್ಷಣ-ಸಂಶೋಧನೆ ಟ್ರಸ್ಟನವರು ಬುದ್ಧಜಯಂತಿ ಆಯೋಜಿಸಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಗವಾನ ಬುದ್ಧರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಉಪಪೋಲೀಸ ವರಿಷ್ಟಾಧಿಕಾರಿ ಗಿರೀಶ ಕಾಂಬಳೆ ಮಾತನಾಡುತ್ತಾ ಪೂರ್ವಿಕರ ಕಾಲದ ಮಹಾನುಭಾವ ದಾರ್ಶನಿಕರ ನಡೆನುಡಿ ತಿಳಿದುಕೊಂಡು ಮುನ್ನಡೆಯುವುದು ಇಂದಿಗೂ ಎಂದೆಂದಿಗೂ ಅವಶ್ಯ ಎಂದು ಹೇಳಿದರು. ಅತಿಥಿಯಾಗಿ ಆಗಮಿಸಿದ್ದ ಚಿಂತಕ ಲಕ್ಷ್ಮಣ ಬಕ್ಕಾಯಿಯವರು ಸಮಾನತೆ, ಮಾನವೀಯ ಅಂತಃಕರಣ ಬಯಸಿದ ಬುದ್ಧದೇವ ಈ ಜಗದ ಮೊದಲ ಪ್ರಜಾಪ್ರಭುತ್ವವಾದಿ ಮತ್ತು ಮಾನವತಾವಾದಿ ಎಂದು ಅಭಿಪ್ರಾಯಪಟ್ಟರು. ಕೆಲವು ಸ್ವಹಿತಾಸಕ್ತಿಗಳ ಕುಚೋಧ್ಯದ ಪರಿಣಾಮವಾಗಿ ವಿದೇಶಿಯರ ಪಾಲಾದ ಬುದ್ಧದಮ್ಮವು ಇಂದು ಮತ್ತೆ ನಮ್ಮ ದೇಶದ ರಾಜಧರ್ಮವಾಗಬೇಕಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇತಿಹಾಸ ಪ್ರಾಧ್ಯಾಪಕ ಡಾ.ಅರುಣ ಕಲ್ಲೋಳಿಕರ ಆಶಯದೊಂದಿಗೆ ಅಭಿಪ್ರಾಯಪಟ್ಟರು. ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಆರಂಭಕ್ಕೆ ಬುದ್ಧಗೀತ ಗಾಯನವನ್ನು ಶಿವಾನಂಧ ಅಮರಶೆಟ್ಟಿ ಮತ್ತು ದಾನೇಶ ಬುರುಡಿಯವರು ಪ್ರಸ್ತುತಪಡಿಸಿದರು. ನಂತರ ನಡೆದ ಬುದ್ಧಭಾರತ ಶೀರ್ಷಿಕೆಯಡಿಯಲ್ಲಿ ನಡೆದ ೩ಬಿ ನೆನಪಿನ ಕವಿಗೋಷ್ಟಿಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ, ಕವನ ವಾಚನ ಮಾಡಿದ ಕವಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸಲಾಯಿತು. ಕೊನೆಯಲ್ಲಿ ಬುದ್ಧಜಯಂತಿ ಪ್ರಯುಕ್ತ ಸಿಹಿಕೇಕ್ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀನಿಧಿ ಬೇವಿನಗಿಡದ, ಕವಿತಾ ಬೇವಿನಗಿಡದ, ನಿತಿನ ಗುಡಿಮನಿ, ಅನ್ನಪೂರ್ಣ ತಳಕಲ್ಲ, ಸೃಷ್ಟಿಸಾಗರ, ರವಿವರ್ಮ ಕಾಂಬಳೆ, ರಂಜನಾ ಕಾಂಬಳೆ, ರಮಾ ಅಮರಶೆಟ್ಟಿ, ರವಿ ಅಮರಶೆಟ್ಟಿ, ಗೀತಾ ಅಮರಶೆಟ್ಟಿ ಮುಂತಾದವರು ಉಪಸ್ಥಿತರಿದ್ದು ಸಹಕರಿಸಿದರು.