ಹಾಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಮುಂದುವರಿಸಲು ಆಗ್ರಹ

0
66

ಕಲಬುರಗಿ: ರಾಜ್ಯದ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗಳ ವಿಚಾರವಾಗಿ ಹಾಗೂ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಮುಂದುವರಿಸಲು ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ (ಡಬ್ಲ್ಯೂಪಿಐ) ಮನವಿ ಸಲ್ಲಿಸಿ ಒತ್ತಾಯಿಸಿದೆ.

ಪ್ರಸ್ತುತ ಗ್ರಾಮ ಪಂಚಾಯಿತಿಗಳ ಐದು ವರ್ಷದ ಅವಧಿ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಕೆಲವೊಂದು ಪಂಚಾಯಿತಿಗಳ ಅವಧಿ ಜೂನ್ ಮತ್ತು ಜುಲೈನಲ್ಲಿ ಮುಗಿಯಲಿದೆ. ಒಟ್ಟಾರೆ, ಮೇ ಮತ್ತು ಜೂನ್ ತಿಂಗಳಲ್ಲಿ ರಾಜ್ಯದ 6,041 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಆದರೆ, ಕೋವಿಡ್-19ನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ನೈಸರ್ಗಿಕ ವಿಕೋಪ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನೇ ನೆಪ ಮಾಡಿಕೊಂಡು ಗ್ರಾಮ ಪಂಚಾಯಿತಿಗಳ ಚುನಾವಣೆ ಮುಂದೂಡಿ ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಮುಂದಾಗಿದ್ದು, ಚುನಾವಣೆಯನ್ನು ಮುಂದೂಡುವ ಪ್ರಸ್ತಾವನೆಯನ್ನು ಘನ ರಾಜ್ಯ ಚುನಾವಣಾ ಅಯೋಗಕ್ಕೆ ಸಲ್ಲಿಸಿದೆ. ಈ ಮಧ್ಯೆ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಬಗ್ಗೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಂದ ಅಭಿಪ್ರಾಯ ಕೇಳಿ ತುರ್ತು ಸುತ್ತೋಲೆ ಹೊರಡಿಸಿದೆ.

Contact Your\'s Advertisement; 9902492681

ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಇಡೀ ಜಿಲ್ಲಾಡಳಿತಕ್ಕೆ ಬಿಡುವು ಇಲ್ಲದಂತಾಗಿದೆ ಎನ್ನುವುದು ವಾಸ್ತವ. ಆದರೆ, ಈ ಪರಿಸ್ಥಿತಿಯು ಚುನಾವಣೆ ಮುಂದೂಡಲಕ್ಕೆ ಕಾರಣವಾಗಬಾರದು. ಸರ್ಕಾರದ ಒತ್ತಡಕ್ಕೆ ಮಣಿದು ಅಥವಾ ಸರ್ಕಾರಕ್ಕೆ ಪೂರಕವಾಗಿ ಜಿಲ್ಲಾಧಿಕಾರಿಗಳು ಅಭಿಪ್ರಾಯ ನೀಡಬಾರದು ಎನ್ನುವುದು ವೆಲ್ಫೇರ್ ಪಾರ್ಟಿಯ ಒತ್ತಾಯವಾಗಿದೆ. ಒಂದೊಮ್ಮೆ ಚುನಾವಣೆ ಮುಂದೂಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದರೆ ಆಡಳಿತ ಸಮಿತಿಯ ಬದಲು ಹಾಲಿ ಸದಸ್ಯರನ್ನು ಮುಂದುವರಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬುದು ನಮ್ಮ ಮನವಿಯಾಗಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಕನಿಷ್ಟ ಆರು ತಿಂಗಳು ಗ್ರಾಮ ಪಂಚಾಯಿತಿಗಳ ಚುನಾವಣೆ ಮುಂದೂಡುವುದು ಅನಿವಾರ್ಯವಾಗಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ. ಆದರೆ, ಇದಕ್ಕೆ ಪರ್ಯಾಯವಾಗಿ ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಕ ಮಾಡುವುದು ಸೂಕ್ತವಲ್ಲ. ಅಲ್ಲದೇ ಸರ್ಕಾರದ ಈ ಧೋರಣೆ ಸಂವಿಧಾನ ಮತ್ತು ಪಂಚಾಯತ್‍ರಾಜ್ ಕಾಯ್ದೆಯ ಆಶಯಗಳಿಗೆ ತದ್ವಿರುದ್ಧವಾಗಿದೆ. ಸರ್ಕಾರದ ಈ ನಡೆಯನ್ನು ವೇಲ್ಫೇರ್ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ಆಡಳಿತ ಸಮಿತಿಯ ಸದಸ್ಯರ ನಾಮನಿರ್ದೇಶನದ ವಿಚಾರದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ರಾಜ್ ಕಾಯ್ದೆ-1993ರ ಕಲಂ 80 ಅನ್ನು ರಾಜ್ಯ ಸರ್ಕಾರ ತನ್ನ ರಾಜಕೀಯ ಅನುಕೂಲಕ್ಕೆ ತಕ್ಕಂತೆ ವಿಶ್ಲೇಷಿಸುತ್ತಿದೆ.

ಅಲ್ಲದೇ ಕಲಂ 321ನ್ನು ಸರ್ಕಾರ ಸ್ಪಷ್ಟವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಕೋವಿಡ್-19 ನಿರ್ವಹಣೆ ದೃಷ್ಟಿಯಿಂದ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಹೊಣೆಗಾರಿಕೆ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಚುನಾಯಿತ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸಿದರೆ ಅಥವಾ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಂತೆ ಮಾಡಿ ಅದರ ಬದಲಿಗೆ ಆಡಳಿತ ಸಮಿತಿ ಇಲ್ಲವೇ ಆಡಳಿತಾಧಿಕಾರಿಗಳ ವ್ಯವಸ್ಥೆ ಜಾರಿಗೆ ತಂದರೆ ಕೋವಿಡ್-19 ನಿರ್ವಹಣೆಗೆ ಸಮರ್ಪಕ ವ್ಯವಸ್ಥೆ ಇಲ್ಲದೆ ಗ್ರಾಮೀಣ ಪ್ರದೇಶಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಇದರಿಂದಾಗುವ ಸಮಸ್ಯೆ, ಅನಾನುಕೂಲತೆಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಮೇಲೆ ವಿವರಿಸಿದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗಳನ್ನು ಕನಿಷ್ಟ 6 ತಿಂಗಳ ಕಾಲ ಮುಂದೂಡಬೇಕು ಎಂಬ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಚುನಾವಣಾ ಆಯೋಗ ಮಾನ್ಯತೆ ಕೊಡಬಾರದು. ಒಂದೊಮ್ಮೆ ಚುನಾವಣೆ ಮುಂದೂಡುವುದು ಅನಿವಾರ್ಯವಾದಲ್ಲಿ ಆಡಳಿತ ಸಮಿತಿ ಸದಸ್ಯರು ಅಥವಾ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬದಲು ಈಗಿರುವ ಚುನಾಯಿತ ಸದಸ್ಯರ ಅವಧಿಯನ್ನು 6 ತಿಂಗಳವರೆಗೆ ವಿಸ್ತರಿಸಬೇಕು.

ಈ ವಿಚಾರದಲ್ಲಿ ಚುನಾವಣಾ ಆಯೋಗ ತನಗೆ ದತ್ತವಾಗಿರುವ ಸಂವಿಧಾನಬದ್ಧ ಹಾಗೂ ಶಾಸನಬದ್ಧ ಅಧಿಕಾರವನ್ನು ಚಲಾಯಿಸಬೇಕು ಜೊತೆಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುವ ಎಲ್ಲಾ ಅವಕಾಶಗಳ ಬಗ್ಗೆ ರಾಜ್ಯ ಸರ್ಕಾರ ಪ್ರಾಮಾಣಿಕ ಪರಿಶೀಲನೆ ನಡೆಸಬೇಕು. ಚುನಾವಣೆ ಮುಂದೂಡಿ ಆಡಳಿತ ಸಮಿತಿ ನೇಮಕ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು ಎಂದು ವೇಲ್ಫೇರ್ ಪಾರ್ಟಿ ತಮ್ಮ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಸೈಯದ್ ಅಬ್ದುಲ್ ಬಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್ ಚಿತಾಪುರ, ಕಲಬುರ್ಗಿ ವಿಧಾನಸಭಾ ಕ್ಷೇತ್ರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಮುಬಿನ್ ಅಹ್ಮದ್, ಮುಖಂಡ ಸೈಯದ್ ಮುನೀರ್ ಹಾಷ್ಮಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here