ಕಲಬುರಗಿ: ಅಳಂದ ತಾಲ್ಲೂಕಿನ ಭೂಸನೂರ್ ಎನ್.ಎಸ್.ಎಲ್. ಶುಗರ್ ಕಾರ್ಖಾನೆ ಮೇಲೆ 19 ರಂದು ಕೆಲ ರೈತರು ಹಣ ಪಾವತಿಗಾಗಿ ಕಾರ್ಖಾನೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿಂಬರ್ಗಾ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
19 ರಂದು ಕಬ್ಬಿನ ಹಣ ಪಾವತಿಗಾಗಿ 5-6 ಜನ ರಾತ್ರೋ ತಾತ್ರಿ ಕಾರ್ಖಾನೆಗೆ ನುಗ್ಗಿ ದಾಂಧಲೆ ನಡೆಸಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ, ಕಾರ್ಖಾನೆಯ ಪಿಠೋಪಕರಣಗಳನ್ನು ಧ್ವಂಸ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರ ರೈತ ಮುಖಂಡ ಧರ್ಮರಾಜ್ ಸಾಹು ತನ್ನ ಮೇಲೆಯೂ ಹಲ್ಲೆ ನಡೆದಿದೆ ಎಂದು ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಆರೋಪ ಮಾಡುತ್ತಿದ್ದು, ಸಾಹು ಸದ್ಯ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈತರ ಕಬ್ಬಿನ ಹಣ ಯಾವುದೇ ಬಾಕಿ ಉಳದಿಲ್ಲ. ಕೆಲವು ರೈತರ 500-600 ಬಾಕಿ ಮಾತ್ರ ಉಳದಿದೆ. ಬಾಕಿ ಉಳಿದ ಹಣವನ್ನು ರೈತರಿಗೆ ಹಂತ ಹಂತವಾಗಿ ಪಾವತಿ ಮಾಡಲಾಗುತ್ತಿದ್ದು, ಬಹುತೇಕ ರೈತರಿಗೆ ಹಣ ಸಂದಾಯವಾಗುತ್ತಿದೆ.
– ಸಂಗಮೇಶ್ ಸ್ಥವರಮಠ, ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆ ಅಡಳಿತ ಲೀಗಲ್ ಅಧಿಕಾರಿ.
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ ಕಳೆದ ನಾಲ್ಕಾರು ವರ್ಷಗಳಿಂದ ವಿಳಂಬವಾಗುತ್ತಿದ್ದು, ಇದನ್ನೇ ಭಾರೀ ಪ್ರಚಾರದ ನೆಪ ಮಾಡಿಕೊಂಡು ಮತ್ತಷ್ಟು ವಿಳಂಬ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಕಬ್ಬು ಬೆಳೆಗಾರರು ಆರೋಪಿಸಿದ್ದಾರಲ್ಲದೇ ಬಾಕಿ ಹಣ ಪಾವತಿಯಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.