ಬಿಸಿ ಬಿಸಿ ಸುದ್ದಿ

ಗ್ರಾಮಗಳ ಅವೈಜ್ಞಾನಿಕ ಹಂಚಿಕೆಗೆ ಶಾಸಕ ಪ್ರಿಯಾಂಕ್ ಖರ್ಗೆ ವಿರೋಧ, ಕಂದಾಯ ಮಂತ್ರಿಗೆ ಆಕ್ಷೇಪಣೆ ಪತ್ರ ಸಲ್ಲಿಕೆ

ಕಲಬುರಗಿ: ಈ ಹಿಂದಿನ ಅಧಿಸೂಚನೆಯನ್ನು ಬದಿಗೊತ್ತಿ ಚಿತ್ತಾಪುರ ತಾಲೂಕಿನ19 ಗ್ರಾಮಗಳನ್ನು ಶಹಾಬಾದ್ ಹಾಗೂ ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡುವ ಸರಕಾರದ ಕ್ರಮಕ್ಕೆ ಶಾಸಕರಾದ ಪ್ರಿಯಾಂಕ್ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಕಂದಾಯ ಸಚಿವರಾದ ಆರ್.‌ಅಶೋಕ್ ಅವರಿಗೆ ಪತ್ರ ಬರೆದು ಆಕ್ಷೇಪಣೆ ಸಲ್ಲಿಸಿದ್ದಾರೆ.

2018 ರಲ್ಲಿ ಅಂದಿನ ಸರಕಾರ ಸಮಿತಿಗಳ ವರದಿ ಮತ್ತು ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯದಂತರ ಅಧಿಸೂಚನೆ ಹೊರಡಿಸುವ ಮೂಲಕ ( ಸಂಖ್ಯೆ/ಆರ್ ಡಿ/ ಭೂದಾಪು 2017, ದಿನಾಂಕ: 30.01.2018 ) ಚಿತ್ತಾಪುರ ಹಾಗೂ ಚಿಂಚೋಳಿ ತಾಲೂಕನ್ನ ವಿಂಗಡಿಸಿ ನೂತನ ಶಹಾಬಾದ್ ಮತ್ತು ಕಾಳಗಿ ತಾಲೂಕುಗಳನ್ನು ಘೋಷಿಸಿತ್ತು. ಅದರ ಅನ್ವಯ 82 ಗ್ರಾಮಗಳು ಚಿತ್ತಾಪುರ ತಾಲೂಖಿನ ವ್ಯಾಪ್ತಿಗೆ ಒಳಪಡುತ್ತಿದ್ದವು.

ಆದರೆ, ಈಗಿನ ಸರಕಾರ ಈ‌ ಹಿಂದಿನ ಅಧಿಸೂಚನೆಯನ್ನು ಬದಿಗೊತ್ತಿ ಏಕಾಏಕಿ ದಿನಾಂಕ: 07.03.2020 ಹಾಗೂ 15.04.2020 ರಂದು ಸರಕಾರದ ಪತ್ರ ಸಂಖ್ಯೆ/ ಕಂಇ 02/ ಎಲ್ ಆರ್ ಡಿ-2019 ಬರೆದು ಚಿತ್ತಾಪುರ ತಾಲೂಕಿನ 12 ಗ್ರಾಮಗಳನ್ನು ಕಾಳಗಿ ತಾಲೂಕಿಗೆ ಹಾಗೂ 7 ಗ್ರಾಮಗಳನ್ನು ಶಹಾಬಾದ್ ತಾಲೂಕಿಗೆ ಸೇರಿಸಿ ಕರಡು ಅಧಿಸೂಚನೆ ಮತ್ತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿ. ಅದರಂತೆ ಅವರಿಂದ ವರದಿ ತರಿಸಿಕೊಳ್ಳಲಾಗಿದೆ.

ಆ ನಂತರ ದಿನಾಂಕ 30.05.2020 ರಂದು ಸರಕಾರ‌ ಕರಡು ಅಧಿಸೂಚನೆ ಹೊರಡಿಸಿ‌ ಚಿತ್ತಾಪುರ ತಾಲೂಕಿನ12 ಗ್ರಾಮಗಳನ್ನು ಕಾಳಗಿ ತಾಲೂಕಿಗೆ ಹಾಗೂ 7 ಗ್ರಾಮಗಳನ್ನು ಶಹಾಬಾದ್ ತಾಲೂಕಿಗೆ ಸೇರಿಸಿ, ಸಾರ್ವಜನಿಕರಿಂದ ಏಮಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಲು 30.06.2020 ನಿಗದಿಪಡಿಸಲಾಗಿದೆ. ಹಾಗಾಗಿ ಈ ಕೆಳಗಿನ ಅಂಶಗಳನ್ನು ಒಳಗೊಂಡ ಆಕ್ಷೇಪಣೆಯನ್ನು ಕಂದಾಯ ಸಚಿವರಿಗೆ ಕಳಿಸಲಾಗಿದೆ ಎಂದು ಶ್ರೀಯುತ ಪ್ರಿಯಾಂಕ್ ಖರ್ಗೆ ಅವರು ವಿವರಿಸಿದ್ದಾರೆ

ಆಕ್ಷೇಪಣೆಗಳು.

1. ಕಾಳಗಿ ಹಾಗೂ ಶಹಾಬಾದ್ ತಾಲೂಕಿಗೆ ಚಿತ್ತಾಪುರ ತಾಲೂಕಿನಿಂದ ಗ್ರಾಮಗಳನ್ನು ಸೇರಿಸುವುದಕ್ಕೆ ಮುನ್ನ ಚುನಾಯಿತ ಪ್ರತಿನಿಧಿಗಳ ಸಲಹೆ ಹಾಗೂ ಅಭಿಪ್ರಾಯ ಸಂಗ್ರಹಿಸಿರುವುದಿಲ್ಲ.

2. ಹೆಚ್ಚುವರಿಯಾಗಿ ಸೇರ್ಪಡೆಯಾಗುವ ಗ್ರಾಮಗಳಿಗೆ ಸಂಬಂಧಿಸಿದ ಪಂಚಾಯತಿಯಿಂದ ಯಾವುದೇ ಠರಾವು ಪಾಸ್ ಮಾಡಿರುವುದಿಲ್ಲ‌.

3. ಕಾಳಗಿ ತಾಲೂಕು ಕಲಬುರಗಿ ಉಪವಿಭಾಗಕ್ಕೆ ಸೇರ್ಪಡೆ ಮಾಡಿರುವುದರಿಂದಾಗಿ, ಈಗ ಹೆಚ್ಚುವರಿಯಾಗಿ ಸೇರ್ಪಡೆಯಾಗುವ ಗ್ರಾಮಗಳು ಸೇಡಂ ಉಪವಿಭಾಗಕ್ಕೆ ಸೇರಿದ್ದಲ್ಲದೇ ಸೇಡಂ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲಿವೆ. ಈ ಗ್ರಾಮಗಳಿಂದ ಕಲಬುರಗಿ ದೂರದಲ್ಲಿದ್ದು ಸರಕಾರದ ಈ ಅವೈಜ್ಞಾನಿಕ ಹಂಚಿಕೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿ ಬರಬಹುದು.

4. ಚಿತ್ತಾಪುರ ಮತಕ್ಷೇತ್ರದ ಹಳ್ಳಿಗಳು ಹರಿದು‌ ಮೂರು ತಾಲೂಕಿಗೆ ಹಂಚಿಹೋಗುವುದರಿಂದ ಆಡಳಿತಾತ್ಮಕ ಅನುದಾನ ಹಂಚಿಕೆ, ಸಮಿತಿಗಳ ಸಭೆ ಜರುಗಿಸುವುದು ಹಾಗೂ ಮೂರು ತಾಲೂಕಿನ‌ ಅಧಿಕಾರಿಗಳ ಸಂಪರ್ಕ ಸಾಧಿಸಿ ಅಭಿವೃದ್ದಿಪಡಿಸುವುದು ಕಷ್ಟಸಾಧ್ಯ ಆಗಲಿದೆ.

5. ಚಿತ್ತಾಪುರ ಮತಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಿಂದ ಸಧ್ಯ ಕಾಳಗಿ ತಾಲೂಕಿನ 11 ಮತ್ತು ಶಹಾಬಾದ್ ತಾಲೂಕಿನ 05 ಗ್ರಾಮಗಳನ್ನು ಹಾಗೂ ಚಿತ್ತಾಪುರ ತಾಲೂಕಿನ 81 ಗ್ರಾಮಗಳನ್ನು ಸೇರಿಸಿ‌ಬಿಟ್ಟು. ತಾಲೂಕಿನ ಒಟ್ಟು 97 ಗ್ರಾಮಗಳ ಅಭಿವೃದ್ದಿ‌ ಕಾರ್ಯವನ್ನು ಕೈಗೆತ್ತಿಕೊಳ್ಳುವುದರಿಂದಾ ಆಡಳಿತಾತ್ಮಕ‌ ದೃಷ್ಟಿಯಿಂದ ಅನುಕೂಲವಾಗಲಿದೆ.

ಈ ಮೇಲಿನ ಎಲ್ಲ ಅಂಕಿ‌ಅಂಶಗಳನ್ನು ಪರಿಗಣಿಸಿ ಗ್ರಾಮಗಳನ್ನು ವಿಂಗಡಣೆ ಮಾಡಿದರೆ ಗ್ರಾಮಗಳ ಅಭಿವೃಧ್ಧಿ ಕುಂಠಿತವಾಗಲಿದೆ.ಜೊತೆಗೆ ಸದರಿ ಗ್ರಾಮಗಳ ಸಾರ್ವಜನಿಕರು ಸರಕಾರಿ ಇಲಾಖೆಗಳ ಕೆಲಸಕ್ಕಾಗಿ ತಾಲೂಕು ಕಚೇರಿಗಳನ್ನು ಅಲೆಯುವಂತೆ ಮಾಡುತ್ತದೆ ಎಂದು ಶಾಸಕರು ತಮ್ಮ ಪತ್ರದಲ್ಲಿ‌ ಸ್ಪಷ್ಟವಾಗಿ‌ ಉಲ್ಲೇಖಿಸಿದ್ದಾರೆ. ಹಾಗಾಗಿ ರಾಜ್ಯ ಸರಕಾರ ಅಧಿಸೂಚನೆಯನ್ನು ರದ್ದುಪಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಕಾಳಗಿ ತಾಲೂಕಿನ 11 ಗ್ರಾಮಗಳನ್ನು ಹಾಗೂ ಶಹಾಬಾದ್ ತಾಲೂಕಿನ 5 ಗ್ರಾಮಗಳನ್ನು ಚಿತ್ತಾಪುರ ತಾಲೂಕಿಗೆ ಸೇರಿಸಬೇಕೆಂದು ಅವರು ಕೋರಿದ್ದಾರೆ.

emedialine