ಸಣ್ಣದೊಂದು ಮಳೆ ಬಂದರೆ ಸಾಕು., ಯಡ್ರಾಮಿಯ ಲಿಂಬೆ ತೋಟಗಳ ಸರಹದ್ದಿನ ತೊರೆಸಾಲು ತುಂಬಿ ಹರಿಯುತ್ತಿತ್ತು. ಆ ಲಂಡೇನಹಳ್ಳಕ್ಕೀಗ ಅಸ್ತಿತ್ವವೇ ಇಲ್ಲ. ಕುಕನೂರು ದಾರಿಯ ವಾರಿಯಿಂದ ಭೋರ್ಗರೆದು ಬರುವ ನೀರಿನ ಸೆಳೆತದ ಲಂಡೇನಹಳ್ಳ ಎಂದರೆ ಎಂಥವರಿಗೂ ವಡ್ಡ ಮುರಿದು ಹರಿದು ಹೋಗುವ ಯಮ ಗಾಬರಿ ಹುಟ್ಟಿಸುವಂಥದ್ದು.
ಬಾವಾಗೋಳ ತೆಕ್ಕೆಯ ಗಿರಕಿ ಬಾವಿ ದಾರಿಗುಂಟ, ಹುಣಸೇ ಮರಗಳ ತೋಪಿನ ಸೀಳು ಜಾಡು ಹಿಡಿದು ಬಂದು.. ತುಸು ಕೆಳಗಿಳಿದರೆ ಸಾಕು ಲಂಡೇನಹಳ್ಳದ ತೊರೆಸಾಲು.. ಕಡ್ಲೆಪ್ಪನ ಬಾವಿಗುಂಟ ಸಾಲು ಸಾಲು ತುಂಬಿ ಹರಿವ ಮಟ್ಟಿ (ಕಪಿಲೆ) ಬಾವಿಗಳು.
ಒಮ್ಮೊಮ್ಮೆ ಆರಂಭದ ಮೃಗಶಿರ ಮಳೆಗೆ ಅದು ತುಂಬಿ ಹರಿದು ಗಂಟೆಯೊಳಗೆ ಖಾಲಿಯಾಗುವಂತಹ ಗುಣವುಳ್ಳ ಸಣ್ಣ ಹಳ್ಳವದು. ಖಾಲಿಯಾದಾಗ ಅದು ಬಯಲು ಶೌಚಕ್ಕೆ ಹೇಳಿ ಮಾಡಿಸಿದ ಜಾಗ.
ಬೇಸಿಗೆಯಲ್ಲಿ ಅರ್ಧ ಮೈಲುದ್ದಕ್ಕು ತಂಪನೆಯ ನೆರಳು. ಹಳ್ಳದ ಎಡ ಬಲಕ್ಕು ಲಿಂಬೆ ತೋಟಗಳದೇ ಮೇಲುಗೈಯಾದರೂ ಹುಣಸೆ, ಪೇರಲ, ಬೋರೆ, ಬಾಳೆಹಣ್ಣು… ಹೀಗೆ ದಟ್ಟ ತೋಟಗಳ ಬೇಲಿ ಸಾಲುಗಳ ಮೇಲೆ ತೊಂಡೆ ಹಣ್ಣು ಬಳ್ಳಿಗಳ ಸಾಲು ಸಾಲು ಸಂಭ್ರಮ. ಜತೆಗೆ ತೋಟದ ಮಡಿಗಳಲ್ಲಿ ತರಹೇವಾರಿ ತರಕಾರಿ ಕಾಯಿಪಲ್ಯಗಳ ಗಮಗಮ.
ಹಗಲಲ್ಲೇ ನಸುಗಪ್ಪಿನ ತಂಪುಗತ್ತಲೆ ಅಲ್ಲಿ. ತಂಪುಗತ್ತಲೆಯ ಹಗಲಲ್ಲೇ ಪಡ್ಡೆ ಪೋರ ಪೋರಿಯರ ಗುದುಮುರಗಿ. ಅದೇನೋ ಜೀ..ಜೀ..ಜೀಂಗುಡುವ ಜಿನುಗು ಸೌಂಡು. ಆಹಾ! ಕುಹೂ.. ಕುಹೂ.. ಕೋಗಿಲೆಗಳ ಇನಿದನಿಯ ಇಂಪು.. ಕೆಂಪು ಹಳ್ಳದ ಕಡೆಯ ಮೂಲೆವರೆಗು ಅದನು ಕೇಳುವ ಖುಷ್ ಖುಷಿ… ಅದು ಹಾಗೇ ಮಾಳೀಗಡ್ಡಿವರೆಗೆ ಹರಿದು ಹೋಗುವ ಹಂದರದ ಹಳ್ಳ.
ಇತ್ತ… ಊರುಕಡೆ ಬಸವಣ್ಣ ದೇವರ ಬಾವಿ… ಕಣ್ಣಳತೆಯಲ್ಲಿ ತುಂಬಿ ತುಳುಕುವ ರಾಮತೀರ್ಥ… ಬಾಜೂಕೆ ಲಕ್ಷ್ಮಣ ತೀರ್ಥ. ಹೀಗೆ ಈ ಹಳ್ಳ ಪರಿಸರದ ಸೊಬಗು, ಸೊಗಡು, ನನ್ನಲ್ಲಿ ಆಗ ನೂರು ನವಿಲಿನ ಲಾಲಿತ್ಯ ಹುಟ್ಟಿಸಿದ್ದಂತೂ ಖರೇ. ಮುಳ್ಳು ಬೇಲಿಗಳ ಮೇಲೆ ದಟ್ಟಗೆ ಹಬ್ಬಿಕೊಂಡ ಹತ್ತು ಹಲವು ಬಗೆಯ ಹಸಿರು ಬಳ್ಳಿಸಾಲುಗಳಲ್ಲಿ ಹಸಿರು ಹಾವುಗಳ ಸಾಮ್ರಾಜ್ಯ. ಆದರೆ ಸುಡುವ ಕಡು ಬೇಸಿಗೆಯಲಿ ಹಳ್ಳದ ಜಾಡೆಲ್ಲ ಬಯಲುಕಡೆಯದೇ ಪರಿಮಳ.
ಅಂದಿನ ಕೆಳ ಬಜಾರದ ಪಂಚಾಯ್ತಿ ಪಕ್ಕದ ಸಂಕೇಶ್ವರ ಮರಗಳ ನೆರಳಿನ ನಮ್ಮ ಸಾಲೀಗುಡಿಯ ಗಂಟೆ, ಮಳೆ ಮೋಡಗಳಿಗೆ ಬೆದರಿ ಬೇಗ,ಬೇಗ ಬಡಕೊಂಡರೆ ನಮಗಂತೂ ಎಲ್ಲಿಲ್ಲದ ಖುಷಿ.
ನಮ್ಮೂರಿಗೆ ದೀಡು ಹರದಾರಿ ದೂರವನ್ನು ನಡಕೊಂಡೇ ಹೋಗಬೇಕು. ನಿಗಿ ನಿಗಿ ಕೆಂಡದ ಬೇಸಿಗೆಯಲ್ಲಿ ಮಾಲೀಗೌಡರ ಬಾವಿಯ ಪಾವಟಿಗಳಲ್ಲಿಳಿದು ನೀರು ಕುಡಿಯುವುದು ಚಿಕ್ಕವರಾದ ನಮಗದು ಅಕ್ಷರಶಃ ಸಾಹಸದ ಕೆಲಸವೇ ಸೈ !
ತೋಟಗಳಿಂದ ಕಡಿದು ಹಾಕಿದ ಬಾಳೆ ದಿಂಡು, ಕಂದು ತೊಗಟೆಗಳನ್ನು ಅಂಗಾಲುಗಳಿಗೆ ಸುತ್ತಿಕೊಂಡು ಪಾದರಕ್ಷೆ ಮಾಡಿಕೊಳ್ತಿದ್ವಿ. ಕೆಂಡದ ಬೇಸಿಗೆಯಲಿ ಸಿಮೆಂಟಿನಂತಹ ದುಮ್ಮಣ್ಣಿನ ದಾರಿಯಲಿ ಬರಿಗಾಲಲಿ ನಡೆಯುತ್ತಿದ್ದರೆ ಪಾದಕಿತ್ತಿ ಬಾಯೊಳಗೆ ತುರುಕಿಕೊಳ್ಳ ಬೇಕನಿಸುತ್ತಿತ್ತು. ಕಾಲುಬೇನೆ ಬಂದ ಎತ್ತುಗಳನ್ನು ಅಂತಹ ಸುಡು ಸುಡುವ ದುಮ್ಮಣ್ಣ ದಾರಿಯಲಿ ತಿರುಗಾಡಿಸಿದರೆ ಕಾಲುಬೇನೆ ನೆಟ್ಟಗಾಗುತ್ತಿತ್ತೆಂಬ ಪ್ರತೀತಿ.
ಮೂರನೇ ಈಯತ್ತೆಯಿಂದ ಮೆಟ್ರಿಕ್ ಪರೀಕ್ಷೆ ಪಾಸು ಮಾಡುವವರೆಗೆ ಎಂಟು ವರುಷಗಳ ಕಾಲ ಯಡ್ರಾಮಿಯಲ್ಲಿ ಕಳೆದ ದಿನಗಳು ನನಗಿನ್ನೂ ಹಚ್ಚ ಹಸಿರಾಗಿವೆ. ಅದು ಹಳವಂಡವೆಂದಾದರೂ ಅಂದು ಕೊಳ್ಳಿ… ನನಗದು ಜೀವದುಸಿರಿನ ದಿವಿನಾದ ನೆನಹು.
ಇಂದು ವಾತಾನುಕೂಲಿ ರೈಲು ಪ್ರಯಾಣದಲ್ಲಿರುವೆ. ಕಳೆದು ಹೋದ ಬಾಲ್ಯದ ಆ ಎಲ್ಲವನ್ನು ಜತನ ಮಾಡಿಟ್ಟುಕೊಂಡಿರುವ ನನ್ನ ನೆನಹುಗಳಿಗೆ ಸಾವಿಲ್ಲ. ಸದ್ಯಕ್ಕೆ ಈ ಹಳ್ಳದ ನೆನಹು ಸುಡುವ ಬಿರು ಬೇಸಿಗೆಯಲಿ ಅಲ್ಲಿನ ನನ್ನವರೂ ತಣ್ಣಗಿರಲೆಂದು ಈ ಪುಟ್ಟ ಟಿಪ್ಪಣಿ…
-ಮಲ್ಲಿಕಾರ್ಜುನ ಕಡಕೋಳ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…