ಅಪ್ಪ ಸತ್ತಾಗ ನಮಗೆ ಏನು ಮಾಡಬೇಕೋ ಹೊಳೆಯಲೇ ಇಲ್ಲ. ಕಷ್ಟವೆಂಬುದೇ ಗೊತ್ತಿರದ ನಮಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅಪ್ಪನ ಜೊತೆಗಿನ ಆ ನಲ್ವತ್ತು ವರ್ಷಗಳು ಹೇಗೆ ಕಳೆದಿದ್ದವೋ ಗೊತ್ತೇ ಆಗಿರಲಿಲ್ಲ. ನಾನು ಹುಟ್ಟುವ ಮುಂಚೆಯೇ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪಾಟೀಲ ಪುಟ್ಟಪ್ಪನವರ ಪ್ರಪಂಚದಲ್ಲಿ ಅವರು ತಮ್ಮ ಬರವಣಿಗೆಯಲ್ಲಿ ತೊಡಗಿದ್ದರು. ಹೀಗಾಗಿ ಅವರು ಹೆಚ್ಚು ಸಮಯ ಜನರ ಮಧ್ಯೆ ಮತ್ತು ಮಣಭಾರದ ಸಂಸಾರ ಸಾಗಿಸುವುದರಲ್ಲೇ ಕಳೆದಿದ್ದರು.
ಅಪ್ಪ ನಮ್ಮೊಂದಿಗೆ ಕಾಲ ಕಳೆದದ್ದು ಕಡಿಮೆ ಸಮಯವಾದರೂ, ನನಗೆ ತಿಳಿವಳಿಕೆ ಬಂದಾಗಿನಿಂದ ಅವರ ಜೊತೆಗೆ ನನ್ನ ತಿಕ್ಕಾಟ ನಡೆದಿರುತ್ತಿತ್ತು. ನಮ್ಮ ಶಿಕ್ಷಣ ಹಾಗೂ ಭವಿಷ್ಯದ ಬಗ್ಗೆ ಅವರಿಗೆ ಚಿಂತೆಯೇ ಇರಲಿಲ್ಲ ಎನ್ನುವಂತೆ ವರ್ತಿಸುತ್ತಿದ್ದ ಅವರ ನಡೆ ನಮಗೆ ತಪ್ಪಾಗಿ ಕಂಡು ಬರುತ್ತಿತ್ತು. ಅವರು ಮೇಲ್ನೋಟಕ್ಕೆ ನಮಗೆ ಕಾಳಜಿ, ಕಕ್ಕುಲಾತಿ ತೋರದಂತೆ ಕಂಡು ಬಂದರೂ ಸದಾ ನಮ್ಮ ಬಗ್ಗೆಯೇ ಚಿಂತೆ ಇರುತ್ತಿತ್ತು ಎಂಬುದು ಇತರರಿಂದ ನಮಗೆ ತಿಳಿದು ಬರುತ್ತಿತ್ತು.
ಶಿಕ್ಷಕ ವೃತ್ತಿಯ ಜೊತೆಗೆ ಪ್ರಪಂಚ, ಲಂಕೇಶ್ ಪತ್ರಿಕೆ, ಅಗ್ನಿ ಅಂಕುರ, ಬಸವ ಮಾರ್ಗದ ಬರವಣಿಗೆ, ರೈತ ಸಂಘ, ಪ್ರಗತಿರಂಗ, ಮನೆಯಲ್ಲಿ ಮಹಾಮನೆ ಮುಂತಾದ ಹೋರಾಟ ಹಾಗೂ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರು, ಮನೆಯಲ್ಲಿ ಇರುವುದೇ ಕಡಿಮೆಯಾಗಿತ್ತು. ಸದಾ ಒಂದಿಲ್ಲ ಒಂದು ಊರು, ಒಂದಿಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿರುತ್ತಿದ್ದರು. ತಾವು ನಂಬಿದ ವಿಚಾರಗಳಂತೆ ಬದುಕಿನುದ್ದಕ್ಕೂ ನಡೆದುಕೊಂಡರು. ಸುಳ್ಳು, ಮೈಗಳ್ಳತನ, ಭ್ರಷ್ಟತೆ ಕಂಡರೆ ಅವರಿಗೆ ಆಗುತ್ತಿರಲಿಲ್ಲ! ಹೇಳಿ ಕೇಳಿ ನಾನು ಮೈಗಳ್ಳನಾಗಿರುವುದರಿಂದ “ಕಳ್ಳರನ್ನು ನಂಬಬೇಕು; ಆದರೆ ಮೈಗಳ್ಳರನ್ನು ನಂಬಬಾರದು” ಎಂದು ನನಗೆ ಆಗಾಗ ಬೈಯುತ್ತಿದ್ದರು.
ಅವರು ನಮಗೆ ಎಂದಿಗೂ ಬೋಧಿಸಲಿಲ್ಲ. ಕೈ, ಬಾಯಿ, ಕಚ್ಚೆ ಶುದ್ಧವಾಗಿಟ್ಟುಕೊಳ್ಳಬೇಕು. ಯಾರಿಗೂ ಅನ್ಯಾಯ, ಮೋಸ, ವಂಚನೆ ಮಾಡಬಾರದು. ಅಹಂಕಾರ ಮನುಷ್ಯನಿಗೆ ಒಳ್ಳೆಯದಲ್ಲ. ಸದುವಿನಯ ಸಂಪನ್ನರಾಗಿ ಬದುಕಬೇಕು ಎಂಬುದನ್ನು ಅವರು ಕಲಿಸಿಕೊಟ್ಟರು. ನಾನು ಎಂ.ಎ. (ಕನ್ನಡ) ಓದಿ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿದ್ದಾಗ, ಪ್ರಜಾವಾಣಿ ಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ಮಾಡುವುದು, ಅಲ್ಲಲ್ಲಿ ಭಾಷಣ ಮಾಡುವುದನ್ನು ಕಂಡು-ಕೇಳಿ ಖುಷಿ ಪಡುತ್ತಿದ್ದರು. ಆದರೆ ಅದನ್ನು ನಮ್ಮೆದುರು ಎಂದಿಗೂ ತೋರಗೊಡುತ್ತಿರಲಿಲ್ಲ. ಇಂತಹ ಅಪ್ಪ ಒಮ್ಮೆ ನನ್ನೊಂದಿಗೆ ಫೋನ್‌ನಲ್ಲಿ ಮಾತಾಡಿದ. ಅದನ್ನು ಉದಾಹರಣೆಯೊಂದಿಗೆ ವಿವರಿಸಬೇಕೆಂದರೆ;
ಹಿಂದೊಮ್ಮೆ (2009-10 ಎಂದು ಕಾಣುತ್ತದೆ) ಶಿಕ್ಷಕರ ಕ್ಷೇತ್ರದ ಎಂ.ಎಲ್.ಸಿ. ಚುನಾವಣೆಯ ಕಾಲ ಅದು. ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ನಡೆಯುವುದಿತ್ತು. ಪ್ರಜಾವಾಣಿ ಪತ್ರಿಕೆಗಾಗಿ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯನ್ನು ಸಂದರ್ಶನ ಮಗಿಸಿ ಕೈ ಕುಲಕಿ ಬರುತ್ತಿರುವಾಗ, ಅವರ ಬಳಿ ಇರುವ ನನ್ನ ಮಿತ್ರ ಉಬ್ಬಿದ ಕವರ್‌ವೊಂದನ್ನು ಅವರಿಗೆ ಕೊಟ್ಟ. ಅವರು ಇದನ್ನು ನೀವು ತಗೊಳ್ಳಿ ಎಂದು ನನ್ನ ಕೈಗಿತ್ತರು. ನಾನು ಏನಿದು? ಇದರಲ್ಲೇನಿದೆ ಎಂದು ಕೇಳಿದೆ. ಏನಿಲ್ಲ, ಇದನ್ನು ನೀವು ಇಟ್ಟುಕೊಳ್ಳಿ ಎಂದರು. ತೆಗೆದು ನೋಡಿದರೆ ನೋಟಿನ ಕಂತೆ! ಇದೆಲ್ಲ ನನಗೆ ಬೇಡ, ನನಗೆ ನಮ್ಮ ಸಂಸ್ಥೆ ಸಂಬಳ ಕೊಡುತ್ತದೆ. ಬೇಕಿದ್ದರೆ ನೀವು ಜಾಹೀರಾತು ಕೊಡಬಹುದು ಎಂದು ಹೇಳಿದೆ. ಆದರೆ ಅವರು ಬಿಡಲಿಲ್ಲ. ಒತ್ತಾಯ ಮಾಡಿದರು. ಆಗ ನಾನು, ನೋಡಿ ಸರ್, ಪ್ರೀತಿಯಿದ್ದರೆ ಚಹಾ ಕುಡಿಯೋಣ, ಬೇಕಿದ್ದರೆ ನಿಮ್ಮ ಮನೆಗೆ ಬರುತ್ತೇನೆ. ನೀವು ನಮ್ಮ ಮನೆಗೆ ಬನ್ನಿ ಎಂದು ಹೇಳಿದೆ.
ಆಗ ಆ ಅಭ್ಯರ್ಥಿ ಟಿ ಪೈ ಮೇಲಿದ್ದ ನನ್ನ ವಿಜಿಟಿಂಗ್ ಕಾರ್ಡ್ ಕೈಗೆತ್ತಿಕೊಂಡು ಅದರ ಮೇಲೆ ಕಣ್ಣಾಡಿಸಿ ಸತ್ಯಂಪೇಟೆ ಲಿಂಗಣ್ಣ ನಿಮಗೆ ಏನಾಗಬೇಕು ಎಂದು ಕೇಳಿದರು. ಅವರು ನಮ್ಮ ತಂದೆಯವರು ಎಂದು ನಾನು ಹೇಳಿದೆ. ಕೂಡಲೇ ಕೈ ಹಿಡಿದ ಅವರು, ಐ ಆಮ್ ವೇರಿ ಸ್ವಾರಿ, ದಯವಿಟ್ಟು ತಪ್ಪು ತಿಳಿಯಬೇಡಿ. ನಾನು ಎಲ್ಲರಿಗೂ ಕೊಟ್ಟಂತೆ ನಿಮಗೂ ಕೊಟ್ಟೆ. ಇಡೀ ಈಶಾನ್ಯ ಕರ್ನಾಟಕದಲ್ಲಿ ದುಡ್ಡು ಒಲ್ಲೆ ಎಂದ ಮೊದಲ ಪತ್ರಕರ್ತ ನೀವೊಬ್ಬರೇ ಎಂದು ಹೇಳಿ ಕಳಿಸಿದರು.
ನಮ್ಮಿಬ್ಬರ ನಡುವೆ ನಡೆದ ಈ ವಿಷಯ ಕೇಳಿಸಿಕೊಂಡ ಅಪ್ಪ ನನಗೆ ಫೋನಾಯಿಸಿ “ನೀನು ನನ್ನ ಮಗ ಆಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ನೀನು ಹಣ ಗಳಿಸಿದರೆ, ಮನೆ ಕಟ್ಟಿದರೆ ಅಥವಾ ಕಾರ್ ತೆಗೆದುಕೊಂಡರೆ ನನಗೆ ಖುಷಿಯಾಗುತ್ತಿರಲಿಲ್ಲ. ನನಗೆ ಈಗ ಬಹಳ ಖುಷಿಯಾಗುತ್ತಿದೆ. ನೀನು ನನ್ನ ಹೆಸರು ಉಳಿಸಿದೆ” ಒಬ್ಬ ತಂದೆ ಮಕ್ಕಳಿಂದ ಬಯಸುವುದು ಇನ್ನೇನು? ಎಂದು ಅತ್ತ ಸಂತೋಷದಿಂದ ಅವರು ಬಿಕ್ಕಳಿಸುತ್ತಿದ್ದರು. ಇತ್ತ ನನ್ನ ಗಂಟಲು ಸಹ ಬಿಗಿಯಾಗಿ ಮಾತು ಹೊರಡದಾದವು. ನಮ್ಮಿಬ್ಬರ ನಡುವೆ ಆಗ ಮೌನವೇ ಮಡುಗಟ್ಟಿತ್ತು.
(ಕೃಪೆ: ಶರಣ ಮಾರ್ಗ, ಜುಲೈ-2020)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
View Comments
ಒಳ್ಳೆಯ ಅಷ್ಟೇ ಸತ್ಯವಾದ ಘಟನೆಗಳನ್ನು ಹೊಂದಿದ ಬರಹ ಗೆಳೆಯ ಮನತಟ್ಟಿತು.👌👍🤝🙏