ಮಾನವೀಯತೆಯ ಸ್ಪರ್ಶದಿಂದ  ಮೈದಡವಿದರು – ಲಿಂಗಣ್ಣ ಸತ್ಯಂಪೇಟೆ

0
148
ಮಾಡಿದೆನೆಂಬುದು ಮನದಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರಾ ಲಿಂಗಕ್ಕೆ
ಮಾಡಿದೆನೆನ್ನದಿರಾ ಜಂಗಮಕ್ಕೆ 
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದರೆಡೆ
ಬೇಡಿದ್ದನೀವ ನಮ್ಮ ಕೂಡಲಸಂಗಮದೇವ
ಎಂದವರು ಬಸವಣ್ಣ. ಮಾಡುವ ನೀಡುವ ಮನಸ್ಸುಳ್ಳವರು ತಾವೆಷ್ಟೇ ಸಂಕಷ್ಟದಲ್ಲಿದ್ದರೂ ಸಂತೋಷದಲ್ಲಿದ್ದರೂ ಎರೆಡನೂ ಸಮಸ್ಥಿತಿಯಲ್ಲಿ ಅನುಭವಿಸಿ ತಮ್ಮ ನುಡಿಗೆ ಬದ್ದರಾಗಿ ಮಾತು ಕೊಟ್ಟಂತೆ ಯಾರಿಗೂ ಅನ್ಯಾಯವಾಗದಂತೆ ಉದಾತ್ತತೆಯನ್ನು ತೋರುತ್ತಾರೆ. ಇದನ್ನ ವಚನಕ್ಕೆ ಬದ್ಧರಾಗಿರುವುದು ಎಂದರೂ ಇಲ್ಲೊಂದು  ಅನುಭಾವಿಕ ನೆಲೆಯ ಜೀವನ ಮಾರ್ಗವಿದೆ. ಮಾನವೀಯತೆಯ ಸ್ಪರ್ಶವಿದೆ.
ಇಂತದೇ. ಬಸವಣ್ಣನು ಕಲಿಸಿಕೊಟ್ಟಂತೆ ನಡೆಯೊಂದನ್ನು ಜಂಗಮವಾಗಿ ತೋರಿಸಿದವರು ಲಿಂಗಣ್ಣ ಸತ್ಯಂಪೇಟೆಯವರು. ಅವರನ್ನು ಅಣ್ಣನೆಂದು ಆದರಿಸುವುದೋ ಅಪ್ಪನೆಂದು ಗೌರವಿಸುವುದೋ ಶರಣರನುಭಾವದಲಿ ಲಿಂಗಕ್ಕೆ ಸಮರ್ಪಿಸಿಕೊಂಡ  ಚೇತನವಾಗಿದ್ದ ಲಿಂಗಣ್ಣನೆನ್ನುವುದೋ ತಿಳಿಯದೇ ತಲೆಬಾಗುವುದೊಂದೇ ಸಾಕು . ಸಣ್ಣವನೆಂದು ತಾನೇ ಶರಾ ಹಾಕಿಕೊಂಡು ದೊಡ್ಡವರ ಸಾಲಿನಲಿ ಶೂನ್ಯದೊಳಗೊಂದಾಗಿ ಹೊರಟು ಹೋದರೂ ಆ ಮೌನದಲ್ಲೂ  ತೋರಿದ ಮಾನವೀಯತೆ ಕರುಳು ಹಿಂಡುವುದು.
ಯಾಕೆಂದರೆ ಆ ದಿನ ನನಗೆ ಅಪ್ಯಾಯಮಾನವಾದ ದಿನ. ೨೦೦೭ ನೇ ಇಸ್ವಿ ಟಿಸಿಎಚ್ ಕಾಲೇಜಿನ ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಒಂದೂ ದೂರವಾಣಿ ಕರೆಯೂ ಮಾಡದೇ ಎದುರಿಗೆ ಅಚ್ಚ ಬಿಳಿಪಿನ ಹಸಿರು ದಡೆಯ ಮಕಮಲ್ಲ ಧೋತುರ ಅದೇ ಬಿಳಿ ಅಂಗಿ ಹಣೆಯ ಮೇಲೆ ವಿಭೂತಿ ಧಾರಿಯಾಗಿ ಬಂದು ನಿಂತರು ಲಿಂಗಣ್ಣ ಸತ್ಯಂಪೇಟೆ. ಅವರೊಂದಿಗೆ ಢಾಳವಾಗಿ ಭಸ್ಮ ಪೂಸಿತರಾಗಿ ನಿಂತಿದ್ದ ಡಾ,. ಗಂಗಮ್ಮ ಸತ್ಯಂಪೇಟೆ ಮತ್ತು ಅವರ ಮಗಳು. ಮೂವರನ್ನು ಕಂಡೊಡನೇ ನನಗೆ ಗಾಬರಿಯಾಗಲೀ ಆಶ್ಚರ್ಯವಾಗಲೀ ಆಗದೇ , ಸಂತೋಷ ಇಮ್ಮಡಿಸಿತು. ಕಾಲೇಜನ್ನೆಲ್ಲ ಸುತ್ತಾಡಿಸಿಕೊಂಡು ಬಂದೆ. ಹಸಿರು ಮಕಮಲ್ಲಿನ ಗಾರ್ಡನಲ್ಲಿ ಅಡ್ಡಾಡಿ ಬಂದರು. ತಾವು ಟಿಸಿಎಲ್ ಓದಿದ ಟ್ರೈನಿಂಗ್ ಪಡೆದ ದಿನಗಳನ್ನು ನೆನಪು ಮಾಡಿಕೊಂಡರು.
ನಂತರ ನಾವು ಇಂದು ಬಂದ ಕಾರಣ ಏನು ಗೊತ್ತೇನುರೀ ಎಂದರು. ನಾನು ಸುಮ್ಮನೇ ತಲೆ ಅಲ್ಲಾಡಿಸಿದೆ.  ಒಬ್ಬರ ಅಪ್ಪಣೆಯಾಯಿತು ಬಂದೆವು ಎಂದರು.ಕೂಡಲಸಂಗಮಕ್ಕೆ ಬರಬೇಕೆಂದು  ಕರೆದ ಅಣ್ಣ ಬಸವಣ್ಣ .ಬಂದು ಬಿಟ್ಟೆವು. ನಿಮಗೇ ಕೆಲಸದಲ್ಲಿ ತೊಂದರೆ ಇಲ್ಲವಾದರೆ ನಮ್ಮೊಂದಿಗೆ ಬರಬಹುದು ಎಂದಾಗ, ತೊಂದರೆ ಎಲ್ಲಿಯದು ತಮ್ಮಂತವರೊಂದಿಗೆ  ಈದಿನ ಕಳೆದರೆ ಶರಣರ ನಾಲ್ಕು ಅನುಭಾವದ ಮಾತುಗಳು ಎದೆ ಸೇರಿದರೆ ಮ್ಲಾನಗೊಂಡ ಮನಸ್ಸು ಒಪ್ಪವಾಗುವುದು ನಡೆಯಿರಿ ಎಂದು ನಾನು ನಡೆದೇ ಬಿಟ್ಟೆ
ನಾವು ಕೂಡಲ ಸಂಗಮನ ದರ್ಶನ ತೆಗೆದುಕೊಂಡು ಅಣ್ಣನ ಐಕ್ಯ ಮಂಟಪವ ಕಂಡು ಬಂದೆವು ನಂತರ  ಚಾಲಕ್ಯರಸಿರಿನಾಡಿನ ಗತ ವೈಭವನ್ನು ಕಾಣಲು ಹೊರಟಿದ್ದು.ರವಿಕೀರ್ತಿಯ ಶಾಸನ ಕಂಡು ಪಟ್ಟದ ಕಲ್ಲು ಸುತ್ತುವರೆದು ಐಹೊಳೆಯ ವಾಸ್ತುಶಿಲ್ಪಕೆ ಬೆರಗಾಗಿ ತಾಯಿ ಬನಶಂಕರಿಯ ಸನ್ನಿಧಿಗೆ ಬಂದೆವು. ಆಗಲೇ ಎರೆಡು ಗಂಟೆ. ಹಸಿವು , ಬಗಲಲ್ಲಿ ಬುತ್ತಿ ಇರಲಿಲ್ಲ. ಆದರೆ ಇನ್ನೂ ಮೇಣ ಬಸದಿ ನೋಡುವ  ಆತುರಕ್ಕೆ ಹಸಿವನ್ನು ಮರೆತು ಸಣ್ಣ ಮಕ್ಕಳಂತೆ ಲಲಿತಮ್ಮ ನಡೆ ಮೇಣ ಬಸದಿ ನೋಡಿಕೊಂಡು ಬರಾಣಾ ಎಂದರು. ಅಷ್ಟರಲ್ಲೇ ರೊಟ್ಟಿ ಕಾಳಿನ ಪಲ್ಲೆ ಮೊಸರು ಬುಟ್ಟಿಯ ತುಂಬ ತುಂಬಿಕೊಂಡ ಹಣ್ಣಾದ ವಯಸು ಮಾಗಿದರೂ ದುಡಿದು ತಿನ್ನುವ ಕಾಯಕದಲಿ ಬುತ್ತಿಬುಟ್ಟಿ ಹೊತ್ತವಳು ಎದುರಾಗಿ ನಿಂತಳು.
ಅಪ್ಪರ ನೋಡ್ರೀ ಈ ಊಟಾ ಮಾಡಿ ನೋಡರೀ. ಎಳ್ಳ ಹಚ್ಚಿದ ಸಜ್ಜಿ ರೊಟ್ಟಿನೂ ಅದಾವರೀ ಮತ್ತ ಬಿಳಿ ಜೋಳದ ರೊಟ್ಟಿನೂ ತಂದೇನ್ನಿ..! ಮೊಳಕೀ ಒಡೆದ ಕಾಳಿನ ಪಲ್ಲೆ ಮಾಡೇನ್ರಿ ಅಗಸೀ ಚಟ್ನೀ ಕುಳ್ಳಿ ಮೊಸರು ಜೋಳದ ಬಾನನೂ ತಂದೇನ್ರಿ ಊಟಾ ಮಾಡ್ರೀ ಇಂತಹ ಬಿಸಲಾಗ ಅದೇನೋ ಮೇಣ ಬಸದಿ ಹತ್ತೀರಿ..? ನೀವ ಮೆತ್ತಗ.. ಕಾಣತೀರೀ ಊಟ ಇರಲಾರದ..ಮೇಣದಂಗೀ ಕರಗೀರಿ. ಉಂಡು ಗಟ್ಟಾಗಿ ಹೋಗ್ರೀ ಎಂದಾಗ ಆ ತಾಯಿ ಕಳಕಳಿಗೆ ಅಣ್ಣ ಲಿಂಗಣ್ಣನವರು ಇತ್ತ ಉಣ್ಣಲೂ ಆಗದೇ ಅತ್ತ ಮೇಣ ಬಸದೀ ನೋಡಲು ಬಿಡಲೂ ಆಗದೇ ಒಂದು ಕ್ಷಣ ನಿಂತು, ನಂತರ ನೋಡಾ ನೀ ಹೇಳಿದ್ದ ಮೇಲೆ ನನಗೂ ನಿನ್ನ ರೊಟ್ಟಿ ಉಣಬೇಕ ಅನಿಸಿತು.  ಆದರೆ ನಾವು ಜಲ್ದಿ ನೋಡಕೊಂಡು ಬರತೀವಿ . ನಾವೆಲ್ಲಿಯೂ ಊಟಾ ಮಾಡಲ್ಲ. ಬಂದ ಮೇಲೆ ಇಲ್ಲೇ ಊಟಾ ಮಾಡತೇವಿ ಎಂದು ಅವಳಿಗೆ ಭರವಸೆ ಕೊಟ್ಟ ಮೇಲೆ ಅವಳ ದಾರಿ ಅಡ್ಡ್ವಾಗಿಟ್ಟಿದ್ದ ರೊಟ್ಟಿ ಪುಟ್ಟಿ ತೆಗೆದದ್ದು . ಮೇಣ ಬಸದಿ ನೋಡಿ ಬಂದ ನಂತರ ಸೀದಾ ತಾಯಿ ಬನಶಂಕರಿಯ ದರ್ಶನಕೆ ಒಳ ಹೋದೆವು ಅಲ್ಲಿ ಇವರನ್ನು ಗುರ್ತು ಹಿಡಿದ ಪರಿಚಯಸ್ಥರೊಬ್ಬರು ತಾಯಿಯ ದರ್ಶನ ಮಾಡಿಸಿ ಕಳಿಸಿದರು.
ಇದೆಲ್ಲ ಆಗುವಾಗ ಆರೇಳು ಗಂಟೆಯಾಗಿತ್ತು ನನಗಂತೂ ಲಿಂಗಣ್ಣನವರ ಜೊತೆಗಿರುವುದೇ ಭಾಗ್ಯವೆನಿಸಿ ಹಸಿವು ಆ ಖುಶಿಯಲ್ಲಿ ಮಂಗಮಾಯವಾಗಿತ್ತು.
ಕಾರಿನ ಡ್ರೈವರ್ ನಾನು ಅಣ್ಣ ಲಿಂಗಣ್ಣನವರ ಅವರ ಮಗಳು ಗಂಗಮ್ಮನವರು ಐದು ಜನ ಇನ್ನೇನು ಕಾರು ಏರಬೇಕೆನ್ನುವುದರಲ್ಲಿ  ಅಣ್ಣವರ ಗೆಳೆಯರೊಬ್ಬರು ಬದಾಮಿಯಲ್ಲಿರುವುದಾಗಿ ಅವರ ಕಂಡು ಮತಾಡಿಸಿ ಹೋಗಲು ಮನಸಾಯಿತೆಂದು ಬದಾಮಿಯ ತಮ್ಮ ಗೆಳೆಯರೆಗೆ ಕರೆ ಮಾಡಿದರು. ಅವರು ಊರಲ್ಲಿಯೇ ಇರುವುದಾಗಿ ಬರಲು ತಿಳಿಸಿದರು. ಅಣ್ಣನವರು ಇನ್ನೇನು ಕಾರು ಏರಬೇಕು ಆ ಕತ್ತಲ ಪೌಳಿಯಿಂದ ಆಕೃತಿಯೊಂದು ನಡೆದು ಬೆಳಕಲ್ಲಿ ಕಂಡಿತು. ಅವಳ ತಲೆ ಮೇಲೆ ಅದೇ ಮಧ್ಯಾಹ್ನ ಹೊತ್ತಿದ್ದ ರೊಟ್ಟಿ ಬುಟ್ಟಿ. ಬಂದವಳೇ ಅಣ್ಣರ ನಿಮ್ಮ ಸಮ್ಮಂದ ಕಾಯಾಕ ಹತ್ತೇನ್ರಿ ನೀವು ಉಂಡು ಹೋಗತೀನಿ ಅಂದದ್ದಕ್ಕೆ ಯಾರಿಗೂ ರೊಟ್ಟಿ  ಪಲ್ಲೆ ಕೊಟ್ಟೇ ಇಲ್ಲಾ ಎಂದು ನೈವೈದ್ಯ ಮೀಸಲಿಟ್ಟವಳಂತೆ ಮಾತಾಡಿದಳು. ಮೇಲಾಗಿ ಬೆಳಗಿನಿಂದ ಆ ಸುಡು ಬಿಸಲಲ್ಲಿ ಮೈ ಬಾಯಿ ಒಣಗಿಸಿಕೊಂಡು ಕುಳಿತಿದ್ದವಳ ದೈನ್ಯ ಮುಖಭಾವ . ಗುರ್ತಿಸಿ ಮತ್ತೇ ಬಂದದ್ದು ಲಿಂಗಣ್ಣವರಿಗೂ ತಳಮಳ ಮಾಡಿತು. ಎಷ್ಟ ಮಂದಿ ಊಟಾ ತಂದಿರತೀ ಎಂದಾಗ ಹತ್ತ ಮಂದಿದುರೀ ಎಂದಳು. ನಾವು ಐದೇ ಮಂದಿ ಅದೀವಲ್ಲಮ್ಮ ಮತೆ ಹತ್ತು ಮಂದೀದು ಅಂತೀ ಎಂದಾಗ ಅವಳ ಮಾತು  ಅಣ್ಣರ ಹತ್ತು ಮಂದೀ ಊಟಾನೂ ನಿಮ್ಮಗಷ್ಟೇ ಅಂತ ಮೀಸಲಿಟಗೊಂಡು ಕುಂತೇನ್ರಿ ಯಾಕೋ ಬೇರೆಯವರಿಗೆ ಕೊಡಬೇಕು ಅನಿಸಲಿಲ್ಲ. ತೊಗೊಳ್ರಿ ನನಗ ಐದೇ ಮಂದಿದು ರೊಕ್ಕಾ ಕೊಡ್ರಿ  ಉಂಡು ಹೋಗ್ರಿ ಎಂದಳು ದೈನಾಸಿಯಿಂದ.
ಇಷ್ಟು ಊಟಕ್ಕೆ ಎಷ್ಟು ಎಂದು ಕೇಳಿದವರಿಗೆ ಹತ್ತು ರೂಪಾಯಿಗೆಗೆ ಒಂದು ಊಟಾರೀ ಎರೆಡು ರೊಟ್ಟಿ ಪಲ್ಲೆ ಬಾನ ನೋಡ್ರೀ. ನೀವೆಷ್ಟರ ಕೊಡ್ರಿ ಉಳಿದದ್ದು ಹಸಿದ ಮೊಮ್ಮಕ್ಕಳು ದಾರಿ ಕಾಯಕೋಂತ ಕುಂತಿರತವ ತಿನಿಸ್ತೀನಿ ಎಂದಳು. ತಕ್ಷಣ ಹಿಂದು ಮುಂದು ಯೋಚನೆ ಮಾಡದೇ ತಮ್ಮ ಜೇಬಿನಿಂದ ನೂರರ ಎರೆಡು ನೋಟು ತೆಗೆದು ಆ ಅಜ್ಜಿಯ ಕೈಯಲ್ಲಿಟ್ಟ ಲಿಂಗಣ್ಣನವರು ಆಯಿತಾ ಎಂದರು. ಯಪಪ್ಪಾ ಅಷ್ಟು ರೊಟ್ಟಿ ಇಲ್ಲರೀ ಐದು ರೂಪಯಿಗೆ ಒಂದು ರೊಟ್ಟಿ ಇಪ್ಪತ್ತದಾವರೀ ಎಂದಳು ನೋಡು ನೀ ಈ ಎರೆಡು ನೂರು ರೂಪಾಯೀ ತೆಗೋ..! ಆ ರೊಟ್ಟಿ ಪಲ್ಲೇ ನಮಗ ಅಂತ ಇಷ್ಟೊತ್ತು ಕಾದು ಉಣಾಸಕ ಕುಂತಿದ್ದಲ್ಲ. ಆ ಋಣಕ್ಕ ಈ ರೊಕ್ಕ ಬಹಳಲ್ಲ. ನೀ ಯಾರೋ ನಾ ಯಾರೋ ಅಲ್ಲ ಏನ ಸಂಬಂಧ ಬಸವಣ್ಣ ಇಟ್ಟು ಕಳಿಸಿರತಾನ. ಅದಕ್ಕ ನನಗ ಕಾದು ನೀ ಕುಂತು ಉಣಾಕ ಬಂದಿ. ಈ ಉಣುಸು ಕೆಲಸ ನಮ್ಮವ್ವ ಬಾಳ ಮಾಡ್ಯಾಳ .ನನಗ ಆಕೀನೇ ಎದುರಿಗೆ ಬಂದಂಗ ಆತು.  ಈ ಎಲ್ಲಾ ಬುತ್ತಿ ರೊಟ್ಟಿ ನಿನ್ನ ಮೊಮ್ಮಕ್ಕಳಿಗೆ ತಿನಿಸು ಎಂದು ಗಾಡಿ ಹತ್ತಿದ ಲಿಂಗಣ್ಣವರ ಆ ಕ್ಷಣಕ್ಕೆ  ಪುರುಷರೆನಿಸಲಿಲ್ಲ ಅಂತಃಕರಣದ ತಾಯಿಯಾಗಿ ಕಂಡರು.
ಏನಬೇ ನಾವೇನ ಕರಾರು ಮಾಡೀ ನಿನ್ನ ರೊಟ್ಟಿನೇ ತೊಗೋತೀವಿ ಅಂತ ಹೇಳಿದ್ದೆವೇನ. ನಡೀ ನಡೀ ಅಂದಿದ್ದರೆ ಆ ವಯಸ್ಸಾದವಳ ಅಂದಿನ ದುಡಿಮೆಗೆ ಅಪಚಾರವೆಸಗಿದಂತಾಗುತ್ತಿತ್ತು. ಅಂದಿನ ಆ ದುಡಿಮೆಯಲ್ಲಿ ಹತ್ತಿಪ್ಪತ್ತು ಉಳಿಸಿ ಮರುದಿನ  ಮತ್ತೇ ಬುತ್ತಿರೊಟ್ಟಿ ಮಾಡಿ ಮಾರಾಟಾ ಮಾಡುವ ಕಾಯಕಕ್ಕೆ ಕಲ್ಲು ಬೀಳುತ್ತಿತ್ತು. ತಾನು ಉಣುವೆನೆಂದು ಉಣಲಾರದ್ದು ,ಕೊಡುವೆನೆಂದು ಕೊಡಲಾರದ್ದು ಲಿಂಗಾರ್ಪಿತಕ್ಕಾಗಿ ಮುಡುಪಾಗಿರುತ್ತೆ ಎಂದು ಭಾವಿಸಿದವರು ನಮ್ಮ ಶರಣರು. ಎಂತು ಮೆಚ್ಚು ಬಸವಣ್ಣನಿಗೆ ಆಡುವುದೊಂದು ಮಾಡುವುದೊಂದು ಮಾಡಿದರೆ? ಎಂದ ಮಹಾನುಭಾವ. ಶ್ರಮಿಕರನ್ನು ಕಾಯಕವಂತರನ್ನು ಕಂಡೂ ಕಾಣದಂತೆ ಮರೆ ಮಾಡಿ ಓಡಾಡುವ ನಮ್ಮಂತವರಿಗೆ  ಅಣ್ಣ ಲಿಂಗಣ್ಣ  ಸತ್ಯಂಪೇಟೆಯವರ ಈ ಘಟನೆ ಒಂದು ಪಾಠವಾಯಿತು. ಮಾಡಿದೆನೆನ್ನದಿರಾ ಲಿಂಗಕ್ಕೆ ಎನ್ನುವ ಅಣ್ಣ ಬಸವಣ್ಣನ ಮಾತು ತ್ಯಕ್ಷ ಎದುರಿಗಿತ್ತು.
* ಲಲಿತಾ ಕೆ. ಹೊಸಪ್ಯಾಟಿ, ಹುನಗುಂದ
ಕೃಪೆ: ಶರಣ ಮಾರ್ಗ, ಜುಲೈ-2020

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here