ಭಾಗ -10: ಯಡ್ರಾಮಿ: ಅಸ್ಮಿತೆಯ ಹುಡುಕಾಟದಲಿ…

0
198

ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ…. ತುಂಬಾ ಮಂದಿ ಓದುಗರ ಮನಸೂರೆಗೊಂಡಿದೆ. ಅಕ್ಷರಶಃ ಅದೊಂದು ಅನಿರ್ವಚನೀಯ ಮಧುರ ಸ್ಮೃತಿಯೇ ಹೌದು.

ಇದು ಖರೇ ಖರೇ ಜರುಗಿದ ನೈಜ ಘಟನೆಯೇ ..? ಯಡ್ರಾಮಿಯಲ್ಲಿ ಅವರ ಮನೆ ಎಲ್ಲಿದೆ ? ನೀವು ವರ್ಣಿಸಿದ ಸೌಂದರ್ಯದ ಬುಗ್ಗೆ.. ರೇಣುಕ ಈಗೆಲ್ಲಿದಾಳೆ..? ರೇಣುಕ ನಿಮ್ಮ ಮಾಜೀ ಪ್ರೇಯಸಿಯೇ ? ಈ ಕತೆಯನ್ನು ನೆಕ್ಸ್ಟ್ ಎಪಿಸೋಡ್ ಗೆ ಕಂಟಿನ್ಯು ಮಾಡಿ.. ತುಂತಣಿ, ಚೌಡಕಿಯ ನಿನಾದ ಮತ್ತೆ ಮತ್ತೆ ಕೇಳಬೇಕನಿಸಿದೆ. ರೇಣುಕಳ ಬಾಳಿನ ಕತೆ ಓದಿ ಜೀವ ಮಮ್ಮಲ ಮರುಗಿತು… ಹೀಗೆ ವಾಸ್ತವದ ಹತ್ತಾರು ಪ್ರಶ್ನೆ – ಉಪಪ್ರಶ್ನೆಗಳಿಗೆ ಉತ್ತರಗಳ ಕಾತರ.

Contact Your\'s Advertisement; 9902492681

ಈ ಎಲ್ಲದರ ಹಿಂದಿನ ಮಾನವೀಯ ಕಳಕಳಿಗಳ ಸೋನೆಮಳೆ ನಿಂತಿಲ್ಲ. ಹೌದು ಇಂತಹ ಮಳೆಯಿಂದಲೇ ನಾವು ಬಿತ್ತಿ ಬೆಳೆದು ಬಾಳೋದು… ಬದುಕೋದು. ಯಾವಾಗಲೂ ಬರಹಕ್ಕಿಂತ ನಿಜದ ಬದುಕು ಬಲು ದೊಡ್ಡದು. ಅಂತಹ ಅಗ್ನಿದಿವ್ಯಗಳ ಬದುಕನ್ನು ನಮ್ಮ ಗ್ರಾಮೀಣರು ನಿತ್ಯ ಬದುಕುತ್ತಲೇ ಇದಾರೆ. ಹುಸಿ ಕಳಕಳಿಯ ರಾಜಕಾರಣಿಗಳ ತರ್ಕಲಾಂಡಿ ಮಾತುಗಳಿಗೆ ಮರುಳಾಗುತ್ತಲೇ… ಚುನಾವಣೆಯೆಂಬ ಪ್ರಜಾಪ್ರಭುತ್ವ ಪರೀಷೆಯ ಸೌಂದರ್ಯ, ಸೊಬಗು, ಸೊಗಸು, ಸೊಗಡು ಕಾಪಿಟ್ಟುಕೊಂಡವರು ನಮ್ಮ ಗ್ರಾಮ ಭಾರತದ ಜನಪದರು.

….. ನೀವು ಬರೆಯುವ ಪ್ರತಿಯೊಂದು ಅಂಕಣ ಬರಹವು ದೃಶ್ಯ ಕಾವ್ಯ – ಕತೆಯೇ ಆಗಿರ್ತವೆ. ಯಡ್ರಾಮಿ ಕುರಿತು ಕಾದಂಬರಿ ಯಾಕೆ ಬರೀಬಾರದು.. ? ಒಂದೂರಲ್ಲಿ ಇಷ್ಟೊಂದು ವಸ್ತು , ವಿವರಗಳು ಸಿಗೋದು ಅಪರೂಪ. ಪ್ಲೀಜ್ ಟ್ರೈ ಮಾಡಿ… ಊರುಗಳ ಐತಿಹ್ಯ ಕುರಿತಾಗಿ ಡ್ರೈ ಆಗಿರುವ ಉತ್ಖನನ ಮಾದರಿಯ ಕ್ರಿ.ಪೂ. ಮತ್ತು ಕ್ರಿ.ಶ. ಗಳ ಇತಿಹಾಸ ಓದಲು, ಕೇಳಲು ಸಾಧ್ಯವಾಗದ ಸ್ಥಿತಿ ತಲುಪಿರುವ ಟೀನೇಜ್ ಜನರೇಷನ್ ಗೆ ನಿಮ್ಮ ಬರವಣಿಗೆ ರುಚಿಸ ತೊಡಗಿದೆಯೆಂದರೆ ಸುಮ್ಮನಲ್ಲ..!

ಹೀಗೆ ಪ್ರತಿಕ್ರಿಯಿಸಿರುವ ಅಮರಪ್ರಿಯ, ಸೇರಿ ಲಿಂಗಾರೆಡ್ಡಿ, ನಾ. ಚೆಲುವೆ, ಭೀಮಸೇನ ಕೊರ್ತಿ, ಉಮಾಶಂಕರ, ಶೋಭಾ ತೆಗ್ಗಿ , ಕುಸುಮ, ವಿದ್ಯಾ ಭಾರತಿ, ಸುಮಿತ್ರ ಮಲ್ಲಿನಾಥ, ಪರಿಮಳ ಜಯರಾಮ , ಕೆ.ನಾರಾಯಣಸ್ವಾಮಿ, ಪ್ರಶಾಂತ ಮಾಗಣಗೇರಿ, ಮಂಜುಳಾ ಹಿರೇಮಠ… ಸಾಲು ಸಾಲು ವಾಟ್ಸ್ಆ್ಯಪ್, ಮೊಗ ಹೊತ್ತಿಗೆಗಳ

ಮೆಸೆಜ್, ಫೋನ್ ಕರೆಗಳು… ಹೆಣ್ಣೊಬ್ಬಳ ನೋವಿಗೆ ಸ್ಪಂದಿಸುವ ಸಹೃದಯ ಮನಸುಗಳಿಗೆ ಬರವಿಲ್ಲ ಎಂಬ ಸಣ್ಣ ಸಮಾಧಾನ ನನ್ನದು.

ಯಾವಾಗಲೂ ಇಂತಹ ನೋವುಗಳು ” ಪ್ರಜ್ಞೆ ” ಹುಟ್ಟಿಸುವ ಪ್ರಕ್ರಿಯೆಗಳಾದಾಗ ನಾವು ಮಾಡುವ ಸಣ್ಣ ಕೆಲಸ ಕೂಡಾ ಸಾರ್ಥಕವೆನಿಸುತ್ತದೆ. ಒಂದು ಸುಳ್ಳನ್ನು ಹತ್ತಾರು ಬಾರಿ ಹತ್ತಾರು ನಾಲಗೆಗಳು ಸತ್ಯ ಸತ್ಯ ಎಂದು ಹೇಳುತ್ತಾ ಹೋದರೆ ಅದು ಸತ್ಯವಾಗಿ ಬಿಡುವ ಅಪಾಯದ ಸಾಧ್ಯತೆಗಳಿವೆಯೆಂದು ಲಂಕೇಶ್ ಮೇಷ್ಟ್ರು ಹೇಳುತ್ತಿದ್ದರು.

ಈ ಬಾರಿ ಮುಂಗಾರು ಮಳೆಯ ಅಭಾವವೆಂದು ಹವಾಮಾನ ತಜ್ಞರ ಭವಿಷ್ಯ. ಕುಡಿಯುವ ನೀರಿಗೂ ತತ್ವಾರವಾದರೆ ಹೇಗೆಂಬ ಆತಂಕ ಸಾಮಾನ್ಯರದು. ರಾಜಕಾರಣಿಗಳಿಗೆ ಇದ್ಯಾವುದರ ಪರಿವಿಲ್ಲ. ಬಾವಿ ಹಳ್ಳಗಳ ನೀರು ಸಿಗದಿದ್ದರೇನಂತೆ ಕಿನ್ಲೇ, ಬಿಸ್ಲೇರಿಗಳಲ್ಲೇ ಜಳಕ ಮಾಡಿದರಾಯ್ತು ಎನ್ನುವ ಪೈಕಿ ಅವರು. ಆದರೆ ಇಂದು ೨೫.೦೫.೧೯ ರ ಸಂಜೆ ಸಂವಿಧಾನಕೆ ” ನಮಸ್ಕರಿಸಿ ” ಮೋದಿ ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಭಾಷಣ ಆರಂಭಿಸಿದ್ದು ಖುಷಿಯ ವಿಷಯ.

ಸಹಸ್ರಾರು ಮಂದಿ ಶ್ರಮಿಕರೇ ತುಂಬಿರುವ ಯಡ್ರಾಮಿ, ವ್ಯಾಪಾರ ವಹಿವಾಟುಗಳ ನಡುವೆ ಕಳೆದು ಹೋಗುವ ಕಟ್ಟೆಚ್ಚರಗಳೊಂದಿಗೆ.., ಸುಂದರ ನಾಳೆಗಳಿಗಾಗಿ ಅದು ಸಿದ್ದಗೊಳ್ಳುವ ಅಗತ್ಯಗಳಿಗೆ ತನ್ನನ್ನು ಅರ್ಪಿಸಿ ಕೊಳ್ಳಬೇಕಿದೆ. ಇದು ಯಡ್ರಾಮಿಯೆಂಬ ನೂತನ ತಾಲೂಕಿನ ಅಸ್ಮಿತೆಯ ಹುಡುಕಾಟವೂ ಹೌದು.

 -ಮಲ್ಲಿಕಾರ್ಜುನ ಕಡಕೋಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here