ಹಾವೇರಿ: ಎಲ್ಲದಕ್ಕೂ ವಿರೋಧ ಮಾಡುವ ಗುಣವನ್ನು ವಿರೋಧ ಪಕ್ಷದ ನಾಯಕರು ಹೊಂದಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಅವರು ಹಾವೇರಿಯಲ್ಲಿ ಬರ ವೀಕ್ಷಣೆಗೆ, ಆಗಮಿಸಿ ಜಿಲ್ಲೆಯ ತವರಮೆಳ್ಳಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬರಗಾಲ ನಿರ್ವಹಣೆಯಲ್ಲಿ ಮೈತ್ರಿ ಸರಕಾರ ವಿಫಲವಾಗಿದೆ ಎಂಬ ಯಡಿಯೂರಪ್ಪ ಹೇಳಿಕೆಯನ್ನು ಒಪ್ಪಲು ಆಗದು, ರಾಜ್ಯದಲ್ಲಿ ಅಭಿವೃದ್ಧಿ ವಿಚಾರವಾಗಿ ವಿರೋಧ ಮಾಡುವುದು ಯಡಿಯೂರಪ್ಪ ಅವರ ಹುಟ್ಟುಗುಣ ಎಂದು ಟಾಂಗ್ ನೀಡಿದರು.
ನಾನು ವಿರೋಧ ಪಕ್ಷದಲ್ಲಿ ಕುಳಿತಾಗ ಎಂದಿಗೂ ಅಭಿವೃದ್ಧಿ ವಿಚಾರದಲ್ಲಿ ವಿರೋಧ ಮಾಡಿಲ್ಲ. ರಾಜ್ಯದ ಬರ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಒಟ್ಟಿಗೆ ಕೆಲಸ ನಿರ್ವಹಿಸುವ. ನಮ್ಮ ಜವಾಬ್ದಾರಿ ಕೂಡಾ ಆಗಿದೆ ಎಂದು ತಿಳಿಸಿದರು.
ಮೈತ್ರಿ ಸರಕಾರದ ಕುರಿತು ಸಚಿವರಿಗೆ ಕೆಳಿದ ಪ್ರಶ್ನೆಗೆ ಕೆಂಡಾಮಂಡಲಗೊಂಡ ದೇಶಪಾಂಡೆ, ಎ ಬಿಡ್ರಿ ನಿಮಗೆ ಯಾಕೆ ಮೈತ್ರಿ ಚಿಂತಿ, ನಿವೇನು ಶಾಸಕರು ಅಲ್ಲಾ, ಸಂಸದರು, ಸಚಿವರಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಯಿತಾ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿ, ರಾಜಕೀಯ ಬಗ್ಗೆ ಕಡಿಮೆ ಮಹತ್ವಕೊಡಿ, ಅಭಿವೃದ್ಧಿ ಕಡೆಗೆ ಹೆಚ್ಚಿನ ಮಹತ್ವ ನೀಡಿ ಎಂದು ಸಲಹೆ ನೀಡಿದರು.