ಕಲಬುರಗಿ: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಕಲಬುರಗಿ ಯಲ್ಲಿ ಸಹಾಯವಾಣಿ ಸ್ಥಾಪಿಸಿರುವ ಕುರಿತು, ‘ ಬೇಸಿಗೆ ಕಳೆದು ಮಳೆಗಾಲ ಬಂದಂತೆ’ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಕೋವಿಡ್ ಮೊದಲ ಪ್ರಕರಣ ಕಂಡುಬಂದು ಐದು ತಿಂಗಳಾಗಿದೆ. ಇದುವರೆಗೆ 7693 ಪ್ರಕರಣಗಳು ದಾಖಲಾಗಿವೆ ಹಾಗೂ 142 ಜನ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಸೂಕ್ತ ಚಿಕಿತ್ಸೆ ಸಿಗದೆ ರಸ್ತೆಯಲ್ಲಿ ಜೀವ ಬಿಟ್ಟಿದ್ದಾರೆ. ಇಷ್ಟೆಲ್ಲ ಘಟಿಸುವಾಗ ಸುಮ್ಮನಿದ್ದು ವಿಳಂಬ ನೀತಿ ಅನುಸರಿಸಿದ ಸರಕಾರ ಇದೀಗ ಸಹಾಯವಾಣಿ ಸ್ಥಾಪಿಸಿದೆ. “ಇದು ಬೇಸಿಗೆ ಕಳೆದು ಮಳೆಗಾಲ ಬಂದಂತೆ. ಸರಕಾರದವರ ದೂರದೃಷ್ಟಿಗೆ ನನ್ನ ಸಲಾಂ” ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಸಹಾಯವಾಣಿ ನಿರ್ವಹಣೆಗೆ ತಗುಲಬಹುದು ಎಂದು ಹೇಳಲಾದ ರೂ ಒಂದು ಲಕ್ಷವನ್ನು ಕೆಕೆಆರ್ ಡಿಬಿ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಇಷ್ಟು ಸಣ್ಣ ಮೊತ್ತವೂ ಜಿಲ್ಲಾಡಳಿತದ ಬಳಿ ಇಲ್ಲವೇ ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕೆಕೆಆರ್ ಡಿಬಿ ಅನುದಾನ ಬಳಸಿಕೊಂಡು ಸಹಾಯವಾಣಿ ಸ್ಥಾಪಿಸುವ ಬದಲು ಲಭ್ಯವಿರುವ ಮ್ಯಾಕ್ರೋ ಅನುದಾನದಲ್ಲಿ ಆರೋಗ್ಯ ಮೂಲ ಸೌಲಭ್ಯವನ್ನೇ ಘೋಷಿಸಬಹುದಿತ್ತಲ್ಲವೇ ? ಎಂದು ಸರಕಾರಕ್ಕೆ ಕೇಳಿದ್ದಾರೆ.