ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದಲ್ಲಿ 24 ಗಂಟೆಯಲ್ಲಿ ಆರ್‍ಟಿಪಿಸಿಆರ್ ಕೋವಿಡ್ ಲ್ಯಾಬ್ ಆರಂಭಿಸುವಂತೆ ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ ( ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಲ್ಯಾಬ್‍ಗೆ ಅಗತ್ಯವಿದ್ದ ಅನುದಾನವನ್ನು ಅಂದರೆ ಜಿಲ್ಲಾಡಳಿತ ವತಿಯಂದ 84 ಲಕ್ಷ ರೂಪಾಯಿಯ ಚೆಕ್ ಅನ್ನು ಸ್ಥಳದಲ್ಲಿಯೇ ವಿತರಿಸಿದರು.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಅಫಜಲಪುರ, ಆಳಂದ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಜನರ ಕೋವಿಡ್ ಪರೀಕ್ಷೆಗೆ ತುಂಬಾ ಸಹಕಾರಿಯಾಗಲಿದೆ. ಶೀಘ್ರ ಲ್ಯಾಬ್ ಸ್ಥಾಪನೆಗೆ ಕ್ರಮವಹಿಸಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ವಿವಿಯ ಸಮ ಕುಲಪತಿ ಪ್ರೊ. ಜಿ.ಆರ್. ನಾಯಕ್ ಮಾತನಾಡಿ, ವಿವಿಯ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕೋವಿಡ್ ಆರ್‍ಟಿಪಿಸಿಆರ್ ಪ್ರಯೋಗಾಲಯ ಸಂಬಂಧ ಕೇಂದ್ರದ ಅನುದಾನದಲ್ಲಿ 32 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಿದ್ದು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದರಿಂದ ಸಿಡಿಮಿಡಿಗೊಂಡ ಸಂಸದರು, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ( ಐಸಿಎಂಆರ್)ಗಳು ಕಳೆದ ಫೆಬ್ರುವರಿಯಲ್ಲೇ ಲ್ಯಾಬ್ ಸ್ಥಾಪಿಸುವಂತೆ ಸುತ್ತೋಲೆ ಕಳುಹಿಸಿವೆ. ಆದರೆ, ನಾಲ್ಕು ತಿಂಗಳಾದರೂ, ಕ್ರಮಕೈಗೊಂಡಿಲ್ಲ ಎಂದರು.
ಎಷ್ಟು ಹಣ ಬೇಕು ಅಷ್ಟು ಕೊಡಲು ಸಿದ್ಧ, ಕೆಕೆಆರ್‍ಡಿಬಿ ಅಥವಾ ಜಿಲ್ಲಾಡಳಿತ ಅಥವಾ ಸಂಸದರ ನಿಧಿಯಿಂದ ನೀಡಲಾಗುವುದು ಎಂದರು. ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಸಿ. ರೇವೂರ ಹಾಗೂ ಜಿಲ್ಲಾಧಿಕಾರಿ ಶರತ್. ಬಿ. ಅವರು ಸಹ ಇದಕ್ಕೆ ದನಿಗೂಡಿಸಿದರು. ಕೋವಿಡ್ ಸಂಬಂಧ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದು, ಎಷ್ಟು ಅಗತ್ಯವಿದೆ ಎಂದು ಹೇಳಿದರೆ, ಸ್ಥಳದಲ್ಲಿಯೇ ಚೆಕ್ ವಿತರಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಅದರೆ, ವಿವಿ ಅಧಿಕಾರಿಗಳಿಂದ ಅಗತ್ಯವಿರುವ ಹಣದ ಬಗ್ಗೆ ಮಾಹಿತಿಯೇ ನೀಡಲಿಲ್ಲ. ಕೊನೆಗೆ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತವತಿಯಿಂದ 84 ಲಕ್ಷ ರೂಪಾಯಿಗಳ ಚೆಕ್ ಸಿದ್ಧ ಪಡಿಸಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ. ಜಿ ಪಾಟೀಲ್ ಅವರು, ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಜನಪ್ರತಿನಿಧಿಗಳು ಭಾರಿ ಹೋರಾಟ ಮಾಡಿದ್ದಾರೆ. ಆದರೆ, ವಿವಿಯಿಂದ ಕೈಗೊಳ್ಳಲಾಗುವ ಯೋಜನೆ, ಕಾರ್ಯಕ್ರಮಗಳು ಮುಂತಾದವುಗಳಿಗೆ ಸಂಸದರು, ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಶಿಷ್ಠಾಚಾರದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ವಿವಿಯ ಯೋಜನೆ, ಕಾರ್ಯಕ್ರಮಗಳು, ಕೇಂದ್ರ ಸರ್ಕಾರ ಮತ್ತಿತರ ಸರ್ಕಾರಿ ಆದೇಶ, ಸುತ್ತೋಲೆಗಳ ಬಗ್ಗೆ ನನಗೂ ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸೋಲಾಪುರ ರೈಲ್ವೆ ವಿಭಾಗದ ಡಿವಿಜನಲ್ ಅಪರೇಟಿಂಗ್ ಮ್ಯಾನೇಜರ್ ಅಧಿಕಾರಿ ಶ್ಯಾಂ ಕುಲಕರ್ಣಿ ಅವರು, ಪ್ರಸಕ್ತ ಕೋವಿಡ್ ಸಂದರ್ಭದಲ್ಲಿ ಸರಕು ಹಾಗೂ ಜನರ ಸಂಚಾರಕ್ಕೆ ರೈಲುಗಳ ವ್ಯವಸ್ಥೆ ಸೇರಿದಂತೆ ಕಲಬುರಗಿ ಜಿಲ್ಲೆಯಲ್ಲಿ ಕೈಗೊಂಡಿರುವ ರೈಲ್ವೆ ಯೋಜನೆ ಬಗ್ಗೆ ಸಭೆಗೆ ಸಮಗ್ರ ಮಾಹಿತಿ ನೀಡಿದರು. ಕಲಬುರಗಿ-ಸಾವಳಗಿ ಮತ್ತು ಕುಲಾಲಿ-ದುಧನಿ ಮಾರ್ಗ ಡಬ್ಲಿಂಗ್ (ದ್ವಿಪಥ) ಕಾರ್ಯ ಮುಗಿದಿದ್ದು, ಸಾವಳಗಿ- ಕುಲಾಲಿ ಮಾರ್ಗ ಡಬ್ಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಬಬಲಾದ್ ಮತ್ತು ಸಾವಳಗಿಯಲ್ಲಿ ಹೊಸ ರೈಲು ನಿಲ್ದಾಣ ಮತ್ತು ಪ್ಲಾಟ್‍ಫಾರಂ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅದೇ ರೀತಿ ಗೌಡಗಾಂವ ಮತ್ತು ಗಾಣಗಪುರದಲ್ಲಿ ಈ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ. ಉಮೇಶ್ ಜಾಧವ್ ಅವರು, ಕಲಬುರಗಿ ರೈಲು ನಿಲ್ದಾಣ ಮುಂಭಾಗದಲ್ಲಿರುವ ಬುಕ್ಕಿಂಗ್ ಕೌಂಟರ್, ವಾಹನ ನಿಲುಗಡೆ ಮುಂತಾದ ವ್ಯವಸ್ಥೆಗಳನ್ನು ನಿಲ್ದಾಣದ ಹಿಂಬದಿ (ತಾರ್‍ಫೈಲ್ ಪ್ರದೇಶ)ಯಲ್ಲೂ ಅಭಿವೃದ್ಧಿ ಪಡಿಸಬೇಕು ಎಂದು ಸೂಚಿಸಿದರು. ಹಿಂಬದಿಯ ಜೇವರ್ಗಿ ಕ್ರಾಸ್ ಸೇತುವೆವರೆಗೆ 30 ಮೀಟರ್ ಜಾಗವನ್ನು ಸ್ವಾಧೀನಕ್ಕೆ ಕ್ರಮಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಲಬುರಗಿ-ಮುಂಬೈ ಹೊಸ ರೈಲು ಸಂಚಾರಕ್ಕೆ ಒಪ್ಪಿಗೆ ದೊರೆತಿದೆ. ಅದೇ ರೀತಿ ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿದಿನ ಬೆಳಿಗ್ಗೆ ಹೊಸ ರೈಲು ಮತ್ತು ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಕಲಬುರಗಿಗೆ ಹೊಸ ರೈಲು ವ್ಯವಸ್ಥೆಗೆ ಕ್ರಮವಹಿಸಬೇಕು. ಈ ಕುರಿತು ಪ್ರಸ್ತಾವನೆ ಸಲ್ಲಿಸಿರುತ್ತೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು, ಪ್ರತಿದಿನ ಬೆಂಗಳೂರಿಗೆ ಸಂಚರಿಸುತ್ತಿದ್ದ ಸೋಲಾಪುರ-ಯಶವಂತಪೂರ ಎಕ್ಸ್‍ಪ್ರೆಸ್ ಫ್ಲಾಟಫಾರಂನಲ್ಲಿ ಹೆಚ್ಚು ಪ್ರಯಾಣಿಕರು ಸೇರುವುದರಿಂದ ಸಮಸ್ಯೆಯಾಗುತ್ತಿದೆ. ಇದನ್ನು ಬಗೆ ಹರಿಸಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೇ ಅಧಿಕಾರಿಗಳು ನಿಲ್ದಾಣದಲ್ಲಿ 2 ಲಿಫ್ಟ್‍ಗಳ ಅಳವಡಿಕೆಗೆ ಕ್ರಮಕೈಗೊಳ್ಳಲಾಗಿದ್ದು, ಜನಸಂದಣಿ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದರು.
ಇನ್ನು ಕಲಬುರಗಿ ವಿಮಾನ ನಿಲ್ದಾಣದ ಯೋಜನೆಗಳ ಕುರಿತಂತೆ ಮಾಹಿತಿ ಕೇಳಿದ ಸಂಸದರು, ರಾತ್ರಿ ವೇಳೆ ಪ್ರಯಾಣಿಕರ ವಿಮಾನ ಹಾಗೂ ಸರಕು ವಿಮಾನಗಳ ಓಡಾಟಕ್ಕೆ ಕ್ರಮವಹಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಮಾನ ನಿಲ್ದಾಣದ ನಿರ್ದೇಶಕರಾದ ಜ್ಞಾನೇಶ್ವರ್ ರಾವ್ ಅವರು, ಮುಂದಿನ ವರ್ಷದ ಜುಲೈನಲ್ಲಿ ರಾತ್ರಿ ವೇಳೆ ವಿಮಾನಗಳ ಲ್ಯಾಡಿಂಗ್‍ಗೆ ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಡಿ.ವಿ.ಓ.ಆರ್. ಹಾಗೂ ಡಿ.ಎಂ.ಇ. ತಾಂತ್ರಿಕ ಉಪಕರಣಗಳ ಅಗತ್ಯವಿದ್ದು, ಅವುಗಳನ್ನು ತರಿಸಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ಆಕ್ಟೋಬರ್ ವೇಳೆಗೆ ದೆಹಲಿ-ತಿರುಪತಿ-ಹಿಂಡನ್(ದೆಹಲಿ)ಗಳಿಗೆ ವಿಮಾನಯಾನ ಆರಂಭಿಸಲಾಗುವದೆಂದು ಅವರು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ವಿಮಾನ ನಿಲ್ದಾಣದ ಸೌಂದರ್ಯೀಕರಣಕ್ಕೆ ಕ್ರಮಕೈಗೊಳ್ಳಬೇಕು. ಈ ಸಂಬಂಧ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಡಿ.ಎಂ.ಎಫ್. ನಿಧಿ ಅಥವಾ ಕೆ.ಕೆ.ಆರ್.ಡಿ.ಬಿ. ಯಿಂದ ಬಿಡುಗಡೆ ಮಾಡಿಸಲಾಗುವುದೆಂದು ತಿಳಿಸಿದರು.
ವಿಮಾನಯಾನ ಆರಂಭವಾದ ದಿನದಿಂದ ಜುಲೈ 31 ರವರೆಗೆ ಒಟ್ಟು 562 ಟ್ರಿಪ್ ವಿಮಾನಗಳ ಹಾರಾಟ ನಡೆಸಿದ್ದು, 20,864 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆಂದು ನಿಲ್ದಾಣದ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಖಾಸಗಿ ವಿಮಾನಗಳು, ಹೆಲಿಕಾಪ್ಟರ್ ಹಾಗೂ ಏರ್ ಅಂಬುಲೆನ್ಸ್ ಗಳ ಹಾರಾಟಕ್ಕೆ ಅವಕಾಶ ನೀಡಿದ್ದು, ವಿಮಾನ ಯಾನ ಸಂಸ್ಥೆಗಳು ಇದರ ಪ್ರಯೋಜನ ಪಡೆಯಬೇಕೆಂದು ಕೋರಿದರು.
ಹಾಗೆಯೇ ಸ್ಟಾರ್ ಏರ್ ವಿಮಾನ ಯಾನ ಸಂಸ್ಥೆಯು ಬಾಡಿಗೆ ಪಡೆದು ರಾಜ್ಯದ ವಿವಿಧಡೆ ಪ್ರಯಾಣಿಕರನ್ನು ( 6 ಪ್ರಯಾಣಿಕರು ಮಾತ್ರ) ಕರೆದೊಯ್ಯಲಿದ್ದು, ಪ್ರಯಾಣಿಕರು ಇದರ ಉಪಯೋಗ ಪಡೆಯಬೇಕೆಂದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಲಬುರಗಿ ಜಿಲ್ಲೆ ಅತಿ ಹೆಚ್ಚು ಉದ್ಯೋಗ ಚೀಟಿ ನೀಡಿದ ಜಿಲ್ಲೆಯಾಗಿದೆ ಎಂದು ಸಂಸದರು ಪ್ರಶಂಸೆ ವ್ಯಕ್ತಪಡಿಸಿದರು. ಈ ಯೋಜನೆ ಕೂಲಿಕಾರ್ಮಿಕರಿಗೆ ಶೀಘ್ರ ವೇತನ ಪಾವತಿಗೆ ಕ್ರಮವಹಿಸಬೇಕು. ಎಂದು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಎಂ.ವೈ.ಪಾಟೀಲ, ರಾಜಕುಮಾರ ಪಾಟೀಲ್ ತೇಲ್ಕೂರ್, ನಗರ ಪೋಲಿಸ್ ಆಯುಕ್ತರಾದ ಎನ್.ಸತೀಶ್ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಮಿ ಮರಿಯಂ ಜಾರ್ಜ್, ಮಹಾನಗರ ಪಾಲಿಕೆಯ ಆಯುಕ್ತರಾದ ರಾಹುಲ್ ಪಾಂಡ್ವೆ ಮುಂತಾದವರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…