ಕೊರೊನಾ ಭೀತಿ: ಸರಳವಾಗಿ ನಡೆದ ಸುರಪುರ ಹಾಲೋಕಳಿ ಜಾತ್ರೆ

0
98

ಸುರಪುರ: ಪ್ರತಿ ವರ್ಷದ ಆಗಸ್ಟ್ ತಿಂಗಳಿನಲ್ಲಿ ಬರುವ ರೋಹಿಣಿ ನಕ್ಷತ್ರದಲ್ಲಿ ನಡೆಯುವ ಸುರಪುರ ಶ್ರೀ ವೇಣುಗೊಪಾಲ ಸ್ವಾಮಿಯ ಹಾಲೋಕಳಿ ಜಾತ್ರೆ ಈ ವರ್ಷ ಕೊರೊನಾ ಭೀತಿಯಿಂದಾಗಿ ತುಂಬಾ ಸರಳವಾಗಿ ಆಚರಿಸಲಾಯಿತು.

ಬೆಳಿಗ್ಗೆ ಶ್ರೀ ವೇಣುಗೋಪಾಲ ಸ್ವಾಮಿಯ ಮೂರ್ತಿಗೆ ಪೂಜೆ ಆರಾಧನೆ ನಡೆಸಲಾಯಿತು,ನಂತರ ಸಾಯಂಕಾಲ ಸಂಪ್ರದಾಯದಂತೆ ವಿವಿಧ ಕೇರಿಗಳ ವತನದಾರರ ಸಮ್ಮುಖದಲ್ಲಿ ದೇವರ ಕಂಬೋತ್ಸವ ಜರುಗಿತು.ಹಿಂದಿನಿಂದಲೂ ದೇವಸ್ಥಾನದ ಆವರಣದಲ್ಲಿ ಐದು ಕಂಬಗಳನ್ನು ಹಾಕಿ ವಿವಿಧ ಕೇರಿಗಳ ಜನರು ಕಂಬ ಹತ್ತುವ ಸ್ಪರ್ಧೆಯು ಅದ್ಧೂರಿಯಾಗಿ ನಡೆಯುತ್ತಿತ್ತು.

Contact Your\'s Advertisement; 9902492681

ಆದರೆ ಈ ವರ್ಷ ಕೊರೊನಾ ವೈರಸ್ ಹಾವಳಿಯಿಂದಾಗಿ ಸಾಂಕೇತಿಕವಾಗಿ ಎರಡು ಕಂಬಗಳನ್ನು ಹಾಕಲಾಗಿತ್ತು.ಈ ಮುಂಚೆಯೆ ರಾಜಾ ಕೃಷ್ಣಪ್ಪ ನಾಯಕ ಅವರು ಕೊರೊನಾದಿಂದಾಗಿ ಈ ವರ್ಷ ಜಾತ್ರೆ ಆಚರಿಸುತ್ತಿಲ್ಲ,ಭಕ್ತರು ತಮ್ಮ ಮನೆಗಳಲ್ಲಿಯೆ ದೇವರ ಪೂಜಾ ಆರಾಧನೆ ಮಾಡುವಂತೆ ತಿಳಿಸಿದ್ದರು.ಆದರೂ ದೇವರ ಮೇಲಿನ ಭಕ್ತಿಯಿಂದಾಗಿ ಜನರು ಸೇರಿ ತಮ್ಮ ಆರಾಧ್ಯ ದೇವರ ದರುಶನ ಪಡೆದರು.

ಪ್ರತಿ ವರ್ಷ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಿದ್ದ ಜಾತ್ರೆಯಲ್ಲಿ ಈ ವರ್ಷ ಒಂದೆರಡು ಸಾವಿರ ಜನ ಭಾಗವಹಿಸಿದ್ದು ಕಂಡುಬಂತು.ಜಾತ್ರೆಯಲ್ಲಿ ಹಿಂದೆ ನೂರಾರು ಅಂಗಡಿಗಳು ಮಿಠಾಯಿ ಮಕ್ಕಳ ಆಟಿಕೆ ಸಾಮಾನು ಸೇರಿದಂತೆ ವಿವಿಧ ರೀತಿಯ ವಸ್ತುಗಳ ಮಾರಾಟದ ಅಂಗಡಿಗಳಿರುತ್ತಿದ್ದವು.ಆದರೆ ಈ ವರ್ಷ ಯಾವುದೇ ಅಂಗಡಿಗಳಿಲ್ಲದೆ ಸರಳವಾಗಿ ನಡೆದ ಜಾತ್ರೆಯಲ್ಲಿ ಬೀದಿ ಬದಿಯಲ್ಲಿ ಕೆಲವು ಫಲಹಾರ ಮತ್ತು ಬಜ್ಜಿ ಜಿಲೇಬಿ ಮಾರಾಟದ ಅಂಗಡಿಗಳನ್ನು ಹೊರತು ಪಡಿಸಿ ಬೇರೆ ಅಂಗಡಿಗಳಿರಲಿಲ್ಲ. ಪೊಲೀಸರು ಜನದಟ್ಟಣೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಜನರು ಬೇರೆ ಬೇರೆ ಮಾರ್ಗಗಳಿಂದ ಬಂದು ದೇವರ ದರುಶನ ಮತ್ತು ಕಂಬೋತ್ಸವದಲ್ಲಿ ಪಾಲ್ಗೊಂಡರು.

ಪ್ರತಿವರ್ಷ ಅದ್ಧೂರಿಯಾಗಿ ನಡೆಯುತ್ತಿದ್ದ ಹಾಲೋಕಳಿ ಜಾತ್ರೆ ಈ ವರ್ಷ ಕೊರೊನಾದಿಂದಾಗಿ ತುಂಬಾ ಸರಳವಾಗಿ ಆಚರಿಸಲಾಗಿದೆ.ಸಾಂಕೇತಿಕವಾಗಿ ಕಂಬೋತ್ಸವ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳನ್ನು ಸಾಂಕೇತಿಕವಾಗಿ ನಡೆಸಲಾಗಿದೆ-ವೇಣುಮಾಧವ ನಾಯಕ ವತನದಾರ

ಪ್ರತಿ ವರ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದ ಶ್ರೀ ವೇಣುಗೋಪಾಲಸ್ವಾಮಿ ಜಾತ್ರೆಯಲ್ಲಿ ಈ ವರ್ಷ ತುಂಬಾ ಕಡಿಮೆ ಜನರಿದೆ.ಆದಷ್ಟು ಬೇಗ ಜಗತ್ತಿನಿಂದ ಕೊರೊನಾ ದೂರವಾಗಿ ಬರುವ ವರ್ಷ ಅದ್ಧೂರಿಯಾಗಿ ಜಾತ್ರೆ ನಡೆಯುವಂತಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. -ಸಹನಾ ಎಂ. ಕುಲಕರ್ಣಿ ದೇವರ ಭಕ್ತಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here