ಬಿಸಿ ಬಿಸಿ ಸುದ್ದಿ

ಭಾಗ-14: ಕಡಕೋಳ ಕಾಲಂ: ಮತ್ತೆ ಫಲ್ಗುಣಿಯ ದಿವ್ಯ ಸನ್ನಿಧಿಯಲಿ….

ಸ್ವಲ್ಪ ಸಮಯದ ನಂತರ ಪ್ರಯತ್ನಿಸಿರಿ.., ಚಂದಾದಾರರು ಬೇರೊಂದು ಕರೆಯಲಿ ವ್ಯಸ್ತರಾಗಿದ್ದಾರೆಂಬ ಮಧುರ ಮೋಹಕ ಹೆಣ್ಣು ಸ್ವರವೊಂದು ನಾನು ಮತ್ತೆ ಮತ್ತೆ ಫೋನ್ ಮಾಡಿದಾಗೆಲ್ಲ ಮರುತ್ತರಿಸುತ್ತಲೇ ಇತ್ತು.

ಗಾಂಧೀ ವಿಚಾರಧಾರೆಗಳು… ಕಾರ್ಯಾಗಾರಕ್ಕೆಂದು ಕೊಟ್ಟಿಗೆಹಾರದ ಚಾರ್ಮಾಡಿ ಘಾಟಿಗೆ ಹೋಗಲು ಉತ್ಸುಕನಾದುದು ಜೀವ ಕಾರುಣ್ಯದ ಫಲ್ಗುಣಿಯ ದಿವ್ಯ ಸಾಂಗತ್ಯಕ್ಕಾಗಿ. ಅಷ್ಟಕ್ಕು ಅವಳನ್ನು ನೋಡಿ ಹತ್ತತ್ರ ಇಪ್ಪತ್ತು ವರುಷಗಳೇ ಕಳೆದಿವೆ. ಈ ಅವಧಿಯಲಿ ದೇಶದ ಬದುಕಿನಲ್ಲಂತು ಏನೇನೋ ಬದಲಾವಣೆಗಳಾಗಿವೆ.

ಗೊತ್ತಿಲ್ಲ…ಫಲ್ಗುಣಿಯಲ್ಲೇನಾಗಿದೆಯೆಂದು…!? ಚಾರ್ಮಾಡಿಯ ಘಟ್ಟಕ್ಕೆ ಕಾಲಿಡುತ್ತಿದ್ದಂತೆಯೇ… ತುಂಬಾನೇ ಪ್ರಯಾಸಪಟ್ಟು ಅವಳ ಸೆಲ್ ಫೋನ್ ನಂ. ಗಳಿಸಿಕೊಂಡಿದ್ದೆ. ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಮನುಷ್ಯರಿಂದ ಸೃಷ್ಟಿಸಲಾಗದ ನಿಸರ್ಗ ಸೃಷ್ಟಿ ಪರಿಸರದ ದಟ್ಟನೆಯ ಚಾರ್ಮಾಡಿ ಘಟ್ಟ ಪ್ರದೇಶವದು.

ಮಲಯ ಮಾರುತವೆಂಬ ಫಾರೆಸ್ಟ್ ಗೆಸ್ಚ್ ಹೌಸ್ ಮುಂದೆಯೇ…ಮಲೆ ಮಂಜು ಮುಸುಕಿನ ತೇಲಾಡುವ ಇಬ್ಬನಿಯ ಪರ್ವತವೇ … ಕಣ್ಮುಂದೆ ಮಾತ್ರಅಲ್ಲ… ಕೈಗಳಿಗೇ ಸಿಗುವಂತೆ ತಣ್ಣಗೆ ಚಲಿಸುತ್ತಾ ಗುಡ್ ಮಾರ್ನಿಂಗ್ ಹೇಳುವ ತಿಳಿಮಜ್ಜಿಗೆ ಮೋಡಗಳು… ಆಹಾ..! ನನಗಂತೂ ನಾಲ್ಕು ದಿನ ರಾತ್ರಿ ಕಾಲ ಆಹ್ಲಾದದ… ಅವಿಸ್ಮರಣೀಯ ಅನುಭವದ ಪುಳಕವೇಕೆಂದರೇ…

ಕಲಬುರ್ಗಿ ನೆಲದ ನಲವತ್ತಾರು ಡಿಗ್ರಿ ಸೆಲ್ಸಿಯಸ್ ಕೆಂಡದಂತಹ ಕಡು ಬಿಸಿಲಲಿ ಹುಟ್ಟಿ ಬೆಳೆದಾಂವ. ಹೌದು ಜವಾರಿ ಮುಳ್ಳುಳ್ಳ ಕರಿಜಾಲಿ ಗಿಡಗಳ ಮಹಾ ಬಯಲು ನಾಡಿನಲಿ ಉರಿ ಝಳವನ್ನೆ ಉಂಡುಟ್ಟು ಬೆಳೆದವರು ನಾವು. ಅಬ್ಬಬ್ಬಾ…! ವಿರಾಟ ಸ್ವರೂಪದ ಗಗನ ಚುಂಬಿ ದೇವದಾರೂ ಮರಗಳು ಸೇರಿದಂತೆ ನಿಸರ್ಗ ಜಾತಿಯ ಎಲ್ಲ ಗಿಡ ಮರ ಬಳ್ಳಿಗಳುಳ್ಳ ಏರಿಳಿತಗಳ ಜೀವ ಸಂಕುಲದ ದಟ್ಟ ಕಾನನದ ರಮಣೀಯತೆಯನು ಕುವೆಂಪು ಕಾದಂಬರಿಗಳಲ್ಲಿ ಓದಿ ತಿಳಿದ ನನಗೆ., ಹೀಗೆ… ಕಣ್ತುಂಬಿಸಿ ಕೊಳ್ಳುವ ಅನನ್ಯ ಅನುಭವ ಆಗಿದ್ದು ಕೆಲವೇ ಕೆಲವು ಸಲ ಮಾತ್ರ.

ಫೋನ್ ರಿಂಗಣಿಸಿತು. ಅದು ಅವಳದೇ., ಮಿಸ್ಡ್ ಕಾಲ್. ಹೊಳ್ಳಿ ನಾನೇ ಮಾಡಿದೆ. ಯಾರದು..? ಅವಳಿಂದ.. ಉತ್ತರಿಸಿದೆ. ಎಲ್ಲಿದೀರಿ. ಅದಕೂ ಉತ್ತರಿಸಿದೆ.. ಇಷ್ಟು ಹತ್ತಿರ ಬಂದಿದಿರಾ.. ಮನೆಗೆ ಬನ್ನಿ… ಕರೆದಳು. ಅದೇ ಮನೆ. ಹಿಂದೆಲ್ಲ ಗೇಟು ತೆಗೆದು ಹೋಗುವಾಗ ನಾಯಿಯೊಂದು ಸ್ವಾಗತಿಸುತ್ತಿತ್ತು. ಗೇಟು ತೆಗೆದ ಸೌಂಡಿಗೆ ನಡು ವಯಸಿನ ನೆರೆತ ಕೂದಲ ಹೆಣ್ಣು ಮಗಳು ಹೊರಗೆ ಬಂದಳು. ಗುರುತು ಸಿಗದಷ್ಟು ಬದಲಾಗಿದ್ದಳು. ನಾನು ಹೆಸರು ಹೇಳಿಕೊಂಡೆ. ಬನ್ನಿ , ಬನ್ನಿ ಯಾವಾಗ ಬಂದ್ರಿ.. ಎನ್ನುತ್ತಲೇ ಮನೆಯೊಳಕ್ಕೆ ಕರೆದಳು.

ಬೆತ್ತದ ಕುರ್ಚಿ ಮೇಲೆ ಕುಂತ ಆಕೆಗೆ.. ಯಾಕೆ ಹುಷಾರಿಲ್ಲವೇ.. ನಾನು ಕೇಳಿದ್ದಕ್ಕೆ .. ಏನಿಲ್ಲ ಸೌಖ್ಯವಾಗಿದೇನೆ. ವಯಸ್ಸಾಯ್ತಲ್ಲ… ನೀವು ಮಾತ್ರ ಹಾಗೇ ಇದೀರಿ ಹುಡುಗನಂತೆ… ಸಣ್ಣ ನಗೆಯೊಂದಿಗೆ ಸರ್ಟಿಫಿಕೆಟ್ ಕೊಟ್ಟಳು. ನನಗೆ ಆತ್ಮರತಿಯಂತಹ ಖಂಡುಗ ಖುಷಿಯೆನಿಸಿ… ಥ್ಯಾಂಕ್ಸ್ ಹೇಳಬೇಕೆನಿಸಿದರೂ ಸುಮ್ಮನಾದೆ.

ಗೋಡೆಯ ಮೇಲೆ ಗೆಳೆಯ ಎಸ್.ಪಿ.(ಸೂರ್ಯಪ್ರಕಾಶ)ಯ ಫೋಟೋದ ಕೆಳಗೆ ಎನ್ಕೌಂಟರ್ ಡೇಟ್ ಪಕ್ಕ ” ಮರಣ “ವೆಂದು ಬರೆದಿತ್ತು. ಅವನ ಫೋಟೋಕೊಂದು ಲಾಲ್ ಸಲಾಂ ಹೇಳಿಕೊಂಡೆ ಮನದೊಳಗೆ. ಹಾರ ಹಾಕಿದ ಪಕ್ಕದ ಇನ್ನೆರಡು ಫೋಟೋಗಳು ಪ್ರಾಯಶಃ ಅವಳ ಅಪ್ಪ ಅವ್ವ ಇರಬೇಕು.

ಕ್ರಾಂತಿ, ವಿಮೋಚನಾ ಎಲ್ಲಿ ಕಾಣಸ್ತಿಲ್ಲ., ಕೇಳಿದೆ. ಮಗಳು ಎಂಬಿಎ ಮಾಡಿಕೊಂಡು ಬೆಂಗಳೂರಲಿ ಕೆಲಸಕ್ಕೆ ಸೇರಿದಾಳೆ. ಮಗ ಐ.ಎ.ಎಸ್. ಕೋಚಿಂಗ್ ಗೆ ದಿಲ್ಲಿಯಲಿದಾನೆ. ಅಡಿಗೆ ಮನೆಯೊಳಕ್ಕೆ ಹೋಗಿ ಕಾಡಿನ ತೋಟದ ಹಣ್ಣಿನ ಜ್ಯೂಸ್ ಮಾಡಿ ತಂದಳು. ಈ ಕಾಡಡವಿಯಲಿ ಒಂಟಿಯಾಗಿರಲು ಭಯವಾಗ್ತದಲ್ಲವೇ ಅಂತ ಕೇಳ ಬೇಕೆನಿಸಿದರೂ ಕೇಳಲಾಗಲಿಲ್ಲ.. ಎನ್ಕೌಂಟರ್ ಗೆ ಬಲಿಯಾದ ಗೆಳೆಯನ ಕುರಿತು ಕೇಳಲು ಧೈರ್ಯ ಸಾಲಲಿಲ್ಲ. ಹೀಗೆ ನನ್ನೊಳಗೆ ಕೇಳಲಾಗದ ಕೇಳದಿರಲಾಗದ ಹತ್ತಾರು ಪ್ರಶ್ನೆಗಳನ್ನು ನುಂಗಿ ಕುಂತೆ.

ಅವಳಿಗೆ ನನ್ನ ಮನೋಗತ ಗೊತ್ತಾದಂತೆ ಅವಳೇ ಮಾತಿಗೆಳೆದು ಕಾರ್ಯಾಗಾರ ಕುರಿತು ಕೇಳಿದಳು. ಹೇಳಿದೆ. ಚುನಾವಣಾ ಫಲಿತಾಂಶದ ಮರಣೋತ್ತರ ಪರೀಕ್ಷೆಯ ನನ್ನ ಮಾತುಗಳು ಆಕೆಗೆ ರುಚಿಸಲಿಲ್ಲ. ನಾವೆಲ್ಲ ಪ್ರತಿಕ್ರಿಯೆಯೆಂಬ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸುವ ಸಾಂಕ್ರಾಮಿಕ ರೋಗಿಗಳೆಂತೆನಿಸಿತು..

ಕೆಲ ಕ್ಷಣ ಇಬ್ಬರೂ ಸುಮ್ಮನೆ ಕುಂತೆವು. ಬರ್ತೇನೆಂದು ನಾನು ಎದ್ದು ನಿಂತೆ… ಸಂಜೆ ಊಟಕ್ಕೆ ಬನ್ನಿ.. ಕರೆದಳು. ಹಾಂ.. ನೋಡುತ್ತೇನೆ.. ಎಂದು ಹಾರಿಕೆ ಉತ್ತರದ ದನಿ ತೆಗೆದೆ.

ಗಾಂಧಿಯೊಳಗೊಬ್ಬ ನಕ್ಸಲೈಟ್ ಇದ್ದಾನೆಂದು ಲಂಕೇಶ್ ಮೇಷ್ಟ್ರು ಹೇಳುತ್ತಿದ್ದ ಗಟ್ಟಿಮಾತು.. ಪಂಡಿತ ಅಸಾದಲಿ ಖಾನರ ರುದ್ರವೀಣೆಯಂತೆ ನನ್ನೆದೆಯೊಳಗೆ ನಿಶ್ಯಬ್ದದಲಿ ನಿನಾದಿಸತೊಡಗಿತು. ಹೊರಗಡೆ ನನಗಾಗಿ ಕಾರು ಕಾಯುತ್ತಿರುವುದು ನೆನಪಾಯಿತು.

 – ಮಲ್ಲಿಕಾರ್ಜುನ ಕಡಕೋಳ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago