ಬೆಂಗಳೂರು: ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುವ ವನ ಸಂಪತ್ತು ಅತ್ಯಮೂಲ್ಯವಾದ ಬಳುವಳಿಯಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.
ಬುಧವಾರ ವೈಟ್ ಫೀಲ್ಡ್ ವಿಭಾಗ, ಕೆ.ಆರ್.ಪುರ ಪೊಲೀಸ್ ಠಾಣೆಯ ಮದೀನಾ ಮಸೀದಿ ಹಾಗೂ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಟ್ಟ ಬಳಿಕ ಅವರು ಮಾತನಾಡಿದರು.ಇಂದು ವಿಶ್ವ ಪರಿಸರ ದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ರಾಜಧಾನಿ ಬೆಂಗಳೂರನ್ನು ನೋಡಿದರೆ ನಾವೇ ಪರಿಸರವನ್ನು ಹಾಳು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಅವರು ಹೇಳಿದರು.
ಗಿಡಗಳನ್ನು ಬೆಳೆಸಬೇಕು. ಆ ಗಿಡ ನಮಗೆ ನೆರಳು, ಶುದ್ಧ ಗಾಳಿಯನ್ನು ನೀಡುತ್ತದೆ. ಪರಿಸರ ಹಾಳಾಗುವುದನ್ನು ತಡೆಯುತ್ತದೆ. ವೃಕ್ಷವನ್ನು ನೀವು ರಕ್ಷಸಿದರೆ, ವೃಕ್ಷ ನಿಮ್ಮನ್ನು ಕಾಪಾಡುತ್ತದೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸುವ ಹವ್ಯಾಸ ಬೆಳೆಸಿಕೊಂಡರೇ, ಅದೇ ನಾವು ಮುಂದಿನ ಪೀಳಿಗೆಗೆ ಕೊಡುವಂತಹ ಅತ್ಯಮೂಲ್ಯ ವಾದ ಬಳುವಳಿಯಾಗಿರುತ್ತದೆ ಎಂದು ಸುನೀಲ್ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ಅಪರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್, ಕೆ.ಆರ್.ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಯರಾಜ್, ಮದೀನಾ ಮಸೀದಿ ಅಧ್ಯಕ್ಷ ಅಬ್ದುಲ್ ರಫೀಕ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಬ್ರೇಝ್ ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.