ಧಾರವಾಡ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ(ರಿ) ಧಾರವಾಡ. ಹಾಗೂ ತುಂಗಭದ್ರಾ ಮಹಿಳಾ ಮಂಡಳದ ಸಂಯುಕ್ತಾಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಧಾರವಾಡದ ಹಳಿಯಾಳ ರಸ್ತೆಯಲ್ಲಿರುವ ತುಂಗಭದ್ರಾ ವಿನ್ಯಾಸ ಪಾರ್ಕನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರಾದ ಪ್ರೊ. ಸಿ. ಆರ್. ಕರಿಸಿದ್ದಪ್ಪ ಅವರು ಮಾತನಾಡಿ, ತುಂಗಭದ್ರಾ ಮಹಿಳಾ ಮಂಡಳಿ ಮತ್ತು ಪರಿಸರ ಸಮಿತಿ ಇಂತಹ ಒಂದು ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯವಾದ ಕಾರ್ಯವಾಗಿದೆ. ಇತ್ತಿಚಿನ ದಿನಮಾನಗಳಲ್ಲಿ ಪರಿಸರ ರಕ್ಷಣೆಯ ಬಗ್ಗೆ ಪ್ರಜ್ಞೆ ಎಲ್ಲರಲ್ಲೂ ಬರುತ್ತಿದೆ. ಆದರೆ ಕಾರ್ಯರೂಪಕ್ಕೆ ತರುವಲ್ಲಿ ನಿಧಾನವಾಗುತ್ತಿದೆ. ಇತ್ತಿಚೀಗೆ ಪರಿಸರ ನಾಶದಿಂದ ಅನೇಕ ಅನಾಹುತಗಳು ಸಂಭವಿಸುತ್ತಿವೆಯೋ ಅದಕ್ಕೆ ಕಾರಣ ನಾವೇ, ಅದಕ್ಕೆ ಕೇವಲ ಇದೊಂದು ಆಚರಣೆಯಾಗದೇ ಕಾರ್ಯರೂಪಕ್ಕೆ ತರುವಂತಹ ಕಾರ್ಯಕ್ರಮ ಆಗಬೇಕೆಂದು ಎಲ್ಲರ ಆಶಯ, ಪರಿಸರ ಆಚರಣೆ ಕೇವಲ ಕೆಲವರಿಗೆ ಮಾತ್ರ ಸೀಮಿತವಲ್ಲ, ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರಾದ ಪ್ರೊ. ಎಸ್. ಸಿ. ಪಾಟೀಲ್ ಮಾತನಾಡಿ, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳಬೇಕಿದೆ. ಬೇರೆ ಬೇರೆ ದೇಶಗಳಲ್ಲಿ ಕಸ ಹಾಕಿದರೆ ಅಲ್ಲಿ ದಂಡ ವಸೂಲಿ ಮಾಡುತ್ತಾರೆ, ಹಾಗಾಗಿ ಅಲ್ಲಿನ ಜನರಲ್ಲಿ ಪರಿಸರ ಮತ್ತು ಸ್ವಚ್ಛತೆ ಬಗ್ಗೆ ಅಷ್ಟೊಂದು ಜಾಗೃತಿ ಇದೆ. ಹಾಗೆಯೇ ನಮ್ಮ ಜನಗಳಲ್ಲೂ ಕೂಡ ಆ ಒಂದು ಜಾಗೃತಿ ಮತ್ತು ಪಜ್ಞೆಯನ್ನ ಬೇಳೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಇನ್ನೊರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಪರಿಸರ ಪ್ರೇಮಿ, ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾದ ಶಿವಶರಣ ಪರಪ್ಪಗೋಳ ಅವರು ಮಾತನಾಡಿ, ಪರಿಸರ ದಿನಾಚರಣೆಯನ್ನ ಔಪಚಾರಿಕವಾಗಿ ಒಂದು ದಿನಕ್ಕೆ ಸೀಮಿತಗೋಳಿಸದೇ, ಪರಿಸರವನ್ನ ಸಂರಕ್ಷಿಸುವುದು ನಮ್ಮ ಜೀವನದ ಭಾಗವಾಗಬೇಕಿದೆ. ದಿನನಿತ್ಯ ಉಸಿರಾಡೋಕೆ ಶುದ್ಧವಾದ ಗಾಳಿ, ನೆರಳು, ಹಣ್ಣು ನೀಡುತ್ತಿರುವ ಗಿಡ ಮರಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಜಾಗತೀಕ ತಾಪಮಾನದಿಂದ ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬರೂ ಕೂಡ ಸಸಿಗಳನ್ನ ನೆಟ್ಟು ಬೆಳೆಸುವ ಜವಾಬ್ದಾರಿಯನ್ನ ತೆಗೆದುಕೊಳ್ಳಬೇಕಿದೆ. ಮಕ್ಕಳು ವಿದ್ಯಾರ್ಥಿ ಯುವಜನರಲ್ಲೂ ಕೂಡ ಪರಿಸರ ಪ್ರಜ್ಞೆ ಮೂಡಿಸುವುದು ಅಗತ್ಯವಾಗಿದೆ.
ಮರಗಳು ಸಾರ್ವಜನಿಕ ಆಸ್ತಿ ಇದ್ದಂತೆ ಅವುಗಳನ್ನ ಅಧಿಕಾರಿಗಳು ಕಡಿಯುತ್ತಿದ್ದರೆ ಅದನ್ನು ಪ್ರಶ್ನಿಸುವ ಮನೋಭಾವನೆಯನ್ನು ಸಾರ್ವಜನಿಕರು ಬೆಳೆಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಪರಸರ ನಾಶದಿಂದ ಶುದ್ಧವಾದ ಗಾಳಿ ನೀರು ಆಹಾರವಿಲ್ಲದೇ ಪರಿತಪಿಸುವಂತಹ ಕಾಲ ಬರುತ್ತದೆ. ಹಾಗಾಗಿ ಎಲ್ಲರೂ ಎಚ್ಚೆತ್ತುಕೊಂಡು ಪರಿಸರವನ್ನು ಸಂರಕ್ಷಿಸುವತ್ತ ಬೆಳೆಸುವತ್ತ ಹೆಜ್ಜೆ ಹಾಕಬೇಕಿದೆ. ಹೆತ್ತ ತಾಯಿ ಮಕ್ಕಳನ್ನು ಲಾಲನೆ ಪೋಷಣೆ ಮಾಡಿ ಬೆಳೆಸುವಂತೆ, ನಾವು ಸಸಿಗಳನ್ನ ನೆಡುವುದು ಮಾತ್ರವಲ್ಲದೇ, ಅದನ್ನು ನೆಟ್ಟು ನೀರು ಹಾಕಿ ಪೋಷಣೆ ಮಾಡಿ ಬೇಳೆಸಬೇಕಿದೆ ಎಂದು ಹೇಳಿದರು.
ಅದೇ ರೀತಿಯಾಗಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಸದಸ್ಯರಾದ ವಿಜಯಾನಂದ ಶೆಟ್ಟಿ ಅವರು ಮಾತನಾಡಿ ಇಂತಹ ಒಂದು ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ, ಗಿಡ ಮರಗಳನ್ನು ಸಂರಕ್ಷಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ನನ್ನ ಸಹಾಯ ಸಹಕಾರ ಬೆಂಬಲವನ್ನು ಸದಾ ನೀಡುತ್ತೇನೆ, ಕ್ಷೇತ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೆಳಿದರು.
ಈ ಕಾರ್ಯಕ್ರಮದ ಅಧ್ಯಕ್ಚತೆ ವಹಿಸಿದಂತಹ ತುಂಗಭದ್ರಾ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಈರೋಜಿ ಅವರು ಮಾತನಾಡಿ, ಒಬ್ಬರಿಂದ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ಎಲ್ಲರೂ ಕೂಡ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಕೇಂದ್ರ ಸರ್ಕಾರ ಸ್ವಚ್ಚ ಭಾರತ ಯೋಜನೆಯನ್ನ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಗೌಳಿಯವರ, ಶಶಿಕಲಾ ಪಾಟೀಲ್, ನಂದಾ ಗುಳೇದಗುಡ್ಡ, ಸುಮಾ ಗಿರಡ್ಡಿ, ದೀಪಾ ಪಾಟೀಲ್, ಮಹಾದೇವಿ ಕೊಪ್ಪದ, ಶಾಂತಕ್ಕ ಕೊಪ್ಪದ, ಸುನೀತಾ ತಪಶೆಟ್ಟಿ, ಲತಾ ಕುಂಬಾರ, ಮುತ್ತು ಬೆಳ್ಲಕ್ಕಿ, ಯಶೋದ ಸುಣಗಾರ, ಶೋಭಾ ಬೆಲೂರಮಠ, ಅನೀತಾ ಹಿರೇಮಠ ಇತರರು ಇದ್ದರು.
ವಾಣೀಶ್ರೀ ಮೊಟೆಕರ ನಿರೂಪಿಸಿದರು, ಮಂಜುಳಾ ಪಾಟೀಲ ಸ್ವಾಗತಿಸಿದರು, ಅನೀತಾ ಹಿರೇಮಠ ವಂದಿಸಿದರು.