ನಮ್ಮೆಲ್ಲರ ಸಾಕ್ಷಿ ಪ್ರಜ್ಞೆಯಾದ ಗಿರೀಶ್ ಕಾರ್ನಾಡರು ನಮ್ಮಿಂದ ಇಂದು ಅಗಲಿ ಹೋಗಿದ್ದಾರೆ. ಆದರೆ ಅವರು ಕಟ್ಟಿಕೊಟ್ಟ ಬಿತ್ತಿ ಹೋದ ಬೀಜಗಳು ನಮ್ಮೆಲ್ಲರ ಅಂತರಂಗದಲ್ಲಿ ಮೊಳಕೆ ಒಡೆದಿವೆ. ಅವರ ವಿಚಾರಧಾರೆಯ ಎಳೆ ಹಿಡಿದು ಹೊರಟ ಎಷ್ಟೋ ಕನಸಿನ ಹೂಗಳು ಈಗಾಗಲೆ ಮಿಡಿಯಾಗಿ, ಕಾಯಾಗಿ , ಹಣ್ಣಾಗಿ ನಮ್ಮ ಕಣ್ಣ ಮುಂದೆಯೆ ನಳನಳಿಸುತ್ತಿವೆ. ಗಿರೀಶ್ ಕರ್ನಾಡರು ತಲೆದಂಡ ಬರೆದಾಗ ಅವರ ಬಗೆಗೆ ಕೆಲವು ಆಕ್ಷೇಪಗಳು ಇದ್ದವು. ಅವನ್ನು ಹೊರತು ಪಡಿಸಿ ಅವರೊಬ್ಬ ಗಟ್ಟಿಯಾದ ನಿಲುವುಗಳು ಹೊಂದಿದ ಬರಹಗಾರರಾಗಿದ್ದರು. ನಿರ್ದೇಶಕರಾಗಿದ್ದರು. ಅತ್ಯುತ್ತಮ ನಟರೂ ಆಗಿದ್ದರು.
ಇದಷ್ಟೇ ಅಲ್ಲದೆ ಕಲಾವಿದ, ಬರಹಗಾರ, ನಾಟಕಕಾರ ಕೇವಲ ತನ್ನ ಲೋಕದಲ್ಲಿ ಮುಳುಗಿ ಹೋಗದೆ ವಾಸ್ತವಿಕ ಜಗತ್ತಿನಲ್ಲೂ ತನ್ನ ಪಾತ್ರವನ್ನು ಅವಕಾಶ ಸಿಕ್ಕಾಗಲೆಲ್ಲ ತೋರ್ಪಡಿಸುತ್ತಿದ್ದರು. ಪಿ.ಲಂಕೇಶ್ ಅವರೊಂದಿಗೆ ಬೆಳೆದ ಸಖ್ಯ ಗೌರಿ ಲಂಕೇಶ್ ವರೆಗೂ ಹಾಗೆ ಮುಂದುವರೆಯಿತು. ರಾಷ್ಟ್ರದಲ್ಲಿ ಹಿಂದೂ ಭಕ್ತಿಯ ಹೆಸರಿನ ಮೇಲೆ ನಡೆದ ನಂಗಾನಾಚ ವಿರುದ್ಧ ಧ್ವನಿ ಎತ್ತಿದವರಲ್ಲಿ ಕಾರ್ನಾಡರೂ ಒಬ್ಬರಾಗಿದ್ದರು. ದನದ ಸೆಗಣಿ ಗಂಜಳಕ್ಕಿಂತಲೂ ಮನುಷ್ಯತ್ವ ಶ್ರೇಷ್ಠ ಎಂಬುದು ಅವರ ಚಿಂತನೆಯ ಒಟ್ಟು ಧ್ವನಿಯಾಗಿತ್ತು.
‘ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ?’ ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು. ತಮ್ಮ ಗಟ್ಟಿಯಾದ ಅಷ್ಟೇ ದಿಟ್ಟವಾದ ಹೆಜ್ಜೆಗಳನ್ನು ಇಡುವ ಮೂಲಕ ಕನಸುಗಳನ್ನೂ ಕಟ್ಟಿಕೊಟ್ಟರು. ಇಡೀ ನಾಡಿನ ತುಂಬ ತಮ್ಮ ಚಟುವಟಿಕೆಗಳ ಮೂಲಕ ಎಲ್ಲರ ಹೆಗ್ಗಳಿಕೆ ಪಾತ್ರರಾದರು. ಜ್ಞಾನಪೀಠ ಪ್ರಶಸ್ತಿಯ ಪುರಸ್ಕಾರವೂ ಅವರ ಮಡಿಲಿಗೆ ಏರಿತು.
ಆದರೆ ಬಹಳಷ್ಟು ಜನ ಸಾಹಿತಿಗಳು ಕಲಾವಿದರು ಪ್ರಶಸ್ತಿ ಫಲಗಳು , ಸ್ಥಾನ ಮಾನಗಳು ದೊರೆತಾದ ಮೇಲೆ ಎಲ್ಲರ ಜೊತೆ ಅಂದರೆ ಸಾಮಾನ್ಯರ ಜೊತೆ ಸಾಮಾನ್ಯರಾಗಿ ಬೆರೆಯುವುದು ಕಮ್ಮಿ. ತಮ್ಮ ಎಂದಿನ ಪ್ರಶಸ್ತಿಯ ಗುಂಗಿನಿಂದ ಹೊರಗಡೆ ಬಂದಿರುವುದಿಲ್ಲ. ಆ ಪ್ರಶಸ್ತಿ ಹಾರ ತುರಾಯಿಗಳಲ್ಲಿಯೇ ಕೊಳೆತು ಹೋಗಿರುತ್ತಾರೆ. ಈ ಮಾತಿಗೆ ಕಾರ್ನಾಡರು ಅಪವಾದವಾಗಿದ್ದರು. ತಾವು ನಂಬಿದ ತತ್ವ ಸಿದ್ಧಾಂತಗಳು ತಮ್ಮ ಕಣ್ಣ ಮುಂದೆಯೆ ನಗೆಪಾಟಲಿಗೆ ಈಡಾಗುತ್ತಿದ್ದರೆ ತಕ್ಷಣವೆ ಅದಕ್ಕೆ ಸ್ಪಂದಿಸುತ್ತಿದ್ದರು. ಬೆಂಗಳೂರಿನ ಟೌನ ಹಾಲ ಮುಂದೆ ನಡೆಯುವ ಏನೆಲ್ಲ ಪ್ರತಿಭಟನೆಯಲ್ಲಿಯೂ ಅವರ ಹಾಜರಿ ಇರುತ್ತಿತ್ತು.
ಪ್ರಜ್ಞಾವಂತ ನಡಾವಳಿಯ ಬರಹಗಾರರನ್ನು ಕಂಡರೆ ಗುಲಾಮರಿ ಉರಿ ಉರಿ. ಕಾರ್ನಾಡರ ಬಗೆಗೂ ಸಂಘಿಗಳು ಕಿಡಿಕಾರಿದವು. ನಾನೂ ನಗರ ನಕ್ಸಲ್ ವಾದಿ ಎಂದು ಬರಹವೊಂದನ್ನು ಕೊರಳಲ್ಲಿ ಹಾಕಿಕೊಂಡು ಪ್ರತಿಭಟನೆಗೆ ಇಳಿದಾಗ ಬಹಳಷ್ಟು ಜನ ಕುಹಕದ ಮಾತನಾಡಿದರು. ಆಗಲೂ ಅವರ ಮಾತನ್ನು ಕಾರ್ನಾಡ ನಗು ನಗುತ್ತಾ ಸ್ವೀಕರಿಸಿದರು. ಏಕೆಂದರೆ ಅವರಿಗೆ ಸತ್ಯ ಗೊತ್ತಿತ್ತು. ಸನಾತನವಾದಿಗಳು ವಿಚಾರವಾದವನ್ನು ಒಪ್ಪಲಾರರು. ಧರ್ಮವನ್ನು ಅಫೀಮನ್ನಾಗಿ ಜನಗಳಿಗೆ ನೀಡುವವರು ಧರ್ಮವೊಂದು ದಯಯ ತಳಹದಿ ಎಂದು ಅರಿಯಲಾರರು ಎಂದು. ನನ್ನ ರಾಜ್ಯದಲ್ಲಿ ಪ್ರತಿಯೊಂದು ಕಾರ್ಯವೂ ಪ್ರಾರ್ಥನೆಯಾಗಬೇಕು. ಪ್ರತಿಯೊಂದು ಪ್ರಾರ್ಥನೆಯೂ ನಮ್ಮನ್ನು ದೇವರೆಡೆಗೆ ಒಯ್ಯುವ ಮೆಟ್ಟಿಲಾಗಬೇಕು. ಆದರೆ ಇಲ್ಲಿ ಪ್ರಾರ್ಥನೆಗೂ ರಾಜಕಾರಣದ ಸೋಂಜು ಬಡಿದೆ ಎಂಬ ತುಘಲಕ್ ನಾಟಕದಲ್ಲಿ ಬರೆಯುವ ಮೂಲಕ ನಮ್ಮ ಇಂದಿನ ರಾಜಕೀಯ ವಸ್ತು ಸ್ಥಿತಿಯನ್ನು ಬಿಚ್ಚಿಟ್ಟರು.
‘ಒಬ್ಬ ಅಗಸ ತೊಳೆದಷ್ಟು ಕೊಳೆಯನ್ನು ಜಗತ್ತಿನ ಯಾವ ಧರ್ಮ ಗುರುವು ತೊಳೆದಿಲ್ಲ !’ ಎಂಬುದು ಅವರಿಗೆ ಖಚಿತವಾಗಿತ್ತು. ಆದರೂ ಅವರು ತಮ್ಮ ಮಾನವೀಯ ನಡಾವಳಿಕೆಗಳ ಮೂಲಕ ಸಮಾಜಕ್ಕೆ ಅಂಟಿದ ಕೊಳೆಯನ್ನು ತೊಳೆಯಲು ಮುಂದಾಗುತ್ತಿದ್ದರು. ಆಗ ರಾಕ್ಷಸಿ ಪ್ರವೃತಿಯನ್ನು ರೂಢಿಸಿಕೊಂಡ ಕೆಲವು ಮನಸ್ಸುಗಳು ಈಗ ಸಂತೋಷ ವ್ಯಕ್ತ ಪಡಿಸುತ್ತಿವೆ. ‘ಸಾವನ್ನು ಮರಣವೇ ಮಹನವಮಿ’ ಎಂದು ಸ್ವೀಕರಿಸುವ ಛಲ ಕಾರ್ನಾಡರಿಗೆ ಇತ್ತು. ಆದ್ದರಿಂದಲೆ ತಮ್ಮ ಜೀವವಿಲ್ಲದ ದೇಹಕ್ಕೆ ಸರಕಾರಿ ಸಕಲ ಗೌರವ ಎಂಬ ನಾಟಕ ಗೀಟಕ ಬೇಡ ಎಂದು ತಮ್ಮ ಕುಟುಂಬದ ಸದಸ್ಯರಲ್ಲಿ ಹೇಳಿಕೊಂಡಿದ್ದಾರೆ. ಅವರ ಶರೀರವೂ ಸಹ ಯಾವುದೆ ಧಾರ್ಮಿಕ ವಿಧಿ ವಿಧಾನ ಇಲ್ಲದೆ ನೆರವೇರಿಸಬೇಕೆಂದೂ ತಿಳಿಸಿದ್ದಾರೆ. ಈ ಮೂಲಕ ಅವರು ಅನಂತದೆಡೆಗೆ ಪಯಣಿಸಿದ್ದಾರೆ.
ಎಂಬ ಅಲ್ಲಮಪ್ರಭುವಿನ ವಚನದಂತೆ ಬಯಲು ಬಯಲನ್ನು ಬಿತ್ತಿ ಬಯಲು ಬಯಲನ್ನೆ ಬೆಳೆದು ಬಯಲು ಬಯಲಾದರು ಕರ್ನಾಡರು. ಅವರ ಬಯಲ ಜೀವನ ಬಯಲ ಭಾವನೆ ನಮ್ಮೆಲ್ಲರೊಳಗೆ ಬಯಲು ಬಯಲಾಯಿತ್ತು. ಸಮಾಜವನ್ನು ಪ್ರೀತಿಸಿದ ಗೌರವಿಸಿದ ಸಮಾಜದೊಂದಿಗೆ ಜೀವಂತವಾಗಿ ಸ್ಪಂದಿಸಿ ಜೀವಂತ ಬದುಕಿದ ಕಾರ್ನಾಡ ಸತ್ಯವನ್ನು ನಂಬಿ ಬಯಲಾಗಿದ್ದಾರೆ. ಅಂದರೆ ನಮ್ಮೆಲ್ಲರೊಳಗೆ ಬೆರೆತು ಹೋಗಿದ್ದಾರೆ. ಕಾರ್ನಾಡರಿಗೆ ಸಾವು ಇಲ್ಲ. ಅರಿತವರು ಸಾಯುವುದೂ ಇಲ್ಲ. ಅರಿತುಕೊಂಡಿದ್ದ ಕಾರ್ನಾಡರು ನಮ್ಮೆಲ್ಲರೊಳಗೆ ಪ್ರಜ್ಞೆಯಾಗಿ ಜೀವಂತವಾಗಿರುತ್ತಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
View Comments
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಲೇಖಕರ ಶ್ರಮಕ್ಕೆ.