ಕಲಬುರಗಿ: ಯಾರೂ ಕೂಡ ಬಯಲು ಶೌಚಾಲಯಕ್ಕೆ ಹೋಗದೆ ಗ್ರಾಮದ ಸ್ವಚ್ಛತೆ ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಶೌಚಾಲಯಗಳನ್ನು ಉಪಯೋಗಿಸಬೇಕು ಎಂದು ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಅವರು ಕರೆ ನೀಡಿದ್ದಾರೆ.
ಮಂಗಳವಾರ ನಾಗನಹಳ್ಳಿಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕಲಬುರಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವುಗಳ ಸಂಯಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಲ್ಲಿ ಸ್ವಚ್ಛ ಮೇವ ಜಯತೇ ಅಂಗವಾಗಿ ಹಮ್ಮಿಕೊಂಡ ಜನಾಂದೋಲನದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಬಯಲು ಮುಕ್ತ ಶೌಚ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ೨ ಲಕ್ಷ ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿ ಕೊಡಲಾಗಿದೆ. ಶೌಚಾಲಯಗಳ ಬಳಕೆ ಕುರಿತು ಈಗಾಗಲೇ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಸಹ ಮಾಡಲಾಗಿದೆ. ಸಾರ್ವಜನಿಕರು ಸ್ವಚ್ಛ ಗ್ರಾಮದ ಪರಿಕಲ್ಪನೆಗೆ ಸ್ವಚ್ಛ ಮನೋಭಾವ ಹೊಂದುವುದು ಅತಿ ಅವಶ್ಯಕವಾಗಿದೆ ಎಂದರು.
ಜಿಲ್ಲೆಯಲ್ಲಿ ೧.೨೫ ಲಕ್ಷಕ್ಕೂ ಅಧಿಕ ಗಿಡ ನೆಡುವ ಗುರಿ:- ಸ್ವಚ್ಛ ಮೇವ ಜಯತೇ ಆಂದೋಲನ ಅಂಗವಾಗಿ ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ೧ ಲಕ್ಷಗಳಂತೆ ಒಟ್ಟು ೩೦ ಲಕ್ಷ ಗಿಡ ನೆಡುವ ಗುರಿ ಇಟ್ಟುಕೊಳ್ಳಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಜೂನ್ ೧೧ ರಿಂದ ಜುಲೈ ೧೨ರ ವರೆಗೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಲಾ ೫೦೦ ರಂತೆ ಒಟ್ಟಾರೆ ೧.೨೫ ಲಕ್ಷಕ್ಕು ಅಧಿಕ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಇಲ್ಲಿನ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿಯೆ ಸುಮಾರು ೨೦೦೦ ಗಿಡಗಳನ್ನು ನೆಡಲಾಗುವುದು ಎಂದರು.
೨೦೧೯-೨೦ ಜಲಾಮೃತ ವರ್ಷ:- ಬರಗಾಲ ಮತ್ತು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ನಮ್ಮ ಹೋರಾಟ ನಿರಂತರವಾಗಿದೆ. ಕಳೆದ ಬಾರಿಕ್ಕಿಂತ ಈ ಬಾರಿ ಜಿಲ್ಲೆಯಲ್ಲಿ ಭೀಕರ ಬರದ ಪರಿಸ್ಥಿತಿ ಎದುರಾಗಿದೆ. ಜಲಮೂಲಗಳ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ೨೦೧೯-೨೦ನೇ ಸಾಲನ್ನು ಜಲಾಮೃತ ವರ್ಷವೆಂದು ಘೋಷಣೆ ಮಾಡಿದೆ. ನೀರಿನ ಬಗ್ಗೆ ಮಹತ್ವ ಸಾರಲು ಜನಾಂದೋಲನದ ಭಾಗವಾಗಿ ಸಂಚಾರಿ ವಾಹನವು ಜಿಲ್ಲೆಯಲ್ಲಿ ಸಂಚರಿಸಿ ನೀರಿನ ಸಂರಕ್ಷಣೆ, ಅರಿವು, ಮಿತವ್ಯಯ ಬಳಕೆ ಮತ್ತು ಪರಿಸರ ಹಸರೀಕರಣ ಬಗ್ಗೆ ಜಾಗೃತಿ ಉಂಟು ಮಾಡಲಾಗುತ್ತದೆ. ಸಾರ್ವಜನಿಕರು ಹಸರೀಕರಣ ಕರ್ನಾಟಕ್ಕೆ ಸಹಕಾರ ನೀಡಬೇಕು ಎಂದರು.
ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ಧು ಸಿರಸಗಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಶೇ.೧೦೦ ರಷ್ಟು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಈಗಾಗಲೇ ಘೋಷಿಸಲಾಗಿದೆ. ಮಹಿಳೆಯರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಈ ಶೌಚಾಲಯಗಳನ್ನು ಬಳಸುವ ಮೂಲಕ ಸ್ವಚ್ಛ ಪರಿಸರಕ್ಕೆ ಕಾರಣರಾಗಬೇಕು. ಸ್ವಚ್ಛತೆಯನ್ನು ನಮ್ಮಿಂದಲೆ, ನಮ್ಮ ಮನೆಯಿಂದಲೇ ಆರಂಭಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ ಅವರು ಮಾತನಾಡಿ, ಸಿಂಗಾಪುರ ಮಾದರಿಯಲ್ಲಿ ಇಲ್ಲ್ಲಿಯೂ ಶಾಲಾ ಮಕ್ಕಳಿಗೆ ಒಂದರಿಂದ ೧೦ನೇ ತರಗತಿ ವರೆಗೆ ಕನಿಷ್ಠ ನಾಲ್ಕೈದು ಗಿಡ-ಮರಗಳನ್ನು ಬೆಳೆಸುವಂತಹ ನಿಯಮಗಳನ್ನು ಜಾರಿಗೆ ತಂದಲ್ಲಿ ಹಸಿರೀಕರಣ ಕರ್ನಾಟಕಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಲ ವರ್ಷ ಕುರಿತು ವಿಶೇಷ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅಲ್ಲದೆ ಕಾರ್ಮಿಕ ಇಲಾಖೆಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ಲೇಬರ್ ಕಾರ್ಡ ವಿತರಣೆ, ಐಇಸಿ ಚಟುವಟಿಕೆಯಡಿ ಮಹಿಳಾ ಕಾರ್ಮಿಕರಿಗೆ ಸೀರೆ ಮತ್ತು ಪುರುಷ ಕಾರ್ಮಿಕರಿಗೆ ಟಿ.ಶರ್ಟ್ ವಿತರಣೆ ಮಾಡಲಾಯಿತು.
ಸ್ವಚ್ಛ ಮೇವ ಜಯತೇಅಂಗವಾಗಿ ಸ್ವಚ್ಛತಾ ರಥಕ್ಕೆ ಚಾಲನೆ ನೀಡಿದ ಅತಿಥಿ ಗಣ್ಯರು ಪೊಲೀಸ್ ತರಬೇತಿ ಕೇಂದ್ರದ ಆವರಣದಲ್ಲಿ ಸಾಂಕೇತಿಕವಾಗಿ ಸಸಿಗಳನ್ನು ನೆಟ್ಟು ನೀರು ಎರೆದರು. ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್ ಚವ್ಹಾಣ, ಪಿಟಿಸಿ ಡಿವೈ.ಎಸ್‌ಪಿ ಎಂ.ಎಂ.ಯಾದವಾಡ, ನಂದೂರ(ಕೆ) ಗ್ರಾಮ ಪಂಚಾಯತ ಅಧ್ಯಕ್ಷೆ ನಿಂಗಮ್ಮ, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ನೋಡಲ್ ಅಧಿಕಾರಿ ಮಹಾದೇವ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.