ಇನ್ನೇನು ಎರಡೇ ಎರಡು ದಿನಬಾಕಿ. ಜೂನ್ 13 ರ ಸಂಜೆಯಷ್ಟೊತ್ತಿಗೆ ಸರಕಾರಿ ನೌಕರ ಸಂಘದ ತಾಲೂಕು, ಜಿಲ್ಲಾ ಸಂಘಗಳ ನಿರ್ದೇಶಕರ ಚುನಾವಣೆ ಫಲಿತಾಂಶವೇ ಪ್ರಕಟಗೊಂಡಿರ್ತದೆ.
ಯಾವ ರಾಜಕೀಯ ಪಕ್ಷದ ಚುನಾವಣೆಗಳಿಗೆ ಈ ಚುನಾವಣೆಗಳು ಕಮ್ಮೀ ಇರುವುದಿಲ್ಲ.
ಅಪಾಯದ ಸಂಗತಿ ಎಂದರೆ ಇಲ್ಲೂ ಜಾತಿ ಮತ ಧರ್ಮಗಳ ಹುನ್ನಾರಗಳು ಚಮತ್ಕರಿಸುತ್ತವೆ. ಇಲ್ಲೂ ಹಣ, ಹೆಂಡ, ಖಂಡಗಳ ಫೂತ್ಕಾರ. ತಾಲೂಕು, ಜಿಲ್ಲಾ, ರಾಜ್ಯ ಸಂಘದ ಅಧ್ಯಕ್ಷ ಪದವಿಗಳ ಚುನಾವಣೆಗಳಂತೂ ಮುಖ್ಯಮಂತ್ರಿ ಸಚಿವ, ಸಂಪುಟದರ್ಜೆ ಸಚಿವ ಸ್ಥಾನಗಳಿಗೆ ನಡೆವ ಕೆಟ್ಟ ಪೈಪೋಟಿಗೇನು ಎಳ್ಳರ್ಧ ಕಾಳಿನಷ್ಟು ಕಮ್ಮಿ ಇರುವುದಿಲ್ಲ.
ಇಲ್ಲೂ ಲಕ್ಷ ಲಕ್ಷಗಳ ವಹಿವಾಟು. ಜಾತಿ, ಪಂಗಡ, ಪಕ್ಷ ರಾಜಕಾರಣಿಗಳ ಒಳಕೃಪೆ, ಮರ್ಜಿ, ಸಪೋರ್ಟ್, ವಗೈರೆಗಳ ಮೇಲೋಗರ. ರಾಜ್ಯ ಸಂಘದ ಅಧ್ಯಕ್ಷಗಿರಿಯದಂತೂ ಬಣ್ಣಿಸಲಸದಳ. ವಾಸ್ತವವಾಗಿ ಸರಕಾರಿ ನೌಕರ ಸಂಘಗಳ ಚುನಾವಣೆಗಳು ನಾಗರಿಕ ಸೇವಾ ನಿಯಮಾವಳಿಯಡಿಯಲ್ಲಿ ಕೆಲಸ ಮಾಡುವ ಅಪ್ಪಟ ನಾಗರಿಕ ಸಂವೇದನೆಗಳ ಮತ್ತು ಉನ್ನತ ಪೌರಪ್ರಜ್ಞೆಯ ಸರಕಾರಿ ನೌಕರರ ಚುನಾವಣೆಗಳು.
ಈ ಚುನಾವಣೆಗಳು, ಆದರ್ಶ ಮತ್ತು ರೋಲ್ ಮಾಡೆಲ್ ಅಂದರೆ ಮಾದರಿಯಂತಿರಬೇಕು. ವಾಸ್ತವ ಹಾಗಿಲ್ಲವೇ ಇಲ್ಲ. ಎಷ್ಟೋ ಕಡೆ ರಾಜಕೀಯ ಪಕ್ಷ ಚುನಾವಣೆಗೂ ಕಡೆಯಾಗಿರ್ತವೆಂಬುದು ಪ್ರಸ್ತುತ ಹೆಸರು ಹೇಳಲಿಚ್ಛಿಸದ ಚುನಾವಣಾ ಕಣದಲ್ಲಿರುವ ಅಧಿಕಾರಿ ಸ್ಪರ್ಧಾಳುವಿನ ಅಂಬೋಣ.
ಹಾಗಿದ್ರೇ ಅಲ್ಲಿರುವ ಅಂತಹ ಆಕರ್ಷಣೆ, ಅಧಿಕಾರ, ಇಲ್ಲವೇ ಅವಕಾಶವಾದರೂ ಏನು..?
ಒಂದೆರಡು ಬಾರಿ ಕಂಟೆಸ್ಟ್ ಮಾಡಿ ಗೆಲ್ಲುತ್ತಲೂ ಇದ್ದ ಸರಕಾರಿ ಪ್ರೌಢ ಶಾಲೆಯೊಂದರ ವಿವೇಕದ ಪ್ರಾಧ್ಯಾಪಕಿಯೊಬ್ಬರು ನಿನ್ನೆಯಷ್ಟೆ ಸಿಕ್ಕಿದ್ರು. ಯಾಕೆ ಈ ಬಾರಿ ಕಂಟೆಸ್ಟ್ ಮಾಡಲಿಲ್ಲ… ಕೇಳಿದೆ. ” ನಮ್ಮಂಥವರಿಗಲ್ಲ ಬಿಡಿ ಸರ್…” ಎಂದು ತುಂಬನೇ ಹೇಳಲಾಗದ ನೋವು ತುಂಬಿ ಕೊಂಡ ಮನೋಸ್ಥಿತಿಯಿಂದ ಪ್ರತಿಕ್ರಿಯಿಸಿದರು.
ಜತೆಯಲ್ಲಿದ್ದ ತರುಣ ಶಿಕ್ಷಕಿಯೊಬ್ಬಳು “ಈಚುನಾವಣೆಗಳು ಕೋಮಲ ಮನದ ನಮ್ಮಂಥ ಮಹಿಳೆಯರಿಗಲ್ಲವೇ ಅಲ್ಲ ” ಎಂಬಂತೆ ದನಿಗೂಡಿಸಿದರು. ನಾನು ನಿನ್ನೆಯಷ್ಟೇ ಬಳ್ಳಾರಿಯ ಕೃಷ್ಣ ದೇವರಾಯ ವಿ.ವಿ. ಯಲ್ಲಿ ಮಹಿಳಾ ಚಳವಳಿ, ರೈತ ಚಳವಳಿ, ದಲಿತ ಚಳವಳಿಗಳ….ಹೀಗೆ ಅನೇಕ ಜನಪರ ಚಳವಳಿ ಕುರಿತು ಗಂಭೀರವಾದ ಚಿಂತನ – ಮಂಥನ ಮಾಡಿಬಂದ ಗುಂಗಿನಲ್ಲೇ ಇದ್ದೆನಾದ್ದರಿಂದ, ” ಅರೇ ನಿಮಗೆ 33 ಪರ್ಸೆಂಟ್ ಮೀಸಲಾತಿಯ ಚರ್ಚೆಗಳು ಪರಿಣಾಮಕಾರಿ ಫಲ ನೀಡುತ್ತಿರುವಾಗ ನಿಮ್ಮ ಹಿಂಜರಿಕೆಗೇನು ಅರ್ಥ….” ಮುಂತಾಗಿ ನನ್ನ ಚಿಂತನಶೀಲ ಮೂಸೆಯ ಆಕರ್ಷಕ ಮಾತುಗಳ ಹೂರಣ ಪ್ರದರ್ಶಿಸಿದೆ. ಅವರಿಗೆ ಅವ್ಯಾವು ಸಾಸಿವೆಯಷ್ಟೂ ಪ್ರಭಾವ ಬೀರಲಿಲ್ಲ.
ಹತ್ತಾರು ಸತ್ಯ ಘಟನೆಗಳ ಅನುಭವನಿಷ್ಠ ನಿದರ್ಶನಗಳೊಂದಿಗೆ ಪುರುಷಾಹಂಕಾರದ ಸಂಘಟನೆಯ ಕೊಳಕು ಹುಳುಕುತನಗಳನ್ನು ಆಕೆ ತುಂಬಾ ಕೂಲಾಗೇ ವಿವರಿಸಿದರು. ನನ್ನ ವಾದಗಳೆಲ್ಲ ಆಕೆಗೆ ಉಪದೇಶಗಳಂತೆ ಕೇಳಿಸುತ್ತಿದ್ದವು. ಅದನ್ನೆಲ್ಲ ಸರಿಪಡಿಸಲು ” ನಿಮ್ಮಂಥ ವಿಚಾರವಂತ ಮತ್ತು ಅಕ್ಷರಶಃ ಅರ್ಹತೆಯುಳ್ಳ ಮಹಿಳೆಯರಿರಬೇಕು. ಇಲ್ಲದಿದ್ರೇ ಅಯೋಗ್ಯರು ಚುನಾವಣೆಯಲ್ಲಿ ಗೆದ್ದು ಬರ್ತಾರ್ರೀ ” ಎಂದು ಮೆಲು ದನಿಯಲಿ ಹೇಳಿದೆ. ಇಬ್ಬರು ನಕ್ಕಂತೆ ಮಾಡಿ ಮಾತಿನ ನೇಪಥ್ಯ ಸೇರಿದರು.
ಹೌದು ಸರಕಾರಿ ನೌಕರ ಸಂಘದ ಚುನಾವಣೆ ಸ್ಪರ್ಧೆಗೆ ಮಹಿಳೆಯರ ಭಾಗವಹಿಸುವಿಕೆ ಬಹಳೇ ಕಮ್ಮಿ ಆಗ್ತಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರೇ ತುಂಬಿದ್ದರೂ ಸ್ಪರ್ಧೆಯ ಹಿಂಜರಿಕೆಗೆ ಕಾರಣಗಳು ನೂರಿರಬಹುದು.? ಅರ್ಧ ಶತಮಾನದಷ್ಟು ಹಿಂದೆಯೇ ಸೆರೆಮನೆ ವಾಸಗೈಯ್ದ, ಮೇರಿ ದೆವಾಸಿಯ ಎಂಬ ಮಹಿಳೆ ತನ್ನ ಕ್ಷಾತ್ರ ತೇಜಸ್ವಿ ಮನೋಸ್ಥೈರ್ಯದಿಂದ ರಾಜ್ಯ ಸಂಘದ ಅಧ್ಯಕ್ಷಳಾಗಿದ್ದಳೆಂಬ ನೆನಪಾದರೂ ನಮ್ಮ ಈ ಮಹಿಳೆಯರಿಗಿರಬಾರದೇ..? ಸಮರ್ಥ ಮಹಿಳೆಯರ ಪ್ರಮುಖ ಪ್ರಾತಿನಿಧ್ಯವಿಲ್ಲದ ನೌಕರ ಸಂಘದ ಚುನಾವಣೆ ಪರಿಪೂರ್ಣವಾಗದು.
ಈ ದೆಸೆಯಲಿ ನೌಕರ ಸಂಘದ ಚುನಾವಣೆ ನಿಯಮಗಳಿಗೆ ತಿದ್ದುಪಡಿ ತಂದು ಅಗತ್ಯ ಪ್ರಮಾಣದಲ್ಲಿ ಮೀಸಲಾತಿ ತಂದಾದರೂ ಪ್ರಾತಿನಿಧ್ಯ ದೊರಕಿಸಲಿ. ಚುನಾವಣೋತ್ತರ ಕೋ ಆಪ್ಟ್ ಎಂಬ ಮುಲಾಜು, ಭಿಡೆ, ಮುರವತ್ತುಗಳ ಹಿಂಬಾಗಿಲ ಪ್ರವೇಶಗಳ ಪ್ರಹಸನ ಅರ್ಥಹೀನ ಮತ್ತು ಬಲಹೀನ.