ಶಹಾಪುರ: ನಗರ ಸುಂದರ ಮತ್ತು ನೈರ್ಮಲ್ಯೀಕರಣಗೊಳಿಸಲು 31 ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 5 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿ ನಗರದ ಪ್ರತಿಯೊಂದು ವಾರ್ಡುಗಳು ಸಮಸ್ಯೆಯಿಂದ ಮುಕ್ತಿ ಹೊಂದಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಅಧಿಕಾರಿಗಳು ಮತ್ತು ನೂತನ ಸದಸ್ಯರು ಇದಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.
ಜತೆಗೆ ಕಾರ್ಮಿಕರ ಸಮಸ್ಯೆಯಿದ್ದು ದಿನಗೂಲಿ ಆಧಾರದ ಮೇಲೆ ಹೆಚ್ಚಿನ ಕಾರ್ಮಿಕರನ್ನು ತೆಗೆದುಕೊಂಡು ನಗರದ ಸ್ವಚ್ಛತೆಗೆ ಮುಂದಾಗಬೇಕು ಎಂದು ಪೌರಾಯುಕ್ತರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.