ನನ್ನ ಜೀವನ ಸಂಗಾತಿಗೆ ಹೆರಿಗೆ ನೋವು ಕಾಣಿಸಿಕೊ0ಡು ಬೆಳಗಿನ ಜಾವ ನಾಲ್ಕು ಗಂಟೆಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಅಡಮಿಟ್ ಮಾಡಲಾಯಿತು. ಆದರೆ, ಸರಳ, ಸಹಜ ಹೆರಿಗೆ ಆಗಲು ಸಾಯಂಕಾಲ ನಾಲ್ಕು ಗಂಟೆ ಆಯಿತು. ಈ ನಡುವೆ ನನ್ನ ಹೆಂಡತಿ ಪಟ್ಟ ನೋವು, ಸಂಕಟ, ತಳಮಳ ತಲ್ಲಣ ಹೇಳತೀರದು. ಆಸ್ಪತ್ರೆಯ ಹೊರಕೋಣೆಯಲ್ಲಿ ಕುಳಿತ ನಾನು ತುಂಬ ಕುತೂಹಲ,ಆತುರ, ಆತಂಕ , ದುಗುಡಗಳ ನಡುವೆಯೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ ..ಪ್ರಸವದ ಎಲ್ಲ ಸಂಕಟವನ್ನು ತನ್ನ ಒಡಲಲ್ಲಿ ಸಹಿಸಿಕೊಂಡ ನನ್ನ ಶ್ರೀಮತಿ ಗಂಡು ಮಗುವಿಗೆ ಜನ್ಮ ನೀಡಿದಳು.
ನಾನು ಮೊದಲ ಸಲ ಮಗುವನ್ನು ಕೈಗಳಲ್ಲಿ ಎತ್ತಿಕೊಂಡು ತದೇಕ ಚಿತ್ತದಿ0ದ ನೋಡುತ್ತಿರುವಾಗ ಪಿಳಿ ಪಿಳಿ ಕಣ್ಣು ಬಡೆಯುತ್ತ ನನ್ನನ್ನೇ ನೋಡುತ್ತಿರುವ ಆ ಕಣ್ಣುಗಳಲ್ಲಿ ಏನೋ ಒಂದು ಅಗಾದ ಕಾ0ತಿಯ ಶಕ್ತಿ ಹೊರಹೊಮ್ಮುತ್ತಿರುವ ಭಾವಮೂಡಿತು. ಮುಖದೊಳಗೆ ಹೊ0ಬೆಳಕಿನ ಹೊನಲು ತುಂಬಿತ್ತು. ನಾನು ಮಗುವನ್ನು ನೋಡುತ್ತ ಭಾವಪರವಶನಾದೆ. ಈ ಕಂದ ಬದುಕಿನ ಜೀವಚೈತನ್ಯದ ಕುಡಿ. ಈ ಕೂಸು ನಮ್ಮ ದಾಂಪತ್ಯ ಜೀವನದಲ್ಲಿ ಅದಮ್ಯ ಜೀವನ ಪ್ರೀತಿ ತುಂಬಿ ಸುಖ, ಸಮೃದ್ಧಿಯಿ0ದ ಬಾಳಲು ಬಂದಿರುವನೆ0ದು ಎದೆಗಪ್ಪಿಕೊ0ಡೆ. ಆ ಸಂತಸದ ಸಂಗತಿಯನ್ನು ಗುರು – ಹಿರಿಯರಿಗೆ, ಬಂಧು – ಬಳಗದವರಿಗೆ, ಆತ್ಮೀಯ ಸ್ನೇಹಿತರಿಗೆ ತಿಳಿಸಿ ಸಂಭ್ರಮಿಸಿದೆ.
ನಿಜಕ್ಕೂ ಅಪ್ಪ ಎನ್ನುವ ಪದವೇ ಬೆಳಕು ಮತ್ತು ಬೆರಗು ಹುಟ್ಟಿಸುವಂತದ್ದು, ಅದೊಂದು ಜೀವ -ಜೀವದ ನಂಟು. ಮನುಷ್ಯ ಸಂಬಂಧಗಳ ಅಮರತ್ವಕ್ಕೆ ಜೀವ ಸತ್ವದ ವಿಶಾಲ ಭಾವನೆಯನ್ನು ಮೂಡಿಸುತ್ತದೆ. ಜೀವನದಲ್ಲಿ ಅಪ್ಪನಾಗುವುದು ಬದುಕಿನ ಬಹು ದೊಡ್ಡ ಸೌಭಾಗ್ಯ. ಆ ಸ್ಥಾನ ಪಡೆದು ಮಕ್ಕಳ ಅಚ್ಚು ಮೆಚ್ಚಿನ ಅಪ್ಪನಾಗಿ ಅವರ ಅಭ್ಯುದಯಕ್ಕೆ ಬೆನ್ನೆಲುಬಾಗಿ ನಿಂತು ಆದರ್ಶದ ಬಾಳು ನಡೆಸುವುದು ಅಷ್ಟೇ ಮಹತ್ವದ್ದು.
ಬಂಗಾರದಂಥ ಮಗುವಿಗೆ ಜನ್ಮ ನೀಡಿದ ನನ್ನ ಜೀವನ ಸಂಗಾತಿಗೆ ನಾನು ಕೃತಜ್ಞನಾಗಿರುವೆ. ನಾವು ಮೊದಲೇ ನಿರ್ಧರಿಸಿದಂತೆ ಸರ್ವರ ಸಮ್ಮುಖದಲ್ಲಿ, ಸಂಗೀತ, ಸಾಹಿತ್ಯದ ಸುಧೆಯಲ್ಲಿ ಕವಿರಾಜ ಎಂದು ನಾಮಕರಣ ಮಾಡಿದೆವು.
ಅಪ್ಪನಾಗಿ ನನ್ನ ಮಗುವಿಗೆ ನನ್ನವಳ ಕರುಳ ಪ್ರೀತಿಯ ಸಂಬಂಧದಷ್ಟೇ ಕಾಳಜಿ, ಕಕ್ಕುಲಾತಿ, ಅಂತಃಕರಣದ ಅಖಂಡ ಜೀವನ ಪ್ರೀತಿಯ ಸೋನೆ ಮಳೆಯನ್ನು ಸದಾ ಸುರಿಸುವೆ. ಆಡಾಡುತ್ತಲೇ ಈಗ ಮಗನಿಗೆ ಎರಡು ವರ್ಷಗಳು ತುಂಬಿವೆ. ನನ್ನ ಬದುಕಿನ ಬಳ್ಳಿ ಕವಿರಾಜ ಚೇತನ ನೀ ಆಗಬೇಕು ಈ ಜಗದಲಿ ಅನಿಕೇತನ.
– ಸಿ. ಎಸ್. ಆನಂದ
ಇಂಗ್ಲಿಷ ಉಪನ್ಯಾಸಕ, ಸಾಹಿತಿ
ಡಾ. ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿ. ಯು. ಕಾಲೇಜು, ಕರಡ್ಯಾಳ ತಾ. ಭಾಲ್ಕಿ ಜಿಲ್ಲಾ. ಬೀದರ, ಮೊ.ನಂ: 9731826634