ಕಲಬುರಗಿ: ಡಾ. ಬಿ.ಆರ್.ಅಂಬೇಡ್ಕರ್ ರವರ ವಿಚಾರಗಳನ್ನು ಓದುವುದು ವಿಶ್ವ, ಸಮಾಜ, ದೇಶವನ್ನು ಓದಿದ ಹಾಗೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ರಮೇಶ ಲಂಡನಕರ್ ಹೇಳಿದರು.
ಮಂಗಳವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀಮತಿ ಪಿಲ್ಲೂಹೋಮಿ ಇರಾಣಿ ಮಹಿಳಾ ಕಲಾ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಅಭಿಯಾನ ಕಾರ್ಯಕ್ರಮ ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಸಿ ಮಾತಾಡಿದರು.
ಕೇವಲ ಜಯಂತಿಗೆ ಮಾತ್ರ ಅವರ ಚಿಂತನೆಗಳು, ವಿಚಾರಗಳು ಸೀಮಿತವಾಗದೆ, ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಬೇಕು. ಎಲ್ಲಾ ಸಮಸ್ಯೆಗಳಿಗೆ ಸಂವಿಧಾನ ಒಂದೇ ಪರಿಹಾರವಾಗಿದೆ. ಮಹಿಳೆಯರು ಹೆಚ್ಚಾಗಿ ಅಂಬೇಡ್ಕರ್ ರವರ ಬಗ್ಗೆ ಓದಿ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಇದೆ ವೇಳೆ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಆಗಮಿಸಿದ ಅಂಬೇಡ್ಕರ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಐ.ಎಸ್. ವಿದ್ಯಾಸಾಗರ ಮಾತನಾಡಿ, ಜನ್ಮಕೊಟ್ಟ ತಾಯಿಗಿಂತ ಹೆಚ್ಚಾಗಿ ಮಹಿಳೆಯರಿಗಾಗಿ ದುಡಿದವರು ಅಂದರೆ ಅದು ಅಂಬೇಡ್ಕರ್ ಒಬ್ಬರೇ, ಆಧುನಿಕ ಭಾರತ ಕಟ್ಟಿದ ಮಹಾನ ನಾಯಕ ಅಂಬೇಡ್ಕರ್ ಅವರ ಬಗ್ಗೆ ಓದುವುದು, ತಿಳಿಯುವುದು ಯುವಕರಲ್ಲಿ ಮೂಡಬೇಕು ಎಂದರು.
ಪಿಲ್ಲೂಹೋಮಿ ಇರಾಣಿ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲೆ ಕವಿತಾ ಪಾಟೀಲ ಅಧ್ಯಕ್ಷತೆ ವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಪ್ರಾಸ್ತವಿಕ ನುಡಿಗಳನ್ನು ಆಡಿದರು. ಯುವಕವಿ ಸಿದ್ದಾರ್ಥ ಇದ್ಲಾಯಿ ಕವಿತೆ ವಾಚನ ಮಾಡಿದರು. ವಿದ್ಯಾರ್ಥಿಗಳು ಬುದ್ಧವಂದನೆ ಭೋದಿಸಿದರು. ಶಿವಶಂಕರ ನಿರೂಪಿಸಿದರು. ಉಪನ್ಯಾಸಕಿ ಸೀತಾ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.