ಆವ ವಿದ್ಯೆ ಕಲಿತಡೇನು ಸಾವ ವಿದ್ಯೆ ಬೆನ್ನಬಿಡದು
ಆಶನವ ತೊರೆದಡೇನು ವ್ಯಸನವ ಮರೆದಡೇನು ?
ಉಸುರ ಹಿಡಿದಡೇನು , ಬಸುರ ಕಟ್ಟಿದಡೇನು ?
ಚೆನ್ನಮಲ್ಲಿಕಾರ್ಜುನ ದೇವಯ್ಯಾ, ನೆಲ ತಳವಾರನಾದಡೆ
ಕಳ್ಳನೆಲ್ಲಿ ಹೋಹನು ?
ಎಂಬ ಅಕ್ಕಮಹಾದೇವಿಯ ವಚನದಂತೆ ಎಲ್ಲರಿಗೂ ಸಾವು ತಪ್ಪಿದ್ದಲ್ಲ. ಸಾವಿನಿಂದ ಮುಕ್ತನಾಗಲು ಯಾರಿಗೂ ಸಾಧ್ಯವಿಲ್ಲ. ಸಾವಿನಿಂದ ಮುಕ್ತವಾಗಬೇಕೆಂದು ಮನೆ ಮಠ ತೊರೆದು ಕಾಡಿಗೆ ಹೋದರೂ ಸಾವು ನಮ್ಮ ಬೆನ್ನ ಹಿಂದೆಯೆ ಬೇತಾಳನಂತೆ ಬೆನ್ನು ಹತ್ತಿದೆ. ಉಸಿರ ಕಟ್ಟಿ ನಿಲ್ಲಿಸಿದರೂ ಅಷ್ಟೇ ಬಿಟ್ಟರೂ ಅಷ್ಟೆ ಸಾವನ್ನು ಗೆಲ್ಲಲು ಯಾರಿಗೂ ಇದುವರೆಗೆ ಸಾಧ್ಯವಾಗಿಲ್ಲ. ಏಕೆಂದರೆ ಸಾವು ಎಂಬುದು ತಳವಾರನಂತೆ ಬೆನ್ನು ಬಿದ್ದಿದೆ. ಭೂಮಿಯೆ ತಳವಾರನಂತೆ ನಮ್ಮ ಬೆನ್ನು ಬಿದ್ದಿರುವಾಗ ಹೋಗುವುದಾದರೂ ಎಲ್ಲಿಗೆ ? ಹೀಗಾಗಿ ಸಾವು ಎಲ್ಲರಿಗೂ ಕಟ್ಟಿಟ್ಟ ಬುತ್ತಿ. ಕೆಲವರು ಬೇಗ ಹೋಗಬಹುದು. ಇನ್ನು ಕೆಲವರು ಸುದೀರ್ಘವಾಗಿ ಜೀವಿಸಿ ಹೋಗಬಹುದು ಅಷ್ಟೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಹುಟ್ಟು ಮತ್ತು ಸಾವಿನ ನಡುವಿನ ಬದುಕನ್ನು ಎಷ್ಟು ಅರ್ಥಪೂರ್ಣವಾಗಿ ಜೀವಿಸಿದರು ? ಎಂಬುದು ತುಂಬಾ ಪ್ರಮುಖವಾಗುತ್ತದೆ. ಅರ್ಥಪೂರ್ಣ ಬದುಕುವಿಕೆಗೆ ತಿಲಾಂಜಲಿ ನೀಡಿ ನಮ್ಮ ತತ್ವ ಸಿದ್ಧಾಂತಗಳ ಹಾಗೂ ಸ್ವಾರ್ಥದ ಲಾಲಸೆಗಾಗಿ ಇರುವ ಬದುಕನ್ನೆ ಬೆಂಗಾಡು ಮಾಡಿಕೊಂಡಿದ್ದೇವೆ. ‘ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಲ್ಲ’ ಎಂಬಂತೆ ಹದತಪ್ಪಿ ಮಾತನಾಡಿ, ಮನುಷ್ಯ ಸಮಾಜದ ಮರ್ಯಾದೆಯೆನ್ನೆ ಬೀದಿಗೆ ತಂದು ನಿಲ್ಲಿಸಿದ್ದೇವೆ. ಎಡ ಮತ್ತು ಬಲ ಸಿದ್ಧಾಂತಗಳಿಗಿಂತ ಮುಖ್ಯವಾಗಿ ಮನುಷ್ಯತ್ವ ತುಂಬಾ ಮಹತ್ವದ್ದು. ಆದರೆ ಸಿದ್ಧಾಂತಗಳ ಮರೆಯಲ್ಲಿ ಮನುಷ್ಯತ್ವಕ್ಕೆ ಕೊಳ್ಳಿ ಇಟ್ಟುಕೊಳ್ಳುವುದು ‘ಸುಣ್ಣದ ಕಲ್ಲು ಉಡಿಯಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ’ ಆಗುತ್ತದೆ.
ಡಾ.ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್, ಡಾ.ಯು.ಆರ್.ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ ಮುಂತಾದವರ ಸಾವು ಹಲವರಿಗೆ ಸಂಭ್ರಮವನ್ನು ಉಂಟು ಮಾಡಿದೆ. ವ್ಯಕ್ತಿ ಸತ್ತಾಗ ಕಣ್ಣೀರು ಸುರಿಸುವುದನ್ನು ಬಿಟ್ಟು ಸಾವನ್ನು ಸಂಭ್ರಮಿಸುವುದು ಮನುಷ್ಯ ವಿಕೃತಿಯ ಪರಮಾವಧಿ. ಪಂಚಭೂತಗಳಿಂದ ನಿರ್ಮಾಣವಾದ ಶರೀರ ಕೊನೆಯಲ್ಲಿ ಅದು ಸೇರುವುದು ಪಂಚಭೂತಗಳಲ್ಲಿ. ಯಾವುದೆ ವ್ಯಕ್ತಿ ಸತ್ತಾಗ ಅತ್ತು ಹಗುರಾಗುವುದು ಸಂಸ್ಕøತಿ. ಆದರೆ ಯಾರಾದರೂ ಸತ್ತರೆ ನಕ್ಕು ಸಂಭ್ರಮಿಸುವುದು ವಿಕೃತಿ. ನಮ್ಮ ನಾಗರಿಕ ಸಮಾಜ ಪ್ರಗತಿಯತ್ತ ಹೋಗಬೇಕೆ ಹೊರತು ಸ್ಮಶಾನದ ಕಡೆಗೆ ಅಲ್ಲ. ಮನುಷ್ಯ ಬೆಳೆದಂತೆಲ್ಲ ನಾಗರಿಕ ಸಮಾಜದ ಬೆಳವಣಿಗೆ ಕಡೆ ಮುಖ ಮಾಡಿ ನಿಲ್ಲಬೇಕು. ಪಶುಪಕ್ಷಿಗಳು, ವನ್ಯ ಮೃಗಗಳು ಕೂಡ ತೋರ್ಪಡಿಸದ ಪಾಶವಿ ನಡಾವಳಿಂದ ಸಮಾಜ ವಿಗತಿಯತ್ತ ನಡೆಯುತ್ತಿದೆ.
ಸ್ವಭಾವತಃ ಮೃಗ ಪ್ರವೃತ್ತಿ ಇರುವ ಮನುಷ್ಯ ಸಮಾಜದಲ್ಲಿರುವ ಸಂಸ್ಕøತಿ, ಪರಂಪರೆ ಹಾಗೂ ವಿಚಾರಗಳ ಮೂಲಕ ಮೌಲ್ಯಗಳನ್ನು ಅಳವಡಿಸಿಕೊಂಡು ಅನಂತದೆಡೆಗೆ ಹೆಜ್ಜೆ ಹಾಕಬೇಕು. ಆದರೆ ಇಂದು ನಮ್ಮ ಸಮಾಜದಲ್ಲಿ ಆಗುತ್ತಿರುವುದು ಏನು ? ವ್ಯಕ್ತಿ ಬದುಕಿದ್ದಾಗ ಆತನ ವಿಚಾರಗಳು, ಆಚಾರಗಳು, ನಡಾವಳಿಗಳಲ್ಲಿ ಒಪ್ಪದೆ ಇರುವಂತಹ ಅಂಶಗಳು ಇದ್ದಿರಬಹುದು. ಆದರೆ ಆ ವ್ಯಕ್ತಿ ಸತ್ತ ನಂತರ ಆತನೊಂದಿಗೆ ಭಿನ್ನಾಭಿಪ್ರಾಯಗಳು ಅಂದೇ ನಮ್ಮಲ್ಲಿ ಸಮಾಧಿ ಆಗಬೇಕು. ವ್ಯಕ್ತಿಯ ಜೀವ ಹೋದ ನಂತರ ಆತನ ಶರೀರದ ಮುಂದೆ ನಿಂತು ಚೂಪಾದ ಆಯುಧದಿಂದ ಚುಚ್ಚುವುದು ಯಾವ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ರಾಮ ಮತ್ತು ರಾವಣರು ಪರಸ್ಪರ ವಿರೋಧದ ವಿಚಾರಗಳು ಇದ್ದವು. ಅವರಿಬ್ಬರೂ ಕಾದಾಡಿ ಕೊನೆಗೆ ರಾವಣ ಮೃತವಾದಾಗ ರಾಮ ಆ ರಾವಣನ ಶರೀರವನ್ನು ಅರಸರ ಅಂತ್ಯ ಸಂಸ್ಕಾರದಂತೆ ನೆರವೇರಿಸಿಕೊಡುತ್ತಾನೆ. ಇದು ರಾಮನ ಉದಾತ್ತ ಭಾವವನ್ನು ತೋರ್ಪಡಿಸುತ್ತದೆ. ಹಿಂದೂ ಸಂಸ್ಕøತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವವರು ನಾವೆಂದು ಬೊಗಳೆ ಹೊಡೆಯುವ ಜನಗಳು ಕನಿಷ್ಠ ಪಕ್ಷ ರಾಮನ ಆದರ್ಶವನ್ನಾದರೂ ಪಾಲಿಸಬೇಕು. ಮನುಷ್ಯರಂತೆ ವರ್ತಿಸಬೇಕು.
ಎಲ್ಲ ಎಲ್ಲವನರಿಯಬಹುದು ; ಸಾವನರಿಯಬಾರದು
ಸರ್ವವಿದ್ಯೆ ಸಕಲ ವ್ಯಾಪ್ತಿಯನರಿಯಬಹುದು
ಸಾವನರಿಯಬಾರದು.
ಹರಿಬ್ರಹ್ಮ ಕಾಲ ಕಾಮ ದಕ್ಷಾದಿ ದೇವ ದಾನವ ಮಾನವರೆಲ್ಲರಿಗೂ ಸಾವು !
ಮಹಾ ಪುರುಷರಿಗೂ ಸಾವು !
ಶಿವ ಶಿವಾ ಈ ಸಾವನರಿಯದೀಲೋಕ
ಪ್ರಪಂಚವ ಮರೆದು ಲಿಂಗದಲ್ಲಿ ನೆನಹು ನೆಲೆಗೊಂಡಡೆ
ಆ ಮಹಿಮಂಗೆ ಸಾವಿಲ್ಲ. ಈ ಸಾವನರಿಯದ ಅರಿಮರುಳಗಳ ಅರಿವು
ಮಾನಹಾನಿ ಕಾಣಾ ಗುಹೇಶ್ವರಾ
ಎಂಬಂತೆ ಒಂದಲ್ಲ ಒಂದು ದಿನ ನನಗೂ ಸಾವಿದೆ ಎಂದು ಅರಿತುಕೊಂಡ ಮನುಷ್ಯ ವಿಕೃತಿತನ ತೋರಲಾರ. ದರ್ಪ ದಬ್ಬಾಳಿಕೆಗಳಿಂದ ವರ್ತಿಸಲಾರ. ತನ್ನ ನಂತರ ಮಕ್ಕಳು ಮೊಮ್ಮಳಿಗೆ ಉತ್ತಮ ಸಂಸ್ಕಾರ ಬೇಕೆಂದು ಹಂಬಲಿಸುವ ಮನುಷ್ಯ ದುಷ್ಟತನದ ವರ್ತನೆ ಮಾಡಲಾರ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…